ಪರಿಸರಸ್ನೇಹಿ, ಸುಲಲಿತ ತಂತ್ರಜ್ಞಾನ ಸಾಧನ ಇ-ಪ್ಯಾಡ್
Team Udayavani, Aug 15, 2022, 1:24 PM IST
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕಾಗದದ ಬಳಕೆ ಸಾಮಾನ್ಯ. ಪಠ್ಯ, ನೋಟ್‌ಬುಕ್, ಪ್ರಶ್ನೆಪತ್ರಿಕೆ, ಉತ್ತರಪತ್ರಿಕೆ…ಹೀಗೆ ನಮ್ಮ ಶೈಕ್ಷಣಿಕ ಜೀವನ ಕಾಗದದ ಹಾಳೆಗಳಿಂದಲೇ ತುಂಬಿಕೊಂಡಿವೆ. ಕಾಲೇಜು ಮಾತ್ರವಲ್ಲದೆ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳಲ್ಲೂ ಕಾಗದದ ಬಳಕೆ ಗಣನೀಯ ಪ್ರಮಾಣದಲ್ಲಿದೆ. ಇಂತಹ ಪರಿಸ್ಥಿತಿ ಯಲ್ಲಿ ಕಾಗದವನ್ನು ಬಳಸದೆ ಪರೀಕ್ಷೆ ನಡೆಸುವ ವ್ಯವಸ್ಥೆಯೊಂದು ರೂಪುಗೊಂಡರೆ ಹೇಗೆ ಎಂಬ ಪ್ರಶ್ನೆಗೆ ಉತ್ತರವೆಂಬಂತೆ ಇ-ಪ್ಯಾಡ್(ಎಕ್ಸಾಮಿ ನೇಶನ್ ಪ್ಯಾಡ್) ಎಂಬ ಕ್ರಾಂತಿಕಾರಕ ತಂತ್ರಜ್ಞಾನ ಸಾಧನ ಮಾರುಕಟ್ಟೆಗೆ ಬಂದಿದೆ. ಬಹಳಷ್ಟು ಶಾಲಾ-ಕಾಲೇಜುಗಳಲ್ಲಿ ಈಗಾಗಲೇ ಇದರ ಬಳಕೆ ಆರಂಭವಾಗಿದೆ.
ಏನಿದು ಇ-ಪ್ಯಾಡ್ ಎಂಬ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸಬೇಕೆಂದರೆ ಪರೀಕ್ಷೆಯಲ್ಲಿ ಬಳಸಬಹುದಾದ ಎಲೆಕ್ಟ್ರಾನಿಕ್ ಪ್ಯಾಡ್(ಎಲೆಕ್ಟ್ರಾನಿಕ್ ಸ್ಲೇಟ್) ಎನ್ನಬಹುದು. ಇದರ ಅಳತೆ ನಾವು ಮೊದಲು ಬಳಸುತ್ತಿದ್ದ ಸ್ಲೇಟಿನಂತೆ ಇದೆ(13x11x1ಇಂಚು) ಮತ್ತು ತೂಕ 850ಗ್ರಾಂ. ಬರೆಯಲು ಮಾತ್ರ ಬಳಪದ ಬದಲಿಗೆ ಇ-ಪೆನ್(ಎಲೆಕ್ಟ್ರಾನಿಕ್ ಪೆನ್) ಅಥವಾ ಸ್ಟೈಲಸ್ ಬಳಸಬೇಕಾಗುತ್ತದೆ.
