Team Udayavani, Apr 5, 2019, 4:22 PM IST
ಬಿಸಿಲಿನ ಧಗೆ ಹೆಚ್ಚಾದಂತೆ ಮನೆಯಲ್ಲೊಂದು ಎಸಿ ಇದ್ದರೆ ಚೆನ್ನಾಗಿ ಇತ್ತು ಎಂಬ ಮಾತು ಎಲ್ಲರ ಮನದಲ್ಲೂ ತಂಪು ಗಾಳಿಯಂತೆ ಬೀಸುತ್ತಿರುತ್ತದೆ. ಆದರೆ ಎಸಿ ತುಂಬಾ ದುಬಾರಿ. ಹೀಗಾಗಿ ಎಸಿಗೆ ಪರ್ಯಾಯವಾಗಿ ಏನಿದೇ ಎಂದು ಮಾರುಕಟ್ಟೆಯತ್ತ ತೆರಳಿದರೆ ಸಿಗುವುದು ತಂಪುತಂಪು ನೀಡುವ ಕೂಲರ್ ಮತ್ತು ಟವರ್
ಫ್ಯಾನ್‌ಗಳು. ಕೈಗೆಟಕುವ ದರದಲ್ಲಿ ಚಿತ್ತಾಕರ್ಷಕ ವಿನ್ಯಾಸದಲ್ಲಿ ಲಭ್ಯವಿರುವ ಇವು ಎಲ್ಲರ ಮನಗೆದ್ದಿವೆ.
ಬಿಸಿಲಿನ ಧಗೆ ಹೆಚ್ಚುತ್ತಿದೆ. ತಂಪಾದ ಗಾಳಿ ಮರುಭೂಮಿಯ ಓಯಸಿಸ್‌ನಂತಾಗಿದೆ. ಮರಗಿಡಗಳೇ ಇಲ್ಲದ ನಗರ ಪ್ರದೇಶಗಳಲ್ಲಿ ಬೇಸಗೆಯಲ್ಲಿ ಬಿಸಲಿನ ತಾಪ ಜೋರಾಗಿರುವುದು ಸಾಮಾನ್ಯ ಎಂದರೂ ಈ ಬಾರಿ ಮಾತ್ರ ತೀವ್ರ ಹೆಚ್ಚಳಗೊಂಡಂತಿದೆ. ಕೇವಲ ನಗರದಲ್ಲಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲಿಯೂ ಸುಡು ಬಿಸಿಲಿನ ಪ್ರಖರತೆ ಜೀವ ಹಿಂಡುವಂತಿದೆ.
ಬಿಸಿಲಿನ ಕಾವು ಹೆಚ್ಚಾದಾಗ, ದೇಹ ತಂಪಾಗಿಸಲು ಮೊರೆ ಹೋಗುವುದು ಫ್ಯಾನ್‌ಗೆ. ಗ್ರಾಮೀಣ ಭಾಗದಲ್ಲಾದರೆ ಫ್ಯಾನ್ ಹಾಕಿ ಸಿಮೆಂಟ್ ನೆಲದಲ್ಲಿ ಒಂದಷ್ಟು ಹೊತ್ತು ಮಲಗಿದರೆ ದೇಹ ತಂಪಾಗುತ್ತದೆ. ಆದರೆ ನಗರದ ಟೈಲ್ಸ್ ಅಳವಡಿಸಿದ ನೆಲ, ತಾರಸಿ ಕಟ್ಟಡದಲ್ಲಿ ಅಂತಹ ತಂಪೆಲ್ಲಿದೆ? ಆದರೆ ಸುಡು ಬಿಸಲಿನಿಂದ ದೇಹವನ್ನು ಒಂದಷ್ಟು ಹೊತ್ತು ತಂಪು ಮಾಡಿಕೊಳ್ಳೋಣವೆಂದರೆ, ಸಾಮಾನ್ಯ ಫ್ಯಾನ್‌ನಿಂದಲೂ ಬರುವುದು ಬಿಸಿ ಗಾಳಿಯೇ!
