ಉತ್ಸಾಹದ ಹೆಜ್ಜೆಗಳು


Team Udayavani, Jan 31, 2020, 4:48 AM IST

youth-1

ವಾಟ್ಸ್‌ ಆಪ್‌ -ಇನ್‌ಸ್ಟಗ್ರಾಮ್‌ನಲ್ಲಿ ತೊಡಗಿಸಿಕೊಂಡಿದ್ದರೂ, ಲಲಿತಕಲೆಗಳನ್ನು ಒಲಿಸಿಕೊಳ್ಳಲು ಯುವಜನರು ಸದಾ ಪ್ರಯತ್ನಿಸುತ್ತಲೇ ಇದ್ದಾರೆ. ರಂಗದ ಮೇಲೆ ಅಭಿನಯಿಸುವ‌, ಕುಂಚ ಹಿಡಿದು ಚಿತ್ರ ಮೂಡಿಸುವ, ಸ್ವರ ಹಿಡಿದು ರಾಗಗಳನ್ನು ಅನುಸರಿಸುವ- ಯುವಸಾಧಕರು ನಮ್ಮ ನಡುವೆ ಇದ್ದೇ ಇದ್ದಾರೆ. ಈ ಸಲ ಅಂಥ ಐವರು ನಮ್ಮೊಂದಿಗಿದ್ದಾರೆ.

ನಾನು ಮತ್ತು ನನ್ನ ಮ್ಯಾಜಿಕ್‌

“ಜನನಿ ಮೊದಲ ಗುರು’ ಎಂಬಂತೆ ನನಗೆ ಯಕ್ಷಿಣಿ ವಿದ್ಯೆಯನ್ನು ಕಲಿಯಲು ಪ್ರೇರೇಪಿಸಿದವರು ಅಮ್ಮ ಮುಬೀನಾ ಪರ್ವಿನ್‌ ತಾಜ್‌. ಅವರು ಜಾದೂ ಕಲಿತಿದ್ದರಿಂದ ನನಗೂ ಅದರತ್ತ ಒಲವು ಮೂಡಿತು. ಮೂರು ವರ್ಷದ ಮಗುವಿದ್ದಾಗಲೇ ಅಮ್ಮನ ಜೊತೆಗೆ ಜಾದೂ ಪ್ರದರ್ಶನಗಳಿಗೆ ಹೋಗುತ್ತಿದ್ದುದರಿಂದ ನಾನು ಆಗಲೇ ಒಂದಲ್ಲ ಒಂದು ರೀತಿಯಲ್ಲಿ ಈ ಜಾದೂ ಪ್ರದರ್ಶನದ ಭಾಗವೇ ಆಗಿದ್ದೆ. ಹಾಗಾಗಿ, ಬಹಳ ಚಿಕ್ಕಂದಿನಲ್ಲೇ ಈ ಕಲೆ ನನಗೆ ತಿಳಿಯಿತು. ಆ ಬಳಿಕ ಪ್ರೌಢಶಾಲೆಯಲ್ಲಿದ್ದಾಗ ಪ್ರಸಿದ್ಧ ಜಾದೂಗಾರ ಕುದ್ರೋಳಿ ಗಣೇಶ್‌ ಅವರು ನನಗೆ ಹೆಚ್ಚಿನ ಮಾರ್ಗದರ್ಶನ ಮಾಡಿದ್ದಾರೆ. “ಮಂಗಳಾ ಮ್ಯಾಜಿಕ್‌ ಸರ್ಕಲ್‌’ನ ಸದಸ್ಯರು ಕೂಡ ನನ್ನ ಕಲಿಕೆಗೆ ಸಹಕರಿಸಿದ್ದಾರೆ.

