ಆಟದ ಪೀರಿಯೆಡ್
Team Udayavani, Jan 26, 2018, 1:01 PM IST
ನಾವು ಹತ್ತಾರು ಮಂದಿ ಹುಡುಗರು ಒಟ್ಟಾಗಿ ಶಾಲಾ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರೂ ಸಮಯ ಸಿಕ್ಕಾಗಲೆಲ್ಲ ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತ ಮೋಜು ಮಾಡುವ ಪರಿ ಖಾಯಂ ಆಗಿತ್ತು. ಸಮವಸ್ತ್ರದ ಮಣ್ಣನ್ನು ಕಂಡು ಅಮ್ಮ ಬೈಯುತ್ತಿದ್ದರು. ಶಿಸ್ತು ಎಂಬುದರ ಕುರಿತು ಅರಿವೇ ಇಲ್ಲದ ನಮಗೆ ಇದೊಂದು ಕೇವಲ ಕಾಲವನ್ನು ತಳ್ಳಿಬಿಡುವ ಮೋಜಿನ ಆಟ ಮಾತ್ರವೇ ಆಗಿತ್ತು. ಆದರೆ, ಶಾಲಾ ಕ್ರೀಡಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕೆಂದರೆ ಹಳೆಯ ಗೆಳೆಯರನ್ನು ಬದಿಗೆ ಸರಿಸಿ ಹೊಸ ಗೆಳೆಯರೊಂದಿಗೆ ಮೈದಾನಕ್ಕೆ ಒಗ್ಗಿಕೊಳ್ಳಬೇಕಾಯಿತು.
ತರಬೇತಿದಾರರ ಕಟ್ಟುನಿಟ್ಟಿನ ಆಜ್ಞೆಯನ್ನು ಪಾಲಿಸುತ್ತಾ, ಪ್ರಾಥಮಿಕ ಶಾಲಾ ದಿನಗಳಲ್ಲಿ ತರಗತಿ ಅವಧಿಯ ಮುನ್ನ ಹಾಗೂ ಅವಧಿ ಬಳಿಕ ತರಬೇತಿ ಪಡೆಯುತ್ತಾ ಎಲ್ಲರೊಳಗೊಂದಾಗಿ ತರಬೇತಿ ಪಡೆಯುತ್ತಾ ಒಂಡೆದೆ ಸಕುಟುಂಬಿಕ ವಾತಾವರಣ ನಮ್ಮೊಳಗೆ ಸೃಷ್ಟಿಯಾಗಿ ಕ್ರೀಡೆ ಎಂಬ ಸಾಗರದಲ್ಲಿ ಅಲೆಗಳೆಂಬ ಪಟುಗಳಾಗಿ ತೇಲಾಡುತ್ತಾ ಶಿಸ್ತು ಎಂಬ ಕಾಲಚಕ್ರ ನಮ್ಮ ಪರಿಧಿಯೊಳಕ್ಕೆ ಪ್ರತಿಷ್ಠಾಪನೆಯಾಗಿತ್ತು. ಶಾಲಾ ದಿನಗಳಲ್ಲಿ ರಜೆಯ ಮಂತ್ರವ ಜಪಿಸುತ್ತಿದ್ದ ನಮಗೆ ಪಂದ್ಯಾವಳಿಯ ಕಾವು ರಂಗೇರುತ್ತಿದ್ದ ಸಂದರ್ಭಗಳಲ್ಲಂತೂ ರಜಾದಿನವೂ ನಮಗೆ ಕ್ರೀಡೆಯು ಆಸಕ್ತಿದಾಯಕವಾಗಿ ಮಾರ್ಪಟ್ಟಿತ್ತು. ಹೋಬಳಿ, ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದ ಹಂತಗಳಲ್ಲಿ ಕ್ರೀಡಾ ಕಾರ್ಯದಿಂದ ಗುರುತಿಸಿಕೊಳ್ಳಲು ಶಿಸ್ತು ಮತ್ತು ಕಠಿನ ಪರಿಶ್ರಮ ಎಂಬುದು ಬೇಕೇ ಬೇಕು. ಕ್ರೀಡೆಯಲ್ಲಿ ತನ್ಮಯರಾಗಿ ಪಾಲ್ಗೊಳ್ಳಲೂ ಕ್ರೀಡೆಯ ಕುರಿತು ಆಸಕ್ತಿ ಹೊಂದಿದಾತನಿಗೆ ಮಾತ್ರ ಸಾಧ್ಯ.
