ಬಿಸಿಲಲ್ಲಿ ದುಡಿದರೂ ಕಪ್ಪಾಗುವೆನೆಂಬ ಭಯವಿಲ್ಲ
Team Udayavani, Aug 24, 2018, 6:10 AM IST
ನಾನು ಪ್ರಥಮ ವರ್ಷದ ಎಮ್‌ಎಸ್‌ಡಬ್ಲ್ಯೂ ಓದುತ್ತಿರುವಾಗ ನಮ್ಮ ಶೈಕ್ಷಣಿಕ ಅಧ್ಯಯನದ ಭಾಗವಾಗಿ ಯಾವುದಾದರೂ ಸ್ವಯಂ ಸೇವಾ ಸಂಸ್ಥೆ ಅಥವಾ ಸಮುದಾಯಗಳಲ್ಲಿ ಒಂದು ವರ್ಷದ ಕಾಲಾವಧಿಗೆ ಫೀಲ್ಡ…ವರ್ಕ್‌ಗೆಂದು ಇಬ್ಬರ ತಂಡಗಳನ್ನು ನೇಮಿಸುತ್ತಿದ್ದರು. ಹೀಗೆ, ನನಗೆ ದೊರಕಿದ್ದು ಜ್ಯೋತಿನಗರ ಹಾಗೂ ಬಸವನಗರ ಎಂಬ ಎರಡು ಕಾಲೊನಿಗಳು. ಇವು ಮಂಗಳೂರು ಹೊರವಲಯದ ಕಾವೂರು ಸಮೀಪದಲ್ಲಿವೆ. ನಿಜ ಹೇಳಬೇಕೆಂದರೆ ಅನೇಕ ವರ್ಷಗಳಿಂದ ಮಂಗಳೂರಿನಲ್ಲಿ ವಾಸವಿದ್ದರೂ ಇಂತಹ ಒಂದು ಕಾಲೊನಿಯ ಬಗ್ಗೆ ನನಗೆ ಅರಿವಿರಲಿಲ್ಲ.
ಮೊದಲ ದಿನ ನೋಡಬೇಕಾದರೆ ಆಶ್ಚರ್ಯವಾಯಿತು. ಸುಮಾರು ಮೂರರಿಂದ ನಾಲ್ಕು ಸಾವಿರದಷ್ಟು ಒಂದಕ್ಕೊಂದು ಅಂಟಿಕೊಂಡು, ಮನೆಗಳಂತೆ ಕಾಣುವ ಕಾಂಕ್ರಿಟ್ ಕಟ್ಟಡಗಳು. ಒಂದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಎರಡು ಅಂಗನವಾಡಿಗಳನ್ನು ಈ ಕಾಲೊನಿ ಒಳಗೊಂಡಿತ್ತು. ಇಲ್ಲಿ ವಾಸಿಸುವ ಸುಮಾರು 80%ರಷ್ಟು ಜನ ಉತ್ತರಕರ್ನಾಟಕ ಹಾಗೂ ತಮಿಳುನಾಡಿನ ಹಳ್ಳಿಗಳಿಂದ ಉದ್ಯೋಗ ಅರಸಿ ವಲಸೆ ಬಂದವರು. ಈ ಕಾಲೊನಿಯ ಜನರ ಜೊತೆಯಲ್ಲಿ ಒಡನಾಡಿ ಅವರ ವೃತ್ತಿ, ಜೀವನ ಶೈಲಿ, ಸಂಪ್ರದಾಯ, ಸಂಸ್ಕೃತಿ, ದೈನಂದಿನ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ನಮ್ಮಿಂದ ಸಾಧ್ಯವಾದಷ್ಟು ಅಲ್ಲಿಯ ಜನರಲ್ಲಿ ಆರೋಗ್ಯ, ಮಾಲಿನ್ಯ, ಶುಚಿತ್ವದ ಕುರಿತು ತಿಳುವಳಿಕೆ, ಅರಿವು ಮೂಡಿಸುವುದು ನಮ್ಮ ಮುಖ್ಯ ಕರ್ತವ್ಯವಾಗಿತ್ತು. ಶಾಲಾಮಕ್ಕಳಿಗೆ ಹಾಗೂ ಅಂಗನವಾಡಿ ಪುಟಾಣಿಗಳಿಗೂ ಚಟುವಟಿಕೆ ನಡೆಸುವುದು ನಮ್ಮ ಗುರಿಯಾಗಿತ್ತು.