ಜಾದೂವಿನಲ್ಲಿ ನನಗೆ “ಕಂಜ್ಯೂರಿಂಗ್‌’ ಮತ್ತು “ಇಲ್ಯುಷನ್‌’ ವಿಭಾಗಗಳು ತುಂಬ ಇಷ್ಟ. ಈ ವಿಭಾಗದಲ್ಲಿ ಜಾದೂವಿನ ಜೊತೆಗೆ ತಿಳಿವಳಿಕೆಯನ್ನೂ ಕೊಡುವುದು ಸಾಧ್ಯವಾಗುತ್ತದೆ. ಹಾಗಂತ ನಾನು ಜಾದೂ ಪ್ರದರ್ಶನವನ್ನು ಪೂರ್ಣಕಾಲಿಕ ವೃತ್ತಿಯನ್ನಾಗಿ ಮಾಡಿಕೊಂಡಿಲ್ಲ. ಇದು ನನ್ನ ಇಷ್ಟದ ಹವ್ಯಾಸ. ಅಲ್ಲದೇ ವಿದೇಶಗಳಲ್ಲಿ ಜಾದೂಗೆ ಹೆಚ್ಚಿನ ಬೇಡಿಕೆ ಇದ್ದಷ್ಟು ನಮ್ಮ ದೇಶದಲ್ಲಿ ಹೆಚ್ಚಿನ ಬೇಡಿಕೆ ಇಲ್ಲ. ಆದರೆ, ಸೀಮಿತ ಅವಕಾಶಗಳಂತೂ ಸಿಗುತ್ತಿವೆ. ಹವ್ಯಾಸೀ ಜಾದೂಗಾರರೇ ಸೇರಿಕೊಂಡು ರಚಿಸಿಕೊಂಡ “ಕಲಾಸೃಷ್ಟಿ ತಂಡ’ದಲ್ಲಿ ನಾನು ಸಕ್ರಿಯಳಾಗಿದ್ದೇನೆ. ನಾವೆಲ್ಲ ಆಗಾಗ ಪ್ರದರ್ಶನಗಳನ್ನು ಕೊಡುವುದುಂಟು. ನಾನು ಈಜಿಪ್ಟ್ನ “ಮಮ್ಮಿ’ ಕುರಿತ ಜಾದೂ ಮಾಡಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದರೆ, “ಮಮ್ಮಿ’ಯನ್ನು ಯಾರೂ ಮುಟ್ಟಬಾರದು ಎಂಬ ನಿಯಮವಿದೆ. ಆದರೆ, ಅದನ್ನು ಕಾವಲು ಕಾಯುವವನಿಗೆ “ಒಮ್ಮೆ ಅದನ್ನು ಮುಟ್ಟಿಬಿಟ್ಟರೆ’ ಏನಾಗುತ್ತದೆ ಎಂಬ ಕುತೂಹಲ. ಈ ಕುತೂಹಲವು ಏನೆಲ್ಲ ತಿರುವು ಪಡೆಯುತ್ತದೆ ಎಂಬ ಪರಿಕಲ್ಪನೆಯ ಜಾದೂ ಅದು. ಹಲವರಿಂದ ಮೆಚ್ಚುಗೆ ಪಡೆದಿತ್ತು.

ನನಗೆ ವೈದ್ಯಕೀಯ ವಿಭಾಗದಲ್ಲಿ ಕಲಿಕೆ ಮುಂದುವರೆಸಬೇಕು ಎಂಬ ಮಹದಾಸೆ ಇದೆ. ಅಮ್ಮ ಮುಬೀನಾ ಪರ್ವಿನ್‌ ಅವರ ಆರೋಗ್ಯ ಕಾಳಜಿ ಮಾಡುವ ಜವಾಬ್ದಾರಿಯೂ ಇದೆ. ಆದ್ದರಿಂದಲೇ ಮನೆಯಲ್ಲಿಯೇ “ನೀಟ್‌’ ಪರೀಕ್ಷೆ ಬರೆಯುವುದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇನೆ.
ಶಮಾ ಪರ್ವಿನ್‌ ತಾಜ್‌

ಬಣ್ಣಗಳಿಗೆ 3ಡಿ ಸ್ಪರ್ಶ
ಚಿತ್ರಕಲೆ ಕ್ಷೇತ್ರ ಇತ್ತೀಚೆಗೆ ಎಷ್ಟೊಂದು ವಿಸ್ತಾರ ಪಡೆದಿದೆ. ಕುಂಚದ ಮೂಲಕ ಬೆರಳುಗಳಿಗೆ ಒಲಿದ ಕಲೆಯನ್ನು ಮತ್ತಷ್ಟು ಒಲಿಸಿಕೊಳ್ಳುವುದು ನನಗೆ ಇಷ್ಟವೆನಿಸಿತು. ಹಾಗೆ ಬಲ್ಲವರ ಬಳಿ ಚಿತ್ರಕಲೆಯ ಬಗ್ಗೆ ಮಾಹಿತಿ ಪಡೆದುಕೊಂಡು ನಾನು ಕಲಿಕೆಯನ್ನು ಮುಂದುವರೆಸುತ್ತಿದ್ದೆ. ಮಂಗಳೂರಿನ ಮಹಾಲಸಾ ಚಿತ್ರಕಲಾ ಶಿಕ್ಷಣ ಸಂಸ್ಥೆಯಲ್ಲಿ ಐದು ವರ್ಷ ಕಲಾಶಿಕ್ಷಣ ಪಡೆದಿದ್ದೆ. ರೆಸಿನ್‌ 3ಡಿ ಆರ್ಟ್‌ ಎಂಬ ಹೊಸ ಕಲಾಪ್ರಕಾರದ ಬಗ್ಗೆ ನನಗೆ ತುಂಬ ಆಸಕ್ತಿ ಮೂಡಿದ್ದರಿಂದ ಈಗ ಅದೇ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿದ್ದೇನೆ.

