ಆ ದಿನಗಳು


Team Udayavani, Jan 20, 2017, 3:50 AM IST

girls-india-(1).jpg

ಬದುಕು ಸಣ್ಣಗೆ ಅರಳಲು ಪ್ರಾರಂಭವಾದ ದಿನಗಳು. ಅಪ್ಪನಿಗೆ ಕೆಲಸದ ಚಿಂತೆ, ಅಮ್ಮನಿಗೆ ಬೆಳಿಗ್ಗೆ ಎದ್ದು ಏನು ತಿಂಡಿ ಮಾಡಲಿ ಎಂಬ ತಲೆಬಿಸಿ ಆದರೆ ನನ್ನದು ಯಾವ ಚಿಂತೆಯೂ ಇಲ್ಲದ ಹಾಯಾದ ದಿನಗಳು. ಅದು ಬಾಲ್ಯದ ದಿನಗಳು. ಎಲ್ಲ ಮಕ್ಕಳಿಗೂ ಮುದ್ದಾದ ಬಾಲ್ಯವಿರುತ್ತದೆ ಎಂದು ಹೇಳಲಾರೆ. ಆದರೆ, ಹೀಗೆ ಅರಳುವ ಬಾಲ್ಯದ ದಿನಗಳು ಮಾತ್ರ ಯಾವತ್ತೂ ನೆನಪಿನಲ್ಲಿ ಉಳಿಯುವಂಥದ್ದು. ಸದಾ ನಗುತ್ತಿದ್ದ ಮನಸ್ಸು , ಅಜ್ಜಿಯ ತಲೆಯಲ್ಲಿರುವ ಕಪ್ಪು ಕೂದಲಿನಂತೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬೇಸರ, ಒಂದೆರಡು ಹನಿ ಕಣ್ಣೀರು ಬಿಟ್ಟರೆ ನಮ್ಮ ಎಲ್ಲಾ ದಿನಗಳು ಖುಷಿಯಿಂದಲೆ ತುಂಬಿರುತ್ತಿತ್ತು. ಆ ದಿನಗಳು ಅಂದರೆ ಹಾಗೆ ತಾನೆ, ಆಗಷ್ಟೆ ಭೂಮಿಗೆ ಬಿದ್ದ ಬೀಜದಂತೆ ಅಲ್ಲಿ ಹೊಸ ಚಿಗುರಿಗಾಗಿ ಹುಡುಕಾಟ ಹಾರಾಟ. ಎಲ್ಲವೂ ವಿಸ್ಮಯವಾಗಿ ತೋರುವ ಕ್ಷಣಗಳು, ಅಮ್ಮ ಮಾಡಿದ ಪಾಯಸಕ್ಕಾಗಿ ತಟ್ಟೆ ಹಿಡಿದು ಕಾಯುವ ತಾಳ್ಮೆ, ಕಾಡಿನ ಹಣ್ಣುಗಳೆಲ್ಲ ನಮ್ಮ ಬಾಯಲ್ಲೇ ಕರಗುತ್ತಿದ್ದುದು, ಒಂದು ದಿನ ನಾಲಿಗೆ ನೇರಳೆಯಾಗುವಷ್ಟು, ಇನ್ನೊಂದು ದಿನ ನಾಲಿಗೆ ದಪ್ಪವಾಗುವಷ್ಟು ಬೆತ್ತದ ಹಣ್ಣು ತಿನ್ನುತ್ತಿದ್ದುದು. 

