ನಾನು ನಿಮ್ಮ ಆರ್‌ಜೆ
Team Udayavani, Dec 1, 2017, 12:33 PM IST
ಮುಂಜಾನೆಯ ಚುಮು ಚುಮು ಚಳಿಯ ಪ್ರಭಾವದಿಂದ ಹಾಸಿಗೆ ಬಿಟ್ಟು ಕದಲಲು ಮನಸ್ಸಿಲ್ಲದಿದ್ದರೂ ಹೇಗೋ ಎದ್ದು ದೈನಂದಿನ ಕೆಲಸ ಮುಗಿಸಿ ಒಂದು ಗುಟುಕು ಬಿಸಿ ಬಿಸಿ ಕಾಫಿ ಸವಿಯುವಾಗ, ಇನ್ನೇನು ಎಫ್ಎಂ ಆನ್ ಮಾಡಿದರೆ ಸಾಕು, “”ಹಾಯ್, ಗುಡ್ ಮಾರ್ನಿಂಗ್, ನಾನು ನಿಮ್ಮ ಆರ್‌ಜೆ….’ ಎಂದು ನಾವ್ಯಾರೆಂದು ಗೊತ್ತಿಲ್ಲದಿದ್ದರೂ ಅತ್ಯಂತ ವಿನಮ್ರತೆ ಹಾಗೂ ಹುಮ್ಮಸ್ಸಿನಿಂದ ಬೆಳಗ್ಗೆಯನ್ನು ಸ್ವಾಗತಿಸುವವರು ಆರ್‌ಜೆಗಳು.
ಅದೇಕೋ ಗೊತ್ತಿಲ್ಲ, ಹಲವಾರು ಮಂದಿಗೆ ಆರ್‌ಜೆ ಎಂದರೆ ಒಂದು ಸೆಳೆತ, ನಮಗೂ ಅವರ ಹಾಗೆ ಪಟ ಪಟ ಎಂದು ಎಲ್ಲರೊಂದಿಗೆ ಮಾತಾಡಿ, ನಗಿಸುವ ಹಂಬಲ ಇದ್ದೇ ಇರುತ್ತದೆ. ಅವರು ಅದ್ಯಾವ ಮುಲಾಜಿಲ್ಲದೆ ನಗಿಸಲು ಮಾಡುವ ಪ್ರಯತ್ನ ಅದ್ಭುತ.
ಮೊದಲೆಲ್ಲ ರಾತ್ರಿ ಹೊತ್ತು ಟಿವಿ ನೋಡುತ್ತಿದ್ದಾಗ ಕರೆಂಟ್ ಹೋದರೆ ನನಗೂ ನನ್ನಣ್ಣನಿಗೂ ಮೊದಲು ನೆನಪಾಗುವುದು ರೇಡಿಯೋ. ಅದನ್ನ ಆನ್ ಮಾಡಿದಾಗ ಒಮ್ಮೊಮ್ಮೆ “ಓಶನ್ ಪರ್ಲ್’, “2ಬಿಎಚ್‌ಕೆ’, ಅದು ಇದು ಎಂದು ಜಾಹೀರಾತು ಇದ್ದರೆ, ಇನ್ನೂ ಕೆಲವೊಮ್ಮೆ ಹಳೆ ಸಿನೆಮಾಗಳ ಎಂದೂ ಹಳೆಯದೆನಿಸದ ಹಾಡುಗಳು ಬರುತ್ತವೆ. ಇವೆಲ್ಲದರ ನಡುವೆ ನಮಗೆ ಇಷ್ಟವಾಗುವುದು ಆರ್‌ಜೆಗಳ ಸವಿಮಾತು. ನಮ್ಮೆಲ್ಲಾ ಕಳೆದುಹೋದ ದಿನಗಳ ಆಯಾ ನೆನಪುಗಳನ್ನು ನೆನಪಿಸಲು ಒಂದು ಸುಂದರ ಅವಕಾಶ. ಕೆಲವರು ತಮ್ಮ ನೆನಪುಗಳನ್ನು ಹಂಚುವಾಗ ನಮಗೂ ನಮ್ಮ ಕಳೆದುಹೋದ ದಿನಗಳ ನೆನಪಾಗದೇ ಇರಲು ಚಾನ್ಸೇ ಇಲ್ಲ.