ನಿಸರ್ಗದಲ್ಲಿ ಸಿಗುವ ವಸ್ತುಗಳನ್ನು ಯಥಾಪ್ರಕಾರದ ಉಬ್ಬು ತಗ್ಗುಗಳೊಂದಿಗೆ 3ಡಿ ಪ್ರಭಾವಗಳೊಂದಿಗೆ ರಚಿಸುವುದೇ ರೆಸಿನ್‌ ಕಲಾಕೃತಿಗಳ ವೈಶಿಷ್ಟ್ಯ. ಆಸ್ಟ್ರೇಲಿಯಾದ ಜೆರಾಲ್ಡ್‌ ಚೀರ್ಚಿಯ ಮತ್ತು ಜಪಾನ್‌ನ ರಿಯುಸೆಕೆ ಪುಕಾಹೊರಿ ಈ 3ಡಿ ಕಲೆಯಲ್ಲಿ ವಿಶೇಷ ಪರಿಣಿತರು. ಅವರ ಬಗ್ಗೆ ಕೇಳಿ ತಿಳಿದುಕೊಂಡೆ. ಅಷ್ಟೇ ಅಲ್ಲ ಆನ್‌ಲೈನ್‌ಲ್ಲಿ ಅವರನ್ನು ಸಂಪರ್ಕಿಸಿದಾಗ, ಅವರು ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. ರೆಸಿನ್‌ ಕಲಾಕೃತಿಗಳನ್ನು ಮಾಡುವಾಗ ಅರಿತಿರಬೇಕಾದ ಕೌಶಲಗಳ ಬಗ್ಗೆಯೂ ನನಗೆ ಹೇಳಿಕೊಟ್ಟಿದ್ದಾರೆ. ಪ್ರಾಣಿ -ಪಕ್ಷಿ-ಹೂ-ಗಿಡಗಳನ್ನು ಉಬ್ಬುವ ಮಾದರಿಯಲ್ಲಿ, ಬಣ್ಣಗಳಲ್ಲಿ ಹಂತಹಂತವಾಗಿ ರಚಿಸುತ್ತ ಏಳರಿಂದ ಎಂಟು ಪದರುಗಳಲ್ಲಿ ಅದಕ್ಕೆ ಪೂರಕವಾಗಿರುವ ದ್ರವ್ಯಗಳನ್ನು ಚೆಲ್ಲುತ್ತ¤ ಹೋಗಬೇಕು. ಆ ಪದರಗಳಲ್ಲಿ ಆಯಾ ಚಿತ್ರದ ಭಾಗಗಳನ್ನು ಬಣ್ಣ ತುಂಬುತ್ತ, ರಚಿಸುತ್ತ ಹೋಗುವ ದೀರ್ಘ‌ ಪ್ರಕ್ರಿಯೆ ಇದೆ. ಕೊನೆಯ ಪದರದಲ್ಲಿ ಈ ಚಿತ್ರ ಪೂರ್ಣಗೊಳ್ಳುತ್ತದೆ. ಆ ಕಲಾಕೃತಿಯು ನೀರಿನಲ್ಲಿ ನೈಜವಾಗಿ ತೇಲುವ ವಸ್ತುವಿನಂತೆ 3ಡಿ ರೂಪದಲ್ಲಿ ಕಾಣಿಸುತ್ತದೆ.
ನಮ್ಮ ದಿನನಿತ್ಯ ಬಳಕೆಯ ಗಡಿಯಾರ, ಟೀಪಾಯ್‌, ಟೇಬಲ್‌, ಪೆನ್‌ಸ್ಟಾಂಡ್‌, ಶೋಕೇಸ್‌ಗಳ ಮಗ್ಗುಲಿನಲ್ಲಿ ರೆಸಿನ್‌ 3ಡಿ ಕಲಾಕೃತಿಗಳು ರಚನೆಯಾದರೆ ಮತ್ತಷ್ಟು ಚಂದ. ಇಂಟೀರಿಯರ್ಗೆ ಹೆಚ್ಚು ಒತ್ತು ಕೊಡುವ ಈ ಕಾಲದಲ್ಲಿ ಇಂತಹ ಕಲಾಕೃತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ.

ಮದುವೆ, ವಾರ್ಷಿಕೋತ್ಸವ ಸಮಾರಂಭಗಳಲ್ಲಿ ಮದುಮಕ್ಕಳ ಅಥವಾ ಗಣ್ಯರ ಭಾವ ಚಿತ್ರವನ್ನು ಪೇಪರ್‌ ಕತ್ತರಿಸಿ ಭಾವಾಭಿವ್ಯಕ್ತಿಯನ್ನು ನಿರೂಪಿಸುವುದೂ ನನಗೆ ಇಷ್ಟ. ಐದು ಬಣ್ಣಗಳ ಪೇಪರ್‌ ಹಾಳೆಗಳನ್ನು ಒಂದರ ಮೇಲೊಂದು ಜೋಡಿಸಿ ಮುಖಭಾವದ ಆಯಾ ಬಣ್ಣಕ್ಕನುಗುಣವಾಗಿ ಪ್ರತಿಯೊಂದು ಪೇಪರನ್ನು ಕತ್ತರಿಸುತ್ತಾ ರೂಪುಕೊಡುವ ಕೌಶಲವನ್ನೂ ನಾನು ಕಲಿತುಕೊಂಡಿದ್ದೇನೆ. ನನಗೀಗ 26 ವರ್ಷ. ಈ ಕಲೆಯೇ ನನ್ನ ಬದುಕನ್ನು ಪೋಷಿಸುತ್ತಿದೆ.

