ನೊ ಮೊಬೈಲ್ ವೀಕ್!
Team Udayavani, Dec 6, 2019, 5:00 AM IST
ಜೀವನದಲ್ಲಿ ಮೊದಲ ಬಾರಿಗೆ ಮೊಬೈಲನ್ನು ಬಿಟ್ಟು ಒಂದು ವಾರ ಕಳೆದ ಅನುಭವ ಈ ರಜೆಯಲ್ಲಿ ನನ್ನದಾಗಿತ್ತು. ಇಂದು ಒಂದು ಸಣ್ಣ ಕಲ್ಲನ್ನು ಈ ಕಡೆಯಿಂದ ಆಕಡೆ ಇಟ್ಟರೂ ಫೋಟೋ ತೆಗೆಸಿಕೊಳ್ಳುತ್ತೇವೆ. ಯಾರೋ ಒಬ್ಬರು ಪರಿಚಯವಾದಾಕ್ಷಣ “ಮೈ ಬೆಸ್ಟಿ’ ಅಂತ ಸ್ಟೇಟಸ್ ಅಪ್‌ಲೋಡ್ ಮಾಡುತ್ತೇವೆ. ಐಸ್‌ಕ್ರೀಮ್ ತಿನ್ನುವಾಗ, ಸುಂದರವಾಗಿ ಸಿಂಗರಿಸಿಕೊಂಡಾಗ, ಸ್ನೇಹಿತರೊಡನೆ ಹೊರಹೋದಾಗ, ಹಬ್ಬ-ಹರಿದಿನಗಳಲ್ಲಿ, ದೇವಸ್ಥಾನ… ಹೀಗೆ ಎಲ್ಲೆಂದರಲ್ಲಿ ನಾವು ಮಾಡುವ ಕೆಲಸಕ್ಕಿಂತ, ಹೋದ ಉದ್ದೇಶಕ್ಕಿಂತ ಹೆಚ್ಚು ಮಹತ್ವ ಸೆಲ್ಫಿಗಳಿಗೆ, ಫೋಟೋಗಳಿಗೆ ಕೊಡುತ್ತೇವೆ. ತತ್‌ಕ್ಷಣ ಫೋಟೋಗಳನ್ನು ನಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಸ್ಟೇಟಸ್‌ಗಳಿಗೆ ಅಪ್‌ಲೋಡ್ ಮಾಡಿ ಸಂಭ್ರಮಿಸುತ್ತೇವೆ. ಇವೆಲ್ಲದರ ಮಾಧ್ಯಮ ಮೊಬೈಲ್ ಫೋನ್. ಹಾಗೆಂದು ಮೊಬೈಲ್ ಬಳಕೆ ಕೆಟ್ಟದ್ದಲ್ಲ, ಹಾಗೂ ಹೆಚ್ಚಾದಲ್ಲಿ ತೀರ ಒಳ್ಳೆಯದೂ ಅಲ್ಲ. ನಮ್ಮ ಯುವಪೀಳಿಗೆಗಂತೂ ಮೊಬೈಲ್ ಸರ್ವಸ್ವವಾಗಿರುವಾಗ ಅದನ್ನು ಬಿಟ್ಟು ಇರುವುದು ಸುಲಭದ ಮಾತಲ್ಲ ಎಂದು ತಿಳಿದಿರುವ ಎಲ್ಲರಂತೆ ನಾನೂ ಒಬ್ಬಳು.
ಹೀಗಿರುವಾಗ, ಈ ರಜೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಹೋಗುವ ಅವಕಾಶ ಅನಿವಾರ್ಯವೆಂಬಂತೆ ನನಗೆ ಸಿಕ್ಕಿತ್ತು. ನಾನೂ ಮನಸ್ಸಿಲ್ಲದ ಮನಸ್ಸಿನಲ್ಲೇ ಹೊರಟೆ. ಒಟ್ಟು ನೂರಿಪ್ಪತ್ತು ಶಿಬಿರಾರ್ಥಿ ಗಳನ್ನೊಳಗೊಂಡ ನಮ್ಮ ಶಿಬಿರವು ಚಾರ್ಮಾಡಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಡುಬಿಟ್ಟಿತು. ಒಂದು ವಾರದ ಈ ಶಿಬಿರದ ವಿಶೇಷವೇನೆಂದರೆ ಇಲ್ಲಿ ಮೊಬೈಲ್ ಬಳಕೆ ಸಂಪೂರ್ಣ ನಿಷಿದ್ಧವಾಗಿತ್ತು. ಅಯ್ಯೋ! ಒಂದು ವಾರ ಮೊಬೈಲ್ ಇಲ್ಲದೆ ಇರುತ್ತೇವೆಯೆ ಅಂತ ನಮ್ಮನ್ನೆಲ್ಲ ಯಕ್ಷಪ್ರಶ್ನೆ ಕಾಡುತ್ತಿತ್ತು. ಆದರೂ ಮೊಬೈಲ್ ನಿಷೇಧವನ್ನು ಒಮ್ಮತದಿಂದ ಒಪ್ಪಿಕೊಂಡು ನಾವೆಲ್ಲ ಬಹಳ ಕ್ರಿಯಾಶೀಲವಾಗಿ ಶಿಬಿರದಲ್ಲಿ ಪಾಲ್ಗೊಂಡೆವು.
