ಪ್ರತೀ ಮನೆ ವಿಳಾಸಕ್ಕೂ ಸಿಗಲಿದೆ ಡಿಜಿಟಲ್ ಸ್ಪರ್ಶ!
ವಿಳಾಸಗಳಿಗೆ ಆಧಾರ್ ಮಾದರಿಯಲ್ಲಿ ವಿಶಿಷ್ಟ ಡಿಜಿಟಲ್ ಕೋಡ್ ಅನ್ನು ಸರಕಾರ ನೀಡಲಿದೆ.
Team Udayavani, Dec 27, 2021, 8:20 AM IST
ಎಲ್ಲೋ ಹೋಗಬೇಕು, ಯಾರಿಗೋ ಪಾರ್ಸೆಲ್ ತಲುಪಿಸಬೇಕು, ಆಸ್ತಿ ತೆರಿಗೆ ಕಟ್ಟಬೇಕು, ಕೊಟ್ಟಿರುವ ವಿಳಾಸ ಜತೆಯಲ್ಲಿದೆಯೋ?, ಸರಿಯಾಗಿದೆಯೋ? ಎಂದೆಲ್ಲ ಅನುಮಾನ, ಆತಂಕ ಪಡುವ ಕಾಲ ಭವಿಷ್ಯದ ದಿನಗಳಲ್ಲಿ ದೂರವಾಗಲಿದೆ. ನಿರ್ದಿಷ್ಟ ವಿಳಾಸದ ಗುರುತಿಸುವಿಕೆ ಮತ್ತು ತಲುಪುವಿಕೆ ಇನ್ನು ಕಷ್ಟವಾಗಲಾರದು. ಯಾಕೆಂದರೆ ಶೀಘ್ರದಲ್ಲೇ ಎಲ್ಲರ ಮನೆಗೂ ಡಿಜಿಟಲ್ ಅಡ್ರೆಸ್ ಕೋಡ್(ಡಿಎಸಿ) ಸಿಗಲಿದೆ. ವಿಳಾಸದ ಬದಲು ಈ ಡಿಎಸಿಯನ್ನು ಕೊಟ್ಟರೆ ಸಾಕು. ನಿಮ್ಮ ಎಲ್ಲ ಕೆಲಸಗಳು ಸಾಂಗವಾಗಿ ನೆರವೇರುತ್ತವೆ. ಈಗ ದೇಶದ ಪ್ರತಿಯೊಬ್ಬ ಪ್ರಜೆಗೂ ಆಧಾರ್ ಕಾರ್ಡ್ ಇರುವಂತೆ ಪ್ರತೀ ಮನೆಗೂ ಡಿಎಸಿ ಅನ್ನು ನೀಡಲು ಯೋಜನೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ. ಅತ್ಯಂತ ಮಹತ್ವಾಕಾಂಕ್ಷೆಯ ಈ ಯೋಜನೆ ಜನಗಣತಿ, ರಾಷ್ಟ್ರೀಯ ಜನಸಂಖ್ಯೆ ನೋಂದಣಿ, ಮತದಾರರ ಪಟ್ಟಿ ರಚನೆಗೆ ಸಹಕಾರಿಯಾಗಲಿದೆ. ಸದ್ಯ ಇದು ಪ್ರಾಸ್ತಾವಿಕ ಹಂತದಲ್ಲಿದ್ದು ಈ ಬಗ್ಗೆ ವಿಸ್ತೃತ ಚರ್ಚೆಗಳು ಇನ್ನಷ್ಟೇ ನಡೆಯಬೇಕಿದೆ. ಆದರೆ ಕೇಂದ್ರ ಸರಕಾರ ಮಾತ್ರ ಈ ದಿಸೆಯಲ್ಲಿ ಹೆಜ್ಜೆ ಇರಿಸಿದೆ.