ಎಲ್ಲರಿಗೂ ತಿಳಿದಿರುವಂತೆ ಕಾಲೊನಿ ಜನರ ಜೀವನ ನಮ್ಮಷ್ಟು ಸುಲಭವಲ್ಲ. ಒಂದಕ್ಕೊಂದು ಅಂಟಿಕೊಂಡ ಪುಟ್ಟ ಪುಟ್ಟ ಮನೆಗಳು ದೂರದಿಂದ ನೋಡಿದರೆ ಬಣ್ಣ ಬಣ್ಣದ ಬೆಂಕಿ ಪೊಟ್ಟಣದಂತೆ ಕಾಣುತ್ತಿದ್ದವು. ಸರಿಯಾಗಿ ಸೂರ್ಯನ ಬೆಳಕೂ ಹರಿಯದ ಕೋಣೆಗಳು, ಅಲ್ಲಲ್ಲಿ ಗಬ್ಬು ನಾತ ಬೀರುವ ತೆರೆದ ಚರಂಡಿಗಳು, ಎಲ್ಲೊಂದರಲ್ಲಿ ತಮಗಿಷ್ಟ ಬಂದಂತೆ ತಿರುಗುವ ಬೀದಿ ನಾಯಿಗಳು, ಕಿರಿದಾದ ಇಕ್ಕಟ್ಟಾದ ಓಣಿಗಳು ಇವೆಲ್ಲಾ ಕಾಲೊನಿಯ ಸಾಮಾನ್ಯ ದೃಶ್ಯಗಳು. ಇದು ಕಾಲೊನಿಯ ಒಂದು ಮುಖವಾದರೆ, ಇನ್ನೊಂದೆಡೆ ಮನೆ ಮುಂದೆ ಅಚ್ಚುಕಟ್ಟಾಗಿ ಬಿಡಿಸಿರೋ ರಂಗೋಲಿ, ಯಾವಾಗಲೂ ಘಮ್ ಎನ್ನುವ ಹೆಂಗಳೆಯರ ಮುಡಿಯ ಮಲ್ಲಿಗೆ ಹೂವು, ಅರಸಿನ-ಕುಂಕುಮ ಹಚ್ಚಿ, ಕೈ ತುಂಬಾ ಗಾಜಿನ ಬಳೆ ತೊಟ್ಟು ಲಕ್ಷಣವಾಗಿ ಕಾಣುವ ನಾರೀಮಣಿಯರು. ತಮ್ಮ ಊರು ಬಿಟ್ಟು ಪರವೂರಿನಲ್ಲಿದ್ದರೂ ತಮ್ಮ ಆಚಾರ, ಪದ್ಧತಿಗಳನ್ನು ಅದೇ ರೀತಿ ಪಾಲಿಸುತ್ತಿದ್ದರು. ನಗರದೊಳಗೆ ಪುಟ್ಟ ಹಳ್ಳಿ ಜೀವನ ನೋಡಿದಂತೆನಿಸುತ್ತಿತ್ತು.
ದೀಪಾವಳಿ, ಹೋಳಿಗಳಂಥ ಹಬ್ಬ-ಹರಿದಿನಗಳಲ್ಲಿ ಇಡೀ ಕಾಲೊನಿಯೇ ಶೃಂಗಾರಗೊಂಡು ಎಲ್ಲರೂ ಒಟ್ಟಾಗಿ ಸೇರಿ ಹಾಡಿ ಸಂಭ್ರಮಿಸುತ್ತಿದ್ದರು. ಕಿಲ-ಕಿಲ ನಗುತ್ತ ಚೇಷ್ಟೆ, ತಂಟೆ ಮಾಡುತ್ತಾ ತುಂಟ ಹುಡುಗರು ಬೀದಿಯಲ್ಲೆಲ್ಲ ಓಡಾಡುತ್ತಿದ್ದರು. ಹಲವಾರು ಬಾರಿ ನನಗೆ ಅನ್ನಿಸಿದ್ದಿದೆ, ಮಿತವಾದ ಜೀವನ ಸೌಕರ್ಯವಿದ್ದರೂ ಹಲವಾರು ಕುಂದು-ಕೊರತೆಗಳ ನಡುವೆಯೂ ಈ ಜನರ ಜೀವನ ಸ್ವಾರಸ್ಯಕರವಾದುದು ಅಂತ.