ಕ್ರೀಡೆಯ ವ್ಯಾಪ್ತಿಯೇ ಅಂತದ್ದು. ತರಬೇತುದಾರರು ತಮ್ಮ ಕ್ರೀಡಾ ಚಾಕಚಕ್ಯತೆಯಿಂದ ಮೈದಾನದಲ್ಲಿ ತಮ್ಮ ಶಿಷ್ಯ ಕ್ರೀಡಾಪಟುಗಳನ್ನು ಪಳಗಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅವರ ಕಾರ್ಯ ಶ್ಲಾಘನೀಯ. “ಎರಡೂ ಕೈ ಸೇರಿದರೆ ಚಪ್ಪಾಳೆ’ ಎಂಬ ನಾಣ್ಣುಡಿಯಂತೆ ಅಂಗಣದಲ್ಲಿ ಕ್ರೀಡಾಪಟು ಹಾಗೂ ಶಿಕ್ಷಕನ ಹೊಂದಾಣಿಕೆ ಹೊಸ ಕಾರ್ಯಕ್ಕೆ ಮುಂದಾಗಲು ಪ್ರೇರಣೆಯಾಗುತ್ತದೆ. ಗುರುಭಕ್ತಿ, ಆಟದ ಮೇಲಿನ ಶ್ರದ್ಧೆ , ಕ್ರೀಡೆಯ ಮೇಲಿನ ಒಲವು ಒಬ್ಬನಿಗೆ ಉತ್ತಮ ಕ್ರೀಡಾಪಟುವಾಗಲು ಅವಶ್ಯ. ಇದರಿಂದ ತಾನು ಬೆಳೆಯುವುದರೊಂದಿಗೆ ಇತರರನ್ನು ಬೆಳೆಸುವ ಸುಗುಣವನ್ನು ಆತ ಮೈಗೂಡಿಸಿಕೊಳ್ಳಲು ಶಕ್ತನಾಗಿರುತ್ತಾನೆ. ಜೊತೆಗೆ ಆತ ಸಮಾಜದಲ್ಲಿಯೂ ಅನೇಕ ಕ್ರೀಡಾ ಸಾಧಕರನ್ನು , ಕ್ರೀಡಾ ಪಟುಗಳನ್ನು ಕಣ್ಣೆದುರು ಚಿತ್ರಿಸಿಕೊಂಡು ಅವರ ಜೀವನದ ಶಿಸ್ತು-ಸಂಯಮ ಎಂಬ ಅಂಶಗಳ ಹಾದಿಯಲ್ಲಿ ಸಾಗುತ್ತಾ ಸರಳತೆ, ವಿನಯತೆ, ಏಕಾಗ್ರತೆ, ಕಠಿನ ಶ್ರಮ ಮೊದಲಾದ ಸದ್ವಿಚಾರಗಳನ್ನ ಅಳವಡಿಸಿಕೊಂಡರೆ ಕ್ರೀಡಾ ಕ್ಷೇತ್ರದಲ್ಲಿ ಶೋಭಿಸುವುದರಲ್ಲಿ ಎರಡು ಮಾತಿಲ್ಲ. ಚಂಚಲ ಮನೋಸ್ಥಿತಿಯವರಿಗೆ ಕ್ರೀಡೆ ಪರಿಪೂರ್ಣವಲ್ಲ. ನಿರಾಸಕ್ತಿಯಿಂದ ಗಳಿಸುವುದು ಬರಿಯ ಶೂನ್ಯ.
ನಾವು ಹೆತ್ತವರ ಆಸೆಗೆ ಒತ್ತಾಸೆಯಾಗಿ ನಿಂತು, ಗುರುಗಳ ಮಾರ್ಗದರ್ಶನ ಪಡೆದು ನಮ್ಮ ಆಸಕ್ತಿಯ ರಂಗದಲ್ಲಿ ಸಾಗಿದರೆ ಜೀವನದ ಹಾದಿಯನ್ನು ಸುಗಮ, ಸಂಪದ್ಭರಿತವಾಗಿಸಲು ಖಂಡಿತಾ ಸಾಧ್ಯವಿದೆ. ಕ್ರೀಡಾರಂಗವನ್ನೇ ಆರಿಸಿಕೊಂಡು ಯಶಸ್ವಿಯಾದವರೂ ಅನೇಕರ ಮಂದಿ ನಮ್ಮ ಮುಂದಿದ್ದಾರೆ. ಕ್ರೀಡೆ ಅವರ ಜೀವನದ ದಿಕ್ಕನ್ನೇ ಬದಲಿಸಿದೆ.
ಗಣೇಶ ಕುಮಾರ್
ಪತ್ರಿಕೋದ್ಯಮ ವಿದ್ಯಾರ್ಥಿ, ವಿ. ವಿ. ಕಾಲೇಜು, ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.