ಶಿಕ್ಷಣ ಯೋಧರ ಹೋರಾಟ ಕಥನ
Team Udayavani, Sep 5, 2020, 6:00 AM IST
ವಿದ್ಯಾಗಮದಡಿ ಶಿಕ್ಷಣ ಪಡೆಯುತ್ತಿರುವ ಮಾಗಡಿಯ ಬಂಟರಕುಪ್ಪೆ ಗ್ರಾಮದ ಸರಕಾರಿ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಿರುವ ಸಚಿವ ಸುರೇಶ್ ಕುಮಾರ್.
ಕೋವಿಡ್ ಸವಾಲಿನ ನಡುವೆಯೇ ಶಿಕ್ಷಕರ ದಿನಾಚರಣೆ ಎದುರಾಗಿದೆ. ಗಮನಾರ್ಹ ಸಂಗತಿಯೆಂದರೆ ಸವಾಲು-ಸಂಕಷ್ಟಗಳ ನಡುವೆಯೂ ರಾಜ್ಯದ ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕೆಲವು ಸರಕಾರಿ ಹಾಗೂ ಖಾಸಗಿ ಶಿಕ್ಷಣ ವಲಯದ ಶಿಕ್ಷಕರು ತಾವು ಎದುರಿಸುತ್ತಿರುವ ಸವಾಲುಗಳನ್ನು ಎದುರಿಟ್ಟರೆ, ಇನ್ನಿತರರು ಈ ಬದಲಾವಣೆಯಲ್ಲಿಯೇ ಗುಣಾತ್ಮಕತೆಯನ್ನು ಗುರುತಿಸುತ್ತಿದ್ದಾರೆ. ಒಟ್ಟಾರೆಯಾಗಿ, ಹೊಸ ಸಹಜತೆಯನ್ನು ಅಪ್ಪಿಕೊಳ್ಳಲು ಸನ್ನದ್ಧವಾಗಿರುವ ಸರಕಾರ ಹಾಗೂ ಸಮಾಜ ಶಿಕ್ಷಕರ ಮಾತನ್ನು ಕೇಳಿಸಿಕೊಳ್ಳಲೇಬೇಕಿದೆ. ರಾಜ್ಯದ ಶಿಕ್ಷಕರ ಅನುಭವ ಕಥನ ನಿಮ್ಮ ಮುಂದೆ..
ಪೋಷಕರ ಸಹಕಾರವಿದೆ
ಶಿಕ್ಷಕರು ಮಕ್ಕಳ ಮನೆಯ ಹತ್ತಿರ ಬಂದು ಪಾಠ ಮಾಡುತ್ತಿರುವುದರಿಂದ ಪೋಷಕರು ಪಾಠ ಮಾಡಲು ವ್ಯವಸ್ಥಿತ ಸೌಲಭ್ಯ ಕಲ್ಪಿಸಿಕೊಡುವತ್ತ ಗಮನ ಹರಿಸುತ್ತಿದ್ದಾರೆ. ಪೋಷಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತಿದೆ. ಇನ್ನು ಮಲೆನಾಡಿನಲ್ಲಿ ಮಳೆಗಾಲ. ಮಹಿಳಾ ಶಿಕ್ಷಕರಿಗೆ ಕೆಲಮಟ್ಟಿನ ಭಯವಿದೆ. ಒಟ್ಟಾರೆ ವಿದ್ಯಾಗಮ ಯೋಜನೆಯಲ್ಲಿ ಪ್ರಾದೇಶಿಕವಾದ ಹೊಂದಾಣಿಕೆಗೆ ಅವಕಾಶ ಕಲ್ಪಿಸಿದರೆ ಮಕ್ಕಳ ಹಿತದೃಷ್ಟಿಯಿಂದ ಇನ್ನಷ್ಟು ಪರಿಣಾಮಕಾರಿ ಕೆಲಸ ಮಾಡಬಹುದು.
ರಾಮಚಂದ್ರ ಹೆಗಡೆ, ದೈಹಿಕ ಶಿಕ್ಷಕರು, ಸಾಗರ
ಇವೆ ಹಲವು ಅಡ್ಡಿಗಳು
ರಾಜ್ಯ ಸರಕಾರದ ಸೂಚನೆಯಂತೆ ಸರಕಾರಿ ಶಾಲಾ ಶಿಕ್ಷಕರು ವಿದ್ಯಾಗಮ, ವಠಾರ ಶಾಲೆ ನಡೆಸಲು ವಿದ್ಯಾರ್ಥಿಗಳು ಇರುವ ಪ್ರದೇಶಕ್ಕೆ ಹೋದಾಗ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಸಮಯಕ್ಕೆ ವಿದ್ಯಾರ್ಥಿಗಳು ಇಲ್ಲದಿರುವುದು, ಕೃಷಿ ಚಟುವಟಿಕೆ ಆರಂಭವಾದ ಹಿನ್ನೆಲೆ ಪೋಷಕರು ಮಕ್ಕಳನ್ನು ಕೃಷಿ ಕೆಲಸಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಕೆಲವೊಬ್ಬ ಶಿಕ್ಷಕರಿಗೆ ಕೋವಿಡ್ ಸೋಂಕು ತಗುಲಿದೆ. ಇನ್ನು ಕೆಲವೆಡೆ ಜಾತಿ ತಾರತಮ್ಯದ ಹಿನ್ನೆಲೆಯಲ್ಲಿ ಪೋಷಕರೇ ತಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ.