ಪುದಿಯತ್ತಂಡ ಜಿ. ಭವನ್‌

ಕೋಳಿ ತಂದ ಖ್ಯಾತಿ
ನಾನು 2002ರಲ್ಲಿ ವೇದಿಕೆಯ ಮೇಲೊಂದು ಕುಳ್ಳನ ನೃತ್ಯ ಮಾಡಿದ್ದೆ. ನನ್ನ ಕೈಗಳನ್ನೇ ಕಾಲುಗಳನ್ನಾಗಿಸಿ, ಇಡೀ ದೇಹವು ಕುಬjವಾಗಿ ಕಾಣುವಂತೆ ಪೋಷಾಕು ಧರಿಸಿ ನೃತ್ಯ ಪ್ರದರ್ಶನ ಮಾಡುವಂತಹ ಐಡಿಯಾ ನನಗೆ ಬಂದದ್ದೇ “ಅಚಾನಕ್‌’ ಎಂಬಂತೆ. ಆದರೆ, ಆ ಪ್ರದರ್ಶನಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾದಾಗ ನನಗೇ ಅಚ್ಚರಿಯಾಯಿತು.

ಈ ಕುಳ್ಳ ನೃತ್ಯದ ಬಳಿಕ ಅನೇಕರು, “”ಈ ಬಾರಿ ಹೊಸದೇನು ಮಾಡಿದ್ದಿ?” ಎಂದು ಪ್ರಶ್ನಿಸಲು ಶುರುಮಾಡಿದರು. ಈ ಪ್ರಶ್ನೆಯೇ ನನಗೆ ಈ ದಿಕ್ಕಿನಲ್ಲಿ ಸಾಗಲು ಸ್ಫೂರ್ತಿ. ಹಾಗಾಗಿ, ಹೊಸ ಪರಿಕಲ್ಪನೆಗಳನ್ನು ವೇದಿಕೆ ಮೇಲೆ ಪ್ರದರ್ಶಿಸಲು ಶುರುಮಾಡಿದೆ. ವೇದಿಕೆ ಮೇಲೆ ಏಳೆಂಟು ಅಡಿ ಎತ್ತರದ ಕೋಳಿಯೊಂದರ ನೃತ್ಯವು ಭಾರೀ ಪ್ರಸಿದ್ಧಿ ತಂದುಕೊಟ್ಟಿತು. ಹಾಗಂತ ನಾನು ನೃತ್ಯಗಳ ಪರಿಕಲ್ಪನೆಗೆ ಮಾತ್ರ ಸೀಮಿತವಾಗದೇ ಆತ್ಮಗಳ ನೃತ್ಯ ರೂಪಕ, ಅಜ್ಜ -ಅಜ್ಜಿಯ ಸರಸ ಸಂಭಾಷಣೆ, ಏಕಪಾತ್ರಾಭಿನಯ ಮುಂತಾಗಿ ಹೊಸತನವನ್ನು ಕೊಡುತ್ತ ಹೋದೆ. ಉಷ್ಟ್ರಪಕ್ಷಿ, ಹುಲಿ ನೃತ್ಯಗಳನ್ನು ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ.

