ಅವನು ಬರೆದ ಪ್ರೇಮ ಪತ್ರ
Team Udayavani, Apr 5, 2019, 6:00 AM IST
ನಾನು ಇವತ್ತಂತೂ ತುಂಬಾ ಸಂತೋಷದಿಂದ ಇದ್ದೇನೆ. ಒಂದು ವರ್ಷದ ಆ ಒಂದು ಕಾತರ, ಹಂಬಲದ ಬಯಕೆಯ ಈಡೇರಿಕೆಯ ದಿನ ಇದಾಗಿದೆ. ನಿನ್ನ ಕೇವಲ ಒಂದು ಹಳೆಯ ಫೋಟೊವನ್ನು ನೋಡುತ್ತ ನೋಡುತ್ತ ಕನಸು ಕಾಣುತ್ತಿದ್ದ ನನ್ನ ಆ ಕನಸಿನ ಚಿತ್ತಾರಕ್ಕೆ ಪೂರ್ಣವಿರಾಮವನ್ನು ಕೊಡುವ ಗಳಿಗೆ ಇಂದು ಕೂಡಿ ಬರುತ್ತಿದೆ. ನೀನಂತೂ ಓದುವುದರಲ್ಲೇ ಸಾಧನೆ ಮಾಡುವವಳು. ನಿನ್ನ ಓದಿನಲ್ಲಿ ನನ್ನನ್ನು ಕೆಲವು ಸಮಯ ಮರೆಯಬಹುದು. ಆದರೆ, ನನಗೆ ನನ್ನ ಕೆಲಸದ ಎಲ್ಲ ಸಮಯದಲ್ಲೂ ಸಹ ನಿನ್ನದೇ ನೆನಪು. ನಿನ್ನದೇ ಧ್ಯಾನ! ಪ್ರೀತಿ ಎಂದರೇ ಹೀಗೆನಾ? ಎಂದು ನನ್ನನ್ನು ನಾನೇ ಹಲವು ಬಾರಿ ಪ್ರಶ್ನಿಸಿಕೊಂಡಿದ್ದೇನೆ. ಇಂದಿನ ಈ ಮುಂದುವರಿದ ವೇಗದ ಮೊಬೈಲ್ ಪ್ರಪಂಚದಲ್ಲೂ ದಿನಕ್ಕೆ ನೂರು ಬಾರಿ ಫೋನು ಮಾಡಿ ನಿನ್ನೊಡನೆ ಮಾತನಾಡಬಹುದು. ಆದರೆ, ನಾನು ಹಳೆಯ ನಮ್ಮ ಕಪ್ಪು-ಬಿಳುಪಿನ ಚಿತ್ರದಲ್ಲಿ ಪ್ರೇಮಿ ತನ್ನ ಪ್ರೇಯಸಿಗೆ ಪತ್ರವನ್ನು ಬರೆಯುವ ರೀತಿಯಲ್ಲಿ ವಾರಕ್ಕೆ ಒಂದು ಪತ್ರ ಬರೆದು ನನ್ನಲ್ಲಿಯೇ ಇಟ್ಟುಕೊಂಡಿದ್ದೇನೆ. ಅಲ್ಲದೆ ಅದನ್ನು ನಿನಗೆ ತಲುಪಿಸಲಾರದೆ ಕಷ್ಟಪಡುತ್ತಿದ್ದೇನೆ. ಯಾಕೆಂದರೆ, ನನಗೆ ಭಯ- ಎಲ್ಲಿ ನಿನ್ನ ಓದಿಗೆ ನನ್ನ ಪ್ರೇಮದ ಕನವರಿಕೆ ಅಡ್ಡಿ ಮಾಡುವುದೋ ಎಂದು!