ಕೆ. ಹೊನ್ನೂರಸ್ವಾಮಿ, ಸಹ ಶಿಕ್ಷಕರು, ಬಳ್ಳಾರಿ
ಕಲಿಕೆಯತ್ತ ಚಿತ್ತ ಹರಿಸುತ್ತಿದ್ದಾರೆ
ದಿನ ಕಳೆದಂತೆ ವಿದ್ಯಾರ್ಥಿಗಳು ನಿರಂತರ ಕಲಿಕೆಯತ್ತ ಚಿತ್ತ ಹರಿಸುತ್ತಿದ್ದಾರೆ. ವಿದ್ಯಾಗಮ ಮೂಲಕ ಮಕ್ಕಳು ಇರುವಲ್ಲಿಗೆ ಶಿಕ್ಷಕರು ತೆರಳಿ ಪಾಠ ಮಾಡುತ್ತಿದ್ದಾರೆ. ಸ್ಮಾರ್ಟ್ ಫೋನ್ ಹೊಂದಿರುವ ಪೋಷಕರಿಗೆ ಕರೆ ಮಾಡಿ ಅವರು ಬೆಳಗ್ಗೆ ಕೆಲಸಕ್ಕೆ ಹೋಗುವ ಮುನ್ನ ಹಾಗೂ ಅವರು ಕೆಲಸದಿಂದ ಮರಳಿ ಬಂದಾಗ, ಆನ್‌ಲೈನ್ ಕ್ಲಾಸ್ ನಡೆಯುತ್ತಿದೆ. ಅನೇಕ ಮಕ್ಕಳು ಶಾಲೆ ಯಾವಾಗ ಆರಂಭವಾಗುತ್ತೆ ಎನ್ನುತ್ತಿದ್ದಾರೆ.
ಸುರೇಖಾ ಜಗನ್ನಾಥ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ, ಬಂದರವಾಡ ಸರಕಾರಿ ಶಾಲೆ, ಅಫಜಲಪುರ
ಪುಂಡರ ಕಾಟ
ಶಾಲೆಯ ಹೊರಗೆ ಪಾಠ ಮಾಡುವ ಪರಿಸರದಲ್ಲಿ ದುವ್ಯìಸನಿಗಳು, ಪೋಲಿಗಳು ಶಿಕ್ಷಕಿಯರನ್ನು ಗೇಲಿ ಮಾಡುವಂಥ ಹಾವಳಿಯಿಂದ ಆತಂಕ ಸೃಷ್ಟಿಯಾಗಿದೆ. ಗ್ರಾಮೀಣ ಹಾಗೂ ಬಡ ಕೃಷಿ-ಕಾರ್ಮಿಕರ ಮಕ್ಕಳು ಆನ್‌ಲೈನ್ ಶಿಕ್ಷಣ ಕೊಡಿಸುವುದು ಹಲವು ಕಾರಣಕ್ಕೆ ಅಸಾಧ್ಯವಾಗಿದೆ. ಶಿಕ್ಷಕರು ಸರಕಾರ ರೂಪಿಸಿದ ನಿಯಮಗಳ ಫಾರ್ಮ್ ಭರ್ತಿ ಮಾಡುವಲ್ಲೇ ಸುಸ್ತಾಗುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆಗಳ ಆವರಣದಲ್ಲಿ ಪಾಠಕ್ಕೆ ಅವಕಾಶ ಕಲ್ಪಿಸುವುದೇ ಸೂಕ್ತ, ಸುರಕ್ಷಿತ ಕ್ರಮ.
ಹೇಮಲತಾ ವಸ್ತ್ರದ, ಮುಖ್ಯೋಪಾಧ್ಯಾಯಿನಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ವಿಜಯಪುರ
ನಮ್ಮತ್ತಲೂ ನೋಡಿ
ಅನುದಾನಿತ ಶಾಲಾ, ಕಾಲೇಜು ನೌಕರರಿಗೆ ಸರಕಾರಿ ನೌಕರರಿಗೆ ಇರುವ ಸವಲತ್ತು ಸಿಗುತ್ತಿಲ್ಲ. ಸರಕಾರದ ದೃಷ್ಟಿಯಲ್ಲಿ ಅನುದಾನಿತ ನೌಕರರು ಸರಕಾರಿ ನೌಕರರೇ ಅಲ್ಲ. ಅನುದಾನಿತ ನೌಕರರಿಗೂ ಕಾಯಿಲೆ ಬರುತ್ತದೆ. ಕೋವಿಡ್-19 ಡ್ನೂಟಿ ಮಾಡುವರಿಗೂ ಸಹಿತ ಸಾವು-ನೋವು ಬರುತ್ತದೆ. ಆದರೆ ಜ್ಯೋತಿ ಸಂಜೀವಿನಿ ಸವಲತ್ತು, ಜೀವ ವಿಮೆ ಇರುವುದಿಲ್ಲ. ಆದರೂ ಸರಕಾರದ ಕಾರ್ಯಕ್ರಮ ಅನುಷ್ಠಾನಕ್ಕೆ ಶಿಕ್ಷಕರನ್ನು ಬಳಸಿಕೊಳ್ಳುತ್ತಾರೆ.
ಕೆ. ಈಶಾ ನಾಯ್ಕ, ಅನುದಾನಿತ ಶಾಲಾ ಕಾಲೇಜು ನೌಕರರ ಸಂಘಗಳ ಒಕ್ಕೂಟ, ದಾವಣಗೆರೆ
ಗ್ರಾಮಸ್ಥರ ಮನವೊಲಿಸಬೇಕಾಯಿತು
ವಠಾರ ಕೇಂದ್ರಗಳನ್ನು ಧಾರ್ಮಿಕ ಕೇಂದ್ರ ಮತ್ತು ಸಮುದಾಯ ಕೇಂದ್ರಗಳಲ್ಲೇ ನಡೆಸಬೇಕೆಂಬ ನಿಯಮ ಇದೆ. ಎಲ್ಲ ಜಾತಿ ಮಕ್ಕಳು ಸೇರುವುದರಿಂದ ಇದಕ್ಕೆ ಅಡ್ಡಿಪಡಿಸಿದ ಗ್ರಾಮಸ್ಥರ ಮನವೊಲಿಕೆ ದೊಡ್ಡ ತಲೆನೋವಾಗಿತ್ತು. ಇನ್ನು ವಿದ್ಯಾಗಮ ಹೊಸ ಮಾದರಿ ಶಿಕ್ಷಣಕ್ಕೆ ಒಗ್ಗಿಕೊಳ್ಳಲು ಮಕ್ಕಳಷ್ಟೇ ಅಲ್ಲ ಶಿಕ್ಷಕರಿಗೂ ಕಷ್ಟವೇ. ಒಂದು ವಾರ ಮಾಡಿದ ಆನ್‌ಲೈನ್ ಪಾಠದ ಪುನರ್ ಮನನಕ್ಕಾಗಿ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ತೆರಳಬೇಕು. ಅದು ಅವರ ಪಾಲಕರು ಇದ್ದಾಗಲೇ. ಇದು ಶಿಕ್ಷಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.
ಬಸವರಾಜ ರುದನೂರ, ಶಿಕ್ಷಕರು, ಬೀದರ್
ಟ್ರ್ಯಾಕ್ಸ್‌ನಲ್ಲಿ ತೆರಳುತ್ತೇವೆ
ನಮ್ಮ ಶಾಲೆ ಧಾರವಾಡ ನಗರದಿಂದ 23 ಕಿಮೀ ದೂರದಲ್ಲಿದೆ. ಮೊದಲು ಸರಕಾರಿ ಬಸ್ ಹೋಗುತ್ತಿತ್ತು. ಇದೀಗ ಬಸ್ ಇಲ್ಲ. ಅದಕ್ಕೆ ಅಕ್ಕಪಕ್ಕದ ಗ್ರಾಮದ ಶಾಲೆಯ ಶಿಕ್ಷಕರು ನಾವು ಒಟ್ಟಿಗೆ ಸೇರಿ ಒಬ್ಬೊಬ್ಬರು ಪ್ರತಿದಿನ ತಲಾ 150 ರೂ. ಕೊಟ್ಟು ಟ್ರಾÂಕ್ಸ್ ಮಾಡಿಕೊಂಡು ವಿದ್ಯಾಗಮ ಅನುಷ್ಠಾನಕ್ಕೆ ಹೋಗುತ್ತಿದ್ದೇವೆ. ಮೊಬೈಲ್ ಮೂಲಕ ಮನೆಗೆಲಸ ಕೊಡುತ್ತೇವೆ. ಆ್ಯಂಡ್ರಾಯ್ಡ ಮೊಬೈಲ್‌ಗಳಿಲ್ಲದ ಮಕ್ಕಳ ಮನೆಗಳಿಗೆ ಭೇಟಿ ನೀಡಿ ವಿದ್ಯಾಭ್ಯಾಸ ಹೇಳುತ್ತಿದ್ದೇವೆ.
ಮಲ್ಲವ್ವ ಫಕ್ಕಿರಪ್ಪ ಕಣವಿ, ಶಿಕ್ಷಕಿ ಕಲ್ಲಾಪೂರ
ಪಠ್ಯೇತರ ಜವಾಬ್ದಾರಿಯ ಭಾರ
ದೇಶದ ಭಾವಿ ಪ್ರಜೆಗಳನ್ನು ರೂಪಿಸುವ ಹೊಣೆ ಶಿಕ್ಷಕರದ್ದು. ಆದರೆ, ಶಿಕ್ಷಕರಿಗೆ ಮಕ್ಕಳ ಭವಿಷ್ಯ ರೂಪಿಸುವ ಕೆಲಸಕ್ಕಿಂತ ಬೇರೆ ಬೇರೆ ಕೆಲಸಗಳೇ ಹೆಚ್ಚಿವೆ. ಮನೆ ಮನೆಗೆ ಹೋಗಿ ಮಕ್ಕಳನ್ನು ಸೇರಿಸಿ ಸಾರ್ವಜನಿಕ ಜಾಗ, ಗುಡಿ-ಗುಂಡಾರದಲ್ಲಿ ಪಾಠ ಮಾಡುವಂತಾಗಿದೆ. ಜತೆಗೆ ಕೋವಿಡ್ ಜಾಗೃತಿ, ಸೋಂಕಿತರ ಸಂಪರ್ಕಿತರ ಪತ್ತೆ ಕಾರ್ಯ ಹೀಗೆ ಎಲ್ಲ ಕಾರ್ಯ ಹಾಕಿದರೂ ಶಿಕ್ಷಕರು ಮಾಡಿದ್ದಾರೆ. ಸಮೀಕ್ಷೆ, ಜಾಗೃತಿ, ಕಾರ್ಯದಲ್ಲೇ ಶಿಕ್ಷಕರ ಬಹುಪಾಲು ಸಮಯ ಹೋಗುತ್ತಿದೆ.
ಲಕ್ಷ್ಮಣ ಯಂಕಂಚಿ, ಪ್ರಾಥಮಿಕ ಶಾಲಾ ಶಿಕ್ಷಕರು, ಬಾಗಲಕೋಟೆ
ಸವಾಲುಗಳು ಬಹಳಷ್ಟಿವೆ
ಆನ್‌ಲೈನ್ ಶಿಕ್ಷಣ ನೀಡಲಾಗುತ್ತಿದ್ದರೂ ಅಂದುಕೊಂಡಷ್ಟು ಗುರಿ ತಲುಪಲಾಗುತ್ತಿಲ್ಲ. ಲಾಕ್‌ಡೌನ್‌ನಿಂದಾಗಿ ಮಕ್ಕಳಿಗೆ ಪಾಠ ಸರಿಯಾಗಿ ಮುಟ್ಟುತ್ತಿಲ್ಲ. ಸ್ಮಾಟ್‌ಫೋನ್‌ಗಳ ಕೊರತೆ ಹಾಗೂ ಬಡತನದಲ್ಲಿ ಇದ್ದವರು ಫೋನ್‌ಗಳಿಲ್ಲದೇ ಆನ್‌ಲೈನ್ ಶಿಕ್ಷಣ ಪಡೆಯುವುದು ಕಷ್ಟಕರವಾಗಿದೆ. ಸರಕಾರದ ನಿರ್ದೇಶನದಂತೆ ಮಂದಿರ, ಸಾರ್ವಜನಿಕ ಸ್ಥಳಗಳಲ್ಲಿ ಪಾಠ ಮಾಡುವುದು ಸುಲಭವಲ್ಲ.