ಕರೆಂಟು ಹೋದ ಸಮಯ ನಮ್ಮ ಪಾಲಿನ ಅದ್ಭುತ ಕ್ಷಣಗಳು, ಭೂತ ಬರುತ್ತದೆ ಎಂಬ ಅಣ್ಣನ ಮಾತನ್ನ ನಂಬಿ ಅಕ್ಕಿ ಚೀಲದ ಹಿಂದೆ ಬಚ್ಚಿಟ್ಟುಕೊಳ್ಳುತ್ತಿದ್ದುದು. ಕಿಟಕಿ ಎಂದರೆ ಅದೆಂಥದೊ ಭಯ. ಕಿಟಕಿಯ ಸರಳುಗಳೆಡುಕಿನಿಂದ ಭೂತ ನಮ್ಮನ್ನ ಬಾಚಿ ಎತ್ತಿಕೊಂಡು ಹೋಗುತ್ತದೆ ಎಂಬ ಭ್ರಮೆ. ಹಾಗಾಗಿ ಬೆಳಕಿಲ್ಲದ ಕೋಣೆಗೆ ಹೋಗುವುದೆಂದರೆ  ಜೀವ ಬಾಯಿಗೆ ಬರುವಷ್ಟು ಭಯ. ಇನ್ನು ಮನೆ ತುಂಬ ಹಾರಾಡುತ್ತಿದ್ದ ಮಿಂಚುಹುಳಗಳನ್ನ ಹಿಡಿದು ಗಾಜಿನ ಬಾಟಲಿಗೆ ಹಾಕಿ ಅಪ್ಪನ ಹಳೆಯ ಬ್ಯಾಟರಿಯಂತೆ ಅದೂ ಒಂದಿಷ್ಟು ಬೆಳಕು ಕೊಡುವುದನ್ನ ಕಂಡು ನಾವೇನೋ ಸಾಧನೆ ಮಾಡಿದ್ದೇವೆ ಎಂದು ಹೆಮ್ಮೆ ಪಡುತ್ತಿದ್ದೆವು. ಬೆಳದಿಂಗಳ ರಾತ್ರಿಗಳನ್ನ ನಾವು ಕಳೆಯುತ್ತಿದ್ದುದು ಅಂಗಳದಲ್ಲೇ. ಹಾಲು ಬೆಳಕಿನಲ್ಲಿ ಕುಣಿಯುತ್ತಿದ್ದೆವು.
 
ಅಂಗನವಾಡಿ ಟೀಚರ್‌ ಕಲಸಿಕೊಡುತ್ತಿದ್ದ ಉಪ್ಪಿಟ್ಟಿನ ಉಂಡೆಯ ಸವಿ ಇನ್ನೂ ನಾಲಿಗೆಯಲ್ಲೇ ಉಳಿದಿದೆ. ಹಾಗೆಯೇ ಅಣ್ಣನ ಹೆಜ್ಜೆಗಳನ್ನು ಹಿಂಬಾಲಿಸುತ್ತ ಶಾಲೆಯ ಮೆಟ್ಟಿಲು ಹತ್ತಿದ್ದು, ಮೊದಲ ದಿನ ಅಣ್ಣನೊಂದಿಗೆ ನಾಲ್ಕನೇ ಕ್ಲಾಸಿನಲ್ಲಿ ಕುಳಿತು ಬೆರಗುಗಣ್ಣಿನಿಂದ ನೋಡಿದ್ದು, ಅಣ್ಣನ ಬುತ್ತಿಯ ತಟ್ಟೆಯಲ್ಲೇ ಹಂಚಿ ತಿಂದದ್ದು.  ಶಾಲೆ ಸೇರಿದ ಮೇಲೆ ಅ, ಆ, ಇ , ಈ ಕಲಿಯುವ ಸಂಭ್ರಮ, ಟೀಚರ್‌ ಬೆನ್ನ ಹಿಂದೆಯೆ ತಿರುಗುತ್ತಿದ್ದುದು, ಬಿಡಿಸಿದ ಚಿತ್ರಕ್ಕೆ ಯಾವ ಬಣ್ಣ ತುಂಬಲಿ ಎಂಬ ಆಯ್ಕೆಯೇ ಬಹು ಕಷ್ಟಕರವಾಗಿದ್ದು, ಗೆಳೆಯರ ಹುಟ್ಟುಹಬ್ಬಕ್ಕೆ ಸಿಗುತ್ತಿದ್ದ ಚಾಕಲೇಟನ್ನ ಕ್ಲಾಸಿನಲ್ಲಿ  ನೋಡಿ ನೋಡಿ ಇಟ್ಟು ಮನೆಗೆ ಬಂದು ಅಣ್ಣನೆದುರೇ ತಿನ್ನುತ್ತಿದ್ದುದು.