ನಮಗೆ ಹೊರಗಿನ ಯಾವುದೇ ಸಂಪರ್ಕವಿಲ್ಲದೆ ಎಲ್ಲಾ ಖುಷಿ-ಸಂಭ್ರಮಗಳನ್ನು ಪರಸ್ಪರ ಹಂಚಿಕೊಂಡೆವು. ಪ್ರತಿಕ್ಷಣ, ಪ್ರತಿದಿನ, ಪ್ರತಿಯೊಬ್ಬರಿಂದಲೂ ಏನಾದರೊಂದು ಹೊಸ ವಿಷಯವನ್ನು ಕಲಿಯುತ್ತ, ಹೊಸಬರನ್ನು ಪರಿಚಯಿಸಿಕೊಳ್ಳುತ್ತ, ಪರಿಚಯವನ್ನು ಸ್ನೇಹಕ್ಕೆ ಮುಂದುವರೆಸಿ ಸ್ನೇಹವನ್ನು ಆತ್ಮೀಯತೆಯತ್ತ ಕೊಂಡೊಯ್ದ ಆ ದಿನಗಳು ಅತ್ಯಂತ ಅವಿಸ್ಮರಣೀಯ. ಇಂಥ ಅವಿಸ್ಮರಣೀಯ ದಿನಗಳು, ಸಂಭ್ರಮಗಳು ನಮ್ಮ ಜೀವನದಲ್ಲಿ ಹಲವಾರು ಇರಬಹುದು. ಆದರೆ, ಅದೆಲ್ಲದರಲ್ಲೂ ನಾವು ಏನಾದರೊಂದು ಹೊಸತನ್ನು ಕಲಿಯಲು ಆಗಲ್ಲ. ಆದರೆ, ಈ ಶಿಬಿರದಲ್ಲಿ ನಾವು ಕಲಿತಿದ್ದೆಲ್ಲವೂ ಜೀವನ ಪಾಠಗಳೇ ಆಗಿದ್ದವು.
ಶಿಸ್ತು, ಸಮಯಪ್ರಜ್ಞೆ, ಶಿಕ್ಷೆ, ಸಂಭ್ರಮ, ಕಟ್ಟುಪಾಡು, ನೀತಿ ನಿಯಮ, ಹೊಂದಾಣಿಕೆ, ಸಹಬಾಳ್ವೆ… ಇವೆಲ್ಲವೂ ಕಣ್ಣಿಗೆ ಕಟ್ಟುವಂತೆ ಮನಸ್ಸಿಗೆ ತಟ್ಟುವಂತಹ ಅನುಭವಗಳನ್ನು ನೀಡಿದ್ದು ಸುಳ್ಳಲ್ಲ. ಶಿಬಿರದಲ್ಲಿ ಎಲ್ಲವೂ ವಿಶಿಲ್‌ನ ನಿಯಂತ್ರಣದಲ್ಲಿತ್ತು. ವಿಶಿಲ್‌ಗೆ ಬಹಳ ಗೌರವವಿತ್ತು. ಒಮ್ಮೆ ಪೀ… ಅಂತ ವಿಶಿಲ್ ಕೂಗಿದರೂ ಈಗ ಮಾಡುತ್ತಿರುವ ಕೆಲಸ ಮುಗಿದಿದೆ, ಇನ್ನು ಮುಂದಿನ ಕೆಲಸ ಎಂದು ಆ ಶಬ್ದ ಸೂಚಿಸುತ್ತಿತ್ತು. ನಿಯಮಗಳನ್ನು ಪಾಲಿಸದವರಿಗೆ ಇಪ್ಪತ್ತೈದರಿಂದ ಐವತ್ತು ಬಸ್ಕಿಗಳ ಉಡುಗೊರೆ ಸಿಗುತ್ತಿತ್ತು. ಆಗಂತೂ ಆ ಶಾಲೆಯ ಮಕ್ಕಳಿಗೆ ಸಂಭ್ರಮ, ಎಲ್ಲಿದ್ದರೂ ಬಸ್ಕಿ ಹೊಡೆಯುತ್ತಿದ್ದವರ ಬಳಿ ಓಡಿಬಂದು ಒಂದೂ… ಎರಡೂ… ಎಂದು ಖುಷಿಯಿಂದ ಲೆಕ್ಕಮಾಡುತ್ತಿದ್ದರು.
