ರೋಹನ್ ಜೊತೆಗೆ ಮಾತುಕತೆ
Team Udayavani, Dec 1, 2017, 12:41 PM IST
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಇದೇ ನವೆಂಬರ್ 29ರಂದು ಆಯೋಜಿಸಿದ ನಾಲ್ಕನೆಯ ಉಡುಪಿ ಜಿಲ್ಲಾ ಕಾಲೇಜು ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರೋಹನ್ ದ್ವಿತೀಯ ಪಿಯು ವಿದ್ಯಾರ್ಥಿ. ರೋಹನ್ ಹುಟ್ಟು ಅಂಧ ! ಆದರೆ, ಕಣ್ಣಿದ್ದವರಿಗಿಂತ ಹೆಚ್ಚಿನ ಕ್ರಿಯಾಶೀಲ!
ಕುತೂಹಲ ಸ್ವಭಾವದ, ನಗುಮೊಗದ, ಉಪನ್ಯಾಸಕರ ಅಚ್ಚುಮೆಚ್ಚಿನ ವಿದ್ಯಾರ್ಥಿ ರೋಹನ್‌ನನ್ನು ಕಾಲೇಜಿನ ಸುಪ್ರೀತಾ, ಧನುಶ್ರೀ, ಚೈತ್ರಾ ಶ್ಯಾನುಭಾಗ್, ಮನಿಲಾ ಸೇರಿ ಸಂದರ್ಶಿಸಿದ ಕಿರುರೂಪ ಇಲ್ಲಿದೆ.
ಹಾಯ್ ರೋಹನ್, ಈ ಬಾರಿ ನಮ್ಮ ಕಾಲೇಜು ಆಯೋಜಿಸಿದ ಕಾಲೇಜು ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಿಕ್ಕಿರುವ ಬಗ್ಗೆ ಅಭಿನಂದನೆ. ನಮಗೆಲ್ಲಾ ಸಂತೋಷ ಆಗಿದೆ. ನಿನಗೇನನಿಸಿತು?
-ಹಾ… ನನಗೂ ಆ ಬಗ್ಗೆ ಸಂತೋಷ ಅನ್ನಿಸಿದೆ. ಅಧ್ಯಕ್ಷತೆಯ ಬಗೆಗೆ ಯೋಚಿಸಿಯೇ ಇರಲಿಲ್ಲ. ಈ ಹಿಂದೆ ಕುಂದಾಪುರದ ಕೊಂಕಣಿ ಸಮ್ಮೇಳನದಲ್ಲಿ ಗೋಷ್ಠಿಯೊಂದರಲ್ಲಿ ಮಾತನಾಡುವ ಅವಕಾಶ ಸಿಕ್ಕಿತ್ತು. ಕಾಲೇಜಿನಲ್ಲಿಯೂ ಎರಡು ಬಾರಿ ನನ್ನ ಆಲೋಚನೆಗಳನ್ನು ಹಂಚಿಕೊಂಡಿದ್ದೆ. ಆ ಹಿನ್ನೆಲೆಯಲ್ಲಿಯೇ ಈ ಯಶಸ್ಸು ಬಂದಿದೆ ಎಂದು ಭಾವಿಸುತ್ತೇನೆ.
ನಿನ್ನ ಹುಟ್ಟು, ಪೂರ್ವ ಶಿಕ್ಷಣದ ಬಗ್ಗೆ ಒಂದಿಷ್ಟು ಹೇಳಬಹುದೆ?
-ನಾನು ಹುಟ್ಟಿದ್ದು ಕುಂದಾಪುರ ತಾಲೂಕಿನ ತ್ರಾಸಿಯಲ್ಲಿ. ಕೊಂಕಣಿ ಮಾತೃಭಾಷೆ. ಹುಟ್ಟುವಾಗಲೇ ಕಣ್ಣುಗಳನ್ನು ಕಳಕೊಂಡಿ¨ªೆ. ನನ್ನ ತಮ್ಮನೂ ನನ್ನಂತೆಯೆ ಪ್ರಪಂಚ ಕಾಣಲಾರ. ನಾವಿಬ್ಬರೂ ಅಪ್ಪ-ಅಮ್ಮನ ಮೂಲಕವೇ ಲೋಕವನ್ನು ಕಂಡವರು.
ವಿದ್ಯಾಭ್ಯಾಸ ಮಾಡಿದ ಶಾಲೆ ಯಾವುದು?