ಹೀಗೆ ನಾನೇ ಹುಟ್ಟುಹಾಕಿದ ಪರಿಕಲ್ಪನೆಗಳು ನನಗೆ ಜೀವನಾದಾಯವನ್ನೂ ತಂದುಕೊಟ್ಟಿವೆ. ಖ್ಯಾತಿಯನ್ನೂ ತಂದುಕೊಟ್ಟಿವೆ. ಸನ್ಮಾನ-ಪುರಸ್ಕಾರಗಳನ್ನೂ ತಂದುಕೊಟ್ಟಿವೆ. “ಕೋಳಿ ನೃತ್ಯ’ವಂತೂ ರಾಜ್ಯದಾದ್ಯಂತ, ಹೊರರಾಜ್ಯ ಮತ್ತು ಹೊರದೇಶಗಳಲ್ಲಿ ಪ್ರದರ್ಶನ ಕಂಡಿದೆ. ಮುಂಬೈ, ಬಹರೈನ್‌, ದುಬೈಯಲ್ಲಿಯೂ ಪ್ರದರ್ಶನಗಳನ್ನು ನೀಡುವ ಅವಕಾಶ ಒದಗಿ ಬಂದಿದೆ. ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ಹುಲಿವೇಷದ ತಂಡದೊಂದಿಗೆ ಊರೂರು ತಿರುಗುವ ಗೀಳು ಅಂಟಿಸಿಕೊಂಡಿದ್ದೆ. ಆಗ “ಮಂಡೆ ಹುಲಿ’ಯ ಮುಖವಾಡ ತಯಾರಿಸುವುದು ಇಷ್ಟವಾಯಿತು. ಪೊಳಲಿಯ ಜಿ. ನಾರಾಯಣ ಹೊಳ್ಳರು ನನಗೆ ಈ ಮುಖವಾಡ ತಯಾರಿಕೆಯ ಕೌಶಲವನ್ನು ಹೇಳಿಕೊಟ್ಟರು. ಈ ಕೌಶಲವನ್ನೇ ಗ್ರಹಿಸಿದ್ದರಿಂದಲೋ ಏನೋ, ನಾನು ಮುಖವಾಡವಷ್ಟೇ ಅಲ್ಲ, ಇಡೀ ದೇಹದ ಸ್ವರೂಪಕ್ಕೆ ಹೊಸರೂಪ ಕೊಡುವ ಪರಿಕಲ್ಪನೆಯನ್ನಾಗಿ ವಿಸ್ತರಿಸಿಕೊಂಡೆ. ಹಾಗಾಗಿಯೇ ಆರಡಿ ಎತ್ತರದ ವ್ಯಕ್ತಿಯನ್ನು ಏಳಡಿ ಎತ್ತರದ ಕೋಳಿಯನ್ನಾಗಿಯೋ, ಅಥವಾ ಮೂರಡಿ ಎತ್ತರದ ಇಬ್ಬರು ಮನುಷ್ಯರಂತೆಯೂ ನಾನು ರೂಪಿಸುವುದು ಸಾಧ್ಯವಾಗಿದೆ. ಅದಕ್ಕೆ ನನ್ನ ಮನೆಯವರ, ಊರಿನ ಸ್ನೇಹಿತರ ಬಳಗದ ಸಹಕಾರವಂತೂ ಇದ್ದೇ ಇದೆ.

ಅಪ್ಪ ಬೇಬಿ ನಾಯಕ್‌ ಮತ್ತು ಅಮ್ಮ ರತ್ನಾ ಅವರಿಗೆ ನಾನು ಶಿಕ್ಷಣದಲ್ಲಿ ಮುಂದುವರೆಯಲಿ ಎಂಬ ಆಸೆಯಿತ್ತು. ನಾನು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದಾಗ ಅವರಿಗೆಲ್ಲ ಆತಂಕವಾಗಿತ್ತು. ಈಗ ಕಲಾಕ್ಷೇತ್ರವೇ ನನ್ನ ಪೊರೆಯುತ್ತಿದೆ.
ಅಶೋಕ ಪೊಳಲಿ

ಶ್ರದ್ಧೆಯನ್ನು ಕೊಟ್ಟ ಸಂಗೀತ
ಸಂಗೀತ ಎಂದೇನಲ್ಲ, ಲಲಿತಕಲೆಗಳೆಲ್ಲವೂ ನನಗೆ ಇಷ್ಟ. ಆದರೆ, 5ನೇ ವರ್ಷದಲ್ಲಿಯೇ ನನಗೆ ಸಂಗೀತ ತರಗತಿಗೆ ಸೇರುವ ಅವಕಾಶ ಬಂತು. ಆದ್ದರಿಂದ ಅದರಲ್ಲಿ ಇಷ್ಟೊಂದು ಮುಂದುವರೆಯುವುದು ಸಾಧ್ಯವಾಯಿತು.

ಉಮಾಮಹೇಶ್ವರ ಸಂಗೀತ ಕಲಾ ಶಾಲೆಯಲ್ಲಿ ಕಾಂಚನ ನಾರಾಯಣ ಭಟ್‌ ಅವರೊಡನೆ ಸಂಗೀತ ಕಲಿಕೆ ಆರಂಭಿಸಿದ್ದೆ. ಈಗ ಅವರ ಮಗಳು ವಿದುಷಿ ವಿದ್ಯಾ ಈಶ್ವರಚಂದ್ರ ಅವರು ಸಂಗೀತ ಪಾಠ ಮಾಡುತ್ತಿದ್ದಾರೆ. ಕಳೆದ ವರ್ಷವಷ್ಟೇ ಸೀನಿಯರ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೆಯ ರ್‍ಯಾಂಕ್‌ ಸಿಕ್ಕಿದ್ದು ಬಹಳ ಖುಷಿ ಆಯಿತು. ಕಳೆದ ವರ್ಷ ದೆಹಲಿಯಲ್ಲಿ ನಡೆದ “ಗಾಂಧಿ-150 ಸ್ಮತಿ’ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯಿಂದ 80 ಮಂದಿ ಯುವಕಲಾವಿದರಿಗೆ 10 ದಿನಗಳ ಶಿಬಿರ ನಡೆಯಿತು. ಆ ಶಿಬಿರದಲ್ಲಿ ಭಾಗವಹಿಸುವ ಅವಕಾಶ ನನಗೂ ಸಿಕ್ಕಿದ್ದು ಖುಷಿ. ಶಿಬಿರದ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರ ಸಮಕ್ಷ ಸಮೂಹ ಗಾಯನ ಪ್ರಸ್ತುತಪಡಿಸುವ ಅವಕಾಶವೂ ಸಿಕ್ಕಿತು.

