ಬೇಕಾಗಿದ್ದಾರೆ…ಮರಗಳಿಗೆ ಕಲ್ಲೆಸೆಯುವ ಮಕ್ಕಳು !
Team Udayavani, May 5, 2017, 3:13 PM IST
ಮೊಬೈಲ್, ಕಂಪ್ಯೂಟರ್‌ಗಳಲ್ಲೇ ಜಗತ್ತನ್ನು ಅರಸುತ್ತ ಸುತ್ತುವ ಮಕ್ಕಳು ತಮ್ಮ ಕಾಲ ಕೆಳಗಿನ ಭೂಮಿಯನ್ನು ಮರೆಯುವ ದಿನಗಳಿವು. ಇನ್ನು ನಮಗೋ, ಮಕ್ಕಳಿಗೆ ಪ್ರಪಂಚದ ಬುದ್ಧಿಶಕ್ತಿಯನ್ನೆಲ್ಲಾ ಒಂದೇ ಗುಟುಕಿಗೆ ಕುಡಿಸಿ ಅವರನ್ನು ಬೆಳೆಸುವ ಆಸೆ. ಕಣ್ಣಿಗೆ ಪಟ್ಟಿ ಕಟ್ಟಿದ ಕುದುರೆಯಂತೆ ಮಕ್ಕಳ ಓಟ ಶಾಲೆಯಿಂದ ಮನೆಗೆ, ಮನೆಯಿಂದ ಇನ್ಯಾವುದೋ ಕ್ಲಾಸಿಗೆ, ಇದರ ನಡುವಿನ ಮಣ್ಣಹಾದಿ ಎಲ್ಲೋ ಮರೆತೇಹೋಗುತ್ತಿದೆ. ಮರಗಳಿಗೆ ಕಲ್ಲೆಸೆಯುವ ಮಕ್ಕಳು ಮಾಯವಾಗುತ್ತಿದ್ದಾರೆ.
ತೋಟದ ಬದಿಯಲ್ಲಿರುವ ಮರದ ಹತ್ತಿರದಿಂದ ಅದೇನೋ ಸದ್ದು ಕೇಳಿಬರುತ್ತಿತ್ತು. ಮನೆಯೊಳಗಿನ ಮುಖಮಂಟಪದಲ್ಲಿ ಸುಖಾಸೀನಳಾಗಿ ಆಗಷ್ಟೇ ಕೈಯಲ್ಲಿ ದಿನಪತ್ರಿಕೆ ಹಿಡಿದಿದ್ದೆ. ಅದೇನೆಂದು ಎದ್ದು ಹೋಗಿ ನೋಡದಷ್ಟು ಬೇಸಿಗೆಯ ಉರಿಬಿಸಿಲಿನ ಜೊತೆ ಸೋಮಾರಿತನವೂ ಜುಗಲ್ಬಂಧಿ ನಡೆಸಿದ್ದವು. ಕಣ್ಣು , ಪೇಪರಿನ ಅಕ್ಷರಗಳತ್ತ ತಿರುಗಿದರೆ ಕಿವಿ ಆ ಸದ್ದಿನತ್ತವೇ ಮುಖ ಮಾಡಿತ್ತು. ಮಿದುಳು ಕೂಡಾ ಕಣ್ಣಿಗೆ ಸಹಕರಿಸುವ ಬದಲು ಅದೇನಿರಬಹುದು, ಎಲ್ಲೋ ಕೇಳಿದಂತಿದೆಯಲ್ಲ, ಅಂಥಾದ್ದೇ ಸದ್ದು ಎಂದು ಮೆಮೊರಿಯನ್ನು ರಿವೈಂಡ್ ಮಾಡತೊಡಗಿದ್ದಷ್ಟೇ. ಅಕ್ಷರಗಳು ಬರೀ ಅಕ್ಷರಗಳಾಗಿಯೇ ಕಾಣತೊಡಗಿದವಲ್ಲದೇ ಬೇರಿನ್ನೇನೂ ಅರ್ಥ ಹಚ್ಚಿಕೊಳ್ಳಲೇ ಇಲ್ಲ.