ಪದವಿಪೂರ್ವ ಶಿಕ್ಷಣಕ್ಕೆಂದು ಪ್ರತಿದಿನ ನಮ್ಮೂರಿನಿಂದ ಮಂಗಳೂರಿಗೆ ಹೋಗುವ “42′ ನಂಬರಿನ ಬಸ್ಸುಗಳಲ್ಲಿ ಬೆಳ್ಳಂಬೆಳಗ್ಗೆ “”ಮಾತೆರೆಗ್ಲ ಕಾಂಡೆದ ಉಡಲ್ ದಿಂಜಿನ ಸೊಲುಮೆಲು, ಯಾನ್ ನಿಕುಲ್‌ನ ಆರ್‌ಜೆ” (ಎಲ್ಲರಿಗೂ ಮುಂಜಾನೆಯ ಹೃದಯಪೂರ್ವ ನಮಸ್ಕಾರಗಳು, ನಾನು ನಿಮ್ಮ ಆರ್‌ಜೆ) ಎಂದಾಗ ಅದೇನೋ ಖುಷಿ. ಪ್ರತಿದಿನ ಏನಾದರೂ ಹೊಸ ವಿಷಯ ತಿಳಿಸಿಕೊಡುತ್ತಾರೆ. ಹೊಸ ಹೊಸ ಪ್ರಶ್ನೆ ಕೇಳಿ ಸಾರ್ವಜನಿಕರು ಕರೆ ಮಾಡಿ ಅದಕ್ಕುತ್ತರಿಸುವಾಗ, ಅವರ ಕ್ಷೇಮ ಸಮಾಚಾರ ವಿಚಾರಿಸಿ, ಅವರ ಕಾಲೆಳೆದು, ಉತ್ತರ ಸರಿಯೋ ತಪ್ಪೋ ಎಂದು ಕಡೆವರೆಗೂ ತಿಳಿಸದೆ ಒಂದು ಕುತೂಹಲವನ್ನು ಮೂಡಿಸುತ್ತಾರೆ.
ಮಧ್ಯಾಹ್ನದ ಹೊತ್ತು ಹಲವು ರೇಡಿಯೋ ಸ್ಟೇಷನ್‌ಗಳಲ್ಲಿ ಆರ್‌ಜೆಗಳದ್ದು ಅಷ್ಟೊಂದು ಸುದ್ದಿ ಇಲ್ಲದಿದ್ದರೂ, ಕೆಲವೊಂದರಲ್ಲಂತೂ ಅವರದ್ದೇ ಸುದ್ದಿ. ಇನ್ನು ಮುಸ್ಸಂಜೆಯಂತೂ ಕೇಳ್ಳೋದೇ ಬೇಡ, ಎಲ್ಲಾ ರೇಡಿಯೋ ಸ್ಟೇಷನ್‌ಗಳಲ್ಲೂ ಆರ್‌ಜೆಗಳದ್ದೇ ಹವಾ.
ಹೀಗೆ ಪ್ರತಿ ಮುಂಜಾನೆ, ಮಧ್ಯಾಹ್ನ, ಮುಸ್ಸಂಜೆ, ರಾತ್ರಿ ತಮ್ಮ ವಾಕ್‌ಚಾತುರ್ಯದಿಂದ ನಮ್ಮನ್ನು ರಂಜಿಸುತ್ತ, ನಮ್ಮ ಕತೆಗಳನ್ನು ಆಲಿಸುತ್ತ¤, ಒಮ್ಮೊಮ್ಮೆ ಛೇಡಿಸಿ ಮತ್ತೆ ಕೆಲವೊಮ್ಮೆ ಸಮಾಧಾನಿಸುವ, ಕಣ್ಮುಂದಿಲ್ಲದಿದ್ದರೂ ನಮ್ಮ ಪಕ್ಕದಲ್ಲಿರುವ ಭಾವನೆ ಮೂಡಿಸುವ, ಪರಸ್ಪರ ಭೇಟಿಯಾಗದಿದ್ದರೂ ಅಪರಿಚಿತರೆನಿಸದೆ, ತಮ್ಮ ನೋವನ್ನು ಮರೆಮಾಚಿ, ಎಲ್ಲರ ಖುಷಿಯಲ್ಲಿ ನಗು ಕಾಣೋ ಆರ್‌ಜೆಗಳ ಜೀವನ ಯಾವಾಗಲೂ ಖುಷಿಖುಷಿಯಾಗಿರಲಿ, ಆರ್‌ಜೆಗಳು ಸದಾ ಹಸನ್ಮುಖೀಗಳಾಗಲಿ.
ರಕ್ಷಿತಾ ವರ್ಕಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.