ಹೇಗಿದ್ದವನು ಹೇಗಾದ ಗೊತ್ತಾ?
Team Udayavani, Jun 1, 2018, 6:00 AM IST
ಚಿನ್ನಾರಿ ಮುತ್ತ ಹೇಗಿದ್ದವನು ಹೇಗಾದ ಗೊತ್ತಿಲ್ಲ. ಆದರೆ, ಈತ ಹೇಗಾದ ಗೊತ್ತಾ? ಮಳೆಯಿಂದ ರಕ್ಷಿಸಿಕೊಳ್ಳಲು ತಲೆಗೊಂದು ಪ್ಲಾಸ್ಟಿಕ್ ಕವರ್, ಹಳೆದೊಂದು ಸ್ಲಿಪ್ಪರ್ ಹಾಕಿಕೊಂಡು ತಲೆಯವರೆಗೂ ಕೆಸರು ಎರಚಿಕೊಂಡು ಬರುತ್ತಿದ್ದ. ಪ್ರತಿ ಮಾತಿಗೂ, “ಓಕೆ ಮೇಡಮ್ ಓಕೆ ಮೇಡಮ್’ ಎಂದು ತಲೆಯಾಡಿಸುತ್ತಿದ್ದವನು ಈಗ ಹೇಗೆ ಬರುತ್ತಿದ್ದಾನೆ ಗೊತ್ತಾ? ಹೊಸ ಸ್ಕೂಟರ್, ಕ್ರೋಕ್ಸ್ ಶೂ, ಕಿವಿಯಲ್ಲೊಂದು ಇಯರ್ ಫೋನ್, ಶರ್ಟ್‌ನ ಮೇಲೊಂದು ಜರ್ಕಿನ್ ಹಾಕಿಕೊಂಡು, “ಗುಡ್ ಮಾರ್ನಿಂಗ್ ಕಣೆ’ ಅಂತಿದ್ದಾನೆ. ಇವನೇ ನಮ್ಮನೆಗೆ ಪೇಪರ್ ಹಾಕೊ ಹುಡುಗ.
ನಮ್ಮನೆಗೆ ಮಳೆಗಾಲದಲ್ಲಿ ಇವನ ಪ್ರಯಾಣ ಪ್ರಾರಂಭವಾಯಿತು. ಮೊದಮೊದಲು ಯಾರ ಪರಿಚಯವೂ ಅವನಿಗೆ ಇರಲಿಲ್ಲ. ಮಳೆಯಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಜೊತೆಗೆ ಪೇಪರ್‌ಗೂ ಪ್ಲಾಸ್ಟಿಕ್ ಕವರ್ ಹೊದಿಸಿಕೊಂಡು ರಕ್ಷಿಸಿಕೊಳ್ಳುವಾಗ ಪಾಪ ಅನ್ನಿಸುತ್ತಿತ್ತು. ಮತ್ತೆ ಒಂದು ಹಳೆಯದಾದ ಸ್ಕೂಟರ್‌ನಲ್ಲಿ ಬರುತ್ತಿದ್ದ. ಆ ಸ್ಕೂಟರೋ ಆಗಾಗ ಕೈ ಕೊಡುತ್ತಿತ್ತು. ಒಮ್ಮೆ ಪೇಪರ್ ಕೊಡಲೆಂದು ನಿಲ್ಲಿಸಿದರೆ ಅದು ಮತ್ತೆ ಸ್ಟಾರ್ಟ್ ಆಗುತ್ತಲೇ ಇರಲ್ಲಿಲ್ಲ. ಅದನ್ನು ಅವನು ಮತ್ತೆ ತಳ್ಳಿಕೊಂಡು, ದೂಡಿಕೊಂಡು ಹೋಗ್ತಾ ಇದ್ದ. ಹೀಗೆ ಒಮ್ಮೊಮ್ಮೆ ಮನೆ ಮನೆಗೆ ಪೇಪರ್ ಹಾಕುವುದು ತಡವಾಗಿ ಅದಕ್ಕಾಗಿ ಪ್ರತಿ ಮನೆಯಿಂದ ಬೈಸಿ ಕೊಳ್ಳುತ್ತಿದ್ದ.