ಹಾಂ… ಇದೇ ಸದ್ದು… ಎಷ್ಟು ದಿನಗಳಾಯಿತು ಕೇಳದೇ… ಈಗ ಕೇಳಿ ಬರುತ್ತಿದೆ ಎಂದರೆ ಶುಭ ಸೂಚನೆಯೇ. ಮತ್ತೆ ತಿರುಗಿ ಮರದತ್ತ ನೋಡಿದೆ. ಅದರ ಎಲೆಗಳು ಗಾಳಿಯ ಜೊತೆ ಮಾತನಾಡುವುದರಲ್ಲೇ ಮಗ್ನ. ಗೊಂಚಲು ಗೊಂಚಲಾಗಿ ನೇತಾಡುತ್ತಿರುವ ಕಾಯಿಗಳು ತಮ್ಮ ಭಾರಕ್ಕೆ ತಾವೇ ತೂಗಿಕೊಳ್ಳುತ್ತಿದ್ದವು. ನೋಟವನ್ನು ಇನ್ನಷ್ಟು ಚೂಪುಗೊಳಿಸಿದೆ. ಅದೇನೋ ವೇಗವಾಗಿ ಅವುಗಳ ನಡುವಿನಿಂದ ವಸ್ತುವೊಂದು ಹಾರಿ ಆಗಿನಿಂದಲೂ ಕೇಳಿದ ಸದ್ದು ಮತ್ತೂಮ್ಮೆ ಕೇಳಿಸಿತು. ನನ್ನ ತುಟಿಗಳಲ್ಲಿ ನಸುನಗುವೊಂದು ಈಗಲೇ ಮೂಡಬಹುದೇ ಎಂಬ ಸಂಶಯದಿಂದ ಬಾಗಿಲಲ್ಲೇ ನಿಂತು ಹೊರಗಿಣುಕುತ್ತಿತ್ತು.
ಮತ್ತೂಮ್ಮೆ ಕೇಳಿದ ಸದ್ದಿನೊಂದಿಗೆ ಗಾಳಿ ಚಾಡಿಕೋರನಂತೆ ಬಿಚ್ಚಿಟ್ಟ ರಹಸ್ಯದ ಮಾತುಗಳು ಕಿವಿ ಸೇರಿದವು. ಕೈಯಲ್ಲಿದ್ದ ಪೇಪರ್ ಅನಾಯಾಸವಾಗಿ ಟೀಪಾಯಿಯ ಮೇಲೆ ಬಿದ್ದು ಕಾಲುಗಳು ಸದ್ದಿನ ಬೆನ್ನುಬಿದ್ದವು.
ಇಂಥಾದ್ದೇ ಸದ್ದು… ಮೊದಲೂ ಕೇಳಿದ, ನೋಡಿದ, ಆಡಿದ ನೆನಪು. ಬೇಸಿಗೆ ಬಂತೆಂದರೆ ಸಾಕು, ಶಾಲೆಗೆ ಸಿಕ್ಕುವ ರಜಾದೊಂದಿಗೆ ಅಜ್ಜನ ಮನೆಗೆ ಹೋಗುವ ಪರವಾನಗಿಯೂ ಸಿಕ್ಕಿ ಮೋಜಿನ ದಿನಗಳ ಕನಸುಗಳು ಸುರುಳಿ ಸುತ್ತಿಕೊಳ್ಳುತ್ತಿದ್ದವು. ಒಬ್ಬರಲ್ಲ ಇಬ್ಬರಲ್ಲ ಐದು ಜನ ಮೊಮ್ಮಕ್ಕಳ ಸೈನ್ಯವಿತ್ತು ನಮ್ಮದು. ಆಗಿನ್ನೂ ತಂಪಾಗಿಯೇ ಇರುತ್ತಿದ್ದ ಕೊಡಗನ್ನು ಬಿಟ್ಟು ಅಜ್ಜನೂರಿಗೆ ಬರುವ ನಾವು ಇಲ್ಲಿನ ಡ್ರೆಸ್ ಕೋಡನ್ನು ಅನುಸರಿಸುತ್ತಿದ್ದೆವು. ಸ್ಲಿàವ್ ಲೆಸ್ ಪೆಟಿಕೋಟ್ ನನ್ನ ಉಡುಗೆಯಾದರೆ ಉಳಿದ ನಾಲ್ಕು ಜನ ಅಣ್ಣಂದಿರು ಲಂಗೋಟಿಧಾರಿಗಳು. ಕೈಯಲ್ಲೊಂದು ಕೋಲು, ನಮ್ಮ ಆಯುಧವಾಗಿ ಉಪಯೋಗವಾಗುತ್ತಿದ್ದರೆ ನಾವು ಸಂಗ್ರಹಿಸಲು ಹೊರಟ ವಸ್ತುಗಳಿಗನುಗುಣವಾಗಿ ಚೀಲದ ಉದ್ದಗಲಗಳು ವ್ಯತ್ಯಾಸಗೊಳ್ಳುತ್ತಿದ್ದವು.