ಇನ್ನು ದಿನಸಿ ಧಾನ್ಯಗಳನ್ನಿಡುತ್ತಿದ್ದ ಉಗ್ರಾಣಕ್ಕೆ ನಾವ್ಯಾರೂ ಹೋಗುವಂತಿರಲಿಲ್ಲ. ಕಾರಣ, ಅಲ್ಲಿ ಗ್ರಾಮಸ್ಥರು ದಾನಿಗಳು ನೀಡಿದಂಥ ತಿಂಡಿತಿನಿಸುಗಳನ್ನು ಇಡುತ್ತಿದ್ದರು. ಆದರೆ, ನಾನಾವು ಉಗ್ರಾಣ ನಿರ್ವಹಣೆ ಮಾಡುತ್ತಿದ್ದವರೊಂದಿಗೆ ಸ್ನೇಹ ಮಾಡಿ ಹಸಿವು ತಡೆಯದಾದಾಗ ತಿಂದ ಲಾಡು-ಬಿಸ್ಕತ್ತುಗಳಿಗೆ ಲೆಕ್ಕವೇ ಇಲ್ಲ. ಪ್ರತಿದಿನ ತಿಂಡಿ-ಊಟದ ಸಮಯಕ್ಕೆ ಹಪಹಪಿಸುತ್ತಿದ್ದೆವು. ಎಷ್ಟು ಬಡಿಸಿದರೂ ನಾವ್ಯಾರೂ ಎಂದೂ ನಿರಾಕರಿಸಿಲ್ಲ. ಬಡಿಸಿದಷ್ಟು ಊಟವನ್ನು ಒಂದು ಅಗುಳೂ ಬಿಡದೆ ತಿನುತ್ತಿದ್ದೆವು. ಅನ್ನದ ಮಹತ್ವದೊಂದಿಗೆ ಶ್ರಮದ ಬೆವರಿನ ಅನುಭವ ಮೇಳೈಸಿತ್ತು.
ಎಂದೂ ಅಡುಗೆಮನೆಯ ಕಡೆಗೆ ಹೋಗದವರು ಪಾತ್ರೆಗಟ್ಟಲೆ ತರಕಾರಿ ಹೆಚ್ಚಿದೆವು, ದೊಡ್ಡ ದೊಡ್ಡ ಹಂಡೆಯಂತಹ ಪಾತ್ರೆಗಳನ್ನು ತಿಕ್ಕಿ ತೊಳೆದೆವು. ಮನೆಯಲ್ಲಿ ಸಣ್ಣ ಕಡ್ಡಿಯನ್ನೂ ಇತ್ತಿಂದತ್ತ ಇಡದವರು ದಿನಕ್ಕೆ ನೂರರಿಂದ ನೂರೈವತ್ತು ಬುಟ್ಟಿ ಮಣ್ಣು ಹೊತ್ತೆವು. ಟಾಯ್ಲೆಟ್‌ನಿಂದ ಹಿಡಿದು ಇಡೀ ಶಾಲೆಯ ಆವರಣವನ್ನು ಗುಡಿಸಿ ಸ್ವತ್ಛವಾಗಿಸುತ್ತಿದ್ದೆವು. ಗ್ರಾಮಸ್ಥರು ನೀಡಿದ ಪ್ರೀತಿಯ ನಗೆ ಮತ್ತು ರುಚಿಯಾದ ಮಜ್ಜಿಗೆ ಶ್ರಮಿಸಲು ಇನ್ನಷ್ಟು ಶಕ್ತಿ ಹುಮ್ಮಸ್ಸನ್ನು ನೀಡುತ್ತಿತ್ತು. ಇಡೀ ದಿನ ಒಂದಲ್ಲ ಒಂದು ವಿಷಯದಲ್ಲಿ ಸದುಪಯೋಗವಾಗುತ್ತಿತ್ತು.
ಈ ಒಂದು ವಾರ ಹಲವಾರು ತಾಣಗಳನ್ನು, ಹೂ, ಹುಳ-ಹುಪ್ಪಟೆಗಳನ್ನು ನೋಡಿದೆವು. ಕೆಮರಾದಿಂದ ಕ್ಲಿಕ್ಕಿಸಲು ಹಲವಾರು ಸಂಗತಿಗಳಿದ್ದವು. ಆದರೆ, ಅವೆಲ್ಲವೂ ನಮ್ಮ ಮನಃಪಟಲದಲ್ಲಿ ಅತಿ ಮಧುರ ಕ್ಷಣಗಳಾಗಿ ಅಚ್ಚೊತ್ತಿವೆ. ಇಂದು ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮಾನವ ಸಂಬಂಧಗಳಲ್ಲಿ ಅಡಗಿರುವ ಖುಷಿ-ಸಂಭ್ರಮ ಇನ್ಯಾವುದರಲ್ಲೂ ಸಿಗಲು ಸಾಧ್ಯವಿಲ್ಲ ಎಂಬುದು ಈ ರಜೆಯಲ್ಲಿ ಶಿಬಿರದಿಂದ ನಾನು ಕಲಿತ ಬಹುದೊಡ್ಡ ಜೀವನ ಪಾಠ.
ಇಂಚರಾ ಜಿ.ಜಿ.
ಪ್ರಥಮ ಬಿಎ, ಎಸ್‌ಡಿಎಂ ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.