ಎಂ.ಕೆ. ಮಾದಾರ, ಮುಖ್ಯೋಪಾಧ್ಯಾಯ, ಉಷಾತಾಯಿ ಹೆಣ್ಣು ಮಕ್ಕಳ ಪ್ರೌಢಶಾಲೆ, ಬೆಳಗಾವಿ
ವಿದ್ಯಾಗಮ ಬೆಸ್ಟ್
ಆನ್ ಲೈನ್ ಪಾಠಕ್ಕಿಂತ ವಿದ್ಯಾಗಮ ಶಿಕ್ಷಣ ಉತ್ತಮವಾಗಿದೆ. ನಾವು ಆಯಾ ಜನವಸತಿ ಪ್ರದೇಶಕ್ಕೆ ಹೋಗಿ ನಿರಂತರ ಕಲಿಕಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಕೊರೊನಾವನ್ನು ಲೆಕ್ಕಿಸದೇ ನಮ್ಮ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರ ದಿನಾಚಾರಣೆ ದಿನ ನಾವು ಸಂಭ್ರಮ ಪಡಬೇಕಾಗಿತ್ತು ಈ ದಿನ ಸಾಧಕರಿಗೆ ಗೌರವಿಸುತ್ತಾರೆ. ಇದು ಅವರ ಸಾಧನೆ ತಿಳಿಯುವ ಸಮಯ. ಆದರೆ ಈ ಬಾರಿ ಅದು ಸಾಧ್ಯವಾಗುತ್ತಿಲ್ಲ ಎನ್ನುವ ನೋವು ಇದೆ.
ಎ.ಸಿ.ಹನುಮಂತರಾಜ್, ಶಿಕ್ಷಕರು ಕೆ.ಪಾಲಸಂದ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.ತುಮಕೂರು
ಖಾಸಗಿ ಶಾಲೆ ಆರಂಭಕ್ಕೆ ಯೋಚಿಸಿ
ಸರಕಾರವೇ ಶಾಲೆಗಳ ಬಗ್ಗೆ ಸರಕಾರಿ ಮತ್ತು ಖಾಸಗಿ ಶಾಲೆಗಳೆಂದು ತಾರತಮ್ಯ ಮಾಡುತ್ತಿದೆ. ವಿದ್ಯಾಗಮ ಯೋಜನೆಯಡಿ ಸರಕಾರಿ ಶಾಲೆ ಮಕ್ಕಳಿಗೆ ಬಯಲು ಪಾಠ ಮಾಡಲಾಗುತ್ತಿದೆ. ಆದರೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡದಿರುವುದು ಸಮಂಜಸವಲ್ಲ. ಕೋವಿಡ್ ಮಾರ್ಗಸೂಚಿ ಅನ್ವಯ ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡಬೇಕು. ಉಚಿತ ಪಠ್ಯಪುಸ್ತಕ ವಿತರಿಸಬೇಕು. ಸರಕಾರ ಖಾಸಗಿ ಶಾಲೆ ಆರಂಭಕ್ಕೆ ಅನುಮತಿ ನೀಡಲಿ.
ವಿಜಯ ರಾಠೊಡ, ಖಾಸಗಿ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷರು, ಯಾದಗಿರಿ
ಸವಾಲು ಹೌದು, ಅವಕಾಶವೂ ಹೌದು
ಹಳೆಯ ಬೋಧನ ವಿಧಾನ ಈಗ ಪ್ರಯೋಜನಕ್ಕೆ ಬರುತ್ತಿಲ್ಲ. ಹೀಗಾಗಿ ಮಕ್ಕಳಿಗೆ ಅನುಕೂಲವಾಗುವ ಹಾಗೂ ಬೇಗ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡಬೇಕಾಗಿದೆ. ಜತೆಗೆ ಆನ್‌ಲೈನ್ ಶಿಕ್ಷಣ, ವಿದ್ಯಾಗಮ ಪದ್ಧತಿಯಂಥ ಹೊಸತನಕ್ಕೆ ಒಗ್ಗಿಕೊಳ್ಳಲು ಇದೊಂದು ಅವಕಾಶ. ಇದರಿಂದ ಹೊಸತನಕ್ಕೆ ತೆರೆದುಕೊಳ್ಳಲು ಸಹಕಾರಿಯಾಯಿತು.
ಎಚ್.ಎನ್.ಚೈತ್ರಾ, ಶಿಕ್ಷಕಿ ಸರಕಾರಿ ಪ್ರೌಢಶಾಲೆ ಗಿರಿಯಬೋವಿ ಪಾಳ್ಯ ಮೈಸೂರು
ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ
ಶಿಕ್ಷಕನಾಗಿ ಹಾಗೂ ವೈಯಕ್ತಿಕವಾಗಿ ಜೀವನದಲ್ಲಿ ಇಂಥ ಪರಿಸ್ಥಿತಿಯನ್ನು ಹಿಂದೆಂದೂ ಎದುರಿಸಿರಲಿಲ್ಲ. ಕೆಲವು ಪೋಷಕರು ಸಹ ತಮ್ಮ ಮಕ್ಕಳನ್ನು ವಿದ್ಯಾಗಮಕ್ಕೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಆದರೂ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇವೆ. ನಮ್ಮದು ಅರಣ್ಯದಂಚಿನ ಶಾಲೆ. ಏಳೆಂಟು ಹಳ್ಳಿಗಳ ಮಕ್ಕಳು ಶಾಲೆಗೆ ಬರುತ್ತಿದ್ದರು. ಆ ಹಳ್ಳಿಗಳಿಗೆ ತೆರಳಿ, ಅಲ್ಲಿನ ಚಾವಡಿ, ಸಮುದಾಯ ಭವನ, ಮನೆಯ ಮುಂದಿನ ಪಡಸಾಲೆಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದೇವೆ.