ಗಾಯನದ ಜೊತೆಗೆ ನಾನು ವಯಲಿನ್‌ ಕೂಡ ಕಲಿತಿದ್ದೇನೆ. ಭರತನಾಟ್ಯದಲ್ಲಿ ಜೂನಿಯರ್‌ ಪರೀಕ್ಷೆಯನ್ನು 3ನೇ ರ್‍ಯಾಂಕ್‌ನಲ್ಲಿ ಪಾಸುಮಾಡಿದ್ದೆ. ಚಿತ್ರಕಲೆಯನ್ನೂ ಅಭ್ಯಸಿಸಿದ್ದೇನೆ. ನನಗೆ ಗಾಯನವೇ ಹೆಚ್ಚು ಇಷ್ಟವಾದ್ದ ರಿಂದ ಇದೇ ಕ್ಷೇತ್ರ ನನಗೆ ಏಕಾಗ್ರತೆಯನ್ನೂ, ಶ್ರದ್ಧೆಯನ್ನೂ ತಂದುಕೊಟ್ಟಿದೆ. ಅಷ್ಟೇ ಅಲ್ಲ, ಹೆಚ್ಚಿನ ಅವಕಾಶಗಳನ್ನೂ, ಹಿರಿಯರನ್ನು- ಸಾಧಕರನ್ನು ಭೇಟಿಯಾಗುವ ಸಂದರ್ಭಗಳನ್ನೂ ಒದಗಿಸಿಕೊಟ್ಟಿದೆ. ಸಂಗೀತ ಕ್ಷೇತ್ರ ನೀಡಿದ ಏಕಾಗ್ರತೆಯೇ ನನ್ನ ಕಲಿಕೆಗೆ ಪೂರಕವಾಗಿದೆ. ಅದಕ್ಕೇ ಇರಬೇಕು, ಹತ್ತನೆಯ ತರಗತಿಯಲ್ಲಿ ಶೇ. 95 ಅಂಕ ಪಡೆಯುವುದು ಸಾಧ್ಯವಾಗಿದೆ.

ಸಂಗೀತದಂತೆಯೇ ನನಗೆ ಜೀವ ವಿಜ್ಞಾನವನ್ನು ಓದುವುದು ಇಷ್ಟವಾದ್ದರಿಂದ ಪಿಯುಸಿಯಲ್ಲಿ ಅದೇ ವಿಷಯವನ್ನು ಆರಿಸಿಕೊಂಡಿದ್ದೇನೆ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅಥವಾ ಜೀವವಿಜ್ಞಾನ ಕ್ಷೇತ್ರದಲ್ಲಿ ಮುಂದುವರೆಯಬೇಕೆಂಬ ಅಭಿಲಾಷೆ ಇದೆ.
ಭಾಮಿನಿ ಕೆ. ಭಟ್‌

ರಂಗಭೂಮಿಯಲ್ಲಿ ಶಾಂತಿಮಂತ್ರ
ಜಗತ್ತೆಲ್ಲವೂ ಯುದ್ಧದ ಚರ್ಚೆಯಲ್ಲಿ ತೊಡಗಿರುವಾಗ, ನನಗೊಂದು ನಾಟಕ ನಿರ್ದೇಶನ ಮಾಡುವ ಅವಕಾಶ ಸಿಕ್ಕಿತು.