ನಮ್ಮ ತೋಟದಾಚೆಯ ಮನೆಯವರ ಮಾವಿನಮರ ನಮ್ಮ ದಿನನಿತ್ಯದ ಗಮ್ಯ. ಬೆಳಕು ಮೂಡುವ ಮೊದಲೇ ಅಲ್ಲಿಗೆ ದಾಳಿಯಿಡಬೇಕಿತ್ತು. ನಮ್ಮಂತೆ ಬರುವ ಇನ್ನೂ ಅನೇಕ ಮಕ್ಕಳ ಪೈಪೋಟಿಯಿಂದ ಬಚಾವಾಗಿ ಚೀಲ ತುಂಬುವಷ್ಟು ಮಾವಿನಹಣ್ಣುಗಳನ್ನೋ, ಕಾಯಿಗಳನ್ನೋ ಸಂಗ್ರಹಿಸಬೇಕಿತ್ತು. ಮರ ಹತ್ತುವ ವಿದ್ಯೆ ಎಲ್ಲರಿಗೂ ಬರುತ್ತಿದ್ದರೂ ಅನ್ಯರ ಮರ ಹತ್ತುವುದು ಅಪರಾಧವಷ್ಟೇ. ಆದರೆ ಮರಕ್ಕೆ ಕಲ್ಲು ಹೊಡೆದಾಗ ಬಿದ್ದ ಹಣ್ಣುಗಳಂತೂ ನಮ್ಮ ಸ್ವಂತದ್ದೇ ಎಂಬ ವಿಶಾಲ ಭಾವನೆ ನಮ್ಮದು. ತೂಗಾಡುತ್ತಿದ್ದ ಮಾವಿನಕಾಯಿಗಳು ಇವುಗಳನ್ನು ಒಪ್ಪುತ್ತಿದ್ದವು. ಮರ ತಾನಾಗಿಯೇ ಉದುರಿಸಿದ ಹಣ್ಣುಗಳು ಎಲ್ಲರ ಹಕ್ಕಾದರೇ ಕಲ್ಲು ಹೊಡೆದಾಗ ಬಿದ್ದ ಹಣ್ಣು ಕಲ್ಲು ಹೊಡೆದವನ ಸ್ವಂತ ಆಸ್ತಿಯಾಗಿ ಅದನ್ನಾತ ಯಾರಿಗೆ ಬೇಕಾದರೂ ದಾನ ಕೊಡುವ ಧನಿಯಾಗುತ್ತಿದ್ದ.
ಕಲ್ಲು ಹೊಡೆಯುವುದು ಎಂದರೇನು ಬರೀ ಪೋಲಿ ಮಕ್ಕಳಾಟವಲ್ಲ. ಅದಕ್ಕೆ ಗುರಿಯಿಡುವ ನೈಪುಣ್ಯದೊಂದಿಗೆ ಅದೃಷ್ಟವೂ ಜೊತೆಗೂಡಬೇಕಿತ್ತು ಎಂಬುದು ನಮ್ಮ ಬಲವಾದ ನಂಬಿಕೆ. ಅದೊಂದು ಯುದ್ಧ ಸನ್ನಾಹಕ್ಕಿಂತ ಕಡಿಮೆಯದ್ದೇನಾಗಿರಲಿಲ್ಲ. ದಾರಿಯಲ್ಲಿ ಹೋಗುವಾಗಲೇ ತೂಕವೆನಿಸಿದ ಪುಟ್ಟ ಕಲ್ಲುಗಳನ್ನು ಆಯ್ದು ಜೊತೆಗೂಡಿಸಿ ಹೊತ್ತೂಯ್ಯಬೇಕಿತ್ತು. ಕೆಲವು ಎಲೆಗಳನ್ನು ಕಿಸೆಯಲ್ಲಿಟ್ಟುಕೊಳ್ಳುವುದು ಅದೃಷ್ಟವನ್ನು ತಂದುಕೊಡುವುದರ ಜೊತೆಗೆ ಬೇರೆಯವರ ಕಲ್ಲಿಗೆ ಹಣ್ಣು ಬಾಳದಂತೆ ಮಾಡುತ್ತದೆ ಎಂಬುದು ನನ್ನಣ್ಣನ ಅಂಬೋಣ. ಇನ್ನೊಬ್ಬ ಅಣ್ಣ ತನ್ನ ಗುರಿ ನೋಡಿ ಹೊಡೆಯುವ ಚಾಕಚಕ್ಯತೆಯ ಬಲದ ಜೊತೆ ತನಗೆ ಮಾತ್ರ ಬರುವ ಅಜ್ಜ ಹೇಳುತ್ತಿದ್ದ ಕೆಲವು ಸಂಸ್ಕೃತ ಮಂತ್ರಗಳನ್ನು ಕಣ್ಣು ಮುಚ್ಚಿ ಮಣಮಣಿಸಿ ಕಲ್ಲು ಹೊಡೆಯುವ ಅಭ್ಯಾಸವನ್ನು ರೂಢಿಸಿಕೊಂಡಿದ್ದ. ಮತ್ತೂಬ್ಬ ಆ ದಿನ ಮೊದಲು ಕಂಡ ವಸ್ತು ಪ್ರಾಣಿ, ಕೇಳಿದ ಹಕ್ಕಿಗಳ ಶಬ್ದಗಳ ಮೇಲೆ ತನಗೆ ಹಣ್ಣೆಷ್ಟು ದೊರೆಯಬಹುದಿಂದು ಎಂಬುದನ್ನು ನಿರ್ಣಯ ಮಾಡುತ್ತಿದ್ದ. ಕಲ್ಲು ಬಿಸುಡುವ ಮೊದಲು ಮರವನ್ನು ಮುಟ್ಟಿ ನಮಸ್ಕರಿಸಿ ಹೆಚ್ಚು ಹಣ್ಣು ಕೊಡು ಮರವೇ ಎಂದು ಬೇಡಿಕೊಳ್ಳುವುದು ಮೊದಲ ಕೆಲಸವಾಗಿತ್ತು. ಅಷ್ಟಾದರೂ ಹಣ್ಣು ಹೆಚ್ಚು ಸಿಕ್ಕಿದಂದು ನಮ್ಮ ನಮ್ಮನ್ನು ಹೊಗಳಿಕೊಳ್ಳುವುದೇ ಅಧಿಕವಿತ್ತು.
ಎಲ್ಲಿ ಸೀಬೆಯಿದೆ? ಎಲ್ಲಿ ನೇರಳೆ, ಎಲ್ಲಿ ಹಲಸು, ಇನ್ನೆಲ್ಲಿ ಮಾವು, ಪುನರ್ಪುಳಿ, ಎಂದು ಪತ್ತೆ ಹಚ್ಚುತ್ತಿದ್ದೆವು. ಕಾಡು ಹಣ್ಣುಗಳಿಗಾಗಿ ಅಲೆದಾಟವೂ ಇರುತ್ತಿತ್ತು. ಮೈಕೈಗೆ ಗಾಯವಾದರೆ ಯಾವ ಸೊಪ್ಪಿನ ರಸ ಹಾಕಬೇಕು, ಯಾವ ಸೊಪ್ಪನ್ನು ಹಾಗೆಯೇ ತಿನ್ನಬಹುದು? ಯಾವ ಸೊಪ್ಪು ಅಥವಾ ಗಿಡ ಮುಟ್ಟಿದರೆ ತುರಿಸುತ್ತದೆ ಎಂದೆಲ್ಲಾ ಈ ಅಲೆದಾಟದಲ್ಲೇ ಕಲಿತುಬಿಡುತ್ತಿದ್ದೆವು. ಆಲದ ಉದ್ದ ಬಿಳಲಿಗೆ ಸಣ್ಣ ಮರದ ತುಂಡೊಂದನ್ನು ಅಡ್ಡ ಕಟ್ಟಿ ನಾವೇ ಮಾಡಿಕೊಂಡಿದ್ದ ಉಯ್ನಾಲೆಯಿಂದ ಅಣ್ಣ ಜಾರಿ ಬಿದ್ದು ಕಾಲಿಗೆ ಆಳವಾದ ಗಾಯ ಮಾಡಿಕೊಂಡಿದ್ದ. ಆ ಗಾಯವನ್ನು ಹೊತ್ತೇ ಕೆಲವು ಸೊಪ್ಪನ್ನು ಕಲ್ಲಿಗೆ ಜಜ್ಜಿ ರಸ ತೆಗೆದು ಸೊಪ್ಪಿನ ಸಮೇತ ಗಾಯಕ್ಕೆ ಕಟ್ಟಿಕೊಂಡು ನೋವು ನಿವಾರಿಸಿಕೊಂಡಿದ್ದ. ಇಂತಹ ಸಣ್ಣಪುಟ್ಟ ವಿದ್ಯೆಗಳು ನಮ್ಮನ್ನು ಮನೆಯವರ ಬಯುಳದಿಂದ ರಕ್ಷಿಸಿ ಮತ್ತೆ ಕಾಡಿನ ಕಡೆಗೆ ಅಲೆಯುವಂತೆ ಮಾಡುತ್ತಿತ್ತು. ಓಹ್… ಎಲ್ಲಿ ಕಳೆದುಹೋಗಿದ್ದೆ.. ಮತ್ತದೇ ಸದ್ದು ಕಿವಿ ತುಂಬುತ್ತಿತ್ತು.
ಕರೆದೊಯ್ದ ಕಾಲುಗಳು ನಿಂತಲ್ಲಿ ನಮ್ಮ ತೋಟದ ಬೇಲಿ ಬದಿಯ ಮಾವಿನ ಮರವಿತ್ತು. ಅಲ್ಲಿಲ್ಲಿ ಚದುರಿದಂತೆ ಆಗಷ್ಟೇ ಬಿದ್ದ ಮಾವಿನೆಲೆಗಳು ತಮಗೇನೂ ಗೊತ್ತಿಲ್ಲ ಎಂಬಂತೆ ಮೌನವಾಗಿದ್ದವು. ತೋಟದೊಳಗೂ ಒಂದು ರೀತಿಯ ಕೃತಕ ಮೌನ. ತೋಟದ ಬೇಲಿಗೆ ಒರಗಿಸಿಟ್ಟಿದ್ದ ಸೈಕಲ್ಲುಗಳು ಒಳಗಿನ ಮಕ್ಕಳ ಸಂಖ್ಯೆಯನ್ನು ಊಹಿಸುವಂತೆ ಮಾಡಿತ್ತು.
“ಯಾರಿದ್ದೀರಾ ಒಳಗೆ? ಬನ್ನಿ ಇತ್ಲಾಗಿ’ ಎಂಬ ಸ್ವರ ಅವರಾಗಿ ಮಾಡಿಕೊಂಡ ಬೇಲಿಯ ನಡುವಿನ ಜಾಗದಿಂದ ಒಬ್ಬೊಬ್ಬರಾಗಿ ಹೊರ ಬರುವಂತೆ ಮಾಡಿತು. ನನ್ನ ಮುಖದಲ್ಲಿ ಸಿಟ್ಟನ್ನು ನಿರೀಕ್ಷಿದ್ದ ಅವರಿಗೆ ನಗು ಕಂಡು ಅಚ್ಚರಿಯಾಗಿದ್ದಂತೂ ಸತ್ಯ. “ಎಷ್ಟು ಸಿಕ್ಕಿತು ಮಾವಿನಕಾಯಿ?’ ನನ್ನ ಕುತೂಹಲದ ಪ್ರಶ್ನೆಗೆ ಅಂಗೈಗಳು ಅರಳಿಕೊಂಡವು. ಕೆಲವು ಕೈಗಳು ಕಿಸೆಯೊಳಗಿಳಿದು ಹೊರಬಂದವು.
“”ಆಯ್ತಾ ಎಲ್ಲಾ ಹೆಕ್ಕಿದ್ರಾ…”
“”ಇಲ್ಲ, ಇನ್ನೂ ಒಂದೆರಡು ಇದೆ” ಎಂಬ ಅವರ ಸ್ವರದಲ್ಲೀಗ ಹೆದರಿಕೆಯಿರಲಿಲ್ಲ.