ಕಾಗದದ ಮೇಲೆ ಪೆನ್ ಅಥವಾ ಪೆನ್ಸಿಲ್‌ನಿಂದ ಬರೆದು ಅಭ್ಯಾಸವಿರುವ ಮಕ್ಕಳು ಮೊದಮೊದಲು ಗಾಜಿನ ಸಮತಟ್ಟಿನಂತಿರುವ ಇ-ಪ್ಯಾಡ್ ಮೇಲೆ ಪ್ಲಾಸ್ಟಿಕ್ ಕಡ್ಡಿ ಅಥವಾ ಸ್ಟೈಲಸ್‌ನಿಂದ ಬರೆಯಲು ಹೆಣಗಾಡಬಹುದು. ಈ ಮೊದಲೇ ಟ್ಯಾಬ್ ಅಥವಾ ಆ್ಯಪಲ್ ಫೋನ್‌ನಲ್ಲಿ ಬರೆಯುವ ಅಭ್ಯಾಸ ಹೊಂದಿರುವ ಮಕ್ಕಳು ಇ-ಪ್ಯಾಡ್ ಅನ್ನು ತತ್‌ಕ್ಷಣ ಸ್ವೀಕರಿಸಲು ಸಿದ್ಧರಿರಬಹುದು. ಒಟ್ಟಿನಲ್ಲಿ ಇ-ಪ್ಯಾಡ್ ಬಳಕೆಯ ಮೊದಲು ಒಂದು ಖಡಕ್ ತರಬೇತಿಯ ಅಗತ್ಯವಂತೂ ಇದೆ. ಪರಿಸರಕ್ಕೆ ಇದರಿಂದಾಗುವ ಲಾಭ ಮತ್ತು ಇದರ ಬಳಕೆಯ ಅನುಕೂಲಗಳನ್ನು ಮಕ್ಕಳಿಗೆ ಮನದಟ್ಟಾಗಿಸಿ ಅವರಲ್ಲಿ ಭರವಸೆ ತುಂಬುವುದು ಶಿಕ್ಷಕರ ಜವಾಬ್ದಾರಿಯಾಗಿದೆ.
ಇದರ ಬಳಕೆಯಿಂದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಕರಿಗೂ ಕೂಡ ಬಹಳಷ್ಟು ಅನುಕೂಲಗಳಿವೆ. ವಿದ್ಯಾರ್ಥಿಗಳು ಇ-ಪ್ಯಾಡ್‌ನಲ್ಲಿ ಬೆರಳಚ್ಚು ಬಳಸಿ ಲಾಗಿನ್ ಆಗುವುದರಿಂದ ಇಂಪರ್ಸನೇಶನ್ (ಬದಲು ವಿದ್ಯಾರ್ಥಿ) ತೊಂದರೆಯಿಂದ ಮುಕ್ತರಾಗಬಹುದು. ಪ್ರಶ್ನೆಪತ್ರಿಕೆಗಳನ್ನು ಮೊದಲೇ ಸಿಸ್ಟಮ್‌ನಲ್ಲಿ ಅಪ್‌ಲೋಡ್ ಮಾಡಿರುವುದರಿಂದ ಮತ್ತು ಅದು ನಿರ್ಧರಿಸಿದ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ದೊರಕುವುದರಿಂದ ಪ್ರಶ್ನೆಪತ್ರಿಕೆ ಗಳನ್ನು ಪೇಪರ್ ಮೇಲೆ ಮುದ್ರಿಸುವ ಮತ್ತು ಪರೀಕ್ಷೆ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಹಂಚುವ ಅಗತ್ಯವಿರುವುದಿಲ್ಲ. ಪರೀಕ್ಷೆಯ ನಡುವೆ ಹೆಚ್ಚುವರಿ ಪೇಪರ್ ಕೊಡುವ ಪರಿಸ್ಥಿತಿ ಕೂಡ ಉದ್ಭವಿಸುವುದಿಲ್ಲ. ಮೊದಲೇ ನಿರ್ಧರಿಸಿದ ಸಮಯಕ್ಕೆ ಸರಿಯಾಗಿ ಪರೀಕ್ಷೆ ಮುಗಿಯುವಂತೆ ಕಮಾಂಡ್ ಕೊಟ್ಟಿರುವುದರಿಂದ ಆ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳ ಉತ್ತರಪತ್ರಿಕೆ ಆಟೋ ಸಬ್‌ಮಿಶನ್ ಆಗುತ್ತದೆ. ಪರೀಕ್ಷೆಯ ಒಂದು ಭಾಗವಾಗಿ ಬಹುಆಯ್ಕೆ (ಮಲ್ಟಿಪಲ್ ಚಾಯ್ಸ್)ಯ ಪ್ರಶ್ನೆಗಳಿದ್ದರೆ, ಅವುಗಳ ಉತ್ತರ ಮೊದಲೇ ವ್ಯವಸ್ಥೆಯಲ್ಲಿ ಅಳವಡಿಸುವುದರಿಂದ, ಆ ಭಾಗದ ಪ್ರಶ್ನೆಗಳ ಪ್ರತ್ಯೇಕ ಮೌಲ್ಯಮಾಪನ ನಡೆಸಬೇಕಾದ ಆವಶ್ಯಕತೆಯಿಲ್ಲ.
