ಲೈಫ್ ಈಸ್ ಬ್ಯೂಟಿಫುಲ್
Team Udayavani, Apr 26, 2019, 5:50 AM IST
ಈ ಮಾತು ಒಂಥರ ಗೊಂದಲಮಯವಾದದ್ದು, ಯಾಕೆಂದರೆ, ನಿರೀಕ್ಷೆ ಮತ್ತು ವಾಸ್ತವತೆಯ ಮಧ್ಯೆ ನಿಂತಿರುವ ಭಾವನೆಯೇ ಇದು. ಒಂದು ಸಲ ಕಣ್ಣು ಮುಚ್ಚಿ ಆಂತರಿಕ ಪ್ರಪಂಚಕ್ಕೆ ಹರಿಸಿದರೆ ಸಾಕು ಅದರೊಳಗೆ ಸಾವಿರಾರು ಜನರು, ಹಲವಾರು ಸಂಗತಿಗಳು, ನೂರಾರು ನೆನಪುಗಳು, ಅದೆಷ್ಟೋ ಭಾವನೆಗಳು ಹೀಗೆ ಎಲ್ಲವೂ ಮರುಕಳಿಸುತ್ತವೆ. ಎಲ್ಲ ಸಂಬಂಧಗಳಿಗೂ ಒಂದೊಂದು ಸುಂದರವಾದ ಸೇತುವೆಯನ್ನು ಕಟ್ಟಿ ಕಾಪಾಡಿಕೊಳ್ಳಬೇಕೆಂಬುದು ಮನಸ್ಸಿನ ಇಚ್ಛೆಯಾದರೆ, ಹೊರಗಿನ ಪ್ರಪಂಚ ಸುಳಿಗೆ ಸಿಕ್ಕಿದ ನಮ್ಮ ಜೀವನ ಮತ್ತು ಮನಸ್ಸು ಮಾತ್ರ ಅಲ್ಲೋಲ ಕಲ್ಲೋಲವಾಗುತ್ತದೆ.
ಈ ಪ್ರಪಂಚದಲ್ಲಿನ ಸತ್ಯ, ಸುಳ್ಳು, ಭ್ರಮೆ ಇವೆಲ್ಲ ನಮ್ಮ ಊಹೆಯೋ ನಿಜವೋ ಎಂಬುದು ಪ್ರಶ್ನಾರ್ಥಕವಾಗಿ ಕಾಡುತ್ತದೆ. ನಮ್ಮ ಕಣ್ಣಿಗೆ ಕಾಣೋದೆಲ್ಲ ನಾವು ಸತ್ಯ ಅಂದುಕೊಂಡರೆ ನಮ್ಮ ಕನಸು ಸುಳ್ಳಾ? ಒಂದು ವೇಳೆ ಸುಳ್ಳಾಗಿದ್ದರೆ ನಮ್ಮ ಕನಸು ನನಸಾಗಿಸಲು ಯಾಕೆ ಅಷ್ಟು ಕಷ್ಟಪಡುತ್ತೇವೆ? ಹಾಗಾದರೆ ಇದು ಭ್ರಮೆಯೇನೂ ಅಲ್ಲ. ಇಂಥ ವಿಚಾರಗಳನ್ನು ನಮ್ಮ ಬುದ್ಧಿ ನೇರವಾಗಿ ಒಪ್ಪಿಕೊಳ್ಳುತ್ತದೆ. ಕೆಲವಷ್ಟನ್ನು ವಾದ ಮಾಡಿ ಕೊನೆಗೆ ಅರ್ಥಮಾಡಿಕೊಳ್ಳುತ್ತದೆ. ಚಂಚಲ ಮನಸ್ಸಿನ ನಡವಳಿಕೆಗಳೇ ಇದಕ್ಕೆ ದೃಷ್ಟಾಂತವಲ್ಲವೆ?