ಹೀಗೆ ವಾರದಲ್ಲಿ ಎರಡು ದಿನದಂತೆ ಸುಮಾರು ಒಂದು ವರ್ಷಗಳ ಕಾಲ ಈ ಕಾಲೊನಿಗೆ ಭೇಟಿ ನೀಡುತ್ತ ಹಲವಾರು ವಿಷಯಗಳನ್ನು ನೋಡಿದ್ದೇನೆ, ಗಮನಿಸಿದ್ದೇನೆ ಹಾಗೂ ಕಂಡುಕೊಂಡಿದ್ದೇನೆ. ಇದರಲ್ಲಿ ನನ್ನ ಅತ್ಯಂತ ಗಮನ ಸೆಳೆದವರೆಂದರೆ, ಈ ಕಾಲೊನಿಯಲ್ಲಿ ವಾಸಿಸುವ ಮಹಿಳೆಯರು.
ಹೆಣ್ಣು ಸಂಸಾರದ ಕಣ್ಣು ಎನ್ನುತ್ತಾರೆ. ಒಂದು ಹೆಣ್ಣಾಗಿ ಹುಟ್ಟಿದ ಮೇಲೆ ಆಕೆ ಅನೇಕ ನೋವು-ನಲಿವುಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಇಲ್ಲಿನ ಪ್ರತಿಯೊಂದು ಹೆಣ್ಣಿನ ಬಾಳಲ್ಲೂ ಒಂದು ಕಣ್ಣೀರ ಕಥೆ ಇದೆ. ಎಷ್ಟೋ ಹೆಣ್ಣು ಮಕ್ಕಳ ಗಂಡಂದಿರು ಅವರನ್ನು ತೊರೆದು ಬೇರೆ ಹುಡುಗಿಯರನ್ನು ಮದುವೆಯಾಗಿದ್ದರು. ಸಮಾಜದ ಚುಚ್ಚು ಮಾತುಗಳ ನಡುವೆಯೂ ತಮ್ಮ ಮಕ್ಕಳಿಗಾಗಿ, ಹೊಟ್ಟೆಪಾಡಿಗಾಗಿ ದುಡಿದು ಜೀವನ ಸಾಗಿಸಲೇ ಬೇಕಿತ್ತು. ಗಂಡನ ಕುಡಿತ, ಹೊಡೆತಗಳಿಂದ ಬೇಸತ್ತು ತಮ್ಮ ಕುಟುಂಬವನ್ನು ನಿಭಾಯಿಸಲು ಹೆಣಗಾಡುತ್ತಿರುವ ಮಡದಿಯರು, ಇನ್ನೂ ಕಾಲೇಜಿಗೆ ಹೋಗುವ ವಯಸ್ಸಿನ ಯುವತಿಯರು ಮದುವೆ ಎಂಬ ಬಂಧನಕ್ಕೆ ಸಿಲುಕಿ ಜೀವನವನ್ನು ಅಡುಗೆ ಕೋಣೆಗೆ ಮಾತ್ರ ಸೀಮಿತವಾಗಿಟ್ಟುಕೊಂಡು ಬದುಕುವುದು ಅನಿವಾರ್ಯವಾಗಿತ್ತು.