ಡಿಎಸಿ ಎಂದರೇನು? :
ಸದ್ಯದ ಪ್ರಸ್ತಾವನೆಯ ಪ್ರಕಾರ ವಿಳಾಸ ಪರಿಶೀಲನೆ, ದೃಢೀಕರಣ, ಆನ್‌ಲೈನ್ ಡೆಲಿವರಿಯಿಂದ ಹಿಡಿದು ಎಲ್ಲ ವ್ಯವಹಾರಗಳಿಗೆ ಅನುಕೂಲವಾಗುವಂತೆ ದೇಶದ ಎಲ್ಲ ವಿಳಾಸಗಳಿಗೆ ಆಧಾರ್ ಮಾದರಿಯಲ್ಲಿ ವಿಶಿಷ್ಟ ಡಿಜಿಟಲ್ ಕೋಡ್ ಅನ್ನು ಸರಕಾರ ನೀಡಲಿದೆ. ದೇಶದಲ್ಲಿನ ಪ್ರತಿಯೊಂದೂ ವಿಳಾಸವನ್ನೂ ಪರಿಶೀಲಿಸಿ ಅವುಗಳಿಗೆ ವಿಶಿಷ್ಟ ಕೋಡ್ ನೀಡಲಾಗುವುದು. ಇದು ಆ ವಿಳಾಸದಲ್ಲಿರುವ ಪ್ರತಿಯೋರ್ವನಿಗೂ ಇ-ವಿಳಾಸದಂತೆ ಕಾರ್ಯನಿರ್ವಹಿಸಲಿದೆ. ಅಷ್ಟು ಮಾತ್ರವಲ್ಲದೆ ಇದು ಅಧಿಕೃತ ಡಿಜಿಟಲ್ ಕೋಡ್ ಆಗಿರಲಿದ್ದು ವಿಳಾಸದ ಬಗೆಗಿನ ಸದ್ಯದ ಎಲ್ಲ ಗೊಂದಲಗಳು ನಿವಾರಣೆಯಾಗಲಿದೆ ಮತ್ತು ಈ ವಿಶಿಷ್ಟ ಕೋಡ್ ಮೂಲಕ ಪ್ರತಿಯೊಂದೂ ವಿಳಾಸಕ್ಕೂ ಡಿಜಿಟಲ್ ಭದ್ರತೆ ಲಭಿಸಲಿದೆ.
ಡಿಜಿಟಲ್ ವಿಳಾಸ ಕೋಡ್‌ನ ವೈಶಿಷ್ಟ್ಯ :
ಪ್ರತಿಯೊಬ್ಬ ವ್ಯಕ್ತಿಯ ಮನೆ ಅಥವಾ ವಾಸ್ತವ್ಯವಿರುವ ಕಟ್ಟಡ, ಕಚೇರಿ, ವಹಿವಾಟು ಸ್ಥಳ ಹೀಗೆ ಪ್ರತೀ ವಿಳಾಸಕ್ಕೆ ಪ್ರತ್ಯೇಕ ಡಿಎಸಿ ನೀಡಲಾಗುತ್ತದೆ. ಡಿಜಿಟಲ್ ವಿಳಾಸ ಕೋಡ್ ಅನ್ನು ಪ್ರತಿನಿಧಿಸುವ ಜಿಯೋಸ್ಪೇಷಿಯಲ್ ನಿರ್ದೇಶಾಂಕಗಳಿಗೆ ಲಿಂಕ್ ಮಾಡಲಾಗುತ್ತದೆ. ಪ್ರವೇಶ ದ್ವಾರ ಅಥವಾ ಗೇಟ್‌ನಲ್ಲಿರುವ ನಿರ್ದೇಶಾಂಕಗಳು ವಿಳಾಸವನ್ನು ಪ್ರತಿನಿಧಿಸುತ್ತವೆ. ಜಿಯೋಸ್ಪೇಷಿಯಲ್ ನಿರ್ದೇಶಾಂಕಗಳನ್ನು ಬಹಿರಂಗಪಡಿಸಬಾರದ ಕೆಲವೊಂದು ಸ್ಥಳಗಳಿಗೆ ಡಿಜಿಟಲ್ ವಿಳಾಸ ಕೋಡ್‌ಗಳನ್ನು ನೀಡುವುದಿಲ್ಲ. ನೆರೆಹೊರೆಯ ಅಥವಾ ನಗರ ನಿರ್ದೇಶಾಂಕಗಳಿಗೆ ಲಿಂಕ್ ಮಾಡಬಹುದು.