ನಮ್ಮ ನಿಜವಾದ ಸಂತೋಷ ಎಂದರೆ ಗೆಳತಿ ಹುಟ್ಟುಹಬ್ಬಕ್ಕೆ ಚಾಕಲೇಟ್‌ ಹಂಚಲು ನನ್ನನ್ನೇ ಆಯ್ಕೆ ಮಾಡಿಕೊಂಡಾಗ, ಟೀಚರ್‌ ಬೋರ್ಡಿನ ಮೇಲೆ ಲೆಕ್ಕ ಬರೆಯಲು ನನ್ನನ್ನೇ ಕರೆದಾಗ, ಗೆಳೆಯರು ತಂದು ಕೊಡುತ್ತಿದ್ದ ಹುಣಸೆ ಕಾಯಿ, ಮಾವಿನ ಕಾಯಿಯನ್ನ  ಕದ್ದು ತಿನ್ನುವಾಗ.  ಚಿಕ್ಕಪ್ಪನೊಂದಿಗಿನ ಸಂಜೆಯ ಸುತ್ತಾಟ. ಆ ಸೂರ್ಯ ಕಂತುವ ಹೊತ್ತಿನ ನಡಿಗೆ ಮರೆಯಲಾರದ್ದು. ಚಿಕ್ಕಪ್ಪ ಕೊಡಿಸುತ್ತಿದ್ದ ಐಸ್‌ಕ್ರೀಮ್‌ನ್ನು ಚಪ್ಪರಿಸಿ ತಿಂದ ನೆನಪು. ಹೀಗೆ ಪುಟ್ಟ ಪುಟ್ಟ ಖುಷಿಗಳಿಂದಲೇ ತುಂಬಿದ್ದ ಬದುಕು ಅಲ್ಲಲ್ಲಿ ಸಿಗುವ ಪೆಟ್ಟು , ಅಳು ಬೇಜಾರಿಗೆ ತುಂಬ ಹೊತ್ತು ಮರುಗುತ್ತಿರಲಿಲ್ಲ. 