ಮೊದಲೆಲ್ಲ ಟೇಬಲ್ ಫ್ಯಾನ್, ಸೀಲಿಂಗ್ ಫ್ಯಾನ್ ಇದ್ದರೆ ತಂಪಿಗೆ ಕೊರತೆ ಇರಲಿಲ್ಲ. ಆದರೀಗ, ಫ್ಯಾನ್‌ನಿಂದ ಬರುವ ಬಿಸಿಗಾಳಿ ಮೈಯನ್ನು ಬೆವರಿನಲ್ಲಿ ತೋಯುವಂತೆ ಮಾಡುತ್ತಿದೆ. ಅದಕ್ಕಾಗಿ ಮೊರೆ ಹೋಗುವುದು ದೇಹಕ್ಕೆ ತಂಪು ನೀಡುವ ಕೂಲರ್ ಮತ್ತು ಟವರ್ ಫ್ಯಾನ್‌ಗಳಿಗೆ.
ಹೆಚ್ಚಿದ ಬೇಡಿಕೆ
ಹೇಳಿಕೇಳಿ ಮಂಗಳೂರು ಅತಿ ತಾಪಮಾನವುಳ್ಳ ನಗರ. ಇಲ್ಲಿ ಬೇಸಗೆ ಮಾತ್ರವಲ್ಲ; ಮಳೆ, ಚಳಿಗಾಲದಲ್ಲಿಯೂ ಸೆಕೆಯ ಅನುಭವ ಆಗುತ್ತಲೇ ಇರುತ್ತದೆ. ಅದಕ್ಕಾಗಿ ಜನ ಫ್ಯಾನ್ ಬದಲಾಗಿ ಕೂಲರ್ ಅಥವಾ ಟವರ್ ಫ್ಯಾನ್‌ನ ಮೊರೆ ಹೋಗಿದ್ದಾರೆ. ಕಳೆದ ಒಂದೆರಡು ವರ್ಷಗಳಿಂದೀಚೆಗೆ ಟವರ್ ಫ್ಯಾನ್‌ಗೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಬೇಸಗೆಯಲ್ಲಂತೂ ಟವರ್ ಫ್ಯಾನ್‌ಗೆ ಬೇಡಿಕೆ ಕುದುರಿದೆ ಎನ್ನುತ್ತಾರೆ ನಗರದ ವಿವಿಧ ಎಲೆಕ್ಟ್ರಾನಿಕ್ಸ್ ಮಳಿಗೆಗಳ ಸಿಬಂದಿ.
ಅಗ್ಗದ ದರಕ್ಕೆ ಕೂಲರ್
ಸೆಕೆಯಿಂದ ರಕ್ಷಿಸಿಕೊಳ್ಳಲು ಮನೆಯ ರೂಮ್‌ಗೆ ಹವಾನಿಯಂತ್ರಿತ ಉಪಕರಣ ಅಳವಡಿಸುವುದು ಉಳ್ಳವರ ಮನೆಯ ಮಾತು. ಆದರೆ ಮಧ್ಯಮ ವರ್ಗ ಮತ್ತು ಬಡ ವರ್ಗದ ಮನೆ ಮಂದಿಯ ಕತೆಯೇನು? 20- 30 ಸಾವಿರ ರೂ. ಖರ್ಚು ಮಾಡಿ ಹವಾನಿಯಂತ್ರಿತ ಉಪಕರಣವನ್ನು ಅಳವಡಿಸುವುದೆಲ್ಲ ಅವರಿಗೆ ಸಾಧ್ಯವಾಗದ ಮಾತು. ಹೀಗಿದ್ದಾಗ, ಈ ವರ್ಗದವರು ಮಾತ್ರವಲ್ಲ ಅತಿ ಶ್ರೀಮಂತ ವರ್ಗದವರು ಕೂಡ ಮೊರೆ ಹೋಗುವುದು ಕೂಲರ್ ಮತ್ತು ಟವರ್ ಫ್ಯಾನ್‌ಗೆ. ಎಲ್ಲ ವರ್ಗದ ಮನೆಯವರಿಗೂ ಬಿಸಿಲಿನ ಪ್ರಖರತೆಯಿಂದ ರಕ್ಷಣೆ ನೀಡುವ ಆತ್ಮೀಯ ಸ್ನೇಹಿತನಾಗಿ ಕೂಲರ್ ಮತ್ತು ಟವರ್ ಫ್ಯಾನ್‌ಗಳು ಮನೆ ತುಂಬಿಕೊಂಡಿವೆ. ಕೂಲರ್ ಮತ್ತು ಟವರ್ ಫ್ಯಾನ್‌ನಲ್ಲಿ ವಿವಿಧ ಗಾತ್ರದವುಗಳಿದ್ದು, 2,500 ರೂ. ಗಳಿಂದ ಬೆಲೆ ಆರಂಭವಾಗುತ್ತದೆ.