ಸಿ.ಕೆ. ಮಹೇಶ್, ಸಹ ಶಿಕ್ಷಕರು, ಕೋಳಿಪಾಳ್ಯ ಪ್ರೌಢಶಾಲೆ., ಚಾಮರಾಜನಗರ
ಆರೋಗ್ಯದ ಕಾಳಜಿ ಮುಖ್ಯ
ಗ್ರಾಮೀಣ ಭಾಗದಲ್ಲಿನ ಮಕ್ಕಳು ಆನ್‌ಲೈನ್ ಶಿಕ್ಷಣಕ್ಕೆ ಸಹಕಾರ ನೀಡುತ್ತಿದ್ದಾರೆ. ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಕಂಡು ಬರುತ್ತಿದ್ದು, ಕೆಲವು ಮಕ್ಕಳು ಮೊಬೈಲ್ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಪಕ್ಕದ ಮನೆಯ ಮಕ್ಕಳ ಜತೆ ಸೇರಿಸಿ ಅವರಿಗೆ ಆನ್‌ಲೈನ್ ಪಾಠ ಮಾಡಲಾಗುತ್ತಿದೆ. ಕೆಲವು ಶಿಕ್ಷಕಿಯರು ಮಕ್ಕಳ ಮನೆಗೆ ಭೇಟಿ ನೀಡಿ ಪಾಠ, ಮನೆಗೆಲಸ ಪರಿಶೀಲನೆಗೆ ಭಯ ಪಡುತ್ತಿದ್ದಾರೆ. ಆರೋಗ್ಯ ಚೆನ್ನಾಗಿದ್ದರೆ ಮುಂದೆ ಏನಾದರೂ ಮಾಡಬಹುದು. ನಮ್ಮ ಆರೋಗ್ಯಕ್ಕೂ ಸಹ ಗಮನ ನೀಡಬೇಕಾಗಿದೆ.
ಎಂ.ಎಸ್.ಕೆಂಚನಗೌಡ್ರ, ಶಿಕ್ಷಕರು, ಕಾಳಿದಾಸ ಪ್ರೌಢಶಾಲೆ, ಹಾವೇರಿ
ಕೂಲಿಗೆ ಹೋಗುತ್ತಿರುವ ಅತಿಥಿ ಶಿಕ್ಷಕರು
ಲಾಕ್‌ಡೌನ್ ಬಳಿಕ ಖಾಸಗಿ ಶಾಲೆಗಳ ಅತಿಥಿ ಶಿಕ್ಷಕರು, ಉಪನ್ಯಾಸಕರು ಕೂಲಿ ಕೆಲಸಕ್ಕೂ ಹೋಗುತ್ತಿದ್ದಾರೆ. ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ದೂಡುವ ಸ್ಥಿತಿ ಎದುರಾಗಿದೆ. ಶಾಲೆ ಆರಂಭವಾಗುವವರೆಗೂ ಬರಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬಹುತೇಕ ಶಿಕ್ಷಕ, ಉಪನ್ಯಾಸಕರಿಗೆ 6-8 ಸಾವಿರ ರೂ. ವೇತನ ಸಿಗುತ್ತಿತ್ತು. ಇಂಥ ಸಂದರ್ಭ ಬರುತ್ತದೆ ಎಂದು ಯಾರು ಊಹಿಸಿರಲಿಲ್ಲ.
ಗೋವಿಂದರಾಜ್, ಖಾಸಗಿ ಕಾಲೇಜಿನ ಅತಿಥಿ ಉಪನ್ಯಾಸಕ, ರಾಯಚೂರು
ಮಗನಿಂದಲೇ ಡಿಜಿಟಲ್ ಪಾಠ!
ಶಿಕ್ಷಕರು ನಿರಂತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳು ವಂತೆ ಆನ್‌ಲೈನ್ ಬ್ಲಾಗ್ ರಚನೆ ಮಾಡಲಾಗಿದೆ. ಅದಕ್ಕೆ ತಕ್ಕಂತ ಜ್ಞಾನಾರ್ಜನೆ ಬೆಳೆಸಿಕೊಳ್ಳಲು ಅವಕಾಶ ಸಿಕ್ಕಂತೆ ಆಗಿದೆ. ಕಲಬುರಗಿ ಶಿಕ್ಷಣ ಆಯುಕ್ತಾಲಯದಿಂದ ಹತ್ತು ಅಂಶಗಳ ಹೋಂ ವರ್ಕ್ ನೀಡಿ, ಶಿಕ್ಷಕರಿಂದಲೇ ಬ್ಲಾಗ್ ರಚನೆ ಮಾಡಿಸಲಾಗಿದೆ. ಕಂಪ್ಯೂಟರ್‌ನಲ್ಲಿ ಟೈಪಿಂಗ್ ಮತ್ತು ಪವರ್ ಪಾಯಿಂಟ್ ಬಳಕೆ ಮಾಡುವುದು ಗೊತ್ತಿರಲಿಲ್ಲ. ಆದರೆ, ಅನಿವಾರ್ಯ ಆಗಿದ್ದರಿಂದ ನನ್ನ ಮಗನಿಂದಲೇ ಹೇಳಿಸಿಕೊಂಡು ಬ್ಲಾಗ್ ರಚನೆ ಮಾಡಿದೆ. ಈಗ ಲ್ಯಾಪ್‌ಟಾÂಪ್ ತೆಗೆದುಕೊಂಡು ಹೋಗಿ ಮಕ್ಕಳಿಗೆ ಪಾಠ ಮಾಡುವಷ್ಟು ಪರಿಪೂರ್ಣತೆ ಬಂದು ಬಿಟ್ಟಿದೆ. ಮಕ್ಕಳು ಇರುವಲ್ಲಿಗೆ ಶಿಕ್ಷಕರು ಹೋಗಿ ಪಾಠ ಮಾಡುತ್ತಿರುವುದಿಂದ ಗ್ರಾಮಸ್ಥರಲ್ಲಿ ಶಿಕ್ಷಣದ ಮಹತ್ವ ಗೊತ್ತಾಗುತ್ತಿದೆ. ಓದದ ಮಕ್ಕಳ ಬಗ್ಗೆ ಪೋಷಕರೇ ಶಿಕ್ಷಕರಿಗೆ ಮಾಹಿತಿ ನೀಡುತ್ತಿದ್ದಾರೆ.
ಆಶಾ ಹೆಗಡೆ, ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ, ಮೇಳಕುಂದಾ ಸರಕಾರಿ ಶಾಲೆ, ಕಲಬುರಗಿ ತಾಲೂಕು
ಮಕ್ಕಳ ಗಮನ ಹಿಡಿದಿಟ್ಟುಕೊಳ್ಳಬೇಕು
ತರಗತಿಗಳಲ್ಲಿ ಮಕ್ಕಳು ಶಿಕ್ಷಕರ ಮುಂದೆಯೇ ಇರುತ್ತಾರೆ. ಅವರನ್ನು ನಿಯಂತ್ರಿಸುವುದು, ಅವರ ಗಮನವನ್ನು ಪಠ್ಯದೆಡೆಗೆ ಹಿಡಿದಿಟ್ಟುಕೊಳ್ಳುವುದು ಸುಲಭ. ಆದರೆ ಜೂಮ್ ಮುಂತಾದ ಆ್ಯಪ್ ಬಳಕೆ ಮಾಡಿ ತರಗತಿಗಳನ್ನು ನಡೆಸಬೇಕು.ಆನ್‌ಲೈನ್ ತರಗತಿಗಳಲ್ಲಿ ಮಕ್ಕಳು ತಮ್ಮ ಮನೆಗಳಲ್ಲಿ ಇರುತ್ತಾರೆ. ಶಾಲೆ ವಾತಾವರಣ ಅಲ್ಲಿರೋಲ್ಲ. ಎಲ್ಲರೊಡಗೂಡಿ ಕಲಿಯುವುದೇ ಚೆನ್ನ. ಆದರೆ ಆನ್‌ಲೈನ್‌ನಲ್ಲಿ ನೋಡಿ ಕಲಿಯಲು ಇತರ ವಿದ್ಯಾರ್ಥಿಗಳು ಇರೋಲ್ಲ. ಹೀಗಾಗಿ ಮಕ್ಕಳು ಪಠ್ಯದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗದೇ ಇರಬಹುದು. ಮೇಲಾಗಿ ಇಂತಹ ತರಗತಿಗಳು ತಂತ್ರ ಜ್ಞಾನ ಆಧಾರಿತವಾಗಿರುವುದರಿಂದ ಕೆಲವೊಮ್ಮೆ ಇಂಟರ್‌ನೆಟ್ ಕೈಕೊಡುವುದು, ಶಿಕ್ಷಕರ ಧ್ವನಿ ಸರಿಯಾಗಿ ಕೇಳದಿರುವ ಪ್ರಸಂಗಗಳು ಎದುರಾಗಬಹುದು. ಆನ್‌ಲೈನ್ ಬೋಧನೆಗೆ ಬೇಕಾದ ವ್ಯವಸ್ಥೆ ಶಾಲೆ ಮಾಡಿಕೊಟ್ಟಿದೆ.
ಸುಮತಿ, ಸಹ ಶಿಕ್ಷಕಿ, ಖಾಸಗಿ ಅನುದಾನರಹಿತ ಶಾಲೆ, ರಾಮನಗರ
ಖಾಸಗಿ ಶಾಲಾ ಶಿಕ್ಷಕರಿಗೆ ಸಹಾಯಧನ ನೀಡಿ
ಖಾಸಗಿ ಶಾಲೆ ಶಿಕ್ಷಕರು ಅತ್ಯಂತ ಸಂಕಷ್ಟ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತವಾಗಬಾರದೆಂದು ಸರಕಾರ ವಿದ್ಯಾಗಮ ಎಂಬ ವಿನೂತನ ಯೋಜನೆ ಜಾರಿಗೆ ತಂದಿದೆ. ಆನ್‌ಲೈನ್ ಶಿಕ್ಷಣ ಪ್ರಾರಂಭ ಮಾಡಿದೆ. ಆದರೆ, ಸರಕಾರ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ದುಃಖಕರವಾದ ಸಂಗತಿ. ಕೊರೊನಾ ಹೊಡೆತಕ್ಕೆ ಸಿಲುಕಿರುವ ಶಿಕ್ಷಕರ ಬದುಕು ಬೀದಿಗೆ ಬಂದು ನಿಂತಿದೆ. ಈ ಹಿನ್ನೆಲೆಯಲ್ಲಿ ಸರಕಾರ ಈಗಲಾದರೂ ಖಾಸಗಿ ಶಿಕ್ಷಕರ ನೆರವಿಗೆ ಧಾವಿಸಬೇಕು. ಖಾಸಗಿ ಶಾಲಾ ಶಿಕ್ಷಕರಿಗೆ ಕನಿಷ್ಠ 10 ಸಾವಿರ ಧನಸಹಾಯ ನೀಡಬೇಕು.
ಎಚ್.ವಿ. ಸೌಮ್ಯ, ಖಾಸಗಿ ಶಾಲೆ ಶಿಕ್ಷಕಿ, ಶಾಂತಿನಗರ, ಚಿಕ್ಕಮಗಳೂರು
ಗುಣಾತ್ಮಕವಾಗಿ ತೆಗೆದುಕೊಂಡು ಕೆಲಸ
ಇದೊಂದು ಸಂ ದಿಗ್ಧ ಪರಿಸ್ಥಿತಿ. ಪ್ರವಾಹ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹೋರಾಡಿದಂತೆ ನಾವು ಈಗ ಸ್ವಯಂಸೇವಕರಾಗಿ ಕೆಲಸ ಮಾಡುವ ಅಗತ್ಯವಿದೆ. ಪೋಷಕರು ಹಾಗೂ ಮಕ್ಕಳಲ್ಲಿ ಧೈರ್ಯ ತುಂಬುವ ಮೂಲಕ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ. ಹಳ್ಳಿಗಳಲ್ಲಿ ಧೈರ್ಯವಾಗಿ ಹೋಗಿ ಕೆಲಸ ಮಾಡುತ್ತಿದ್ದೇವೆ. ಈ ಪರಿಸ್ಥಿತಿಯನ್ನು ಗುಣಾತ್ಮಕವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಶಿಕ್ಷಕರ ನೇರ ಭೇಟಿಯಾಗುವ ಅವಕಾಶವೂ ಇದಾಗಿದೆ.
ನಾಗರತ್ನ, ಶಿವಪುರ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ, ಚಿತ್ರದುರ್ಗ
ಬದಲಾಗಿದೆ ಮನೋಭಾವ
ಸರಕಾರದ ನಿರ್ದೇಶನದಂತೆ ಶಾಲಾ ವ್ಯಾಪ್ತಿಯಲ್ಲಿ ವಿದ್ಯಾಗಮನದಿಂದ ಮಕ್ಕಳ ಬಡಾವಣೆಯಲ್ಲೇ ಗುರುಕುಲ ಮಾದರಿಯಲ್ಲಿ ಪಾಠ ಬೋಧನೆ ನಡೆಸುತ್ತಿದ್ದೇವೆ. ಆನ್‌ಲೈನ್‌ನಲ್ಲಿ ಮಕ್ಕಳೊಂದಿಗೆ ನಿರಂತರ ಸಂಪರ್ಕ ಹೊಂದುವುದರ ಜತೆಗೆ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಕಲಿಕೆಯತ್ತ ಸೆಳೆಯುವ ಪ್ರಯತ್ನ ನಡೆಸಿದ್ದೇವೆ. ಇದರಿಂದ ಸರಕಾರಿ ಶಾಲೆಗಳ ಬಗೆಗಿನ ಕೆಲವು ಸ್ಥಿತಿವಂತರ ಮನೋಭಾವ ಬದಲಾ ಗುತ್ತಿದೆ.5 ಕುಟುಂಬಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ನಮ್ಮ ಶಾಲೆಯಲ್ಲಿ ಸೇರಿಸಿದ್ದಾರೆ.
ಎಸ್.ಕೆ. ಮಂಗಳಗುಡ್ಡ, ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ , ಗದಗ
ಮಾತು ಕೇಳದ ಮಕ್ಕಳು
ನಾವೆಲ್ಲ ವಠಾರಗಳಿಗೆ ತೆರಳಿ ಮಕ್ಕಳಿಗೆ ವಿಷಯಕ್ಕೆ ಚಟುವಟಿಕೆ ನೀಡಬೇಕು. ಯಾವ ಮಕ್ಕಳ ಆರೋಗ್ಯದ ಸ್ಥಿತಿ ಹೇಗಿದೆಯೋ ಗೊತ್ತಾಗಲ್ಲ. ದೂರ ದೂರ ಕುಳಿತುಕೊಳ್ಳಿ ಎಂದರೂ ಮಕ್ಕಳು ಕುಳಿತುಕೊಳ್ಳಲ್ಲ. ಇದು ಶಿಕ್ಷಕರಲ್ಲಿ ಆತಂಕ ತರಿಸಿದೆ. ಜಿಲ್ಲೆಯಲ್ಲೇ ಕೆಲವು ಶಿಕ್ಷಕರು ಕೋವಿಡ್‌ಗೆ ಬಲಿಯಾದರು. ಇನ್ನು ಆನ್‌ಲೈನ್ ಪಾಠ ಮಾಡಬೇಕೆಂದರೆ ಕೆಲವು ಮಕ್ಕಳ ಪಾಲಕರ ಬಳಿ ಸ್ಮಾರ್ಟ್ ಫೋನ್‌ಗಳೇ ಇಲ್ಲ. ಇದು ಸಮಸ್ಯೆಯಾಗುತ್ತಿದೆ. ಕೋವಿಡ್ ಹೆಚ್ಚಿರುವಂತ ಜಿಲ್ಲೆಯಲ್ಲಿ ವಿದ್ಯಾಗಮ ಮುಂದೂಡುವಂತೆ ಮನವಿ ಮಾಡಿದ್ದೇವೆ.
ಶಂಭುಲಿಂಗನಗೌಡ ಪಾಟೀಲ, ಹಲಗೇರಿ ಸರಕಾರಿ ಶಾಲೆ ಹಿರಿಯ ಶಿಕ್ಷಕ, ಕೊಪ್ಪಳ
ಹಲವು ಆ್ಯಪ್ ಬಳಸಿ ಶಿಕ್ಷಣ
ಮಕ್ಕಳ ಭವಿಷ್ಯಕ್ಕೆ ತಡೆಯಾಗಬಾರದು ಎಂಬ ಉದ್ದೇಶದಿಂದ ಸರಕಾರ ವಿದ್ಯಾಗಮವನ್ನು ರೂಪಿಸಿದೆ. ಕುಗ್ರಾಮಗಳಲ್ಲಿ ಮನೆಗಳು ದೂರವಿರುವುದರಿಂದ ಇಂತಹವರನ್ನು ಒಗ್ಗೂಡಿಸಲು ಮಂದಿರ, ಸಭಾಭವನಗಳು ಸಹಿತ ಪಾಠ ಮಾಡಲು ಸೂಕ್ತ ಜಾಗ ಇರುವ ಪ್ರದೇಶಗಳನ್ನು ಗುರುತಿಸಿ ಶಿಕ್ಷಕರು ತೆರಳುತ್ತಿದ್ದಾರೆ. ಮಳೆಗಾಲದಲ್ಲಿ ಸಂಚಾರ ಕಷ್ಟಕರವಾಗಬಾರದು ಎಂಬ ನಿಟ್ಟಿನಲ್ಲಿ ಆನ್‌ಲೈನ್ ತರಗತಿಗಳನ್ನೂ ಹಮ್ಮಿಕೊಳ್ಳಲಾಗಿದೆ. ಇಂಟರ್‌ನೆಟ್ ಸಹಿತ, ಆನ್‌ಲೈನ್ ತರಬೇತಿ, ಪಿಪಿಟಿ, ವೆಬಿನಾರ್‌ಗಳು, ಸಹಿತ ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ಆ್ಯಪ್‌ಗ್ಳನ್ನೂ ಬಳಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಶೈಕ್ಷಣಿಕ ಪರಿಕರಗಳನ್ನು ಶಾಲೆಯ ಸಂಚಿತ ನಿಧಿಯಿಂದ ಬಳಸಿಕೊಳ್ಳಲಾಗುತ್ತಿದೆ.
