ನನ್ನ ಮೆಚ್ಚಿನ ಸಾಹಿತಿ
Team Udayavani, Mar 24, 2017, 3:50 AM IST
ಬದುಕು ಎಲ್ಲವನ್ನು ಕಲಿಸುತ್ತ ಹೋಗುತ್ತದೆ. ನಾವು ಇಂದು ಇದ್ದ ಹಾಗೆ ನಾಳೆ ಇರುವುದಿಲ್ಲ. ಬದುಕಿನ ಪಯಣ ಎತ್ತ ಸಾಗುತ್ತದೆ ಎಂಬ ಕಲ್ಪನೆ ಕೂಡ ನಮಗೆ ಸಿಗುವುದಿಲ್ಲ. ಈ ಕ್ಷಣದ ಪರಿಸ್ಥಿತಿ ಮತ್ತೂಂದು ಕ್ಷಣಕ್ಕೆ ಬದಲಾಗುತ್ತದೆ. ಏನು ಓದಬೇಕು, ಏನು ಸಾಧನೆ ಮಾಡಬೇಕು ಎಂದು ನಮ್ಮೊಳಗೆ ನಾವೇ ಒಂದು ಲೆಕ್ಕಾಚಾರ ಹಾಕಿದ್ದರೂ ಒತ್ತಡಕ್ಕೆ ಮಣಿದು ಇನ್ನೇನನ್ನೋ ಆಯ್ಕೆ ಮಾಡಿ ಅದರತ್ತ ಸಾಗುತ್ತಿರುತ್ತೇವೆ.
ಹೌದು, ಹೀಗೆ ನಾನು ಕೂಡ ನನ್ನೊಳಗೆ ಒಂದು ನಿಲುವನ್ನು ಕಂಡುಕೊಂಡಿದ್ದೆ. ಆದ್ರೆ ಈ “ಹುಚ್ಚು ಕೋಡಿ ಮನಸ್ಸು, ಇದು ಹದಿನಾರರ ವಯಸ್ಸು’ ಅನ್ನುತ್ತಾರಲ್ಲ ಹಾಗೆ, ಏನೋ ಗೆದ್ದೇ ಬಿಡಬಹುದು, ಏನೋ ಮಾಡೇಬಿಡಬಹುದು ಎಂದುಕೊಂಡಾಗಿತ್ತು. ನನ್ನ ಈ ಹುಚ್ಚು ಮನಸ್ಸು ಎತ್ತೆತ್ತಲೋ ಓಲಾಡುತ್ತಿತ್ತು. ವಾಸ್ತವದ ಪ್ರಜ್ಞೆ ಹೇಗೆ ತಾನೆ ಬರುತ್ತದೆ, ಈ ವಯಸ್ಸಿನಲ್ಲಿ. ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಪಿಯುಸಿಯಲ್ಲಿ ವಿಜ್ಞಾನಕ್ಕೆ ಮನಸ್ಸು ವಾಲಿತ್ತು. ವಿಜ್ಞಾನವೇ ಬದುಕು, ಅದೇ ಪ್ರಪಂಚ ಎಂದು ಅಂದುಕೊಂಡಿದ್ದ ನಾನು, ಇನ್ನೊಂದೆಡೆ ನಾನು ಸಾಧಿಸಬೇಕಾದ ಕ್ಷೇತ್ರ ಯಾವುದು ಎಂದು ಗೊಂದಲದಲ್ಲಿಯೇ ಕಾಲ ದೂಡಿ ಕೊನೆಗೂ ಪಿಯುಸಿ ಮುಗಿಸಿದ್ದೆ.
