ಕಣ್ಮರೆ ಆಗುತ್ತಿದೆ… ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂಬ ಬೋರ್ಡು!
Team Udayavani, Mar 17, 2017, 3:50 AM IST
ಮೊನ್ನೆ ನಮ್ಮ ಮನೆಗೆ ಯಾರೋ ಅತಿಥಿಗಳು ಬಂದಿದ್ದರು. ಅವರ ಜೊತೆ ಒಂದು ಸಣ್ಣ ಮಗು ಕೂಡ ಬಂದಿತ್ತು. “ಏನ್ ಪುಟ್ಟ, ಎಷ್ಟನೆಯ ಕ್ಲಾಸು?’ ಅಂತ ಕೇಳಿದೆ. “ಎಲ…ಕೆಜಿ ಅಂಕಲ…’ ಅಂತ ಹೇಳು¤. ನನ್ನನ್ನು ಇಷ್ಟು ಕಿರಿಯ ಸಣ್ಣ ಪ್ರಾಯದಲ್ಲೇ ಅಂಕಲ್ ಮಾಡ್ತಲ್ಲ ಅನ್ನೋ ಬೇಜಾರಲ್ಲೇ, “ಒಂದು ಹಾಡು ಹೇಳು ನೋಡೋಣ’ ಅಂತ ಕೇಳಿದೆ. ಅದಕ್ಕೇ “ರೈನ್, ರೈನ್ ಗೋ ಅವೇ’ ಅಂತ ಶುರು ಮಾಡಿ “ಟ್ವಿಂಕಲ…, ಟ್ವಿಂಕಲ್ ಲಿಟ್ಲ ಸ್ಟಾರ್ ಹೇಳಿ ನಿಲ್ಲಿಸಿತು. ನಾವು ಸಣ್ಣವರಿದ್ದಾಗ “ಹೊಯ್ಯೋ, ಹೊಯ್ಯೋ ಮಳೆರಾಯ ಮಾವಿನ ತೋಪಿಗೆ ನೀರಿಲ್ಲ’ ಅಂತಾ ಮಳೆಯನ್ನು ಕರೆಯುತ್ತ ಇದ್ದೆವು. ಈವಾಗಿನ ಮಕ್ಕಳ “ರೈನ್, ರೈನ್ ಗೋ ಅವೇ’ ಪದ್ಯ ಕೇಳಿ ಮಳೆರಾಯ ಕರ್ನಾಟಕದಲ್ಲಿ ಹೆಚ್ಚಾಗಿ ಕಾಣ ಸಿಗುತ್ತ ಇಲ್ಲ.
ಬಂದ ಬಂದ ಸಂತಮ್ಮಣ್ಣ, ತಿರುಕನೋರ್ವನೂರಮುಂದೆ ಮುರುಕು ಧರ್ಮಶಾಲೆಯಲ್ಲಿ , ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದಿ ಎನ್ನುವ ಪಾಠಗಳನ್ನು ನಾವು ಓದುತ್ತಿರಬೇಕಾದ್ರೆ, ನಮ್ಮ ತಂದೆತಾಯಿ ಅವರ ಶಾಲಾ ಜೀವನವನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಇವೆಲ್ಲ ಮೆರೆದಿದ್ದು 20ನೆಯ ಶತಮಾನದಲ್ಲಿ. 21ನೆಯ ಶತಮಾನದ ಆರಂಭದಲ್ಲೇ ಇಂಗ್ಲಿಷ್ ಮೀಡಿಯಂಗಳ ಅಟ್ಟಹಾಸದೆದುರು ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕನ್ನಡ ಶಾಲೆಗಳು ಮಂಕಾದವು. ಕನ್ನಡ ಶಾಲೆಯಲ್ಲಿ ಶಿಕ್ಷಣವನ್ನು ಪಡೆದು, ಉನ್ನತ ಸ್ಥಾನಕ್ಕೆ ಏರಿದ ಮಹನೀಯರೇ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂಗೆ ಕಳುಹಿಸಲು ತೊಡಗಿದರು. ಅಂಗನವಾಡಿ ಎನ್ನುವ ಪದವನ್ನು ಮುಂದಿನ ಪೀಳಿಗೆ ಪದಕೋಶದಲ್ಲಿ ಹುಡುಕುವ ಕಾಲ ಹೆಚ್ಚೇನೂ ದೂರವಿಲ್ಲ.