ಎಸಿಯಷ್ಟೇ ತಂಪು
ಮನೆಯಲ್ಲಿ ಬೇಕಾದಷ್ಟು ನೀರಿದ್ದರಾಯಿತು. ನೀರು ಹಾಕಿದರೆ ಎಸಿಯಷ್ಟೇ ತಂಪಾಗಿಸುವ ಕೂಲರ್‌ಗೆ ಬೆಲೆಯೂ ಕಡಿಮೆ. ಪ್ರತಿ ಕೂಲರ್‌ಗೂ ಎಷ್ಟು ಲೀಟರ್ ನೀರು ಸುರಿಯಬೇಕು ಎಂಬ ನಿಯಮವಿದೆ. ಸಣ್ಣ ಕೂಲರ್‌ಗಳಿಗೆ ಕಡಿಮೆ, ಹೆಚ್ಚು ಲೀಟರ್ ಸಾಮರ್ಥ್ಯದ ಕೂಲರ್‌ಗಳಿಗೆ ಹೆಚ್ಚು ನೀರು ಹಾಕಿದರೆ ಎಸಿಯಷ್ಟೇ ತಂಪಾಗಿಸುವುದರೊಂದಿಗೆ ನೆಮ್ಮದಿಯ ನಿದ್ದೆಯನ್ನು ನೀಡುತ್ತದೆ. ಟವರ್ ಫ್ಯಾನ್‌ಗೆ ನೀರು ಹಾಕಬೇಕಾದ ಅವಶ್ಯವಿಲ್ಲ; ಇದರಲ್ಲಿ ಫ್ಯಾನ್‌ಗಿಂತ ಹೆಚ್ಚು ಗಾಳಿ ಸೋಕಿ, ದೇಹ ತಂಪಾಗುವಂತೆ ಮಾಡುತ್ತದೆ.
ಉತ್ತಮ ಬೇಡಿಕೆ
ಮಂಗಳೂರಿನಲ್ಲಿ ಕಳೆದೆರಡು ವರ್ಷಗಳಿಂದೀಚೆಗೆ ಕೂಲರ್ ಮತ್ತು ಟವರ್ ಫ್ಯಾನ್‌ಗೆ ಬೇಡಿಕೆ ಜಾಸ್ತಿಯಾಗಿದೆ. ಈ ವರ್ಷ ಉತ್ತಮ ಬೇಡಿಕೆ ಇದೆ. ಈಗಿನ ಸೆಕೆ, ಬಿಸಿಲಿನ ಪ್ರಖರತೆಯಿಂದ ರಕ್ಷಿಸಿಕೊಳ್ಳಲು ಕೂಲರ್‌ನ್ನು ಜನ ಇಷ್ಟ ಪಡುತ್ತಾರೆ ಎನ್ನುತ್ತಾರೆ ನಗರದ ಎಲೆಕ್ಟ್ರಾನಿಕ್ಸ್ ಮಳಿಗೊಂದರ ಮ್ಯಾನೇಜರ್ ಶಬರೀಶ್.
ಕೂಲರ್, ಟವರ್ ಫ್ಯಾನ್ ಖರೀದಿಗೆ ಹೆಚ್ಚಿನ ಒಲವು
ಮಂಗಳೂರಿನಲ್ಲಿ ಕಳೆದೆರಡು ವರ್ಷಗಳಿಂದ, ಅದರಲ್ಲೂ ಈ ವರ್ಷ ಸೆಕೆ ಜಾಸ್ತಿ ಇದೆ. ಅದಕ್ಕಾಗಿ ಜನ ಕೂಲರ್, ಟವರ್ ಫ್ಯಾನ್ ಖರೀದಿಗೆ ಹೆಚ್ಚು ಆಸಕ್ತರಾಗಿದ್ದಾರೆ. ಈಗ ಆಫರ್‌ಗಳೂ ಲಭ್ಯವಿರುವುದರಿಂದ ಉತ್ತಮ ಬೇಡಿಕೆ ಇದೆ ಎನ್ನುತ್ತಾರೆ ಎಲೆಕ್ಟ್ರಾನಿಕ್ಸ್ ಸಂಸ್ಥೆಯೊಂದರ ಸಿಬಂದಿ ನಿಶಾಂತ್.
ಧನ್ಯಾ ಬಾಳೆಕಜೆ