ಕಾಲ ಬದಲಾಗಿದೆ
Team Udayavani, May 19, 2017, 2:48 PM IST
ಜಾಗತೀಕರಣದ ಅಲೆಯಲ್ಲಿ ನಮ್ಮ ಸಂಬಂಧವು ಕೇವಲ ವಾಟ್ಸಾಪ್ ಚಾಟಿಂಗ್‌ಗೆ ಸೀಮಿತವಾಗಿದೆ. ಅಂದಿನಂತೆ ಒಟ್ಟಿಗೆ ಸೇರಲು ನಮಗೆ ಸಮಯವಿಲ್ಲ. ಆ ದಿನಗಳನ್ನು ಇಂದು ನೆನೆಸಿದರೆ ಆ ಸಂಭ್ರಮವನ್ನು ಈಗ ಕಳೆದುಕೊಳ್ಳುತ್ತಿದ್ದೇವೆ ಎಂದೆನಿಸುತ್ತಿದೆ.
ಅಂದೆಲ್ಲ ರಜೆ ಬಂತೆಂದರೆ ಸಂಭ್ರಮದ ವಾತಾವರಣ. ಮನೆಯಲ್ಲಿ ಸೋದರಬಂಧುಗಳು ಎರಡು ತಿಂಗಳ ಕಾಲ ಝಾಂಡಾ ಹೂಡುತ್ತಿದ್ದರು. ಮನೆಯಲ್ಲಿ ನಮ್ಮದೇ ಸಾಮ್ರಾಜ್ಯ. ನಾವೇ ಆ ಸಾಮ್ರಾಜ್ಯದ ಅಧಿಪತಿಗಳು. ದಿನವಿಡೀ ಬಿರುಬಿಸಿಲನ್ನು ಲೆಕ್ಕಿಸದೇ ಆಟವಾಡಿಕೊಂಡು ವಿರಾಮದ ಅವಧಿಯಲ್ಲಿ ಅಜ್ಜಿ ಮಾಡಿದ ರುಚಿಕರ ತಿಂಡಿಯನ್ನು ತಿಂದು ಚಪ್ಪರಿಸುತ್ತ ಸಮಯ ಕಳೆಯುತ್ತಿದ್ದೆವು.ಮಾವಿನ ಕಾಲ ಎಪ್ರಿಲ್ ಬಂತೆಂದರೆ ಅದು ಹಣ್ಣಿನ ರಾಜನ ಕಾಲ. ನಮ್ಮ ತೋಟದಲ್ಲಿ ದೊಡ್ಡ ಗಾತ್ರದ ಬೆಂಗನ್‌ಪಲ್ಲಿ ಮಾವುಗಳಾಗುತ್ತಿತ್ತು. ಬೆಳಗ್ಗಿನ ಜಾವ ಮಾವುಗಳನ್ನು ಹೆಕ್ಕುತ್ತಿದ್ದರೆ, ನಂತರ ಸಂಡಿಗೆ, ಹಪ್ಪಳ ಮಾಡಲು ಅಮ್ಮನಿಗೆ ಸಹಾಯ ಮಾಡುತ್ತಿದ್ದೆವು. ಮತ್ತೂಂದು ಸುತ್ತು ಲಗೋರಿ ಆಡಿ ಗೇರುಹಣ್ಣಿನ ಗುಡ್ಡೆಗೆ ನಮ್ಮ ಪಯಣ. ಯಾರು ಜಾಸ್ತಿ ಹೆಕ್ಕುತ್ತಾರೆ ಎಂದು ನಮ್ಮೊಳಗೆ ಬಿರುಸಿನ ಸ್ಪರ್ಧೆ. ಗೆದ್ದವರಿಗೆ ನಮ್ಮ ಪಾಲಿನ ಒಂದು ಮಾವಿನ ತುಂಡನ್ನು ನೀಡುವುದು ಎಲ್ಲರೂ ಒಮ್ಮತದಿಂದ ನಿರ್ಧರಿಸಿದ ನಿರ್ಣಯವಾಗಿತ್ತು.
