ಮಳೆಯಲ್ಲಿ ಆಡಿದ ಖೋ-ಖೋ
Team Udayavani, Dec 21, 2018, 6:00 AM IST
ಮಳೆಗಾಲ ಬಂದರೆ ಸಾಕು, ಜನರ ಜೀವನ ಶೈಲಿಯೇ ಬದಲಾಗಿ ಬಿಡುತ್ತದೆ. ಆಹಾರ, ಉಡುಗೆ-ತೊಡುಗೆ ಹೀಗೆ ಎಲ್ಲದರಲ್ಲೂ ವಿಭಿನ್ನತೆಯನ್ನು ಕಾಣಬಹುದು. ಅಷ್ಟೇ ಯಾಕೆ ಮಳೆಗಾಲ ಎಂದರೆ ಹಳೇ ನೆನೆಪುಗಳನ್ನು ಹೊತ್ತು ತರುವ ಕಾಲ ಅಂತಾನೇ ಹೇಳಬಹುದು. ಅದೆಷ್ಟೋ ಹಳೇ ನೆನೆಪುಗಳನ್ನು ಮೆಲಕು ಹಾಕುತ್ತಾ ಕೂರಲು ಇದೊಂದು ಒಳ್ಳೆಯ ಸಮಯ.
ಮಳೆಗಾಲ ಅಂದ ತಕ್ಷಣ ಹೆಚ್ಚಾಗಿ ಮೊದಲಿಗೆ ನೆನಪಿಗೆ ಬರುವುದು ನಮ್ಮ ಬಾಲ್ಯ. ಹೌದು, ಮಳೆಗಾಲಕ್ಕೂ ನಮ್ಮ ಬಾಲ್ಯಕ್ಕೂ ಅದೇನೋ ಸಂಬಂಧವಿದೆ. ಮಳೆಯಲ್ಲಿ ಒದ್ದೆಯಾಗಿ ಅಪ್ಪ-ಅಮ್ಮನಿಂದ ಬೈಸಿಕೊಂಡಿದ್ದು, ಶಾಲೆಗೆ ಹೋಗುವಾಗ ರಸ್ತೆ ಬದಿಯಲ್ಲಿ ಹರಿಯುವ ನೀರಿನಲ್ಲಿ ಆಟ ಆಡುತ್ತಾ ಹೋಗುತ್ತಿದ್ದದ್ದು, ಕೊಡೆ ಇದ್ದರೂ ಅದನ್ನು ಬಿಡಿಸದೆ ಮಳೆಯಲ್ಲಿ ಒದ್ದೆಯಾಗಿದ್ದು, ತೋಡಿನಲ್ಲಿ ಮೀನು ಹಿಡಿಯುವ ಆಟ, ಮಳೆ ಎಂಬ ಕಾರಣ ಕೊಟ್ಟು ಪುಸ್ತಕಗಳನ್ನು ಶಾಲೆಯಲ್ಲೇ ಬಿಟ್ಟು ಹೋಗುತ್ತಿದ್ದದ್ದು, ಹೋಂವರ್ಕ್ ಮಾಡದೆ ಶಾಲೆಗೆ ಹೋಗಿ ಟೀಚರ್ ಬಳಿ ಪುಸ್ತಕ ಮಳೆಗೆ ಒದ್ದೆಯಾಗಿ ಹರಿದು ಹೋಗಿದೆ ಎಂದು ಸುಳ್ಳು ಹೇಳಿದ್ದು, ಶಾಲೆಗೆ ತಡವಾಗಿ ಹೋಗಿದ್ದಕ್ಕೆ, ಯೂನಿಫಾರ್ಮ್ ಹಾಕದಿದ್ದಕ್ಕೆ ಮಳೆಯ ಕಾರಣ ನೀಡಿದ್ದು, ಶಾಲೆಯಲ್ಲಿ ಆಟದ ಸಮಯದಲ್ಲಿ ಮಳೆ ಸುರಿಯುತ್ತಿದ್ದರೂ ಕೂಡ ಅದನ್ನು ಲೆಕ್ಕಿಸದೆ ಮಳೆಯಲ್ಲಿ ಆಟ ಆಡಿ ಟೀಚರ್‌ನಿಂದ ಬೈಸಿಕೊಂಡಿದ್ದು, ಹೊಸ ಯೂನಿಫಾರ್ಮ್ ಹಾಕಿಕೊಂಡು ಉತ್ಸಾಹದಿಂದ ಶಾಲೆಗೆ ಹೊರಟಿದ್ದಾಗ ದಾರಿ ಮಧ್ಯೆ ಬಸ್ ಬಂದು ಯೂನಿಫಾರ್ಮ್ ಮೇಲೆ ಕೆಸರು ಹಾರಿಸಿಕೊಂಡು ಹೋಗಿದ್ದು, ರಸ್ತೆಯ ಬದಿ ತೋಡಿನಲ್ಲಿ ಕಾಗದದ ದೋಣಿ ಮಾಡಿ ತೇಲಿ ಬಿಟ್ಟು ಸ್ಪರ್ಧೆ ನಡೆಸಿದ್ದು, ನೀರು ತುಂಬಿದ ಗದ್ದೆಯಲ್ಲಿ ಸ್ನೇಹಿತರೊಂದಿಗೆ ರೇಸ್ ನಡೆಸಿದ್ದು, ಹೀಗೆ ನಮ್ಮ ಬಾಲ್ಯದ ಈ ಘಟನೆಗಳು ನೆನಪಾದಾಗ ಈಗ ಮುಖದಲ್ಲಿ ಮಂದಹಾಸ ಮೂಡುತ್ತದೆ.
ನಮ್ಮ ಜೀವನದಲ್ಲಿ ಎಷ್ಟೋ ಘಟನೆಗಳು ನಡೆದಿದ್ದರೂ ಕೂಡ ಎಲ್ಲಾ ಘಟನೆಗಳು ನಮ್ಮ ನೆನಪಿನಲ್ಲಿರುವುದಿಲ್ಲ. ಆದರೆ, ಕೆಲವೊಂದು ಘಟನೆಗಳು ನಮ್ಮ ಜೀವನದಲ್ಲಿ ಅಚ್ಚಳಿಯದಂತೆ ಉಳಿದು ಹೋಗುತ್ತವೆ. ಪ್ರತೀ ವರ್ಷ ಮಳೆಗಾಲ ಬಂದಾಗ ನನಗೆ ಮರೆಯದೇ ನೆನಪಾಗುವ ಹಾಗೂ ನನ್ನ ಜೀವನದಲ್ಲಿ ಅಚ್ಚಳಿಯದಂತೆ ಉಳಿದಿರುವ ಮಳೆಗಾಲದ ಒಂದು ಘಟನೆ ಅಂದರೆ ಅದು ಖೋ-ಖೋ ಮ್ಯಾಚ್.
ಅಂದು ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಳೆ ಸುರಿಯುವ ಎಲ್ಲ ಸೂಚನೆಗಳಿದ್ದರೂ ಕೂಡ ನಾನು ದೇವರಲ್ಲಿ ನಮ್ಮ ಮ್ಯಾಚ್ ಆಗುವವರೆಗೂ ಮಳೆ ಬಾರದಿರಲಿ ಎಂದು ಪ್ರಾರ್ಥಿಸುತ್ತಿದ್ದೆ. ಅಂದು ತಾಲೂಕು ಮಟ್ಟದ ಖೋ-ಖೋ ಪಂದ್ಯವನ್ನು ನಮ್ಮೂರ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು. ನಾವೆಲ್ಲರೂ ಒಳ್ಳೆಯ ರೀತಿಯಲ್ಲಿ ಸ್ಪರ್ಧೆ ನೀಡಲು ಸಕಲ ಸಿದ್ಧತೆಯನ್ನು ನಡೆಸಿದ್ದೆವು. ತಿಂಗಳುಗಟ್ಟಲೆ ಪ್ರಾಕ್ಟೀಸ್ ಮಾಡಿ ಒಳ್ಳೆಯ ಫೈಟ್ ನೀಡಲು ತಯಾರಾಗಿದ್ದೆವು. ಜೀವನದಲ್ಲಿ ಮೊದಲ ಬಾರಿಗೆ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದುದರಿಂದ ಕಾತುರತೆ ಜೊತೆಗೆ ಸ್ವಲ್ಪ ಭಯವೂ ಇತ್ತು. ಅಂತೂ ಸ್ಪರ್ಧೆಗಳು ಆರಂಭಗೊಂಡವು. ಮೊದ-ಮೊದಲಿಗೆ ಸ್ವಲ್ಪ ಭಯವಾದರೂ ಕೂಡ ಮುಂದೆ ಆಡುತ್ತಾ-ಆಡುತ್ತ ಧೈರ್ಯ ಬಂತು. ನಾವೆಲ್ಲರೂ ಅತ್ಯಂತ ಉತ್ಸಾಹದಿಂದಲೇ ಆಡುತ್ತಿದ್ದೆವು. ಮ್ಯಾಚ್ ಆರಂಭಗೊಂಡು ಸ್ವಲ್ಪ ಹೊತ್ತು ಕಳೆದಿತ್ತು ಅಷ್ಟೇ. ಎಲ್ಲಿತ್ತೋ ಆ ಮಳೆ ಗೊತ್ತಿಲ್ಲ ಜೋರಾಗಿ ಸುರಿಯಲು ಆರಂಭಿಸಿತು. ನಾವು ಆ ಮಳೆಯಲ್ಲಿ ಆಡಿದ ದೃಶ್ಯಗಳು ಇನ್ನೂ ಹಾಗೇ ಕಣ್ಣ ಮುಂದೆ ಬರುತ್ತದೆ. ಆ ಜಡಿ ಮಳೆಯಲ್ಲಿ ನಡುಗುತ್ತ ಆಡಿದ ಆ ಖೋ-ಖೋ ಮ್ಯಾಚ್ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಅಂದು ಹುಡುಗರಿಗೆ-ಹುಡುಗಿಯರಿಗೆ ಬೇರೆ ಬೇರೆ ಮೈದಾನವನ್ನು ಸ್ವರ್ಧೆಗೆಂದು ಸಿದ್ಧಗೊಳಿಸಿದ್ದರು. ಹುಡುಗಿಯರು ಆಡುವ ಮೈದಾನ ಸುರಕ್ಷಿತವಾಗಿತ್ತು, ಯಾವುದೇ ತೊಂದರೆಯಾಗುವಂಥ ವಾತಾವರಣ ಇರಲಿಲ್ಲ ಆದರೆ, ಹುಡುಗರು ಆಡುವ ಮೈದಾನದಲ್ಲಿದ್ದ ಮಣ್ಣು ಮಳೆಯ ನೀರಿನಿಂದಾಗಿ ಜಾರುತ್ತಾ ಇತ್ತು. ಅದೇ ಮೈದಾನದಲ್ಲಿ ಹುಡುಗರು ಬೀಳುತ್ತಾ-ಏಳುತ್ತಾ ಛಲಬಿಡದೆ ಆಡಿದ್ದನ್ನು ನೆನಪಿಸಿಕೊಂಡಾಗ ಈಗಲೂ ಅವರ ಬಗ್ಗೆ ಕನಿಕರ ಮೂಡುವುದಲ್ಲದೇ ಅವರ ಆ ಛಲವನ್ನು ನೆನಪಿಸಿಕೊಂಡಾಗ ಖುಷಿಯಾಗುತ್ತದೆ.
ಹೀಗೆ ಬಾಲ್ಯದಲ್ಲಿ ನಡೆದ ಅದೆಷ್ಟೋ ಘಟನೆಗಳನ್ನು ಈಗ ನೆನಪಿಸಿಕೊಂಡಾಗ ಮುಖದಲ್ಲಿ ನಗು ಮೂಡುವುದಲ್ಲದೇ ನಮ್ಮ ಜೀವನದಲ್ಲಿ ಹಿಂದೆ ಹೀಗೆಲ್ಲ ನಡೆದಿತ್ತಾ ಎಂಬ ಆಶ್ಚರ್ಯವೂ ಕೆಲವೊಮ್ಮೆ ಆಗುತ್ತದೆ.
– ಭಾವನಾ ಕೆರ್ವಾಶೆ
ಆಳ್ವಾಸ್ ಪಿಜಿ ಕಾಲೇಜು, ಮೂಡಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.