ಇದರೊಂದಿಗೆ ಉತ್ತರ ಪತ್ರಿಕೆ ಮೌಲ್ಯ ಮಾಪನ ಸಮಯದಲ್ಲೂ ಬಹಳಷ್ಟು ಅನುಕೂಲತೆಗಳನ್ನು ಕಾಣಬಹುದು. ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಪ್ರತೀ ಉತ್ತರಪತ್ರಿಕೆಯನ್ನು, ಇಬ್ಬರು ಮೌಲ್ಯ ಮಾಪಕರಿಂದ ಮೌಲ್ಯಮಾಪನ ಮಾಡಿಸುವ ವಾಡಿಕೆಯಿದೆ. ಭೌತಿಕ ಉತ್ತರ ಪತ್ರಿಕೆಗಳನ್ನು ಏಕಕಾಲದಲ್ಲಿ ಇಬ್ಬರು ಮೌಲ್ಯಮಾಪನ ಮಾಡುವುದು ಅಸಾಧ್ಯ. ಆದರೆ ಇ-ಪ್ಯಾಡ್‌ನಲ್ಲಿ ಬರೆದ ಇ-ಉತ್ತರ ಪತ್ರಿಕೆ ಯನ್ನು ಏಕಕಾಲದಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯ. ಇನ್ನೂ ಮುಂದುವರಿದ ಕೆಲವು ವಿಶ್ವವಿದ್ಯಾನಿಲಯಗಳು ಎಲ್ಲ ಉತ್ತರ ಪತ್ರಿಕೆಗಳ ಉತ್ತರಗಳನ್ನು ಪ್ರಶ್ನೆಗಳಿಗೆ ಅನುಗುಣವಾಗಿ ಪ್ರತ್ಯೇಕ ಮೌಲ್ಯಮಾಪನ ಮಾಡುವ ವ್ಯವಸ್ಥೆಯನ್ನೂ ಮಾಡಿಕೊಂಡಿವೆ. ಇದರಿಂದ ಮೌಲ್ಯಮಾಪನದಲ್ಲಿನ ವ್ಯತ್ಯಾಸವನ್ನು ಹತೋಟಿಯಲ್ಲಿಡಲು ಸಾಧ್ಯವಾಗುತ್ತದೆ.
ಮೌಲ್ಯಮಾಪಕರಿಗೆ ಉತ್ತರ ಓದಿ ಅಂಕಗಳನ್ನು ನೀಡಲು ಪತ್ರಿಕೆಯ ಬದಿಯಲ್ಲಿಯೇ ಆ ಪ್ರಶ್ನೆಯ ಗರಿಷ್ಠ ಅಂಕಗಳು ಮತ್ತು ನೀಡುವ ಅಂಕಗಳ ಆಯ್ಕೆ ಮಾಡಲು ಸಂಖ್ಯಾ ಮಾಪಕದ (ನಂಬರ್ ಸ್ಕೇಲ್‌ನ) ವ್ಯವಸ್ಥೆ ಇರುತ್ತದೆ. ಕೊನೆಯಲ್ಲಿ ನೀಡಿರುವ ಅಂಕಗಳ ಮೊತ್ತವನ್ನು ಇ-ಪ್ಯಾಡ್ ವ್ಯವಸ್ಥೆಯೇ ಮಾಡಿ ಮುಗಿಸುತ್ತದೆ. ಕಡೆಯಲ್ಲಿ ಎಲ್ಲ ಉತ್ತರಪತ್ರಿಕೆಗಳ ಅಂಕಗಳು, ವಿದ್ಯಾರ್ಥಿಗಳ ಹೆಸರು, ಕ್ರಮ ಸಂಖ್ಯೆ ಮತ್ತು ಇತರ ವಿವರಗಳಿರುವ ಎಕ್ಸೆಲ್ ಶೀಟನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಪರೀಕ್ಷೆ ನಡೆಸುವಾಗ ವಿದ್ಯಾರ್ಥಿಗಳ ಇ- ಪ್ಯಾಡ್‌ಗಳು ಪರೀಕ್ಷಕರ ಇ-ಪ್ಯಾಡ್‌ಗೆ (ಪ್ರಾಕ್ಟರ್ ಇ-ಪ್ಯಾಡ್‌ಗೆ) ರೂಟರ್ ಮೂಲಕ ಸಂಪರ್ಕಿಸುವುದರಿಂದ ಅಂತರ್ಜಾಲ (ಇಂಟರ್ನೆಟ್)ದ ಮೇಲಿನ ಅವಲಂಬನೆ ಇಲ್ಲವಾಗುತ್ತದೆ. ಇ-ಪ್ಯಾಡ್‌ಗಳನ್ನು ಸಂಪೂರ್ಣ ವಾಗಿ ಚಾರ್ಜ್ ಮಾಡಿದರೆ 10-12 ಗಂಟೆ ಬಳಸಬಹುದಾಗಿದ್ದು ಇಂತಹ ಇ-ಪ್ಯಾಡ್ ಪರೀಕ್ಷೆಯನ್ನು ಯಾವುದೇ ಹಳ್ಳಿಯ ಮೂಲೆಯಲ್ಲಿಯೂ ನಡೆಸಬಹುದಾಗಿದೆ. ಇ-ಕ್ಲೌಡ್‌ನಲ್ಲಿ ಅಪ್‌ಲೋಡ್ ಮಾಡಿದ ಪ್ರಶ್ನೆಪತ್ರಿಕೆಯನ್ನು ಪರೀಕ್ಷಕರ ಇ-ಪ್ಯಾಡ್‌ಗೆ ಡೌನ್‌ಲೋಡ್ ಮಾಡಲು ಮತ್ತು ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳು ಇ-ಉತ್ತರಪತ್ರಿಕೆಗಳನ್ನು ಪರೀಕ್ಷಕರ ಪ್ಯಾಡ್‌ನಿಂದ ಇ-ಕ್ಲೌಡ್‌ಗೆ ವರ್ಗಾಯಿಸಲು ಮಾತ್ರ ಅಂತರ್ಜಾಲದ ವ್ಯವಸ್ಥೆ ಬೇಕಾಗುತ್ತದೆ (ವಿದ್ಯಾರ್ಥಿಗಳ ಉತ್ತರಪತ್ರಿಕೆಗಳು ಅವರ ಇ-ಪ್ಯಾಡ್‌ನಿಂದ ಪರೀಕ್ಷಕರ ಇ- ಪ್ಯಾಡ್‌ಗೆ ರೂಟರ್ ಮೂಲಕ ಅಟೋ ಸಬ್‌ಮಿಶನ್ ಆಗುತ್ತವೆ).
ಈ ನಡುವೆ ಪರೀಕ್ಷೆಯ ಮಧ್ಯಭಾಗದಲ್ಲಿ ಇ-ಪ್ಯಾಡ್‌ನಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡರೆ ಬದಲಿ ಇ-ಪ್ಯಾಡ್ ಬಳಸಿಕೊಳ್ಳಬಹುದಾಗಿದೆ. ಈ ರೀತಿ ಮಾಡುವಾಗ ಮೊದಲು ಬಳಸಿದ ಪ್ಯಾಡ್‌ನ ಮೈಕ್ರೋ ಚಿಪ್ ಅನ್ನು ಹೊಸ ಪ್ಯಾಡ್‌ಗೆ ವರ್ಗಾಯಿಸುವುದು ಅನಿವಾರ್ಯ. ಹೀಗೆ ಮಾಡುವಾಗ ವ್ಯರ್ಥವಾದ ಸಮಯ ಪರೀಕ್ಷಾ ಸಮಯಕ್ಕೆ ಪುನಃ ಸೇರ್ಪಡೆಯಾಗುವ ವ್ಯವಸ್ಥೆ ಇರುವುದರಿಂದ ವಿದ್ಯಾರ್ಥಿಗೆ ಸಮಯದ ಅಭಾವ ಎದುರಾಗದು.