ನಾನು ಆಫೀಸಿಗೆ ತೆರಳುವ ದಾರಿಯಲ್ಲಿ ಮಕ್ಕಳ ತಾಯಂದಿರು, ಮಕ್ಕಳ ಬ್ಯಾಗುಗಳನ್ನು ತಾವೇ ಹಾಕಿಕೊಂಡು, ಶಾಲಾವಾಹನದ ತನಕ ಕರೆದುಕೊಂಡು ಹೋಗಿ ವ್ಯಾನ್ ಹತ್ತಿಸಿ, ಸಂಜೆ ಅದೇ ವ್ಯಾನಿನಿಂದ ಮಕ್ಕಳನ್ನು ಕರೆದುಕೊಂಡು ಬರೋದು ನೋಡ್ತಾ ಇದ್ದರೆ, ನಮಗೆ ಇಂತಹ ದೌರ್ಭಾಗ್ಯ ಬರಲಿಲ್ಲವಲ್ಲ ಅಂತ ಅನ್ನಿಸುತ್ತದೆ.
ನಾವು ಶಾಲೆಗೆ ಹೋಗುವಾಗ, “ಇವತ್ತು ಹೊಟ್ಟೆ ನೋಯುತ್ತೋ, ಶಾಲೆಗೆ ರಜಿ ಹಾಕ್ತೆ’ ಅಂದ್ರೆ, ಅಮ್ಮ “ಮತö ಇಲ್ಯಾ ಗಡ, ಅಪ್ಪಯ್ಯನಿಗೆ ಹೇಳ್ತಿ ಕಾಣ ಈಗ’ ಅಂದ ಕೂಡ್ಲೆ, ಎಲ್ಲೋ ಮುದ್ದೆಯಾಗಿ ಬಿದ್ದಿದ್ದ ಶಾಲಾ ಸಮವಸ್ತ್ರವನ್ನು ಹಾಕಿಕೊಂಡು, ಎರಡು ಪುಸ್ತಕ ಬ್ಯಾಗಿಗೆ ತುಂಬಿಕೊಂಡು, ಶಾಲಾ ದಾರಿ ಹಿಡೀತಾ ಇದ್ದೆವು. ಶಾಲೆಗೆ ಹೋಗೋ ದಾರಿಯಲ್ಲಿ ಕಾಯಿಕಳ್ಳ (ಒಂದು ಜಾತಿಯ ಹಲ್ಲಿ) ನೋಡಿದರೆ, ದುಡ್ಡು ಸಿಕ್ಕತ್ತೆ ಅಂತ ಅದನ್ನು ಸಾಯಿಸಲಿಕ್ಕೆ ಹೋಗಿದ್ದು, ಗೋಯ್ (ಗೇರು), ಮಾವಿನ ಮರಕ್ಕೆ ಕಲ್ಲು ಹೊಡೆದು ಹಣ್ಣು ಬೀಳಿಸಿದ್ದು, ಗದ್ದೆಯಲ್ಲಿ ನೆಲಗಡಲೆ ಕದ್ದಿದ್ದು ಎಲ್ಲ ಇವಾಗ ನೆನಪು.
