ತೂಗಲಿ ಪ್ರೇಮದ ದೀಪ
Team Udayavani, Feb 14, 2020, 5:32 AM IST
ಪ್ರೇಮವೆಂದರೆ ದಿನವೂ ಸಂಭ್ರಮ. “ಅಚ್ಚಾಗಿದೆ ಎದೆಯಲಿ ನಿನ್ನದೇ ಹಸಿಬಿಸಿ ಸಂದೇಶ’ ಎನ್ನುತ್ತ ಪಿಸುಗುಡುವ ಪ್ರೇಮಿಗಳಿಗೆ ವ್ಯಾಲೆಂಟೈನ್ಸ್ ಡೇ ಒಂದು ನೆಪ.
ಮನುಷ್ಯನ ಜೀವನದಲ್ಲಿ ಷೋಡಶ ಸಂಸ್ಕಾರಗಳ ಮಹತ್ವವೇನು ಎಂಬುದನ್ನು ಹಿರಿಯರು ಹೇಳಿದ್ದಾರೆ. ಅದರಲ್ಲಿ ವಿವಾಹ ಸಂಸ್ಕಾರವೂ ಒಂದು. ಯಾಕೆಂದರೆ ಭಾರತೀಯ ಸಂಸ್ಕೃತಿಯ ಪ್ರಕಾರ ದಾಂಪತ್ಯ ಜೀವನದ ಉದ್ದೇಶ ಸಂತತಿಯನ್ನು ಮುಂದುವರೆಸುವುದಷ್ಟೇ ಅಲ್ಲ. ಸಮಾಜದ ಅವಿಭಾಜ್ಯ ಅಂಗವಾದ ಕುಟುಂಬವನ್ನು ಮುನ್ನಡೆಸುವ ಜವಾಬ್ದಾರಿಯನ್ನೂ ಹಿರಿಯರು ದಂಪತಿಗಳ ಮೇಲೆಯೇ ಹೊರಿಸಿದ್ದಾರೆ. ಅದಕ್ಕಾಗಿಯೇ ವಿವಾಹ ಸಂಸ್ಕಾರಕ್ಕೆ ಹಿರಿದಾದ ಅರ್ಥವನ್ನು ಕಲ್ಪಿಸಿದ್ದಾರೆ.
ಕುಟುಂಬದ ಹಿರಿಯರನ್ನೂ, ಕಿರಿಯರನ್ನೂ ಪೋಷಿಸುವ, ಅವರ ಇಷ್ಟಕಷ್ಟಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ದಂಪತಿಗಳದ್ದೇ. ಇಷ್ಟೊಂದು ಜವಾಬ್ದಾರಿ ಇರುವ ಮದುವೆಯನ್ನು ಯಾರೋ ಗುರುತು ಪರಿಚಯ ಇಲ್ಲದ ವ್ಯಕ್ತಿಯೊಂದಿಗೆ ನೆರವೇರಿಸುವುದು ಎಷ್ಟು ಸರಿ ಎಂದು ಕೆಲವೊಮ್ಮೆ ಅನಿಸುವುದು. ವರ್ಷಗಳ ಹಿಂದೆ ವಿವಾಹ ಸಂಪ್ರದಾಯ ಹೇಗಿತ್ತೆಂದರೆ, ಹಿರಿಯರೇ ವಧು-ವರರನ್ನು ನಿಶ್ಚಯಿಸುತ್ತಿದ್ದರು. ವಧೂ ವರರಿಗೆ ಪರಸ್ಪರ ನೋಡುವ ಅವಕಾಶವನ್ನೂ ಕಲ್ಪಿಸುತ್ತಿರಲಿಲ್ಲ. ಪರಸ್ಪರ ಮುಖಾಮುಖೀಯಾಗದ ಅಪರಿಚಿತರಿಬ್ಬರು ಹಸೆಮಣೆ ಮೇಲೆ ಒಬ್ಬರನ್ನೊಬ್ಬರು ನೋಡಬೇಕಿತ್ತು. ಜೀವನಪೂರ್ತಿ ಜೊತೆಯಾಗಿ ಬದುಕಬೇಕಿತ್ತು. ಮದುವೆಗೆ ಮುನ್ನ ಒಬ್ಬರನ್ನೊಬ್ಬರು ಪರಸ್ಪರ ಅರ್ಥೈಸಿಕೊಳ್ಳುವುದಕ್ಕೆ ಅವಕಾಶವೇ ಇರಲಿಲ್ಲ.
ಹೀಗೆ ನಂಬಿಕೆಯಿಂದ ನೆರವೇರಿದ ಹಲವಾರು ಮದುವೆಗಳು, ಮದುವೆಯಾದ ಕೆಲವೇ ಸಮಯದಲ್ಲಿ ಮುರಿದು ಬಿದ್ದಿದೆ. ಹಾಗಾದಾಗ ಇಬ್ಬರೂ ತಮ್ಮ ಬದುಕನ್ನು ದುಃಖದಲ್ಲಿ ಕಳೆಯಬೇಕಾಗುತ್ತದೆ. ಅದರಲ್ಲಿಯೂ ಹೆಣ್ಣುಮಕ್ಕಳ ಬಾಳು ಮತ್ತಷ್ಟು ಕಷ್ಟಕ್ಕೆ ನೂಕಲ್ಪಡುತ್ತದೆ. ಜೊತೆಗೆ ಮಕ್ಕಳಿದ್ದರೆ, ಅವುಗಳ ಲಾಲನೆ-ಪಾಲನೆಯ ಜವಾಬ್ದಾರಿ ಹೆಣ್ಣಿನ ಹೆಗಲ ಮೇಲೆಯೇ ಬರುತ್ತದೆ.
