ನಮ್ಮೂರ ಬಸ್ಸು
Team Udayavani, Sep 27, 2019, 5:38 AM IST
ಶೆಟ್ಟಿಹಳ್ಳಿ ಅಭಯಾರಣ್ಯದ ನಡುವಿನ ಅಪ್ಪಟ ಮಲೆನಾಡಿನ ದಟ್ಟ ಕಾನನದ ಮಧ್ಯೆ ಇರುವ ನನ್ನೂರನ್ನು ಸಂಪರ್ಕಿಸಲು ಇರುವುದು ಒಂದೇ ದಾರಿ. ಮತ್ತಿಲ್ಲಿಗೆ ಬಸ್ಸಿನಲ್ಲಿ ಸಾಗುವುದೆಂದರೆ ದೊಡ್ಡ ಸಾಹಸ ಮಾಡಿದಂತೆಯೇ ಸರಿ. ಕಾಡಿನ ದ್ವೀಪದ ಮಧ್ಯದಲ್ಲಿರುವ ನನ್ನೂರಿನ ರಸ್ತೆಯಂತಿರುವ ರಸ್ತೆಯಲ್ಲಿ ಹಳ್ಳಕೊಳ್ಳಗಳೇ ಜಾಸ್ತಿ. ಇಲ್ಲಿಗೆ ತೂರಾಡುತ್ತ ಬರುವುದೊಂದೇ ಬಸ್ಸು. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೈದ್ಯರ ಔಷಧ ಸಲಹೆಯಂತೆ ಮೂರೂಹೊತ್ತು ಸರಿಯಾದ ಸಮಯಕ್ಕೆ ಬರುವುದು. ಹಿಂದೆಲ್ಲ ನನ್ನ ಅಜ್ಜಿ ಮನೆಯಲ್ಲಿ ಸಮಯ ತಿಳಿದುಕೊಳ್ಳುತ್ತಿದ್ದುದೇ ಬಸ್ಸು ಬರುವ ವೇಳೆಯಿಂದ.
ಬೆಳಿಗ್ಗೆ ಬಸ್ಸು ಬರುವ ಒಳಗೆ ತಿಂಡಿ ಆಗಿಲ್ಲವೆಂದರೆ ನನ್ನಜ್ಜ ಬಸ್ಸು ಹೋದರೂ ಇನ್ನೂ ತಿಂಡಿ ಆಗಿಲ್ಲವಲ್ಲ ಎಂದು ಭಾಷಣ ಪ್ರಾರಂಭಿಸುತ್ತಿದ್ದರು. ರಾತ್ರಿ ಬಸ್ಸು ಬಂದ ನಂತರ ಯಾರಾದರೂ ನೆಂಟರು ಬಂದರೋ ಇಲ್ಲವೋ ಎಂದು ನೋಡಿಕೊಂಡೇ ಊಟ ಮಾಡುತ್ತಿದ್ದದ್ದು. ಆಗೆಲ್ಲ ಮೊಬೈಲ್ ಹಾವಳಿ ಇಲ್ಲವಾದ್ದರಿಂದ ದಿಢೀರ್ ನೆಂಟರ ಆಗಮನದಿಂದಾಗುವ ಸಂತೋಷವನ್ನು ಅನುಭವಿಸುವ ಅವಕಾಶ ಸಿಗುತ್ತಿತ್ತು. ಈಗಿನ ಹಾಗೆ ಮನೆ ಬಾಗಿಲಿಗೆ ಬರುವವರೆಗೂ texting ಮಾಡುವುದರಿಂದ ಅನೀರೀಕ್ಷಿತವಾಗಿ ಬರಮಾಡಿಕೊಳ್ಳುವ ಕುತೂಹಲ ಕಳೆದುಹೋಗುತ್ತಿರಲಿಲ್ಲ. ಕೆಲವೊಮ್ಮೆ ಯಾರೂ ಇಳಿಯುವವರು ಇಲ್ಲದಿರುವಾಗ ಬಸ್ಸು ನಿಲ್ಲದೆ ಹೋದಾಗ ಯಾರು ಬಂದಿಲ್ಲವಲ್ಲ ಎಂದು ಅತ್ಯಂತ ಬೇಸರವಾಗುತ್ತಿತ್ತು. ಚಿಕ್ಕ ಮಕ್ಕಳೆಲ್ಲ ಡ್ರೈವರ್ ಮಾಮಾನಿಗೆ ಟಾಟಾ ಮಾಡಲು ಕಾಯುತ್ತಿದ್ದವು. ಮತ್ತೆ ಡ್ರೈವರ್ ಮಾಮ ಕೂಡ ಅಷ್ಟೇ ಪ್ರೀತಿಯಿಂದ ಟಾಟಾ ಮಾಡುತ್ತಿದ್ದ.