ಸ್ವಯಂಚಿಕಿತ್ಸೆ
ಹೇರಳವಾಗಿ ಬೆಳೆಯುತ್ತಿದ್ದ ಪೇರಳೆ ಹಣ್ಣು, ನೇರಳೆ ಹಣ್ಣುಗಳನ್ನು ತಿಂದುಕೊಂಡು ಆನಂದಿಸುತ್ತಿದ್ದೆವು. ಸ್ವತಃ ನಾವೇ ಮರಕ್ಕೆ ಹತ್ತಿ ಹಣ್ಣುಗಳನ್ನು ಕೊಯ್ಯುತ್ತಿದ್ದೆವು. ಕೆಲವೊಂದು ಬಾರಿ ಆಯತಪ್ಪಿ ಬೀಳುತ್ತಿದ್ದಾಗ ನಾವೇ ಸ್ವಯಂಚಿಕಿತ್ಸೆ ನೀಡುತ್ತಿದ್ದೆವು. ಈ ವಿಷಯ ಪೋಷಕರಿಗೆ ತಿಳಿಯದ ಹಾಗೆ ಗೌಪ್ಯವಾಗಿ ಇಡುತ್ತಿದ್ದೆವು.
ಜಾತ್ರೆಯ ಸಂಭ್ರಮ
ರಜಾವಧಿಯ ಮುಖ್ಯ ಕಾರ್ಯಕ್ರಮ ಎಂದರೆ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ. ಜಾತ್ರೆಗದ್ದೆಯಲ್ಲಿ ಮಾರಾಟಕ್ಕಿಟ್ಟ ವಸ್ತುಗಳೆಲ್ಲವೂ ನಮಗೆ ಬೇಕು. ಹಿರಿಯರೊಂದಿಗೆ ರಂಪಾಟ ಮಾಡಿ ಅಂತೂಇಂತೂ ಕೈತುಂಬ ಆಟಿಕೆಗಳನ್ನು ಕೊಂಡುಕೊಳ್ಳದೆ ಹೋದರೆ ನಮಗೆ ಸಮಾಧಾನವಾಗುತ್ತಿರಲಿಲ್ಲ. ಮಹಾಚಕ್ರದಲ್ಲಿ ಕೂರುವುದು ನಮ್ಮ ಹೆಬ್ಬಯಕೆಯಾಗಿತ್ತು. ಅದರಲ್ಲಿ ಕುಳಿತುಕೊಂಡ ಮೇಲೆ ಎತ್ತರದಿಂದ ನೆಲವನ್ನು ನೋಡಿ ಭಯಪಟ್ಟುಕೊಂಡು ಅರಚುತ್ತಿದ್ದೆವು.
ಕಾಪಿ ಬರೆಯುವುದು
ಸಾಯಂಕಾಲವಾಗುತ್ತಿದ್ದಂತೆ ಸ್ನಾನ ಮಾಡಿ ದೇವರನಾಮ ಹಾಡುತ್ತಿದ್ದೆವು. ತದನಂತರ ಎಲ್ಲರೂ ಸೇರಿ ಒಟ್ಟಾಗಿ ಕಾಪಿ ಬರೆಯುತ್ತಿದ್ದೆವು. ಯಾರ ಅಕ್ಷರ ಸುಂದರವಾಗಿದೆ ಎಂದು ಪೋಷಕರಿಂದ ಘೋಷಣೆ. ನಮ್ಮ ಅಕ್ಷರ ಸುಂದರವಾಗಬೇಕೆಂದು ಇನ್ನಷ್ಟು ಚೆಂದದಿಂದ ಬರೆಯಲು ಪ್ರಯತ್ನಿಸುತ್ತಿದ್ದೆವು.
ವಿದಾಯ ಹೇಳುವ ಕಾಲ
ಮೇ ತಿಂಗಳು ಮುಗಿಯುತ್ತಿದ್ದಂತೆ ನಮ್ಮಲ್ಲಿ ಬೇಸರದ ಭಾವ. ನೆಂಟರಿಗೆ ವಿದಾಯ ಹೇಳುವ ಕಾಲ. ಮುಂದಿನ ರಜೆಯಲ್ಲಿ ಮತ್ತೆ ಒಟ್ಟಾಗೋಣ ಎಂಬ ಭರವಸೆಯ ಮಾತು. ಮುಂದಿನ ವರ್ಷದ ರಜೆಯನ್ನು ಕಾತರದಿಂದ ನಿರೀಕ್ಷಿಸುತ್ತಿದ್ದೆವು ನಾವು.
– ಪ್ರಜ್ಞಾ ಹೆಬ್ಟಾರ್
ಪ್ರಥಮ ಪತ್ರಿಕೋದ್ಯಮ,
ಎಸ್‌ಡಿಎಂ ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.