-ಕೆ.ಜಿ. ತರಗತಿಯಿಂದ 7ನೇ ತರಗತಿಯವರೆಗೆ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಅನಂತರ 8ರಿಂದ 10 ರವರೆಗೆ ಮಂಗಳೂರಿನ Roman & Catherian Lobo School For The Blind ನಲ್ಲಿ, ಇದೀಗ ಸರಸ್ವತಿ ವಿದ್ಯಾಲಯದ ಪಿಯು ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಓದುತ್ತಿದ್ದೇನೆ.
ಮುಂದೆ ಏನಾಗಬೇಕೆಂಬ ಆಸೆ ನಿನಗೆ?
-ಬಿ.ಎ. ಮಾಡಬೇಕು. ಸಾಧ್ಯವಾದರೆ ಎಲ್‌ಎಲ್‌ಬಿ ಮಾಡಿ, ವಕೀಲನಾಗಬೇಕೆಂಬಾಸೆ.
ನಮ್ಮ ಹಾಗೆ ನೀನು ಓದಲಾರೆ, ಆದರೆ ನೀನು ಪರೀಕ್ಷೆ ಬರೆಯುವ ರೀತಿ ಹೇಗೆ?
-ನಾನು ಮಂಗಳೂರಿನಲ್ಲಿದ್ದಾಗ ಬ್ರೆಲ್ ಲಿಪಿ ಕಲಿತೆ. ಅಲ್ಲಿನ ಗುರುಗಳ, ಸ್ನೇಹಿತರ ಸಹಾಯದಿಂದ ಕನ್ನಡ, ಹಿಂದಿ, ಇಂಗ್ಲಿಷ್‌ನ್ನು ಬರೆಯಲೂ ಓದಲೂ ಕಲಿತೆ. ಹತ್ತನೆಯ ತರಗತಿಯ ಪರೀಕ್ಷೆ ಬರೆಯಲು ಬ್ರೆçಲ್ ಲಿಪಿಯಲ್ಲಿ ಅವಕಾಶವಿಲ್ಲ. ಪರೀûಾ ಮಂಡಳಿಯ ನಿಯಮದ ಪ್ರಕಾರ ನಮಗಿಂತ ಕಡಿಮೆ ವಯಸ್ಸಿನ, ನಮ್ಮ ಪಾಠದ ವಿಷಯಕ್ಕೆ ಹೊರತಾದ ಸಹಾಯಕರೋರ್ವರನ್ನು ಸೆð çಬ್ ಆಗಿ ನೇಮಿಸಿಕೊಂಡು ಪರೀಕ್ಷೆ ಬರೆದೆ.
ತರಗತಿಯ ಪಾಠ-ಪ್ರವಚನಗಳನ್ನು ಅಭ್ಯಾಸ ಮಾಡುವ ಬಗೆ ಹೇಗೆ?
-ಉಪನ್ಯಾಸಕರು ಮಾಡಿದ ಪಾಠಗಳನ್ನು ಸರಿಯಾಗಿ ಆಲಿಸುತ್ತೇನೆ. ಪುಸ್ತಕದಲ್ಲಿ ಗುರುತು ಮಾಡಿದ ವಿಷಯಗಳನ್ನು ತಾಯಿಯವರಿಂದ ಓದಲು ಹೇಳಿ, Mp3 playerನಲ್ಲಿ ರೆಕಾರ್ಡ್ ಮಾಡಿಕೊಂಡು ಬೇಕೆಂದಾಗ ಮತ್ತೆ ಕೇಳಿಸಿಕೊಳ್ಳುತ್ತೇನೆ. ಈ ವಿಚಾರದಲ್ಲಿ ನನ್ನ ತಂದೆ -ತಾಯಿಗಳಿಗೆ ನಾನು ಸದಾಋಣಿ.
ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಹವ್ಯಾಸವಿರುತ್ತದೆ. ನೀನು ಯಾವುದನ್ನು ಬೆಳೆಸಿಕೊಂಡಿರುವಿ?
ಓದುವುದೆಂದರೆ ನನಗಿಷ್ಟವಾದ ಸಂಗತಿ. ಜೊತೆಗೆ ಆಗಾಗ ಸಂಗೀತವನ್ನು ಆಲಿಸಿತ್ತೇನೆ. ಟಿ.ವಿ.ಯ ನ್ಯೂಸ್‌ಗಳನ್ನು ನಿತ್ಯವೂ ಕೇಳುತ್ತೇನೆ. ಸ್ನೇಹಿತರೊಂದಿಗೆ ಮಾತಾಡುವುದೂ ಖುಷಿ ನೀಡುತ್ತದೆ.