ಡಿಎಸಿ ನೀಡುವ ಹೊಣೆಗಾರಿಕೆ ಯಾರಿಗೆ? :
ಭಾರತ ಸರಕಾರದ ಅಂಚೆ ಇಲಾಖೆಯು ಡಿಜಿಟಲ್ ಅಡ್ರೆಸ್ ಕೋಡ್ ರಚನೆಯ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದೆ. ಅಂಚೆ ಇಲಾಖೆಯು ಇತ್ತೀಚೆಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಡಿಜಿಟಲ್ ವಿಳಾಸಗಳ ಪ್ರಸ್ತಾವದ ಕುರಿತಾಗಿನ ಅಧ್ಯಯನ ವರದಿಯ ಕರಡನ್ನು ಪ್ರಕಟಿಸಿ ಸಂಬಂಧಿತರಿಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಕೋರಿತ್ತು. ಈ ಅವಧಿ ಈಗಾಗಲೇ ಮುಕ್ತಾಯಗೊಂಡಿದ್ದು ಮಾಧ್ಯಮ ವರದಿಗಳ ಪ್ರಕಾರ ಶೀಘ್ರದಲ್ಲಿಯೇ ಸರಕಾರ ಡಿಎಸಿ ರಚನೆ ಪ್ರಕ್ರಿಯೆಗೆ ತನ್ನ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಪ್ರತೀ ವಿಳಾಸಕ್ಕೆ ಡಿಎಸಿ ಹೇಗೆ ಭಿನ್ನವಾಗಿರುತ್ತದೆ? :
ಪ್ರತಿಯೊಂದೂ ಸ್ವತಂತ್ರ ಮನೆ ಡಿಜಿಟಲ್ ವಿಳಾಸ ಕೋಡ್ ಹೊಂದಿರುತ್ತದೆ. ಮನೆಯನ್ನು ಎರಡು ಭಾಗಗಳಾಗಿ ವಿಂಗಡಿಸಿದರೆ ಬೇರೆ ವಿಳಾಸದೊಂದಿಗೆ ಪ್ರತ್ಯೇಕ ಡಿಎಸಿ ನೀಡಲಾಗುತ್ತದೆ. ಅಪಾರ್ಟ್‌ಮೆಂಟ್ ಕಟ್ಟಡಗಳಾದರೆ ಪ್ರತೀ ವ್ಯಕ್ತಿಗೆ ಡಿಜಿಟಲ್ ವಿಳಾಸ ಕೋಡ್ ಸಿಗುತ್ತದೆ. ಇವುಗಳನ್ನು ಅಪಾರ್ಟ್‌ಮೆಂಟ್ ಕಟ್ಟಡ ಅಥವಾ ಬ್ಲಾಕ್ ಪ್ರವೇಶದ ಜಿಯೋಸ್ಪೇಷಿಯಲ್ ನಿರ್ದೇಶಾಂಕಗಳಿಗೆ ಲಿಂಕ್ ಮಾಡಲಾಗಿರುತ್ತದೆ. ಇನ್ನು ಕಾರ್ಪೋರೆಟ್ ಕಚೇರಿ ಅಥವಾ ಸರಕಾರಿ ಕಚೇರಿ ಸಂಕೀರ್ಣವು ವಿಭಿನ್ನ ಡಿಜಿಟಲ್ ವಿಳಾಸ ಕೋಡ್ ಪಡೆದಿರುತ್ತದೆ. ಅದು ಕಚೇರಿ ಕಟ್ಟಡದ ಜಿಯೋಸ್ಪೇಷಿಯಲ್ ನಿರ್ದೇಶಾಂಕಗಳಿಗೆ ಲಿಂಕ್ ಆಗಿರುತ್ತದೆ. ಪ್ರತೀ ವಿಳಾಸಕ್ಕೆ ಡಿಜಿಟಲ್ ವಿಳಾಸ ಕೋಡ್ ಶಾಶ್ವತವಾಗಿರುತ್ತದೆ. ಆಸ್ತಿಯ ವಿಂಗಡಣೆಯಾಗಿ ಬಹು ವಿಳಾಸಗಳಾಗಿ ಬದಲಾದರೆ ಪ್ರತೀ ವಿಳಾಸಕ್ಕೆ ಹೊಸ ಡಿಜಿಟಲ್ ವಿಳಾಸ ಕೋಡ್ ನೀಡಲಾಗುತ್ತದೆ.