ರಂಗಶಂಕರದಲ್ಲಿ ನಡೆದ ಮೇಕಿಂಗ್‌ ಥಿಯೇಟರ್‌ ಎಂಬ ಕಾರ್ಯಾಗಾರದಲ್ಲಿ ನಾನು ಭಾಗವಹಿಸಿದ್ದೆ. ದೇಶದ ವಿವಿಧೆಡೆಗಳಿಂದ, ವಿದೇಶಗಳಿಂದ ಬಂದ ಅಭ್ಯರ್ಥಿಗಳು ಆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಾಗಾರದ ಕೊನೆಗೆ ನಾಟಕವೊಂದನ್ನು ನಿರ್ದೇಶಿಸುವ ಸವಾಲು ಎದುರಾದಾಗ ನಾನು ವಿ ವಿಲ್‌ ಟೀಚ್‌ ಲೈಫ್ ಸರ್‌ ಎಂಬ ನಾಟಕ ನಿರ್ದೇಶಿಸಿದ್ದೆ. ಈ ನಾಟಕದಲ್ಲಿ ಮೂರು ಜತೆ ಯುದ್ಧಾಕಾಂಕ್ಷಿ ದೇಶಗಳನ್ನು ಪರಿಗಣಿಸುವುದು ಸಾಧ್ಯವಾಯಿತು. ಇರಾನ್‌-ಇರಾಕ್‌, ಪ್ಯಾಲಿಸ್ಟೇನ್‌-ಇಸ್ರೇಲ್‌ ಹಾಗೂ ಭಾರತ-ಪಾಕಿಸ್ತಾನದ ಕತೆಗಳನ್ನು ಹೇಳಲು ರಂಗದ ಮೇಲೆ ಬಳಸಿಕೊಂಡಿದ್ದು ಕಾವ್ಯವನ್ನು. ಕಾವ್ಯದ ಮೂಲಕ ನಾಟಕ ಹೇಳುವ ಈ ತಂತ್ರವನ್ನು ನಾನು ಅಳುಕಿನಿಂದಲೇ ಪ್ರಯೋಗಿಸಿದ್ದೆ ಎನ್ನಿ. ಆದರೆ, ಅದಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು.

2019ರಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ನಡೆದ ಭಾರತ್‌ ರಂಗ್‌ ಉತ್ಸವ್‌ನಲ್ಲಿ ಈ ನಾಟಕ ಪ್ರದರ್ಶನಗೊಂಡಿತು. ಈ ಉತ್ಸವದಲ್ಲಿ ಜಗತ್ತಿನ ವಿವಿಧ ದೇಶಗಳಿಂದ ಆಹ್ವಾನಿಸಿದ ಸುಮಾರು 30 ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಆ ನಾಟಕಗಳ ಪೈಕಿ ನಾನು ನಿರ್ದೇಶಿಸಿದ ನಾಟಕವೂ ಪ್ರದರ್ಶನಗೊಂಡಿರುವುದು ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಅಷ್ಟೇ ಅಷ್ಟೇ ಅಲ್ಲ. ಅದು ನನ್ನ ಆತ್ಮವಿಶ್ವಾಸವನ್ನೂ ವೃದ್ಧಿಸಿದೆ.

ನಾನು ಕಾಲೇಜು ದಿನಗಳಲ್ಲಿ ನಾಟಕದ ಗುಂಗು ಹತ್ತಿಸಿಕೊಂಡವನು. ಉಡುಪಿಯ ಎಂಜಿಎಂ ಕಾಲೇಜಿನಲ್ಲಿಯೇ ಓದಿದ್ದು. ಈಗ ಅದೇ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿದ್ದೇನೆ. ಚಿತ್ರಕಲೆ ಮತ್ತು ಸಮಕಾಲೀನ ನೃತ್ಯದ ಕುರಿತೂ ನನಗೆ ಒಲವಿದೆ. ಕವನಗಳನ್ನು ಬರೆಯುವ ಹವ್ಯಾಸವಿದೆ. ಆದ್ದರಿಂದ ನನಗೆ ರಂಗಭೂಮಿಯಲ್ಲಿಯೂ ಕವನಗಳನ್ನು ಅನ್ವಯಿಸುವ ಹೊಸ ಯೋಚನೆಯನ್ನು ಮಾಡುವುದು ಸಾಧ್ಯವಾಯಿತು. ಬಳಿಕ ನಾನು ಗಿರೀಶ ಕಾರ್ನಾಡ್‌ ಅವರ ರಾಕ್ಷಸತಂಗಡಿ ಮತ್ತು ಭಾಸ ಕವಿಯ ಊರುಭಂಗ ನಾಟಕವನ್ನೂ ನಿರ್ದೇಶಿಸಿದೆ. ಆ ನಾಟಕಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರಶಾಂತ್‌ ಉದ್ಯಾವರ

ಕೊಲ್ಲುವುದು… ಕಾಯುವುದು
ಕಮರ್ಷಿಯಲ್‌ ಯಶಸ್ಸು , ಕಲಾತ್ಮಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಎಲ್ಲವನ್ನೂ ನಿಭಾಯಿಸಿದ ಹೆಮ್ಮೆ ಮಲಯಾಳಂನ ವೈರಸ್‌ ಚಿತ್ರಕ್ಕೆ ಸಲ್ಲುತ್ತದೆ. 2019ರ ಜೂನ್‌ನಲ್ಲಿ ತೆರೆಕಂಡ ಆಶಿಕ್‌ ಅಬು ನಿರ್ದೇಶನದ ಈ ಸಿನಿಮಾ ಕೇರಳಕ್ಕೆ ಎದುರಾಗಿದ್ದ ವೈದ್ಯಕೀಯ ಸವಾಲು ನಿಫಾ ವೈರಸ್‌ ಕುರಿತದ್ದಾಗಿದೆ.  ಚಿತ್ರದಲ್ಲಿ ಹೀರೋ ಪರಿಕಲ್ಪನೆ ಇಲ್ಲ. ಇಲ್ಲಿ ಎಲ್ಲರೂ ಮುಖ್ಯ. ಒಂದೂ ಹಾಡಿಲ್ಲ. ಯಾರೂ ಕೆಟ್ಟವರಿಲ್ಲ, ಕೊನೆಯ ಪಕ್ಷ ನಿಫಾ ಎಂಬ ವೈರಸ್‌ ಕೂಡ “ಕೆಟ್ಟದು’ ಅನ್ನಿಸುವುದಿಲ್ಲ!