“”ಬೇಲಿ ಹಾಳು ಮಾಡಿ ಒಳಗೆ ಹೋಗ್ಬೇಡಿ. ಆ ಕಡೆ ದಾರಿಯಿದೆ. ಅಲ್ಲೇ ಹೋಗಿ ಹೆಕ್ಕಿ”ಹೋಗುವ ಮೊದಲು ತಿರುಗಿ ನಿಂತ ಹುಡುಗನ ಮುಖದಲ್ಲಿ ನಾಳೆಯೂ ಬರಬಹುದಾ ಎಂಬ ಪ್ರಶ್ನೆಯಿದ್ದಂತಿತ್ತು. “”ನಾನು ಕೈಬೀಸಿ ನಾಳೆ ಬನ್ನಿ” ಎಂದೆ.
ನಕ್ಕ ಮಕ್ಕಳ ಜೊತೆ ಮಾವಿನ ಮರವೂ ನಕ್ಕಂತೆ ಅಲುಗಾಡಿತು.ಬಹುಶಃ ಮಾವಿನ ಮರವೂ ಕಾದಿರಬಹುದು ಮಕ್ಕಳ ಕಲ್ಲೇಟಿಗೆ. ಅವರ ಪಿಸು ದನಿಗೆ, ಅವರ ಸ್ಪರ್ಶಕ್ಕೆ.ಈಗಲೂ ಗಿಡಗಳು ಹೂವರಳಿಸುತ್ತವೆ, ಮರಗಳು ಹಣ್ಣು ಬಿಡುತ್ತವೆ, ನದಿಗಳು ಹರಿಯುತ್ತವೆ, ಹಕ್ಕಿಗಳು ಚಿಲಿಪಿಲಿಗುಟ್ಟುತ್ತವೆ, ಸಮುದ್ರ ಭೋರ್ಗರೆಯುತ್ತದೆ. ಇವನ್ನೆಲ್ಲ ವಿಶೇಷವೆಂದು ಗ್ರಹಿಸುವ ನಮ್ಮ ಕುತೂಹಲವಷ್ಟೇ ಕಳೆದುಹೋಗಿದ್ದು.
ಮೊಬೈಲ್, ಕಂಪ್ಯೂಟರ್‌ಗಳಲ್ಲೇ ಜಗತ್ತನ್ನು ಅರಸುತ್ತ ಸುತ್ತುವ ಮಕ್ಕಳು ತಮ್ಮ ಕಾಲ ಕೆಳಗಿನ ಭೂಮಿಯನ್ನು ಮರೆಯುವ ದಿನಗಳಿವು. ಇನ್ನು ನಮಗೋ, ಮಕ್ಕಳಿಗೆ ಪ್ರಪಂಚದ ಬುದ್ಧಿಶಕ್ತಿಯನ್ನೆಲ್ಲಾ ಒಂದೇ ಗುಟುಕಿಗೆ ಕುಡಿಸಿ ಅವರನ್ನು ಬೆಳೆಸುವ ಆಸೆ. ಕಣ್ಣಿಗೆ ಪಟ್ಟಿ ಕಟ್ಟಿದ ಕುದುರೆಯಂತೆ ಮಕ್ಕಳ ಓಟ ಶಾಲೆಯಿಂದ ಮನೆಗೆ, ಮನೆಯಿಂದ ಇನ್ಯಾವುದೋ ಕ್ಲಾಸಿಗೆ, ಇದರ ನಡುವಿನ ಮಣ್ಣಹಾದಿ ಎಲ್ಲೋ ಮರೆತೇಹೋಗುತ್ತಿದೆ. ಮರಗಳಿಗೆ ಕಲ್ಲೆಸೆಯುವ ಮಕ್ಕಳು ಮಾಯವಾಗುತ್ತಿದ್ದಾರೆ.
– ಅನಿತಾ ನರೇಶ್ ಮಂಚಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ
ಬಡ ದಂಪತಿಗೆ ಮಾಜಿ ಮೇಯರ್ ಸುಧೀರ್ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ
Drone: ಪುರಿ ದೇಗುಲದ ಮೇಲೆ ಡ್ರೋನ್ ಹಾರಾಟ: ಪೊಲೀಸರಿಂದ ತನಿಖೆ
Washington: ಹಿಲರಿ, ಸೊರೋಸ್ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ
Govt.,: ಖಾಸಗಿ ಚಾಟ್ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.