ಡಿಜಿಟಲ್ ವಿಳಾಸ ಕೋಡ್‌ನಲ್ಲಿ ಎಷ್ಟು ಅಂಕೆ? :
ಅಂಚೆ ಇಲಾಖೆಯ ಪ್ರಕಾರ ಭಾರತದಲ್ಲಿ ಸುಮಾರು 35 ಕೋಟಿ ಮನೆಗಳಿವೆ. ಎಲ್ಲ ವ್ಯಾಪಾರ ಮತ್ತು ವಸತಿಯೇತರ ಸ್ಥಳಗಳನ್ನು ಸೇರಿಸಿದರೆ ದೇಶದ ಒಟ್ಟು ವಿಳಾಸಗಳ ಸಂಖ್ಯೆ ಸುಮಾರು 75 ಕೋಟಿ ಆಗಬಹುದು. ಆರಂಭದಲ್ಲಿ 11 ಡಿಜಿಟ್ ಪ್ಲಸ್ 1 ಚೆಕ್ ಡಿಜಿಟ್ ಅಂದರೆ 12 ಡಿಜಿಟ್‌ನ ಡಿಜಿಟಲ್ ಅಡ್ರೆಸ್ ಕೋಡ್ ನೀಡುವ ಪ್ರಸ್ತಾವವಿದೆ. ಅಗತ್ಯವಿದ್ದರೆ ಸುಮಾರು 100 ಕೋಟಿ ವಿಳಾಸಗಳ ಡಿಎಸಿಯನ್ನು ರಚಿಸಬಹುದು.
ಘಾನಾದಲ್ಲೂ ನೀಡಲಾಗುತ್ತಿದೆ ಡಿಜಿಟಲ್ ವಿಳಾಸ :
ಘಾನಾ ದೇಶದಲ್ಲೂ ರಾಷ್ಟ್ರೀಯ ಡಿಜಿಟಲ್ ವಿಳಾಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, 2022ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರಿಂದ ದೇಶದ ಆಸ್ತಿಯನ್ನು ಗುರುತಿಸಲು ಸಾಧ್ಯವಿದೆ ಎನ್ನುತ್ತಾರೆ ಉಪಾಧ್ಯಕ್ಷ ಡಾ| ಮಹಮುದು ಬವುಮಿಯಾ. ಘಾನಾ ಪೋಸ್ಟ್ ಜಿಪಿಎಸ್ ಎಂದು ಕರೆಯಲ್ಪಡುವ ರಾಷ್ಟ್ರೀಯ ಡಿಜಿಟಲ್ ಆಸ್ತಿ ವಿಳಾಸ ವ್ಯವಸ್ಥೆಯು ಜಾಗತಿಕ ವಿಳಾಸ ವ್ಯವಸ್ಥೆಯಾಗಿದ್ದು, ಸರಕಾರಿ ನೀತಿಗಳ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಪ್ರತೀ ಸ್ಥಳ, ಆಸ್ತಿಗೆ ಪರಿಣಾಮಕಾರಿ ವಿಧಾನಗಳನ್ನು ಒದಗಿಸಲು ಅನುಕೂಲವಾಗುವಂತೆ 2017ರ ಅಕ್ಟೋಬರ್‌ನಲ್ಲಿ ಪ್ರಾರಂಭಿಸಲಾಗಿತ್ತು. Ghana Post GPS ಎಕಖ ಆರ್ಥಿಕತೆಯನ್ನು ಡಿಜಿಟಲೀಕರಣಗೊಳಿಸುವ ಸರಕಾರದ ಕಾರ್ಯಸೂಚಿಯ ಭಾಗವಾಗಿದೆ. ಇದರಲ್ಲಿ ನೋಂದಣಿಗೆ ಪ್ರಾರಂಭದಲ್ಲಿ ಶುಲ್ಕ ವಿಧಿಸಿದ್ದರೂ ಸಾರ್ವಜನಿಕರಿಂದ ಹೆಚ್ಚಿನ ಟೀಕೆಗಳು ಬಂದಿದ್ದರಿಂದ ಬಳಿಕ ಶುಲ್ಕವನ್ನು ರದ್ದುಗೊಳಿಸಲಾಯಿತು.