ಇದನ್ನೆಲ್ಲ ಗಮನಿಸಿದರೆ, ಮದುವೆಯಾಗುವ ವ್ಯಕ್ತಿ ಮೊದಲೇ ಪರಿಚಿತರಾಗಿದ್ದರೆ, ಪ್ರೇಮಿಯಾಗಿದ್ದರೆ ಬದುಕು ಹಸನಾಗಿ ನಡೆಯಬಹುದು ಎನಿಸುತ್ತದೆ. ವ್ಯಕ್ತಿಯ ಹವ್ಯಾಸ, ಸ್ವಭಾವಗಳನ್ನು ಮೊದಲೇ ಅರಿತಿದ್ದರೆ ದಾಂಪತ್ಯಕ್ಕೆ ಹೆಜ್ಜೆ ಇಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರುತ್ತದೆ. ಪ್ರೇಮ ವಿವಾಹದ ಮತ್ತೂಂದು ಲಾಭವೆಂದರೆ ಅದು ಜಾತಿಪದ್ಧತಿಯನ್ನು ನಿರ್ಮೂಲನೆ ಮಾಡಲು ಸಹಕರಿಸುತ್ತದೆ. ಸಂಪ್ರದಾಯವನ್ನೇ ಹೆಚ್ಚು ನಂಬಿಕೊಂಡಿರುವ ಭಾರತದಂತಹ ದೇಶದಲ್ಲಿ ಜಾತಿ ಪದ್ಧತಿ ಎನ್ನುವುದು ಎಲ್ಲ ಹಂತಗಳಲ್ಲಿಯೂ ಅಡಚಣೆಯಾಗಿಯೇ ಕಾಣುತ್ತದೆ. ಪ್ರೇಮಕ್ಕೆ ಜಾತಿಯ ಹಂಗಿಲ್ಲ. ಆದ್ದರಿಂದ ಅದು ಜಾತಿ ತಾರತಮ್ಯವನ್ನು ಮೆಟ್ಟಿನಿಲ್ಲಲು ಸಹಕರಿಸುತ್ತದೆ. ಜಾತಿಯನ್ನು ಮೀರಿದ ಮದುವೆಗೆ ಆರಂಭದಲ್ಲಿ ಅಡೆತಡೆಗಳಿದ್ದರೂ, ವರ್ಷಗಳು ಕಳೆದಂತೆ ಎರಡೂ ಕುಟುಂಬಗಳು ಒಂದಾಗಿರುವ ಅನೇಕ ಉದಾಹರಣೆಗಳನ್ನು ನಾವು ಕಾಣುತ್ತೇವೆ.
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬಾಳಸಂಗಾತಿ ತಮ್ಮ ಇಚ್ಛೆ, ಅಭಿಲಾಶೆಗಳಿಗೆ ತಕ್ಕಂತಿರಬೇಕು, ತಮ್ಮ ಆಕಾಂಕ್ಷೆಗಳನ್ನು ಪೂರೈಸುವಂತಿರಬೇಕು ಎಂದು ಬಯಸುವುದು ಸಹಜ. ಈ ಬಯಕೆಯು ಸಫಲವಾಗಬೇಕಾದರೆ ಪ್ರೇಮ ವಿವಾಹ ಹೆಚ್ಚು ಸೂಕ್ತ.
ಹಾಗಂತ ಪ್ರೇಮವಿವಾಹದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದೇನಲ್ಲ. ಆರ್ಥಿಕ ಸ್ವಾವಲಂಬನೆ ಇಲ್ಲದೇ ಇದ್ದಾಗ, ಪ್ರೇಮದ ಗುಂಗಿನಲ್ಲಿ ವಾಸ್ತವವನ್ನು ಗಮನಿಸದೇ ಇದ್ದಾಗ ಜೀವನ ಸಂಕಷ್ಟಕ್ಕೆ ಸಿಲುಕುವುದುಂಟು. ಆದರೆ ಈ ಸಾಧ್ಯತೆಗಳು ಹಿರಿಯರು ನಿಶ್ಚಯಿಸಿದ ಮದುವೆಯಲ್ಲಿಯೂ ಇರುತ್ತದೆ ಅಲ್ಲವೇ. ಅಲ್ಲದೇ, ಪ್ರೀತಿಸಿ ಮದುವೆಯಾಗುವ ಸಂಗಾತಿಗಳೀರ್ವರೂ ಕಷ್ಟಸುಖದಲ್ಲೂ ಜೊತೆಯಾಗುವರೆಂಬ ಭರವಸೆಯಿರುತ್ತದೆ. ಈ ನಂಬಿಕೆಯೇ ಇಬ್ಬರಲ್ಲಿಯೂ ಆತ್ಮವಿಶ್ವಾಸವನ್ನು ಮೂಡಿಸುತ್ತದೆ.
ವಿವಾಹದ ಸಮಯದಲ್ಲಿ ಕುಟುಂಬವು ಜೊತೆಗಿದ್ದರೆ, ಜೀವನಪೂರ್ತಿ ಜೊತೆಯಾಗಿರುವವರು ದಂಪತಿಗಳು ಮಾತ್ರ. ಸಂಬಂಧ ಎಂದ ಮೇಲೆ ಎರಡು ಜೀವಗಳ ನಡುವೆ ಬಾಂಧವ್ಯ ಇದ್ದರೆ ಮಾತ್ರ ಅದು ಮುಂದುವರೆಯುತ್ತದೆ.
ತೇಜಶ್ರೀ ಶೆಟ್ಟಿ
ತೃತೀಯ ಪತ್ರಿಕೋದ್ಯಮ
ವಿ.ವಿ ಕಾಲೇಜು. ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.