ಬಸ್ಸಿನ ನಿರ್ವಾಹಕ ಮತ್ತು ಚಾಲಕರ ಬಗ್ಗೆ ಹೇಳಬೇಕೆಂದರೆ ಇವರಿಬ್ಬರು ಸುದ್ದಿವಾಹಕದಂತೆ ಮತ್ತು ಎಲ್ಲರ ಮನೆಯ ಮೇಘದೂತರಂತೆ. ಎಷ್ಟೋ ಜನರು ಪೇಟೆಗೆ ಹೋಗುತ್ತಿರಲಿಲ್ಲ. ಹಲವಾರು ವಸ್ತುಗಳನ್ನು ಬಸ್ಸಿನಲ್ಲಿಯೇ ತರಿಸುತ್ತಿದ್ದರು. ಅಷ್ಟೊಂದು ನಂಬಿಕೆ ಚಾಲಕ ಮತ್ತು ನಿರ್ವಾಹಕರ ಮೇಲೆ. ಮಾತ್ರೆ ಚೀಟಿ ಕೊಟ್ಟು ಮಾತ್ರೆ ತರಿಸುವುದರಿಂದ ಹಿಡಿದು, ಹಾಲು, ಪೇಪರ್, ಅಷ್ಟೇ ಯಾಕೆ ಗುಂಡಣ್ಣನ ಅಂಗಡಿಗೆ ಕಿರಾಣಿ ತರಿಸುವುದರಿಂದ ಹಿಡಿದು ಎಲ್ಲವನ್ನೂ ಮಾಡುತ್ತಿದ್ದರು. ಕೆಲವೊಮ್ಮೆ ಯಾರಾದರೂ ಅತಿಥಿಗಳು ಬರುವವರಿದ್ದರೆ ಅವರಿಗೆ ವಿಶೇಷ ಅಡುಗೆಗೆ ಮೊಟ್ಟೆಯನ್ನೋ ಅಥವಾ ಮಾಂಸವನ್ನೋ ಸಹ ಬಸ್ಸಿನಲ್ಲಿಯೇ ತರಿಸುತ್ತಿದ್ದರು.
ಮಂಗಳವಾರ ಬಂತೆಂದರೆ, ಹತ್ತಿರದ ಪೇಟೆಯಲ್ಲಿ ಸಂತೆ ನಡೆಯುತ್ತಿದ್ದರಿಂದ ಬಸ್ಸಿನಲ್ಲಿ ನಿಲ್ಲುವುದಿರಲಿ, ನೇತಾಡಲು ಕೂಡ ಜಾಗವಿರುತ್ತಿರಲಿಲ್ಲ. ಬಸ್ಸಿನ ಒಳಗೆ ಕಾಲಿಡಲು ಜಾಗವಿಲ್ಲದೆ ಅಲ್ಲಿ ಇರುವಷ್ಟೇ ಜನ ಬಸ್ಸಿನ ಮೇಲೂ ಇರುತ್ತಿದ್ದರು. ಹೋಗುವಾಗ ಸಂತೆಗೆ ಹೋಗುವ ಆತುರ, ಎಲ್ಲರ ಕೈಯಲ್ಲಿ ಖಾಲಿ ಚೀಲವಿರುತ್ತಿದ್ದರಿಂದ ಹೀಗೂ ಹಾಗೋ ನಿಲ್ಲಬಹುದಿತ್ತು. ಆದರೆ, ವಾಪಸು ಬರುವಾಗ ಸಂಜೆ ಬಸ್ಸಿನಲ್ಲಿ ಸಾಮಾನು ತುಂಬಿದ ಚೀಲಗಳೇ ಹೆಚ್ಚಿಗೆ ಇರುತ್ತಿದ್ದರಿಂದ ಮನುಷ್ಯರಷ್ಟೇ ಜಾಗ ಚೀಲಕ್ಕೂ ಬೇಕಾಗಿ ತಳ್ಳಾಟದಲ್ಲಿ ಚೀಲದಲ್ಲಿರುವ ವಸ್ತುಗಳೆಲ್ಲ ಮಿಕ್ಸಿಯಲ್ಲಿ ಹಾಕಿ ರುಬ್ಬಿದಂತಾಗುತ್ತಿತ್ತು. ಚೀಲದಲ್ಲಿರುವ ತರಕಾರಿಗಳು ಅದರಲ್ಲೂ ಟೊಮ್ಯಾಟೋ ಜಜ್ಜಿದಂತಾಗಿ ರಸವೆಲ್ಲ ಹೊರಗಡೆ ಇಳಿಯುತ್ತಿತ್ತು. ಇದರ ಜೊತೆಗೆ ಅಲ್ಲಿ ಸಂತೆಯಲ್ಲಿ ವಿಶೇಷವಾಗಿ ದೊರೆಯುವ ಮೀನನ್ನು ಎಲ್ಲರೂ ತೆಗೆದುಕೊಳ್ಳುತ್ತಿದ್ದರು, ವಾರಪೂರ್ತಿ ಕೆಲಸ ಮಾಡಿ ಸಂತೆಯ ಹಿಂದಿನ ಸಂಬಳ ತೆಗೆದುಕೊಳ್ಳುವ ಕೂಲಿಕಾರ್ಮಿಕರೇ ಹೆಚ್ಚು ಇರುತ್ತಿದ್ದುದರಿಂದ ಸಂತೆಯ ದಿನ ಮೀನು ಬೇಕೇಬೇಕಾಗಿತ್ತು. ಮನೆಯಲ್ಲಿರುವ ಹೆಂಗಸರು ಸಹ ಯಾವುದೇ ಅನುಮಾನವಿಲ್ಲದೆ ಮಸಾಲೆ ತಯಾರಿಸಿ ಇಡುತ್ತಿದ್ದರು. ಹೀಗಿರುವಾಗ ಕೆಲವೊಮ್ಮೆ ಮೀನಿನ ಗಂಧ ಬಸ್ಸಿನ ತುಂಬೆಲ್ಲ ಪಸರಿಸಿ ಬೆವರು ವಾಸನೆಯ ಜೊತೆ ಮಿಶ್ರಣವಾಗಿ ಉಸಿರುಗಟ್ಟಿಸುವ ವಾತಾವರಣವಿರುತ್ತಿತ್ತು. ಇದರ ಜೊತೆಗೆ ಸ್ವಲ್ಪ ಸಾರಾಯಿಯ ಒಳಗೆ ಸೇರಿಸಿದ ಕೆಲವರಿಗೆ ಬಸ್ಸಿನಲ್ಲಿ ತಾವಿದ್ದೇವೋ ಅಥವಾ ತಮ್ಮ ಮೇಲೆ ಬಸ್ಸಿದೆಯೋ ಎಂದು ತಿಳಿಯುತ್ತಿರಲಿಲ್ಲ.
ಸ್ಕೂಲ್‌ಗೆ ಹೋಗುವ ಮಕ್ಕಳಲ್ಲಿ ಕೆಲವರು ನಡೆದುಕೊಂಡು ಹೋಗುತ್ತಿದ್ದರೆ, ಇನ್ನು ಕೆಲವರು ಸಂಜೆಯ ಬಸ್ಸನ್ನೇ ಕಾದು ಮನೆಗೆ ಹೋಗುತ್ತಿದ್ದರು. ಆಗ ಬಸ್ಸಿನಲ್ಲಿ ಯಾರಾದರೂ ಒಬ್ಬ ವಿದ್ಯಾರ್ಥಿಗೆ ಸೀಟ್ ಸಿಕ್ಕರೆ ಅವರ ಮೇಲೆಯೇ ಎಲ್ಲರ ಬ್ಯಾಗುಗಳನ್ನು ಹೇರಿ ಅವರಿಗೆ ಉಸಿರಾಡಲು ಜಾಗವಿರುತ್ತಿರಲಿಲ್ಲ. ಇದರ ಮೇಲೆ ಟಿಕೆಟ್ ಮಾಡುವ ತನ್ನ ಕರ್ತವ್ಯವನ್ನು ಯಾವುದೇ ಕಾರಣಕ್ಕೂ ತಪ್ಪಿಸದ ನಿರ್ವಾಹಕ ಅಷ್ಟೂ ಜನರ ಮಧ್ಯದಲ್ಲಿ ತೂರಿ ಹರಸಾಹಸ ಮಾಡಿ ಯಾರನ್ನು ಬಿಡದೇ ಹಣ ವಸೂಲಿ ಮಾಡಿ ಟಿಕೆಟ್ ಕೊಟ್ಟು ಹೋಗುತ್ತಿದ್ದ. ಹೀಗೆ ಅವನು ಬಂದು ಹೋಗುವುದೆಂದರೆ ಯಾರನ್ನೂ ಲೆಕ್ಕಿಸದೆ, ಯಾವ ವಸ್ತುವೆಂದು ಗಮನಿಸದೆ ಬುಲ್ಡೋಜರ್ ಬಂದು ಎಲ್ಲವನ್ನೂ ನೆಲಸಮಮಾಡಿ ಹೋದಂತಾಗುತ್ತಿತ್ತು.