ನನ್ನ ಆ ಬಾಲ್ಯದಲ್ಲಿ ಆಡಿದ ಆಟ, ನನ್ನ ಜೀವನದಲ್ಲಿ ಯೂಟರ್ನ್ ಆಗಿ ಬದಲಾಗಿತ್ತು. ಸಾಮಾನ್ಯವಾಗಿ ಚಿಕ್ಕವರಿದ್ದಾಗ ನಮಗೆ ಇಷ್ಟದ ವಿಷಯ, ಇಷ್ಟವಾದ ವ್ಯಕ್ತಿಯ ಪೂರ್ಣ ಪರಿಶ್ರಮವನ್ನು , ಸಾಧನೆಯನ್ನು ಸಿಕ್ಕೆಲ್ಲ ವಿಷಯವನ್ನು ಒಟ್ಟು ಸೇರಿಸಿ ಖಾಲಿ ಹಾಳೆ ಮೇಲೆ ಅಂಟಿಸಿ ನಮ್ಮೊಂದಿಗೆ ಇಟ್ಟುಕೊಂಡಿರುತ್ತೇವೆ, ಆ ರೀತಿ ನಾನು ಆಯ್ಕೆ ಮಾಡಿಕೊಂಡ ವ್ಯಕ್ತಿ ಪ್ರಸಿದ್ಧ ಸಾಹಿತಿಯಾದ ಎಸ್.ಎಲ್. ಭೈರಪ್ಪರವರು. ಸಂಪೂರ್ಣವಾಗಿ ಅವರ ಮೇಲೆ ಇಡೀ ಪುಸ್ತಕವೇ ತಯಾರಿ ಮಾಡಿದ್ದೆ. ಈ ಪುಸ್ತಕವನ್ನು ಶ್ರದ್ಧೆಯಿಂದ ಮಾಡಿದ್ದೆ. ಭೈರಪ್ಪನವರು ನನ್ನ ಮನಸ್ಸಿನಲ್ಲಿ ಆಳವಾಗಿ ನೆಲೆಸಿಹೋಗಿದ್ದರು. ಅವರ ಬರವಣಿಗೆಯ ಅರಿವೇ ಇಲ್ಲದೆ ಹೋದರೂ ಯಾವುದೋ ಒಂದು ರೀತಿಯ ಅವರ ಬರವಣಿಗೆಯ ಸಾರವು ನನ್ನನ್ನು ಸೆಳೆದೇ ಬಿಟ್ಟಿತ್ತು. ಅತೀ ಸಾಮಾನ್ಯರಂತೆ ಜೀವಿಸುತ್ತಿರುವ ಅವರು ನಮ್ಮ ಮೈಸೂರಿನವರೇ ಆಗಿದ್ದಾರೆ. ದಿನಾ ವಾಕಿಂಗ್ ಹೋಗುತ್ತಿದ್ದ ಅವರು ನನ್ನ ಶಾಲೆಯ ಬಳಿಯೇ ಸಿಕ್ಕಿಬಿಟ್ಟರು. ಅನಿರೀಕ್ಷಿತ ಭೇಟಿ. ನನ್ನ ಪುಸ್ತಕವನ್ನು ಅವರು ನೋಡಿದರು. ನೋಡಿದವರೇ, “”ನಿನ್ನಲ್ಲಿ ಬಹಳ ಕಲೆಯಿದೆ, ಹೊರತೆಗೆ” ಎಂದಿದ್ದರು. ನನಗೆ ಇಷ್ಟೇ ಸಾಕಾಗಿತ್ತು ಬರವಣಿಗೆಯನ್ನೇ ಆಯ್ಕೆ ಮಾಡಲು. ಬೇಕೋ ಬೇಡವೋ, ಇದನ್ನೇ ಇಟ್ಟು ಬದುಕಬೇಕು ಎನ್ನಿಸಿಹೋಗಿತ್ತು.