ನಿಫಾ ದಾಳಿಯ ಆರಂಭದಲ್ಲಿ ಉಂಟಾದ ಆತಂಕ, ರೋಗ ಮತ್ತು ವೈರಸ್‌ ಕುರಿತ ಅಸ್ಪಷ್ಟತೆ, ಇದೆಲ್ಲಕ್ಕೆ ಎದುರಾಗಿ ಹೋರಾಡುವ ಸಮಾಜ, ವೈದ್ಯರು, ವ್ಯವಸ್ಥೆ, ದಾದಿಯೊಬ್ಬಳ ಪ್ರಾಣತ್ಯಾಗ ಇವೆಲ್ಲವನ್ನೂ “ಇಂಟರ್‌ ಕಟ್‌’ಗಳ ಸ್ವರೂಪದಲ್ಲಿ ಎಸಳೆಸಳು ಬಿಡಿಸಿಟ್ಟದ್ದು ಮನಮುಟ್ಟುವಂತಿದೆ. ಕೇರಳ ಮತ್ತು ಕರ್ನಾಟಕದ ಗಡಿಭಾಗದಲ್ಲಿ ಉಂಟಾದ ಆತಂಕ ಮತ್ತು ಜನರು ಅದನ್ನು ಎದುರಿಸಿ ಗೆದ್ದ ರೀತಿಯನ್ನು ವಿಸ್ಮಯಕಾರಿಯಾಗಿ ವಿವರಿಸಿದೆ ಈ ಚಿತ್ರ. ವೈರಸ್‌ ಯಾವುದು ಮತ್ತು ಅದರ ಮೂಲ ಎಲ್ಲಿ ಎಂಬ ಹುಡುಕಾಟ ಚಿತ್ರದ ಕುತೂಹಲಕಾರಿ ಅಂಶ. ನಿಫಾ ವೈರಸ್‌ ಅನ್ನು ಪತ್ತೆ ಹಚ್ಚಿದ್ದು ಮಣಿಪಾಲದ ವೈರಾಲಜಿ ಡಿಪಾರ್ಟ್‌ಮೆಂಟ್‌.

ಚಿತ್ರತಂಡವು ಅದನ್ನು ಮಣಿಪಾಲಕ್ಕೇ ಬಂದು ಶೂಟ್‌ ಮಾಡಿ ಹೋಗಿದೆ. ವೈರಸ್‌ನ ಮೂಲ ಹುಡುಕುತ್ತ ಹೋಗಿ ಕೊನೆಯ ದೃಶ್ಯದಲ್ಲಿ ಕಥಾನಾಯಕ ಝಕ್ರಿಯಾ, ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ಬಾವಲಿ ಮರಿಯನ್ನು ಎತ್ತಿಡುತ್ತಾನೆ. ಅಲ್ಲಿಗೆ ಸಿನಿಮಾದ ಉದ್ದಕ್ಕೂ ಅನುಭವಿಸಿದ ಜೀವಪರತೆ ಮುಗಿಲು ಮುಟ್ಟುತ್ತದೆ.

ಸಿನಿಮಾ ನೋಡುವುದಕ್ಕೆ ಒಂದು ವಾರದ ಹಿಂದಷ್ಟೆ , ನಾನು ನಿಫಾ ಹುಟ್ಟಿಬೆಳೆದ ಕೋಯಿಕೋಡಿನ ಭಾಗಗಳಿಗೆ ಹೋಗಿ ಬಂದಿದ್ದೆ. ಬಾಲುಶ್ವೇರಿ, ಮುಕ್ಕಮ…, ಮಲಪ್ಪುರ, ಮಾನಂತವಾಡಿ ಇಲ್ಲೆಲ್ಲಾ ಸಮಸ್ಯೆ ಹೆಚ್ಚಿತ್ತು. ಆ ಸಂದರ್ಭದಲ್ಲೇ ಈ ಸಿನಿಮಾ ನೋಡಿದ್ದರಿಂದಲೋ ಏನೋ, ಹೆಚ್ಚು ಆಪ್ತವಾಯಿತು ಹೇಳಬಹುದು.
ಗಣಪತಿ ದಿವಾಣ

ಟಾಪ್ ನ್ಯೂಸ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.