ನಮ್ಮಂತೆ ನೀನು ಪರಿಸರವನ್ನು ನೋಡಲಾರೆ. ಆ ಬಗೆಗೆ ಎಂದಿಗಾದರೂ ನಿನ್ನೊಳಗೆ ನೊಂದುಕೊಂಡಿರುವೆಯಾ?
ಛೆ… ಛೆ… ಹಾಗೇನಿಲ್ಲ. ಯಾಕೆ ಬೇಸರ? ಕಣ್ಣಿಲ್ಲದಿದ್ದರೂ ಮತ್ತೂಬ್ಬರ ಮಾತುಗಳನ್ನು ಕೇಳಿಸಿಕೊಂಡೇ ನಾನು ಪ್ರಪಂಚವನ್ನು ಕಲ್ಪಿಸಿಕೊಳ್ಳುತ್ತೇನೆ. ಆ ಬಗ್ಗೆ ಕೀಳರಿಮೆ ಇಲ್ಲವೇ ಇಲ್ಲ ! ನ್ಯೂಸ್, ಸಂಗೀತ ಕೇಳುವ ಮೂಲಕ ಟಿ.ವಿ. ಹತ್ತಿರವಾಗುತ್ತೆ. ಇನ್ನು ಮೊಬೈಲ್ ಬಗ್ಗೆ ಹೇಳಬೇಕೆಂದರೆ, ಇತ್ತೀಚಿನ ಆಂಡ್ರಾಯ್ಡ ಫೋನ್‌ಗಳಲ್ಲಿ ಟಾಕ್‌ಬ್ಯಾಕ್ ಎಂಬ ಆಯ್ಕೆಯಿದೆ. ಹಾಗಾಗಿ ನಮಗೆ ಟಚ್‌ಸ್ಕ್ರೀನ್ ಫೋನ್ ಸುಲಭ. ಇನ್ನು ಟೈಮ್ ನೋಡಲು ವಿಶೇಷವಾದ ವಾಚ್ ಇದೆ. ಅದು ಟೈಮ್‌ನ್ನು ನಮಗರಿವಾಗುವಂತೆ ಹೇಳುತ್ತದೆ.
ಪ್ರತಿಯೊಬ್ಬ ವ್ಯಕ್ತಿಗಳನ್ನು ಕಣ್ಣಿಲ್ಲದೆ ಹೇಗೆ ಗುರುತಿಸುತ್ತಿ?
ಎದುರಿಗೆ ಯಾರೇ ಬರಲಿ, ಯಾರೋ ಬಳಿಯಲ್ಲಿದ್ದಾರೆ ಎಂಬುದು ಕೂಡಲೆ ಅರಿವಿಗೆ ಬರುತ್ತದೆ. ನನಗೆ ಅವರವರ ಸ್ವರವೇ ಗುರುತು. ಎಷ್ಟೋ ವರ್ಷಗಳ ಹಿಂದೆ ಸಿಕ್ಕವರು ಮತ್ತೆ ಸಿಕ್ಕರೂ ಗುರುತಿಸುವುದು ಅವರ ಮಾತುಗಳಿಂದ.
ನಿನ್ನಂತೆ ಅನೇಕರು ಇದೇ ರೀತಿಯಲ್ಲಿ ಅಂಧರಿದ್ದಾರೆ. ಅವರೆಲ್ಲ ಹೀಗೆ ನೆಮ್ಮದಿಯಿಂದ ಇ¨ªಾರೆಂದು ನಿನಗನ್ನಿಸುವುದೆ?