ಪ್ರಸ್ತುತ ಇರುವ ಸಮಸ್ಯೆಗಳು :
- ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವ್ಯಾಪಾರ, ವಹಿವಾಟುಗಳು ಮತ್ತು ಆನ್‌ಲೈನ್ ಶಾಪಿಂಗ್ ಕೂಡ ಹೆಚ್ಚಾಗಿವೆ. ಆದರೆ ಗ್ರಾಹಕರು ನೀಡುವ ವಿಳಾಸ ಅಥವಾ ಆ ಸ್ಥಳ ತಲುಪುವುದು ತುಂಬಾ ಕಷ್ಟಕರವಾಗಿದೆ.
- ವಿಳಾಸ ಪುರಾವೆಗಾಗಿ ಆಧಾರ್ ಬಳಸಲಾಗುತ್ತದೆ. ಆದರೆ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ಡಿಜಿಟಲ್ ಆಗಿ ದೃಢೀಕರಿಸಲು ಸಾಧ್ಯವಾಗದಿರುವುದರಿಂದ ವಿಳಾಸದ ಬಗೆಗಿನ ಅನುಮಾನಗಳು ಕಾಡುವುದು ಸಹಜ.
- ನಕಲಿ ವಿಳಾಸದಿಂದ ವಂಚನೆ. ಪ್ರಸ್ತುತ ಇ- ಕಾಮರ್ಸ್ ಕಂಪೆನಿಗಳು ಮತ್ತು ಗ್ರಾಹಕರು ನಕಲಿ ವಿಳಾಸದ ಬಾಧೆಯಿಂದ ವಂಚನೆಗೊಳಗಾಗುತ್ತಿದ್ದಾರೆ. ವಿಳಾಸಗಳು ಡಿಜಿಟಲ್ ಲಿಂಕ್ ಆದರೆ ಅವುಗಳನ್ನು ಆನ್‌ಲೈನ್‌ನಲ್ಲಿ ದೃಢೀಕರಿಸಬಹುದು. ಇದರಿಂದ ವಂಚನೆಗಳನ್ನು ತಡೆಗಟ್ಟುವುದು ಸುಲಭ ಸಾಧ್ಯ.
- ಕೆಲವೊಂದು ವಿಳಾಸಗಳು ಗೊಂದಲಮಯವಾಗಿರುವುದರಿಂದ ಅದನ್ನು ಹುಡುಕುವುದೇ ಒಂದು ಸಾಹಸದ ಕೆಲಸವಾಗುತ್ತದೆ. ಡಿಎಸಿಯು ಒಂದು ವಿಶಿಷ್ಟ ಕೋಡ್ ಆಗಿರುವುದರಿಂದ ಅತ್ಯಂತ ಸುಲಭವಾಗಿ ನಿರ್ದಿಷ್ಟ ವಿಳಾಸವನ್ನು ತಲುಪಬಹುದಾಗಿದೆ.
ಡಿಎಸಿ ಯಾಕೆ? :
ಪ್ರಸ್ತುತ ಅಧಾರ್ ಅನ್ನು ವಿಳಾಸದ ಪುರಾವೆಯಾಗಿ ಬಳಸಲಾಗುತ್ತಿದೆ. ಆದರೆ ಆಧಾರ್‌ನಲ್ಲಿ ನಮೂದಿಸಿದ ವಿಳಾಸವನ್ನು ಡಿಜಿಟಲ್ ಆಗಿ ದೃಢೀಕರಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಆ ಸ್ಥಳವನ್ನು ಡಿಜಿಟಲ್ ಲೊಕೇಶನ್‌ಗೆ (ಜಿಯೋಸ್ಪೇಷಿಯಲ್ ಕಕ್ಷೆ ಅಥವಾ ನಿರ್ದೇಶಾಂಕಗಳು) ಲಿಂಕ್ ಮಾಡಬೇಕು. ಹಾಗಾದರೆ ಮಾತ್ರ ವಿಳಾಸದ ಆನ್‌ಲೈನ್ ದೃಢೀಕರಣ ಸಾಧ್ಯವಾಗಲಿದ್ದು ಇದನ್ನು ಡಿಜಿಟಲ್ ವಿಳಾಸದ ಗುರುತಾಗಿ ಬಳಸಬಹುದು. ಇದೇ ಕಾರಣಕ್ಕಾಗಿ ಡಿಎಸಿ ರಚನೆಗೆ ಸರಕಾರ ಗಂಭೀರ ಚಿಂತನೆ ನಡೆಸಿದೆ.