ನನಗೆ ಯಾಕೆ ಹೀಗೆ ಆಗುತ್ತಿದೆ ಎಂಬುದಕ್ಕೆ ನನ್ನ ಬಳಿ ಉತ್ತರವೇ ಇಲ್ಲ. ಆ ಎಲ್ಲ ಪತ್ರಗಳನ್ನು ನಿನಗೆ ಕೊಡಬೇಕು ಎಂದುಕೊಂಡಿದ್ದೇನೆ. ನಾನು ನಿನ್ನನ್ನು ಅದರಲ್ಲಿ ಹೇಗೆ ಧ್ಯಾನಿಸಿದ್ದೇನೆಂದು ನಿನಗೆ ಗೊತ್ತಾಗಬೇಕು. ಆ ಎಲ್ಲ ಪತ್ರಗಳಲ್ಲೂ ನಾನು ಕಂಡ ಕನಸುಗಳಿಗೆ ಬಣ್ಣ ಬಣ್ಣದ ಮಣಿಯನ್ನು ಪೋಣಿಸಿದ್ದೇನೆ. ನೀನು ಅದನ್ನು ಓದಿ ನನ್ನ ಬಗ್ಗೆ ಒಂದು ತುಂಟ ಕಿರು ನಗೆಯನ್ನು ಬೀರುವುದರಲ್ಲಿ ಯಾವ ಸಂಶಯವೂ ಇಲ್ಲವೆಂದು ನನಗೆ ಗೊತ್ತಿದೆ. ಅಲ್ಲದೆ ನೀನು ಖಂಡಿತವಾಗಿಯೂ ಆಶ್ಚಯ ಪಡುವೆ- ಹೀಗೆಲ್ಲ ಕಲ್ಪನೆಯನ್ನು ಮಾಡುವವನನ್ನು ನಾನು ಪ್ರೀತಿಸಿದೆನಾ ಎಂದು!
ನಾಳೆ ನನ್ನ ಹುಟ್ಟಿದ ದಿನ. ಕಳೆದ ವರ್ಷ ನನ್ನ ಬರ್ತ್‌ಡೇಯನ್ನು ಸರಿಯಾಗಿ ಸೆಲಬರೇಟ್ ಮಾಡಲಿಕ್ಕೆ ಆಗಲಿಲ್ಲ. ಯಾಕೆಂದರೆ, ನೀನು ನಿನ್ನ ಪರೀಕ್ಷೆಯ ತಯಾರಿಯಲ್ಲಿದ್ದೆ. ನನ್ನನ್ನು ಭೇಟಿ ಮಾಡಲು ಅವಕಾಶವನ್ನೇ ಕೊಡಲಿಲ್ಲ. ಆದರೆ, ಈ ಭಾರಿಯ ನನ್ನ ಜನ್ಮದಿನಾಚರಣೆಯನ್ನು ನನ್ನ ಕಲ್ಪನೆಯಂತೆ ಆಚರಿಸಬೇಕೆಂದಿದ್ದೇನೆ. ನಾಳೆಯಾದರೂ ನಿನ್ನನ್ನು ಬೆಂಗಳೂರಿನಿಂದ 100 ಕಿ.ಮೀ. ದೂರವಿರುವ ದಟ್ಟ ಕಾನನದ ಮಧ್ಯಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಪುಟ್ಟ ಕೇಕ್ ಇಟ್ಟು ನಿನ್ನ ಕೈಯಿಂದ ಕತ್ತರಿಸಬೇಕು ಎಂದು ಆಸೆ ಪಟ್ಟಿದ್ದೇನೆ. ನನಗೆ ಗೊತ್ತು, ನೀನು ಬಂದೇ ಬರುತ್ತೀಯಾ ಅಂತ! ಇಂದು ಈಗ ಬರೆಯುತ್ತಿರುವ ಈ ವರುಷದ ಕೊನೆಯ ಪತ್ರವನ್ನು ಬರೆಯುವ ಈ ಸಮಯದಲ್ಲಿ ಖುಷಿಯೊ ಖುಷಿ. ನೀನು ಹೇಗಿರುವೆಯೋ, ಪರೀಕ್ಷೆ, ಓದು, ಕ್ಲಾಸ್ ಎಂಬುದರಲ್ಲಿ ತುಂಬ ಸೊರಗಿ ಹೋಗಿದ್ದಿಯೋ ಎಂಬುದೇ ನನ್ನ ಚಿಂತೆ. ನಿನ್ನನ್ನು ಮುಖತಃ ನೋಡುವವರೆಗೆ ನನಗೆ ಸಮಾಧಾನವಿಲ್ಲ. ನಾನಾದರೂ ನನ್ನ ಮನಸಿನ ಕನವರಿಕೆಗಳನ್ನು ವಾರಕ್ಕೆ ಒಂದು ಪತ್ರ ಬರೆದು ನನ್ನ ಮನಸ್ಸನ್ನು ಹಗುರ ಮಾಡಿಕೊಂಡಿದ್ದೇನೆ. ನಿನಗೂ ನನ್ನನ್ನು ಕಾಣಬೇಕು ಎಂಬ ಕಾತರ ಇದೆ ಎಂಬುದು ನೀ ನಿನ್ನ ಮನೆಗೆ ಹೋಗುವ ಮುನ್ನವೇ ನನ್ನನ್ನು ಭೇಟಿ ಮಾಡುತ್ತೇನೆ ಎಂದಾಗಲೇ ಗೊತ್ತಾಯಿತು.
ನೆನಪಿದೆಯಾ, ನಾನು ನಿನ್ನನ್ನು ಅಂದು ಅದೇ ಕಾಲೇಜಿನಲ್ಲಿ ಮೊದಲ ಸಲ ಪರಿಚಯವಾದಾಗಿನ ಕ್ಷಣ. ನಾನಂತೂ ಅಂದೇ ನಿನ್ನ ಚೆಲುವಿಗೆ ಮನಸೋತು ಬಿಟ್ಟೆ. ಚೆಲುವಿಗೆ ಮನಸೋತೆ ಎನ್ನುವುದಕ್ಕಿಂತಲೂ ನಿನ್ನ ಗುಣಗಳು ನನಗೆ ತುಂಬಾ ಇಷ್ಟವಾದವು ಎಂದರೆ ಅದೇ ಸತ್ಯವಾದುದು. ಯಾವತ್ತು ನಿನ್ನನ್ನು ನೋಡಿದೆನೋ ಅಂದಿನಿಂದ ನನ್ನ ಮನಸ್ಸಿಗೆ ನೀನೇ ನನಗೆ ಸರಿಯಾದವಳು, ಪ್ರೀತಿ ಮಾಡಿದರೇ ಇವಳನ್ನೇ ಮಾಡಬೇಕು ಎಂಬ ನಿರ್ಧಾರಕ್ಕೆ ಬರಲು ಶುರುಮಾಡಿದೆ.
ನಿನ್ನನ್ನು ಕಂಡರೆ ಇಡೀ ಕಾಲೇಜು ಮಂತ್ರಮುಗ್ಧವಾಗುತ್ತಿತ್ತು. ಆದರೂ ಈ ಹುಡುಗಿ ನನ್ನನ್ನು ಯಾಕೆ ಪ್ರೀತಿಸಿದಳು ಎಂಬ ಸಂಶಯ ನನ್ನ ಎಳೆ ಮನದಲ್ಲಿ ಬಂದಿದ್ದಂತೂ ನಿಜ. ನನಗೆ ನಿನ್ನ ಬಗ್ಗೆ ಮೊದಮೊದಲು ಏನೇನೂ ಗೊತ್ತಿರಲಿಲ್ಲ. ಆದರೂ ಏನೋ ಒಂದು ದೂರದ ಭರವಸೆ ನನ್ನ ಮನದಲ್ಲಿ ಇತ್ತು. ಆ ದೇವರ ಅನುಗ್ರಹದಿಂದ ಆ ಭರವಸೆ ನಿಜವಾಯಿತು.
ಸೌಮಿನಿ ಹನುಮಜೆ ತೃತೀಯ ಬಿ. ಎ.,
ಸಂತ ಫಿಲೋಮಿನಾ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.