ಶಾಲೆಯ ಆಟಗಳಿಗೆಲ್ಲ ಲೆಕ್ಕವೇ ಇಲ್ಲ. ಮನೆಯಾಟ ಆಡುವಾಗ ನಮಗಿಂತ ಸಣ್ಣ ಮಕ್ಕಳಿಗೆ ನಾವೇ ಅಪ್ಪ ಅಮ್ಮ ಆಗಿಬಿಡುತ್ತಿದ್ದೆವು. ಗೆಳೆಯರ್ಯಾರು ಸಿಗದಿದ್ದಾಗ ಆಟವಾಡಲು ಅಜ್ಜನೂ ಬೇಕು. ತಲೆಗೊಂದು ಮಂಡಾಳೆ ಹಾಕಿಕೊಂಡು ಸೊಂಟ ತಿರುಗಿಸುತ್ತ ಬುಟ್ಟಿ ಹೊತ್ತುಕೊಂಡು ಮೀನು ಮಾರುವ ಹೆಂಗಸಾಗುತ್ತಿದ್ದೆ. “ಮೀನು ಬೇಕಾ? ಮೀನು ಬೇಕಾ?’ ಎಂದು ಅಜ್ಜನನ್ನು ಮೀನು ಕೊಳ್ಳುವಂತೆ  ಪುಸಲಾಯಿಸುತ್ತಿದ್ದೆ. “ಎಂತ ಮೀನ್‌ ಇತ್ತೆ’ ಎಂದು ಅಜ್ಜ ಪ್ರಶ್ನಿಸುತ್ತಿದ್ದರು. “ಬಂಗಡೆ, ಬೈಗೆ, ನಂಗು’ ಎಂದು ನನಗೆ ಗೊತ್ತಿದ್ದ ಹೆಸರನ್ನೆಲ್ಲ ಹೇಳುತ್ತಿದ್ದೆ. ಅಜ್ಜನಿಗೆ ನನಗೆ ಅಷ್ಟೆಲ್ಲ ಮೀನಿನ ಹೆಸರು ಗೊತ್ತಿದೆಯಲ್ಲ ಎಂಬುದೇ ಅಚ್ಚರಿಯ ವಿಷಯ. ಅಜ್ಜ ನನ್ನ ಮೀನು ವ್ಯಾಪಾರಕ್ಕಿದ್ದ ಏಕೈಕ ಗಿರಾಕಿ. ಅಜ್ಜ ನಾ ಹೇಳಿದ ದರವನ್ನ ಯಾವತ್ತು ಕೊಟ್ಟವರೇ ಅಲ್ಲ. ಅಮ್ಮನ ಸೀರೆಯನ್ನ ಕದ್ದು ಉಟ್ಟು ಸಿಕ್ಕಿಬಿದ್ದ ಮೇಲೆ ಸೀರೆಯುಟ್ಟುಕೊಂಡೆ ಮೀನು ವ್ಯಾಪಾರಕ್ಕೆ ಬರುತ್ತಿದ್ದೆ. ಅಜ್ಜ ದೃಷ್ಟಿ ತೆಗೆಯುತ್ತಿದ್ದರು. ಅಕ್ಷರ ಕಲಿತ ಮೇಲಂತೂ ಮನೆಯ ಗೋಡೆಯ ತುಂಬ ನನ್ನ ಅಕ್ಷರಗಳದ್ದೆ ಸಾಲು. ಮನೆಯಲ್ಲಿ ಎಲ್ಲರೂ ನನ್ನ ಸ್ಲೇಟಿನಲ್ಲಿ ಬರೆಯಬೇಕೆಂದು ಒತ್ತಾಯಿಸುತ್ತಿದ್ದೆ. ಅಜ್ಜ ಅಜ್ಜಿಯ ಹೆಸರನ್ನ ಬಳಪ ಹಿಡಿದು ಬರೆಸುತ್ತಿದ್ದೆ.
 
ಅಂದು ಕಡಿದ ತೆಂಗಿನ ಮರದಡಿಯಲ್ಲಿ  ಸಿಕ್ಕಿ ಬಿದ್ದು ಗಾಯಗೊಂಡಿದ್ದ ಹಕ್ಕಿ ಇಂದಿಗೂ ಕನಸಿನಲ್ಲಿ ಬಂದು ಧನ್ಯವಾದ ಹೇಳುತ್ತದೆ ತನ್ನನ್ನ ಬದುಕಿಸಿದ್ದಕ್ಕೆ.  ಊರಿನ ಜಾತ್ರೆಗೆ ಬರುವ ಬಿಳಿ ಮೂತಿಯ ಗೊಂಬೆಯನ್ನ ಆಸೆ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದು, ಬಸ್ಸಿನಲ್ಲಿ ಹೋಗುವಾಗ ಕಿಟಕಿ ಪಕ್ಕದ ಸೀಟೇ ಬೇಕು ಎಂದು ಅಣ್ಣನೊಂದಿಗೆ  ಗುದ್ದಾಡಿದ ಕ್ಷಣಗಳು, ಗೆಳತಿಯ ಗೊಂಬೆಗಾಗಿ ಅಂಗಿ ಹೊಲಿಯುತ್ತಿದ್ದುದು, ನಮಗಿಲ್ಲದ ಶೃಂಗಾರ ಅದಕ್ಕೆ. ನಾವು ಮೀನು ಹಿಡಿದ ತೋಡು- ತೊರೆ. ನಮ್ಮನ್ನ ಜೋಪಾನ ಮಾಡಿದ ಶಾಲೆಯ ಕಾಲು ದಾರಿಯನ್ನಂತೂ ಮರೆಯುವಂತೆಯೇ ಇಲ್ಲ. ದಾರಿಯುದ್ದಕ್ಕೂ ಸಿಗುತ್ತಿದ್ದ ಕಾಡು ಹಣ್ಣುಗಳು, ಅದನ್ನ ಕೊಯ್ಯುವುದಕ್ಕಾಗಿಯೆ ಒಬ್ಬರ ಮೇಲೊಬ್ಬರು ಮುಗಿ ಬೀಳುತ್ತಿದ್ದುದು, ದಾರಿ ತುಂಬ ಮುಗಿಯದಷ್ಟು ಮಾತು, ಕೆಲವೊಮ್ಮೆ ಜಗಳ. ನಮ್ಮ ಶಿಕ್ಷಕರೂ ನಮ್ಮ ಜೊತೆಗೆ ನಡೆದು ಬರುತ್ತಿದ್ದರು. ಮಳೆಗಾಲದ ನೆರೆಯಲ್ಲೂ ಬೇಸಿಗೆಯ ಧಗೆಯಲ್ಲೂ ನಾವು ಆ ದಾರಿಯಲ್ಲೇ ನಡೆಯಬೇಕಿತ್ತು.
 