ನಮ್ಮ ಮೆದುಳಿನಲ್ಲಿ ನಾನಾ ಥರದ ಹೊಸ ಹೊಸ ಐಡಿಯಾಗಳು ಪುನರಾವರ್ತಿತವಾಗುತ್ತದೆ. ಆದರೆ, ನಾವು ಮಾತ್ರ ಅದನ್ನು ಗಮನಿಸಿದರೂ ಗಮನಿಸದಂತೆ ಆ ಕೆಲಸ ನನ್ನಿಂದ ಆಗುವಂಥದ್ದಲ್ಲ ಎಂದು ಕಡೆಗಣಿಸುತ್ತೇವೆ. ಆದರೆ, ಅದೇ ಐಡಿಯಾವನ್ನು ಮತ್ತೂಬ್ಬರು ಕಾರ್ಯಗತಗೊಳಿಸಿ ಯಶಸ್ವಿಯಾದಾಗ, “ಅಯ್ಯೋ, ಅದು ನನ್ನ ತಲೆಗೆ ಬಂದಿತ್ತು, ನಾನು ಆಗಲೇ ಎಚ್ಚೆತ್ತುಕೊಂಡು ಕೆಲಸ ಮಾಡಬೇಕಿತ್ತು’ ಎಂಬ ನಿರಾಸೆಯೂ ನಮ್ಮದೇ.
ಜಗತ್ತಿನಲ್ಲಿ ಏನೇನಿದೆಯೋ ಎಲ್ಲ ಸತ್ಯವೇ. ನಮ್ಮ ಕಣ್ಣಿಗೆ ಅವೆಲ್ಲ ಕಾಣಿಸದೆ ಇರಬಹುದು. ಈ ವಿಶಾಲವಾದ ಪ್ರಪಂಚದಲ್ಲಿ ನಮಗೆ ಕಾಣಿಸದಿರುವುದು, ಕೇಳಿಸದಿರುವುದು, ನಮ್ಮ ಅನುಭವಕ್ಕೆ ಬಾರದಿರುವಂಥ ಸಂಗತಿಗಳು ಸಾಕಷ್ಟಿವೆ. ಈ ಭೂಮಿಯಲ್ಲಿ ಮಾನವರಾಗಿ ಜನಿಸಿರುವುದೇ ನಮ್ಮ ಭಾಗ್ಯ. ಇರುವಷ್ಟು ದಿನ ಬಾಹ್ಯ ಪ್ರಪಂಚದ ಅನುಭವದೊಂದಿಗೆ ನಮ್ಮೊಳಗಿನ ಪ್ರಪಂಚವನ್ನು ಪ್ರೀತಿಸಿದಾಗ ಅದರ ಖುಷಿಯೇ ಬೇರೆ. ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ನಮಗಿದೆ ಅಂತಲೇ ದೇವರು ನಮಗೆ ಕಷ್ಟ ಕೊಡುತ್ತಾನೆ. ನಮ್ಮಲ್ಲಿ ಎಷ್ಟೇ ಕಷ್ಟ-ನಷ್ಟ, ನೋವು-ನಲಿವು, ಏನೇ ಅಂಗವಿಕಲತೆಯಿದ್ದರೂ ನಮ್ಮ ಕಣ್ಣ ಮುಂದೆ ಕಾಣುವುದನ್ನು ಸುಂದರವಾಗಿ ಕಂಡುಕೊಂಡು ಹೋದರೆ, ಹಾಗೆಯೇ ಪ್ರತಿಯೊಂದನ್ನೂ ಪ್ರೀತಿಸುತ್ತ ಹೋದರೆ ಲೈಫ್ ಈಸ್ ಸೋ ಬ್ಯೂಟಿಫುಲ್ ಎನ್ನುವುದರಲ್ಲಿ ಅತಿಶಯೋಕ್ತಿಯಲ್ಲ. ಜೀವನೋತ್ಸಾಹವಿದ್ದರೆ ನಾವೆಲ್ಲ ಸದಾ ಹಸನ್ಮುಖೀಗಳು ಅಲ್ಲವೆ?
ಮುಕೇಶ್ ನೆಕ್ಕರಡ್ಕ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ,
ಮಂಗಳೂರು ವಿಶ್ವವಿದ್ಯಾನಿಲಯ, ಕೋಣಾಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.