ಹಾಗೆಂದು, ನಾನೇನು ಇಂಗ್ಲೀಷ್ ಮಾಧ್ಯಮ ಶಾಲೆಗಳ ವಿರೋಧಿ ಅಲ್ಲ, ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿಕೊಂಡಿರುವಂಥ ಶಾಲೆಗಳಿಗೆ ಬಿಸಿ ಮುಟ್ಟಿಸಿ ಅನ್ನೋದು ನನ್ನ ಸಂದೇಶ. ಇತ್ತೀಚಿನ ದಿನಗಳಲ್ಲಿ, ಮಕ್ಕಳ ಹೋಮ್‌ವರ್ಕ್‌ಗಳನ್ನು ತಂದೆತಾಯಿಗಳು ಮಾಡುವ ಕಾಲ ಬಂದಿದೆ. ಇದರಿಂದ ಮಕ್ಕಳ ಸೃಜನಶೀಲತೆ ಅನ್ನೋದು ಅಡಗಿ ಹೋಗ್ತಾ ಇದೆ. ಹೀಗೆ ಒಂದು ದಿನಾ, ಒಂದು ಚಿಟ್ಟೆ ಮರಿ ಮೊಟ್ಟೆಯಿಂದ ಹೊರಬರಲು ಕಷ್ಟ ಪಡುತ್ತಿದ್ದುದ್ದನ್ನು ನೋಡಿದ ಒಬ್ಬ ಹುಡುಗ ಮೊಟ್ಟೆಯ ಸಿಪ್ಪೆಯನ್ನು ಬಿಡಿಸಿ ಅದಕ್ಕೆ ಸಹಾಯ ಮಾಡಿದ, ಆದರೆ ಹೊರಗೆ ಬಂದ ಸ್ವಲ್ಪ ಸಮಯದಲ್ಲೇ ಅದು ಅಸುನೀಗಿತು. ಪ್ರಾಥಮಿಕ ಶಿಕ್ಷಣ ಅನ್ನುವುದು ದುಂಬಿ ಚಿಟ್ಟೆಯಾಗಿ ಪರಿವರ್ತನೆ ಆಗುವ ಕಾಲ. ಇಂಥ ಸಮಯದಲ್ಲಿ ಮಕ್ಕಳಿಗೆ ಕುತೂಹಲ ಹೆಚ್ಚು ಹಾಗೂ ಕಲಿಯುವ ವಿಷಯಗಳು ಸಹ ಹೆಚ್ಚು. ಇಂತಹ ಕಾಲಘಟ್ಟದಲ್ಲಿ ಹೆಚ್ಚು ಹೆಚ್ಚು ಸ್ವಾತಂತ್ರ್ಯವನ್ನು ಮಕ್ಕಳಿಗೆ ನೀಡಿದಾಗ, ಅವುಗಳು ಅನೇಕ ವಿಷಯಗಳನ್ನು ಕಲಿಯುತ್ತವೆ, ಮುಂದೆ ಜೀವನದ ದಾರಿಯಲ್ಲಿ ಬರುವ ಸಮಸ್ಯೆಗಳನ್ನು ಯಾರ ಸಹಾಯವಿಲ್ಲದೇ ಎದುರಿಸುತ್ತವೆ.
ನಮ್ಮ ರಾಜ್ಯದಲ್ಲಿ ಮಾತ್ರ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಗಮನವನ್ನು ನಮ್ಮ ಸರ್ಕಾರ ನೀಡುತ್ತಿಲ್ಲ ಅನ್ನುವುದು ವಿಪರ್ಯಾಸ. ನಮ್ಮ ರಾಜ್ಯದ ಹೆಚ್ಚಿನ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ, ಅಧ್ಯಾಪಕರು ನಿವೃತ್ತಿ ಹೊಂದುತ್ತಿದ್ದರು, ಮಕ್ಕಳ ಸಂಖ್ಯೆ ಕಡಿಮೆಯಿದೆ ಎನ್ನುವ ನೆಪವೊಡ್ಡಿ ಹೊಸ ಅಧ್ಯಾಪಕರ ನೇಮಕಾತಿಗೆ ಗಮನ ಕೊಡುತ್ತಿಲ್ಲ. ಅನೇಕ ಶಾಲೆಗಳಲ್ಲಿ ಅತಿಥಿ ಅಧ್ಯಾಪಕರನ್ನು ಶಾಲೆಯ ಮುಖ್ಯೋಪಾಧ್ಯಾಯರೇ ನೇಮಿಸಿಕೊಂಡು, ಅವರಿಗೆ ಸಂಬಳವನ್ನು ಮುಖ್ಯೋಪಾಧ್ಯಾಯರ ಕೈಯಿಂದ ನೀಡುತ್ತಿ¨ªಾರೆ. ಅನೇಕ ಶಾಲೆಗಳು ಐವತ್ತು ವರ್ಷಕ್ಕಿಂತಲೂ ಹಳೆಯದಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಹಳೆಯದಾದ ಮಾಡಿನ ಕೆಳಗೆ ತಮ್ಮ ಮಕ್ಕಳು ಸುರಕ್ಷಿತವಾಗಿ ಹೇಗೆ ಕಲಿತಾರು