ಸಂತೆಯ ಹೊರತಾಗಿ ಬೇರೆ ದಿವಸಗಳಲ್ಲಿ ಬಸ್ಸು ಅಷ್ಟೊಂದು ತುಂಬಿರುವುದಿಲ್ಲವಾದ್ದರಿಂದ ನಿರ್ವಾಹಕ ತುಂಬಾ ಆರಾಮಾಗಿ ಎಲ್ಲರ ಕಷ್ಟ-ಸುಖ ವಿಚಾರಿಸುತ್ತ ವಯಸ್ಸಾದವರು ಯಾರಾದರೂ ಬಸ್ಸಿನಲ್ಲಿದ್ದರೆ ಅವರ ಹತ್ತಿರ ಎಲೆಯಡಿಕೆ ಕೇಳಿ ಹಾಕಿಕೊಳ್ಳುತ್ತ, ಶಾಲಾಮಕ್ಕಳಿದ್ದರೆ ಅವರ ಶಾಲೆಯ ಬಗ್ಗೆ , ಓದಿನ ಬಗ್ಗೆ ಲೋಕರೂಢಿ ಮಾತಾಡುತ್ತ ಹೋಗುತ್ತಿದ್ದ. ಎಲ್ಲರೂ ಗೊತ್ತಿರುವವರೇ ಆಗಿರುವುದರಿಂದ ಎಲ್ಲರ ಮನೆಯ ವಿಷಯವೂ ಹೆಚ್ಚುಕಡಿಮೆ ಅವನಿಗೆ ತಿಳಿದಿರುತ್ತಿತ್ತು. ಯಾರಾದರೂ ಹಳ್ಳಿಯವರು ಸಿಟಿಗೋ, ಆಸ್ಪತ್ರೆಗೋ ಅಥವಾ ಬ್ಯಾಂಕ್‌ಗೊà ಹೋಗುವವರಿದ್ದು ವಿಳಾಸ ತಿಳಿಯದವರಿದ್ದರೆ ನಿರ್ವಾಹಕ ಅವರಿಗೆ ವಿಳಾಸವನ್ನು, ಹೋಗುವ ದಾರಿಯನ್ನೋ ತೋರಿಸುತ್ತಿದ್ದ ಅಥವಾ ಆಟೋ ಚಾಲಕನಿಗೆ ಹೇಳಿ ಆಟೋ ಹತ್ತಿಸಿ ಬರುತ್ತಿದ್ದ.
ಶಾಲಾ ವಿದ್ಯಾರ್ಥಿನಿಯರು ಯಾರಾದರೂ ಹಾಸ್ಟೆಲ್‌ನಲ್ಲಿ ನಿಲ್ಲುವವರಿದ್ದರೆ ಅಥವಾ ಇನ್ನೆಲ್ಲಿಗೋ ಒಂಟಿಯಾಗಿ ಹೋಗುವವರಿದ್ದರೆ ಆ ನಿರ್ವಾಹಕನ ಮೇಲಿನ ನಂಬಿಕೆಯಿಂದ ಪೋಷಕರು ಮಾತಾಡಿ ಅವರನ್ನು ಸರಿಯಾದ ವಿಳಾಸಕ್ಕೆ ತಲುಪಿಸುವಂತೆ ಕೇಳಿಕೊಳ್ಳುತ್ತಿದ್ದರು. ಹಾಗೆಯೇ ಸಿಟಿಯಿಂದ ಯಾರಾದರೂ ಆಗಂತುಕರು ಹಳ್ಳಿ ಸ್ನೇಹಿತನ ಮನೆಗೋ ಅಥವಾ ಬಂಧುಗಳ ಮನೆಗೋ ಬಂದರೆ ಸರಿಯಾದ ವಿಳಾಸ ತೋರಿಸುವ ಜವಾಬ್ದಾರಿಯೂ ನಿರ್ವಾಹಕನದ್ದಾಗಿರುತ್ತಿತ್ತು.
