ತುಂತುರು ಮಳೆ ಬಿಸಿ ಬಿಸಿ ಕಾಫಿ
Team Udayavani, Jul 27, 2018, 6:00 AM IST
ಮುಂಗಾರಿನ ಆದಿಯಲ್ಲಿ ಭಗವಂತ ನಭದಿಂದ ಪನ್ನೀರನ್ನು ಸಿಂಚನ ಮಾಡಿದಂತೆ ಭಾಸವಾಗುವುದು. ಕಿಟಕಿ ಸರಿಸಿ ನೋಡಿದರೆ ಬಾನಿನ ಹನಿ ಹಾಗೇ ಮೇಲಿಂದ ಧರೆಗೆ ಧುಮುಕುತ್ತಿರುತ್ತದೆ. ಮಳೆ ಬಂದ ತತ್‌ಕ್ಷಣಕ್ಕೆ ನೆನಪುಗಳ ಸಾಮ್ರಾಜ್ಯದಿಂದ ಒಂದೊಂದೇ ಮಧುರ ಕ್ಷಣಗಳ ಕುರುಹುಗಳು ಕಣ್ಣಮುಂದೆ ಹಾದುಹೋಗುತ್ತವೆ.
ಬಾಲ್ಯದಲ್ಲೆಲ್ಲ ಒಂದು ಚಿಕ್ಕ ಹೊಂಡದಲ್ಲಿ ನೀರು ತುಂಬಿದಾಗ, ಅದರಲ್ಲಿ ಇರೋ ಕಪ್ಪೆ ಮರಿಗಳನ್ನೇ ಮೀನೆಂದು ಹಿಡಿದ ನೆನಪು. ರಸ್ತೆಯಲ್ಲಿ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆನೀರು ನಿಂತಿದ್ದರೂ ಅದರ ಮೇಲೆ ಜಿಗಿದು “ಪಚಕ್’ ಎಂದು ಶಬ್ದ ಮೂಡಿಸಿದ ನೆನಪು. ಇನ್ನೇನು ಆಡಬೇಕು ಅನ್ನುವಷ್ಟರಲ್ಲಿ ಮಳೆ ಬಂದಾಗ, ಅಮ್ಮ “ಜ್ವರ ಬರುತ್ತೆ’ ಎಂದು ಬೈದಾಗ ಸ್ವಲ್ಪ ಬೇಜಾರಾದರೂ ಕಡೆಗೆ ಮಳೆಯೊಂದಿಗೆ ಆಟವಾಡಿದ ನೆನಪು. ಹಂಚಿನಿಂದ ಸೋರುತ್ತಿದ್ದ ಮಳೆಹನಿಗಳ ಮಧ್ಯೆ “ರೇಸ್’ ಏರ್ಪಡಿಸಿ ಯಾವುದು ಮೊದಲು ಎಂದು ಕಾದು ಕುಳಿತ ನೆನಪು.
ಅಜ್ಜಿಮನೆ ಕಡೆ ಗದ್ದೆಯಲ್ಲಿ ಬಿತ್ತನೆ ಮಾಡುವಾಗ ನಾವು ಸಹಾಯ ಮಾಡಲು ಎಂದು ಹೋಗಿ ಅಲ್ಲೇ ರೈತರಲ್ಲಿ ಆಟವಾಡಿದಾಗ ನಮ್ಮೆಲ್ಲರನ್ನು ಓಡಿಸಿದ ನೆನಪು, ಜೋರು ಮಳೆ ಸುರಿಯುವ ಹೊತ್ತಿಗೆ ನಾನು ಮತ್ತು ನನ್ನ ಸಹೋದರ ಸಂಬಂಧಿಗಳು ತೋಡಿನಲ್ಲಿದ್ದ ಮೀನು ಹಿಡಿದು ಒಂದು ಪಾತ್ರೆಗೆ ಹಾಕಿ, ಕೊನೆಗೆ “ಪಾಪ ಮೀನು’ ಎಂದು ಬಿಟ್ಟ ನೆನಪು, ಕೆಸರಿನಲ್ಲಿ ಜಾರಿ ಬಿದ್ದವನ ಎಳೆಯಲು ಹೋದಾಗ ಆತನನ್ನು ಎಳೆದು ಬಟ್ಟೆ ಪೂರ್ತಿ ಕೊಳೆಯಾದ ನೆನಪು, ತುಂತುರು ಮಳೆ ಬರುತ್ತಿದ್ದರೆ, ಬಿಸಿ ಬಿಸಿ ಕಾಫಿಯೊಂದಿಗೆ ಬೋಂಡ ಸವಿದ ನೆನಪು.
ಮಳೆಯ ನೆನಪು ಒಂದೇ ಎರಡೇ? ಹೇಳಲು ಹೋದರೆ ಇನ್ನಷ್ಟು ಇದೆ. ಈಗೀಗ ಮಳೆ ಕಡಿಮೆ ಎನ್ನುತ್ತಾರೆ. ಆದರೂ ಕಡಿಮೆಯಾಗದ್ದು ಮುಂಗಾರಿನ ಹನಿಯ ಪ್ರೀತಿ, ಅದರ ರೀತಿ. ಇಂದಿಗೂ ಮಳೆ ಯಾವಾಗ ಬರುತ್ತೆ ಎಂಬ ಕಾತರ. ಬಂದರೆ ನೆನೆಯೋ ಹಂಬಲ, ನೆನೆದರೆ ಕುಣಿಯುವ ಚಪಲ, ಕುಣಿದರೆ ಮಳೆಯ ಹನಿಗಳೊಂದಿಗೆ ತಾನು ಒಂದಾಗಬೇಕೆಂಬ ಕನಸು ಎಂದೆಂದಿಗೂ ಹಸಿರಾಗಿರುತ್ತದೆ.
ಈಗಲೂ ಮಳೆ ಬಂದಾಗ ಬಾಲ್ಯದ ತುಂಟಾಟಗಳು ಬರೀ ನೆನಪಾಗಿ ಉಳಿಯಲು ಬಿಡದೆ, ಇನ್ನೂ ಕೂಡ ಅದೇ ಕಾಯಕವನ್ನು ಮುಂದುವರೆಸುತ್ತಿದ್ದೇನೆ. ಇಂದು ಕೂಡ ಕಾಗದದಲ್ಲಿ ದೋಣಿ ಮಾಡಿ ನೀರಲ್ಲಿ ಬಿಡುತ್ತೇನೆ. ಬಸ್ ಟಿಕೇಟ್ ಆದರೂ ದೋಣಿ ಮಾಡಲು ಸಾಕು!
ಇನ್ನೇನು ಮುಸ್ಸಂಜೆಯಾಗುತ್ತ ಬಂತು. ರೇಡಿಯೋ ಬೇರೆ ಆನ್ ಆಗಿದೆ. “ಮುಂಗಾರು ಮಳೆಯೇ’ ಹಾಡಿನ ಧ್ವನಿ ಮನದಲ್ಲಿ ಪ್ರತಿಧ್ವನಿಸುತ್ತಿದೆ. ತುಂತುರು ಮಳೆಯ ಗಮನಿಸುತ್ತ ಬಿಸಿ ಬಿಸಿ ಕಾಫಿ ಸವಿಯುತ್ತಿದ್ದರೆ ನಿಜವಾಗಿಯೂ ಅದರ ರುಚಿಯೇ ಬೇರೆ !
ರಕ್ಷಿತಾ ವರ್ಕಾಡಿ
ಪ್ರಥಮ ಬಿ.ಎಸ್ಸಿ. ಎಸ್‌ಡಿಎಂ ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.