ಮುಂದೆ ನಾನು ಬರವಣಿಗೆಯಲ್ಲಿ ಹಿಡಿತ ಸಾಧಿಸಬೇಕು, ಪತ್ರಿಕೋದ್ಯಮ ಆಯ್ಕೆ ಮಾಡಿಕೊಳ್ಳಬೇಕು ಅಂದುಕೊಳ್ಳುವಷ್ಟರಲ್ಲಿ ಬಾಹ್ಯ ಪ್ರಪಂಚವು ತಲೆಕೆಡಿಸುತ್ತಿತ್ತು. “ನಿನ್ನ ನಿಲುವಿಗೆ ನೀನು ಬದ್ಧಳಾಗಿರು’ ಎಂದು ಅಂತರಾಳ ಕೂಗುತ್ತಿತ್ತು. ಹೌದು, ನನ್ನ ನಿಲುವಿಗೆ ನಾನು ಬದ್ಧಳಾಗಿದ್ದೆ. ಪತ್ರಿಕೋದ್ಯಮ ಎಂದಲ್ಲ, ಆದರೆ ಬರೆಯುವ ಹುಚ್ಚು ಆಳವಾಗಿತ್ತು. ಸಿಕ್ಕಿದ್ದೆಲ್ಲ ಹೊಸ ಡೈರಿಯನ್ನು ನನ್ನದು ಎಂದು ಬಾಚಿ ಅದರ ಪುಟಗಳಲ್ಲಿ ಬರೆಯುವ ಹುಚ್ಚು. ಸರಿಯೋ ತಪ್ಪೋ, ಸರಿಯೋ ಬರೆಯುತ್ತಲೇ ಇದ್ದೆ. ಇಷ್ಟೆಲ್ಲಾ ಬರೆಯುತ್ತಿದ್ದರೂ ಮುಂದೇನು ಮಾಡಬಹುದು ಎಂಬ ದೃಢತೆ ಇರಲೇ ಇಲ್ಲ.
ತಲೆಯಲ್ಲಿ ಬರವಣಿಗೆಯ ಒಲವಿದ್ದರೂ ಆಯ್ದದ್ದು ಮಾತ್ರ ವಿಜ್ಞಾನ ಎಂಬ ಮತ್ತೂಂದು ಪ್ರಪಂಚ. ಬಾಹ್ಯ ಪ್ರೇರಣೆ ಅನ್ನೋ ಹಾಗೆ ಆಗ ಅನಿವಾರ್ಯತೆಗೆ ಶರಣಾಗಿದ್ದೆ. ವಿಜ್ಞಾನವು ಮೂಗಿಗೆ ತುಪ್ಪ ಸವರಿದಂತಾದರೂ ಮನಸ್ಸಿಗೆ ನಾಟಲಿಲ್ಲ. ಕೊನೆಗೂ ನಾ ಬಯಸಿದ ಕ್ಷೇತ್ರವನ್ನು ನಾನು ಆಯ್ಕೆ ಮಾಡಿಕೊಂಡಿದ್ದೇನೆ. ದೂರದ ಮೈಸೂರಿನಿಂದ ಉಜಿರೆ ಎಸ್‌ಡಿಎಮ್ ಕಾಲೇಜಿಗೆ ಬಂದು ಪತ್ರಿಕೋದ್ಯಮ ಓದುತ್ತಿದ್ದೇನೆ. ಕನಸಿನ ಹಾದಿಗೆ ದಾರಿ ಮಾಡಿಕೊಟ್ಟು ಪ್ರೋತ್ಸಾಹಿಸಿದ ನಾ ಮೆಚ್ಚಿದ ಸಾಹಿತಿ ಭೈರಪ್ಪನವರ ಮಾತು ಇನ್ನೂ ಕಿವಿಯಲ್ಲಿ ಗುನುಗುಡುತ್ತಿದೆ, ನಾ ಅಂದುಕೊಂಡದ್ದೇ ಸಾಧಿಸುವೆ ಎಂಬ ಉಜ್ವಲ ಕನಸಿನೊಂದಿಗೆ ಮುನ್ನುಗ್ಗುತ್ತ ಬದಲೀ ಪ್ರಪಂಚದಲ್ಲಿ, ಬದಲೀ ಜನರೊಡನೆ, ಬದಲೀ ಕನಸುಗಳೊಡನೆ ಪತ್ರಿಕೋದ್ಯಮ ಎಂಬ ದೀಪವನ್ನು ಕೈಯಲ್ಲಿ ಎತ್ತಿ ನಿಂತಿದ್ದೇನೆ. ಉಜ್ವಲಿಸುವ ಶಕ್ತಿ ನನ್ನ ನಿಲುವಿನಲ್ಲಿದೆ.
ಸಂಹಿತಾ.ಎಸ್. ಪ್ರಥಮ ಪತ್ರಿಕೊದ್ಯಮ ಎಸ್.ಡಿ.ಎಂ. ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.