ಪ್ರಯೋಜನಗಳು :
- ಡಿಜಿಟಲ್ ಅಡ್ರೆಸ್ ಕೋಡ್ ಅನ್ನು ಜಿಯೋಸ್ಪೇಷಿಯಲ್ ನಿರ್ದೇಶಾಂಕಗಳಿಗೆ ಲಿಂಕ್ ಮಾಡಲಾಗಿರುವುದರಿಂದ ವಿಳಾಸದ ಆನ್‌ಲೈನ್ ದೃಢೀಕರಣ ಸುಲಭವಾಗುತ್ತದೆ.
- ಬ್ಯಾಂಕಿಂಗ್, ವಿಮೆ, ಟೆಲಿಕಾಂ ಕ್ಷೇತ್ರಗಳಿಗೆ ಕೆವೈಸಿ ಪರಿಶೀಲನೆ ಪ್ರಕ್ರಿಯೆ ಸುಲಭವಾಗುತ್ತದೆ. ಇದರಿಂದ ವೆಚ್ಚ ಕಡಿಮೆಯಾಗಿ ವಿಳಾಸ ದೃಢೀಕರಣದ ಜತೆಗೆ ಆಧಾರ್ ದೃಢೀಕರಣವನ್ನು ಡಿಜಿಟಲ್ ಇಕೆವೈ ಪ್ರಕ್ರಿಯೆಯ ಮೂಲಕ ಸುಲಭಗೊಳಿಸುತ್ತದೆ.
- ಇ ಕಾಮರ್ಸ್ ವಲಯದಲ್ಲಿ ಹೆಚ್ಚಿನ ಉತ್ಪಾದಕತೆ, ಸೇವೆಯ ಗುಣಮಟ್ಟ ಉತ್ತಮಗೊಳಿಸಲು ಕಾರಣವಾಗುತ್ತದೆ.
- ಡಿಎಸಿಯಿಂದಾಗಿ ಆಸ್ತಿ ತೆರಿಗೆ, ವಿಪತ್ತು, ಚುನಾವಣೆ, ಮೂಲಸೌಕರ್ಯ ಯೋಜನೆ, ನಿರ್ವಹಣೆ, ಜನಗಣತಿ, ಕುಂದುಕೊರತೆ ನಿವಾರಣೆಯಂತಹ ಎಲ್ಲ ಹಣಕಾಸು ಮತ್ತು ಆಡಳಿತಾತ್ಮಕ ದಕ್ಷತೆ ಹೆಚ್ಚಿಸುವುದು ಸುಲಭವಾಗುತ್ತದೆ.
- ಡಿಜಿಟಲ್ ವಿಳಾಸ ಕೋಡ್ ಸರಕಾರದ ಯೋಜನೆಗಳನ್ನು ವಿತರಿಸಲು ಮತ್ತು ಕಾರ್ಯಗತಗೊಳಿಸುವುದನ್ನು ಸುಲಭಗೊಳಿಸುತ್ತದೆ.
- ಡಿಜಿಟಲ್ ಅಡ್ರೆಸ್ ಕೋಡ್ (DAC) ಸರಕಾರದ ಒನ್ ನೇಷನ್ ಒನ್ ಅಡ್ರೆಸ್ (ONOA) ಯೋಜನೆಯನ್ನು ಕಾರ್ಯಗತಗೊಳಿಸಲು ಸಹಕಾರಿಯಾಗಲಿದೆ.
– ವಿದ್ಯಾ ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.