ಎನ್ನುವ ಭಯ ಕೂಡ ಪೋಷಕರಲ್ಲಿದೆ. ಕುಡಿಯುವ ನೀರಿನ ಸಮಸ್ಯೆ, ಶೌಚಾಲಯದ ಸಮಸ್ಯೆ, ಮಧ್ಯಾಹ್ನದ ಬಿಸಿ ಊಟದ ಸಮಸ್ಯೆ ಇನ್ನೂ ಅನೇಕ ಸಮಸ್ಯೆಗಳಿಂದ ಕನ್ನಡ ಶಾಲೆಗಳು ನಲುಗುತ್ತಿದ್ದರೂ ಸರ್ಕಾರ ಮೂಕವಾಗಿದೆ. ಮಕ್ಕಳಿಗೆ ಮೊಟ್ಟೆ ಕೊಡಬೇಕೋ, ಬಾಳೆಹಣ್ಣು ಕೊಡಬೇಕೋ ಎನ್ನುವ ಅಧಿಕಾರ ಹಾಗೂ ವಿರೋಧ ಪಕ್ಷದ ನಡುವಿನ ಜಗಳ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಕಡೆಗೆ ವಾಲಿದರೆ ತುಂಬಾ ಒಳಿತು.
ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಕಲ್ಪಿಸಿದ ನಮ್ಮ ಸರ್ಕಾರದ ಒಂದು ಉತ್ತಮ ಯೋಜನೆ ಪ್ರತಿಭಾ ಕಾರಂಜಿ. ಇದರಿಂದ ಉದಯಿಸಿದ ಪ್ರತಿಭೆಗಳಲ್ಲಿ ನಾನು ಒಬ್ಬ ಅಂತಾ ಹೇಳಿಕೊಳ್ಳಲಿಕ್ಕೆ ಹೆಮ್ಮೆ ಇದೆ. ಮಕ್ಕಳ ಕ್ರಿಯಾಶೀಲತೆಗೆ ಒಂದು ಒತ್ತನ್ನು ಕೊಡುವ ಕೆಲಸ ಕನ್ನಡ ಮಾಧ್ಯಮ ಶಾಲೆಗಳಿಂದ ಅನೇಕ ನಡೆಯುತ್ತಿದೆ. ಇದನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ಕೆಲಸ ನಮ್ಮೆಲ್ಲರಿಂದ ನಡೆಯಬೇಕಿದೆ. ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಎನ್ನುವುದು ಮಕ್ಕಳನ್ನು ಸ್ವಂತ ಉದ್ಯೋಗಿಗಳಾಗುವ ಬದಲು, ಇನ್ನೊಬ್ಬರ ಕೈ ಕೆಳಗೆ ದುಡಿಯುವವರನ್ನಾಗಿ ರೂಪಿಸುತ್ತಿದೆ.
ಬೆಂಗಳೂರಿನಲ್ಲಿರುವ ನನ್ನ ದೂರದ ಸಂಬಂಧಿಯೊಬ್ಬರ ಮಗುವಿನ ಒಂದನೆಯ ಕ್ಲಾಸಿನ ಫೀಸ್ 34 ಸಾವಿರ ರೂಪಾಯಿ ಅಂತ ಕೇಳಿ ನನಗೆ ಒಂದು ನಿಮಿಷ ಶಾಕ್ ಆಯ್ತು. ಏಕೆಂದರೆ, ಅಷ್ಟು ಹಣದಲ್ಲಿ ನಾನು ನನ್ನ ಪದವಿ ಶಿಕ್ಷಣ ಮುಗಿಸಿದ್ದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಪಟ್ಟಣಗಳಲ್ಲಿ ಹೆಬ್ಟಾವಿನಂತೆ ಬಾಯಿ ಕಳೆದುಕೊಂಡಿರುವ ಸ್ಕೂಲ್ ಮಾಫಿಯಾಗಳ ಹೊಟ್ಟೆ ತುಂಬಿಸಲು ಅನೇಕ ಪೋಷಕರು ಸಾಲ ಮಾಡಿ ತಮ್ಮ ಮಕ್ಕಳನ್ನು ಓದಿಸುತ್ತಿ¨ªಾರೆ, ಇಂಥವರಿಗೆ ಒಂದು ಕಿವಿಮಾತು: ಕಲಿಯುವ ಮನಸ್ಸಿದ್ದರೆ, ಎಲ್ಲಿದ್ದರೂ ಮಕ್ಕಳು ಕಲಿಯುತ್ತಾರೆ, ಅದೇ ಹಾಳಾಗುವ ಮನಸ್ಸಿದ್ದರೆ, ಎಲ್ಲಿದ್ದರೂ ಹಾಳಾಗ್ತಾರೆ. ಕನ್ನಡ ಶಾಲೆ ಇಂಗ್ಲಿಷ್ ಶಾಲೆ ಎನ್ನುವ ಪ್ರಶ್ನೆ ಬರುವುದಿಲ್ಲ !