ಶೇಖರ ಮೊಗವೀರ, ಶಿಕ್ಷಕರು ಕುಂದಾಪುರ
ಸಕಾರಾತ್ಮಕ ಸ್ಪಂದನೆ ಸಿಗುತ್ತಿದೆ
ವಿದ್ಯಾಗಮದ ಮೂಲಕ ಮಕ್ಕಳಿರುವ ಕಡೆಗೆ ತೆರಳಿ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಲಾಗಿದೆ. ವಿದ್ಯಾರ್ಥಿಗಳು ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. 20-25 ಮಕ್ಕಳಿಗೆ ಏಕಕಾಲಕ್ಕೆ ಶಿಕ್ಷಣ ನೀಡುವ ಗುರಿ ಹೊಂದಲಾ ಗಿದೆ. ವಾರಕ್ಕೆ ಒಂದು ಬಾರಿಯಾದರೂ ವಿದ್ಯಾರ್ಥಿಗಳನ್ನು ಭೇಟಿಯಾಗಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಈಗಾಗಲೇ ಪಠ್ಯಪುಸ್ತಕಗಳನ್ನು ಒದಗಿಸಲಾಗಿದೆ. ಉಳಿದ ಪಠ್ಯಪರಿಕರಗಳನ್ನು ನಾವು ಶಾಲೆಯಿಂದ ಪಾಠಮಾಡುವ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತೇವೆ.
ಉಷಾ, ಶಿಕ್ಷಕರು, ಉಡುಪಿ
ಜವಾಬ್ದಾರಿಗೆ ಬದ್ಧರಾಗಿದ್ದೇವೆ
ಕೋವಿಡ್-19 ಮಹಾಮಾರಿ ನಮ್ಮ ದೇಶದಲ್ಲಿ ಹೊಕ್ಕಾಗ ನಮಗೂ ಭಯವಿತ್ತು ಆದರೆ ನಿರಂತರ ಕಲಿಕೆಗೆ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿಯ ಮುಂದೆ ಭಯ ಏನೂ ಅಲ್ಲ ಎಂದು ಎನಿಸಿದೆ. ಸಮಾಜಕ್ಕೆ ಮಾನವ ಸಂಪನ್ಮೂಲ ನೀಡುವುದು ನಮ್ಮ ಆದ್ಯ ಕರ್ತವ್ಯ ಮತ್ತು ಇದು ನಮ್ಮ ಹೆಮ್ಮೆ. ಮಕ್ಕಳಿಗಾಗಿ ಯಾವುದೇ ಕಷ್ಟವನ್ನು ಎದುರಿಸಲು ಸಿದ್ಧರಿದ್ದೇವೆ ಮತ್ತು ನಾವೆಲ್ಲಾ ಒಗ್ಗಟ್ಟಾಗಿ ಸರಕಾರದ ಜತೆ ಕೆಲಸ ಮಾಡಲು ಬದ್ಧªರಾಗಿರುತ್ತೇವೆ.
ಸಂಧ್ಯಾ ಬಿ.ಜಿ. ಸಹ ಶಿಕ್ಷಕಿ ಸ.ಹಿ.ಪ್ರಾ.ಶಾಲೆ ಕನ್ನಪ್ಪನಹಳ್ಳಿ, ಚಿಕ್ಕಬಳ್ಳಾಪುರ
ವೇತನವಿಲ್ಲದೇ ಸಮಸ್ಯೆ
ಖಾಸಗಿ ಶಾಲೆಗಳ ಶಿಕ್ಷಕರಿಗೆ ಐದಾರು ತಿಂಗಳುಗಳಿಂದ ವೇತನ ಸಿಗುತ್ತಿಲ್ಲ. ನಗರ ಮಟ್ಟದ ಶಾಲೆಗಳಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸಿ ಕೆಲವೇ ಶಿಕ್ಷಕರಿಗೆ ಶೇ.50 ಸಂಬಳ ನೀಡುತ್ತಿದ್ದಾರೆ. ಗ್ರಾಮಾಂತರ ಶಾಲೆಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲದ ಕಾರಣದಿಂದ ಆನ್‌ಲೈನ್ ಶಿಕ್ಷಣ ಸಾಧ್ಯವಾಗುತ್ತಿಲ್ಲ. ಕೆಲವು ಶಿಕ್ಷಕರ ವಿದ್ಯಾರ್ಹತೆ ದಾಖಲಾತಿಗಳು ಶಾಲೆಯಲ್ಲಿಟ್ಟುಕೊಂಡಿರುವುದರಿಂದ ಹೊಸ ಕೆಲಸ ಸೇರುವುದು ಕಷ್ಟವಾಗುತ್ತಿದೆ.
ಎನ್.ಪ್ರಭಾದೇವಿ, ಖಾಸಗಿ ಶಾಲಾ ಶಿಕ್ಷಕರು, ಕೆಜಿಎಫ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.