ನೆಮ್ಮದಿ ಹೊರಗಿನಲ್ಲಿ ಹುಡುಕುವುದಲ್ಲ. ನಮ್ಮಲ್ಲೇ ಇದೆ. ಜೀವನದಲ್ಲಿ ಅಸಾಧ್ಯವಾದುದು ಏನೂ ಇಲ್ಲ. ಕಷ್ಟ ಬಂದರೂ ಹೆದರದೇ ಧೈರ್ಯದಿಂದ ಎದುರಿಸಬೇಕು. ಕುರುಡರು ಎಂದು ನಿರಾಶರಾಗಬಾರದು. ಕಣ್ಣಿಲ್ಲವೆಂಬುದು ಬಿಟ್ಟರೆ, ನಮಗೆ ಸ್ವತಂತ್ರವಾಗಿ ಬೇಕಾದ ಬಗೆಯಲ್ಲಿ ಬದುಕುವುದಕ್ಕೆ ತರಬೇತಿಯಿದೆ. ಉದಾಹರಣೆಗೆ ರಸ್ತೆದಾಟಲು ಮತ್ತೂಬ್ಬರ ಸಹಾಯ ಬೇಕೆಂದಿಲ್ಲ. ನಮಗಾಗಿಯೇ White cane ಎಂಬ ಕೋಲು ಇರುತ್ತೆ. ಅದರ ಬಳಕೆಗೆ mobility ತರಬೇತಿಯಿದೆ. ನಾನು ಮಂಗಳೂರಿನಲ್ಲಿ ತರಬೇತಿ ಪಡೆದಿ¨ªೆ.
ಸಮ್ಮೇಳನದಲ್ಲಿ ಯಾವ ವಿಷಯದ ಕುರಿತು ಮಾತಾಡಿದೆ?
ಅದು ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ. ಸಾಹಿತ್ಯ ಮತ್ತು ವಿದ್ಯಾರ್ಥಿಗಳ ಆಸಕ್ತಿಯ ಬಗ್ಗೆ ಮಾತಾಡಿದೆ. ನಮ್ಮ ಬದುಕಿಗೆ, ಸಮಾಜದ ಉನ್ನತಿಗೆ ಸಾಹಿತ್ಯ, ಪುರಾಣಗಳು ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನೂ ಹೇಳಿದೆ.
ನಮ್ಮ ಕಾಲೇಜಿನ ಬಗೆಗೆ ಏನನ್ನಿಸುತ್ತದೆ?
ಗಂಗೊಳ್ಳಿ ಕಾಲೇಜಿನ ವಿದ್ಯಾರ್ಥಿಎಂಬ ಹೆಮ್ಮೆಯಿದೆ. ಕಲಿಕೆಗೆ ಒಳ್ಳೆಯ ಅನುಕೂಲಗಳಿವೆ, ಯೋಗ್ಯ ಉಪನ್ಯಾಸಕರಿ¨ªಾರೆ. ಆಡಳಿತ ಮಂಡಳಿಯವರ ಪ್ರೋತ್ಸಾಹವಿದೆ. ಶಿಕ್ಷಣದೊಂದಿಗೆ ಕಲೆ, ಸಾಹಿತ್ಯಿಕ ಚಟುವಟಿಕೆಗಳಿಗೆ ಒಳ್ಳೆಯ ಅವಕಾಶವಿದೆ. ಎಲ್ಲರಿಗೂ ನಾನು ಆಭಾರಿ.
ನಿನ್ನ ಸ್ನೇಹಿತರಾದ ನಮಗೆಲ್ಲ ಏನು ಹೇಳಬೇಕೆಂದಿರುವೆ?
ಏನು ಹೇಳಲಿ… ಈ ಪ್ರಪಂಚದಲ್ಲಿ ಎಷ್ಟೋ ಜನರು ನನ್ನಂತೆ ಅಂಧರಿದ್ದಾರೆ. ಮತ್ತೂಬ್ಬರ ಕಣ್ಣುಗಳನ್ನು ದಾನವಾಗಿ ಪಡೆದು ಮತ್ತೆ ಪ್ರಪಂಚವನ್ನು ನೋಡಿದವರಿದ್ದಾರೆ. ಹಾಗಾಗಿ, ನಿಮ್ಮಲ್ಲಿ ಕೇಳುವುದಿಷ್ಟೆ , ನೀವು ನಿಮ್ಮ ಅಂಗಾಂಗಗಳನ್ನು ನಿಮ್ಮ ಕಾಲಾನಂತರ ದಾನಮಾಡಿ. ದೇಹವನ್ನು ಮಣ್ಣು ಮಾಡುವುದಕ್ಕೂ ಮೊದಲು ನಿಮ್ಮ ಕಣ್ಣುಗಳನ್ನು ದಾನಮಾಡಿ. ಬೆಳಕಿಲ್ಲದ ಅಂಧರ ಬಾಳಿಗೆ ಬೆಳಕಾಗಿ.
ಸುಜಯಿಂದ್ರ ಹಂದೆ ಎಚ್.