ಕನ್ನಡ ಶಾಲೆಗಳನ್ನು ಇಂಗ್ಲಿಷ್ ಶಾಲೆಗಳಿಗೆ ಸ್ಪರ್ಧೆ ಒಡ್ಡುವಂತೆ ಅಭಿವೃದ್ಧಿಪಡಿಸಿ, ಸ್ಕೂಲ್ ಮಾಫಿಯಾಗಳಿಗೆ ಕಡಿವಾಣ ಹಾಕುವುದು ಸರ್ಕಾರಕ್ಕೆ ಸುಲಭದ ಕೆಲಸ. 1ರಿಂದ 10ಗರ ತನಕ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಸರ್ಕಾರಿ ಹಾಗೂ ಖಾಸಗಿ ಕಂಪೆನಿಗಳಲ್ಲಿ 50-70% ಮೀಸಲಾತಿ ತಂದರೆ ಕನ್ನಡಶಾಲೆಗಳ ಅಭಿವೃದ್ಧಿ ಸರಾಗವಾಗಿ ಆಗುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಕರ್ನಾಟಕದ ಒಂದು ಭಾಗದಲ್ಲಿ ಮಕ್ಕಳಿಗೆ ಶಾಲೆಗೆ ಬರಲು ಅನುಕೂಲವಾಗುವಂತೆ ಬಸ್ ಅನ್ನು ಶಾಸಕರ ನಿಧಿಯಿಂದ ಕಲ್ಪಿ³ಸಿರುವುದು ನಾನು ಕಂಡ ಒಂದು ಉತ್ತಮ ಯೋಜನೆ ಇದನ್ನು ಇತರ ಭಾಗಗಳಲ್ಲಿ ಜಾರಿಗೊಳಿಸಿದರೆ ತುಂಬಾ ಒಳ್ಳೆಯದು. ಆದರೆ, ಮಂತ್ರಿಗಳ ಕೃಪಾಪೋಷಿತರೇ ಖಾಸಗಿ ಸಂಸ್ಥೆಗಳನ್ನು ನಡೆಸುತ್ತಿರುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ.
ನಮ್ಮ ಭಾಷೆಯನ್ನು ನಾವು ಬೆಳೆಸದಿದ್ದರೆ, ಹೊರಗಿನಿಂದ ಬಂದ ಬೇರೆ ಯಾರೋ ಬೆಳೆಸುವುದಿಲ್ಲ. ಕನ್ನಡ ಶಾಲೆಗಳಲ್ಲಿ ಓದಿ, ಒಳ್ಳೆಯ ಉದ್ಯೋಗದಲ್ಲಿರುವ ಹೆಮ್ಮೆಯ ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿ, ಹಾಗೆಯೇ ನೀವು ಕಲಿತಿರುವ ಶಾಲೆಗೆ ವರ್ಷಕ್ಕೆ ಒಮ್ಮೆಯಾದರೂ ಭೇಟಿ ನೀಡಿ.
ಗಣೇಶ ಬರ್ವೆ ಮಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Malpe ಬೀಚ್ ಸ್ವಚ್ಛತೆ: 3 ದಿನದಲ್ಲಿ 26 ಲೋಡ್ ಕಸ ಸಂಗ್ರಹ
Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.