ಇದೇ ರೀತಿ ದಿನವೂ ಹಲವು ಅನುಭವಗಳು ಬಸ್ಸಿನಲ್ಲಿ ಆದದ್ದಿದೆ. ಕೆಲವೊಮ್ಮೆ ಹಾವುಗಳು ಅಡ್ಡ ಬರುವುದಿದೆ. ಕಾಡುಕೋಣಗಳು ಸಿಕ್ಕಿದ್ದಿದೆ. ಇದೆಲ್ಲದರ ಮಧ್ಯೆ ನಮ್ಮ ಬಸ್ಸು ಒಂದು ದಿನವೂ ತಪ್ಪದೆ ಎಷ್ಟೇ ಜಡಿ ಮಳೆ ಬಂದರೂ ಬರುವುದುಂಟು. ಶಾಲಾಮಕ್ಕಳಿಗೆ ಮತ್ತು ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗುತ್ತದೆಂದೂ ಯಾವುದೇ ಕಾರಣಕ್ಕೂ ಬಸ್ಸು ನಿಲ್ಲಿಸುತ್ತಿರಲಿಲ್ಲ. ನನ್ನೂರ ಏಕೈಕ ಬಸ್ಸು ನಮ್ಮ ಹಳ್ಳಿಯ ಜನರ ಜೀವನದ ಅವಿಭಾಜ್ಯ ಅಂಗದಂತಿತ್ತು.
ಆದರೆ, ಈಗ ಎಲ್ಲವೂ ಬದಲಾಗಿದೆ. ವ್ಯವಸ್ಥಿತವಾದ ರಸ್ತೆ ಬಂದಿದೆ. ರಸ್ತೆ ಸರಿಯಾಗುತ್ತಿದ್ದಂತೆ ಅದರಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಮನೆಮನೆಗಳಲ್ಲಿಯೂ ಸ್ವಂತ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಶಾಲಾಮಕ್ಕಳಿಗೆ ಶಾಲಾವಾಹನಗಳ ವ್ಯವಸ್ಥೆಯಾಗಿದೆ. ಸಂತೆಗೆ ಹೋಗುವವರು ಕಡಿಮೆಯಾಗಿದ್ದಾರೆ. ವಾರದಲ್ಲಿ ಒಂದೇ ದಿನ ವಿಶೇಷ ಅಡುಗೆ ಮಾಡುತ್ತಿದ್ದ ಮನೆಗಳಲ್ಲಿ ಈಗ ಕೂಗಳತೆಯ ದೂರದಲ್ಲಿಯೇ ಬಾಯ್ಲರ್ ಚಿಕನ್ ಸಿಗುವುದರಿಂದ ದಿನವೂ ವಿಶೇಷ ಅಡುಗೆ.
ಜೀವನಶೈಲಿ ಬದಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರ ಕೈಯಲ್ಲೂ ಮೊಬೈಲ್ ಲಗ್ಗೆಯಿಟ್ಟು ಬಸ್ಸಿನಲ್ಲಿರುವ ಪರಿಚಿತರೂ ಮಾತಾನಾಡದೇ ಮೊಬೈಲ್ ತಿರುಹಾಕುತ್ತ ಕುಳಿತಿರುತ್ತಾರೆ. ಈಗಲೂ ಬರುವುದು ಒಂದೇ ಬಸ್ಸಾದರೂ ತೊಂದರೆಯಾದಲ್ಲಿ ಮೊಬೈಲ್ ಮೂಲಕ ಎಲ್ಲಿದ್ದರೂ ತಿಳಿಯುತ್ತದೆ. ಮೊದಲಿನಂತೆ ಬಸ್ಸು ಬರುವುದನ್ನು ಕಾಯುವ ಬದಲು ಧಾರಾವಾಹಿಗಳನ್ನು ನೋಡುತ್ತ ನಿರಮ್ಮಳವಾಗಿರುವ ಕಾಲ ಬಂದಿದೆ.
ಆದರೆ ಹಳ್ಳಿ ಮಕ್ಕಳಿಗೆ ಸವಾಲುಗಳನ್ನೆದುರಿಸಿ ದೃಢವಾಗಿ ಜೀವನವನ್ನ ಎದುರಿಸುವ ಹತ್ತಾರು ಬಗೆಯ ಅನುಭವಗಳೇ ನಿಧಾನವಾಗಿ ಕಣ್ಮರೆಯಾಗುತ್ತ ಇಷ್ಟವಿದ್ದೋ ಇಲ್ಲದೆಯೋ ಪಟ್ಟಣದ ಇನ್‌ಸ್ಟಂಟ್ ಬದುಕಿನ ಮಕ್ಕಳ ಜೊತೆ ಸ್ವರ್ಧೆಗೆ ತಯಾರಾಗುವುದೇ ಬದುಕಿನ ಬಹುದೊಡ್ಡ ಸಾಧನೆಯೆಂಬಂತಾಗಿದೆ.
ಅನುಪಮಾ ಡಿ. ಎಸ್.
ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿನಿ
ಮಣಿಪಾಲ ನರ್ಸಿಂಗ್ ಕಾಲೇಜು, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.