ಹೀಗೆ ಬದುಕಿನ ಭಾಗಾಕಾರದಲ್ಲಿ ಬಾಲ್ಯ ಎಷ್ಟು ದೊಡ್ಡ ಸಂಖ್ಯೆಯಿಂದಲೂ ಸಹ ಭಾಗಿಸಲ್ಪಡುವುದಿಲ್ಲ. ನೆನಪಿನ ಶೇಷ ಯಾವತ್ತು ಮನಸ್ಸಿನಲ್ಲಿಯೇ ಉಳಿಯುತ್ತದೆ. ಬದುಕಿನ ಎಲ್ಲ ಹಂತಗಳೂ ಅದರಷ್ಟಕ್ಕೆ ಅದು ಚೆನ್ನಾಗಿಯೇ ಇರುತ್ತದೆ. ಮುಗ್ಧತೆ, ಮಕ್ಕಳಾಟಿಕೆ ಇದೆಲ್ಲ ಬಾಲ್ಯದಲ್ಲಿ ಮಾತ್ರ ಸಾಧ್ಯ.  ಚಿಂತೆ, ಸಮಸ್ಯೆ, ನೋವು ಇದನ್ನೆಲ್ಲ ಅನುಭವಿಸುವ ಶಕ್ತಿ ಇಲ್ಲದ ನಾವು ಮಾತ್ರ ಹಳೆಯ ಬದುಕನ್ನ ನೆನೆದು ಅದೇ ಚೆನ್ನಾಗಿತ್ತೆಂದು ಮರುಗುತ್ತೇವೆ. ಇಡೀ ಬಾಲ್ಯವೇ ಕೈಯ್ಯಲ್ಲಿದ್ದಾಗ ವಿಲಿವಿಲಿ ಒದ್ದಾಡಿ ನುಸುಳಿಕೊಂಡು ಸಮುದ್ರಕ್ಕೆ ಹಾರಿದ ಮೀನನ್ನ ಮಗು ಮತ್ತೆ ಬೇಕೆಂದು ಹಟ ಮಾಡಿದಂತಾಗುತ್ತದೆ.  
                         
– ದಿಶಾ ಗುಲ್ವಾಡಿ
ತೃತೀಯ ಬಿಎಸ್ಸಿ
ಭಂಡಾರ್ಕಾಸ್‌ ಕಾಲೇಜು, ಕುಂದಾಪುರ 

ಟಾಪ್ ನ್ಯೂಸ್

1-sham

Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್‌ ಮೂಲದವರು

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ

Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್‌ ವಶದಲ್ಲಿ ವ್ಯಕ್ತಿ ಕೊ*ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-sham

Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್‌ ಮೂಲದವರು

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

puttige-6-

Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.