ಆದರೆ, ಒಂದು ದಿವಸ ನಾನು ಏಳುವ ಮುಂಚೆನೇ ಪೇಪರ್ ಮನೆ ಬಾಗಿಲಿನಲ್ಲಿತ್ತು. ಮರುದಿನವೂ ಹಾಗೆ ಆಯಿತು. “ಏನು ಇಷ್ಟು ಬೇಗ ಪೇಪರ್ ಮನೆಗೆ ಬಂದಿದೆಯಲ್ಲ?’ ಅಂತ ಅವನನ್ನು ವಿಚಾರಿಸಿದಾಗ, “ನನಗೆ ಕಾಲೇಜ್‌ನಲ್ಲಿ ಎಕ್ಸಾಮ್ ಇದೆ’ ಅಂದ. ಆಗಲೇ ನನಗೆ ಅವನೆಡೆಗೆ ಕುತೂಹಲ ಮತ್ತಷ್ಟು ಹೆಚ್ಚಾಯಿತು. ಮರುದಿನ ನಾನು ಅವನನ್ನು ವಿಚಾರಿಸಿದೆ, ಯಾವೂರು, ಯಾವ ಕಾಲೇಜು, ಏನು ಕಥೆ ಅಂತ. ಆಗ ಅವನು, “ನನ್ನ ಊರು ಚಿಕ್ಕಮಂಗಳೂರು, ಓದಿಗಾಗಿ ಈ ಊರಿಗೆ ಬಂದಿದ್ದೇನೆ, ಓದಿನ ಖರ್ಚಿಗಾಗಿ ಮನೆ ಮನೆಗೆ ಪೇಪರ್ ಹಾಕುತ್ತೇನೆ’ ಎಂದಾಗ ನನ್ನ ಕರುಳು ಚುರುಕ್ ಎಂದಿತು. ಆಮೇಲೆ ಅವನೆಡೆಗೆ ಸಣ್ಣದಾದ ಅಭಿಮಾನವೂ ಮೂಡಿತು.
ಖರ್ಚಿಗೆ ದುಡ್ಡು, ಎಲ್ಲಾ ಸೌಲಭ್ಯಗಳಿದ್ದೂ, ಮನೆಯಲ್ಲಿ ಪ್ರೋತ್ಸಾಹವೂ ಇದ್ದು ಏಳಲೇ ಬೆಳಗ್ಗೆ ಆಲಸ್ಯ ಮಾಡಿಕೊಂಡು ಕಾಲೇಜ್‌ಗೆ ತಡ ಮಾಡುತ್ತಿದ್ದ ನನಗೆ ನನ್ನ ಬಗ್ಗೆ ಸಂಕೋಚ ಎನಿಸಿತು. ವರ್ಷಗಳೆರಡು ಕಳೆದವು. ಅವನ ಹ್ಯಾಪಿ ದೀಪಾವಳಿ, ಹ್ಯಾಪಿ ಕ್ರಿಸ್‌ಮಸ್, ಹ್ಯಾಪಿ ನ್ಯೂಇಯರ್ ಮುಂತಾದ ಶುಭಾಶಯಗಳು ಮುಂದು ವರಿದುಕೊಂಡೇ ಇತ್ತು. ಒಂದು ದಿನ ಅವನ ಕತ್ತಲ್ಲಿ ಚೈನ್ ಒಂದು ಇಣುಕುತ್ತಿತ್ತು. “ಹೊಸತೇನೋ? ಚಿನ್ನದ್ದೇನೋ?’ ಎಂದೆ, ಆತ, “ಹೌದು ಕಣೆ’ ಅಂದ. ಅವನಿಗಿಂತ ಹೆಚ್ಚು ನಾನೇ ಸಂತೋಷ ಪಟ್ಟೆ.
ಮತ್ತೂಂದು ದಿನ ಬಂದವನೇ, “ನಾಳೆ ಎಕ್ಸಾಮ್ಸ… ಕೊನೆಯಾಗುತ್ತೆ. ನಾಲ್ಕು ದಿವಸ ರಜೆ ಇದೆ ನಾನು ಊರಿಗೆ ಹೋಗ್ತೀನೆ. ನಿಮ್ಮ ಪೇಪರ್‌ಗೆ ಬೇರೆ ವ್ಯವಸ್ಥೆ ಮಾಡಿದ್ದೇನೆ’ ಅಂದಾಗ ಅವನ ಕಣ್ಣಲ್ಲಿ ಕುಟುಂಬದವರನ್ನು ನೋಡಬೇಕೆನ್ನುವ ಹಂಬಲ, ತವಕ, ಸಂತೋಷ ಹೊಳೆಯುತ್ತಿತ್ತು. “ಹ್ಯಾಪಿ ಹಾಲಿಡೆ ಎಂಜಾಯ್ ಮಾಡು’ ಅಂದೆ. ರಜೆ ಮುಗಿಸಿ ಮತ್ತೆ ತನ್ನ ಕಾರ್ಯಕ್ಕೆ ವಾಪಸಾದ. ಈಗ ಮತ್ತದೇ ಬೆಳಗ್ಗಿನ ಗುಡ್ ಮಾರ್ನಿಂಗ್, ಮತ್ತದೇ ಪೇಪರ್, ಅದೇ ಕಿರುನಗೆ. ನನ್ನ ತಮ್ಮನಂತಹ ಹುಡುಗ. ಅವನನ್ನು ನೋಡಿದಾಗಲೆಲ್ಲ ಸಂತೋಷವಾಗುತ್ತದೆ. ಒಳ್ಳೆಯದಾಗಲಿ ಕಣೋ ನಿನಗೆ !
ಪಿನಾಕಿನಿ ಪಿ. ಶೆಟ್ಟಿ ಪ್ರಥಮ ಎಂ. ಕಾಂ. ಕೆನರಾ ಕಾಲೇಜು, ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.