ಹೀಗೆ ಪ್ರೀತಿ, ಭರವಸೆ, ವಿದ್ಯಾಭ್ಯಾಸದಿಂದ ವಂಚಿತರಾಗಿ ತಮ್ಮ ಕನಸುಗಳನ್ನು ಮೂಲೆಗಿಟ್ಟು ಬದುಕುವ ಅಸಹಾಯಕ ಜೀವಗಳು ಸಾಕಷ್ಟಿವೆ. ಆದರೂ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಜೀವನದಲ್ಲಿ ಯಶಸ್ವಿಯಾಗಬೇಕು, ತಮಗಾದ ಪರಿಸ್ಥಿತಿ ತನ್ನ ಮಕ್ಕಳಿಗೆ ಆಗಬಾರದು ಎಂಬ ಹಂಬಲ ಇವರಲ್ಲಿ ಬದುಕಿನ ಏರುಪೇರನ್ನು ಎದುರಿಸಿ ಜೀವನ ಸಾಗಿಸಲೇಬೇಕೆಂಬ ಛಲ ಮೂಡಿಸುತ್ತಿತ್ತು.
ಇಲ್ಲಿರುವ ಹಲವಾರು ಮಹಿಳೆಯರು ಹೊಟ್ಟೆಪಾಡಿಗೆ ಕಟ್ಟಡ ಕಾಮಗಾರಿ, ಮನೆಗೆಲಸಕ್ಕೆಂದು ಹೋಗುತ್ತಾರೆ. ಬಿಸಿಲಿನಲ್ಲಿ ಓಡಾಡಿದರೆ ಕಪ್ಪಾಗುತ್ತೇವೆ ಎಂಬ ಚಿಂತೆ ಇವರಿಗಿಲ್ಲ. ಜಾಸ್ತಿ ಅಲಂಕಾರ, ಆಡಂಬರ ಇಲ್ಲದಿದ್ದರೂ ದಿನಪೂರ್ತಿ ಮಳೆ-ಬಿಸಿಲು ಯಾವುದನ್ನೂ ಲೆಕ್ಕಿಸದೇ ದುಡಿಯುವ ಈ ಹೆಣ್ಣುಮಕ್ಕಳ ಅಂದಕ್ಕೇನೂ ಕೊರತೆ ಇರಲಿಲ್ಲ. ಸಬಲ ಮಹಿಳೆಯ ಕಳೆ ಇವರ ಮುಖದಲ್ಲಿ ಯಾವಾಗಲೂ ಕಾಣುತ್ತಿತ್ತು. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ಪರಿಸ್ಥಿತಿ ಎದುರಿಸಿ ಬದುಕುವುದು ಅಷ್ಟು ಸುಲಭವಲ್ಲ. ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ದಿನವಿಡೀ ಕಳೆಯುತ್ತಾ, ಮೋಸದ ಬಲೆಗೆ ಸಿಲುಕಿ, ಚಿಕ್ಕಪುಟ್ಟ ಕಷ್ಟ ಬಂದಾಗಲೂ ಎದುರಿಸಲಾಗದೇ, ಜೀವನದ ವಾಸ್ತವಕ್ಕೆ ಹೊಂದಿಕೊಳ್ಳದೇ ಜೀವನವೇ ಬೇಡ ಎಂದು ಕೊರಗುವ ಹಲವಾರು ಹೆಣ್ಣು ಮಕ್ಕಳಿಗೆ ಇವರ ಜೀವನವು ಒಂದು ಮಾದರಿಯಾಗಿದೆ. ಒಂದು ಹೆಣ್ಣಾಗಿ ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಸ್ವಾವಲಂಬನೆಯಿಂದ ಬದುಕಿನಲ್ಲಿ ಬದುಕುವ ಛಲ ಹಾಗೂ ಧೈರ್ಯ ಇದ್ದರೆ ಏನನ್ನೂ ಬೇಕಾದರೂ ಎದುರಿಸಬಹುದು ಎಂದು ಈ ಹೆಣ್ಣು ಮಕ್ಕಳಿಂದ ನಾನು ಕಲಿತುಕೊಂಡ ಜೀವನ ಪಾಠ.
ಗ್ಲೋರಿಯಾ ಡಿಸೋಜ
ಎಮ್‌ಎಸ್‌ಡಬ್ಲ್ಯೂ,ಸ್ಕೂಲ್ ಆಫ್ ಸೋಶಿಯಲ್ ವರ್ಕ್,
ರೋಶನಿ ನಿಲಯ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.