ಈ ಬಗೆಯ ಒಂದು ಧನಾತ್ಮಕ ಕಾರ್ಯ ವಿಧಾನವನ್ನು ಹೊರತಂದಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ಇ-ಪ್ಯಾಡ್‌ನ ಮುಂದಿನ(ಸುಧಾರಿತ)ಆವೃತ್ತಿಯನ್ನೂ ಪರಿಚಯಿಸುವ ಆಲೋಚನೆ ಯಲ್ಲಿದೆ. ಈಗಿರುವ ಇ-ಪ್ಯಾಡ್‌ಗಳು ಕೇವಲ ಪರೀಕ್ಷೆಗಳನ್ನು ನಡೆಸುವ ಉದ್ದೇಶಕ್ಕಾಗಿ ಸೀಮಿತವಾದರೆ ಮುಂದಿನ ಅವತರಣಿಕೆ ವಿದ್ಯಾರ್ಥಿಗಳ ಆವಶ್ಯಕತೆಗಳಿಗೆ ಅನುಗುಣವಾಗಿ ಎರಡು ಬಗೆಯ ಕಾರ್ಯವಿಧಾನ (ಡ್ಯುಯೆಲ್ ಆಪರೇಟಿಂಗ್ ಸಿಸ್ಟಮ…)ಗಳನ್ನು ಒಳಗೊಂಡಿರುತ್ತದೆ. ಒಂದು ಕಾರ್ಯವಿಧಾನ ಕೇವಲ ಪರೀಕ್ಷೆಗಾಗಿ ಸೀಮಿತವಾಗಿದ್ದರೆ, ಇನ್ನೊಂದು ಕಾರ್ಯವಿಧಾನ ವಿದ್ಯಾರ್ಥಿಗಳ ದೈನಂದಿನ ಬಳಕೆಗಾಗಿ ಬೇಕಾದ ಎಲ್ಲ ಬಗೆಯ ಸಾಧನಗಳನ್ನು (ಟೂಲ್ಸ…) ಹೊಂದಿ ರುವುದರಿಂದ, ಅದನ್ನು ಲ್ಯಾಪ್‌ಟಾಪ್ ತರಹ ಬಳಸಬಹುದಾಗಿದೆ. ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿ ಪರೀಕ್ಷಾ ಕಾರ್ಯವಿಧಾನಕ್ಕೆ ಲಾಗಿನ್ ಆದ ಕೂಡಲೇ ಎರಡನೇ ಕಾರ್ಯವಿಧಾನ ಸ್ವಯಂ ಅಗೋಚರವಾಗಿ ವಿದ್ಯಾರ್ಥಿಗಳಿಗೆ ಬೇರೇನನ್ನು ಬಳಸಲು ಸಾಧ್ಯವಾಗದು.
ಇಂತಹ ಒಂದು ಪರಿಸರಸ್ನೇಹಿ, ಸುಲಲಿತ ತಂತ್ರಜ್ಞಾನ ಆಧಾರಿತ ಸಾಧನ ನಮ್ಮ ಜೀವನದಲ್ಲಿ ಕಾಲಿಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಇನ್ನಷ್ಟು ಸುಧಾರಣೆಗಳನ್ನು ಕಂಡು ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.
ಪ್ರಯೋಜನಗಳು ಹಲವು :
ಇ-ಪ್ಯಾಡ್‌ನಲ್ಲಿರುವ ಬಹಳಷ್ಟು ಪರಿಕರ (ಟೂಲ್)ಗಳ ಬಳಕೆಯಿಂದ ವಿದ್ಯಾರ್ಥಿಗಳಿಗೆ ಹಲವಾರು ಅನುಕೂಲ ಗಳಿವೆ. ಇ-ಪ್ಯಾಡ್‌ನಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಯಾಗಿರುವ ಕೆಲವು ಪರಿಕರಗಳು ಇಂತಿವೆ.
1 ಪೆನ್ ಟಿಪ್ ಗಾತ್ರ: ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಟಿಪ್ ಗಾತ್ರವನ್ನು ಹೊಂದಿಸಿಕೊಳ್ಳಬಹುದು.
2 ಕಾಪಿ ಪೇಸ್ಟ್ ಆಪ್ಶನ್: ಒಮ್ಮೆ ಬರೆದ ಉತ್ತರದ ಭಾಗ, ಮತ್ತೂಂದು ಕಡೆ ಬಳಸುವುದರಲ್ಲಿ ಪುನಃ ಬರೆಯುವ ಆವಶ್ಯಕತೆ ಇಲ್ಲ. ಅದರ ನಕಲು ತೆಗೆದು, ಉಪಯೋಗಿಸಬೇಕಾದ ಕಡೆ ಅಂಟಿಸಬಹುದು.
3 ಇರೇಸ್ ಆಪ್ಶನ್: ಬರೆದದ್ದು ಸರಿಯಾಗಿಲ್ಲ ಎಂದೆನಿಸಿದರೆ ಅದನ್ನು ಆಯ್ಕೆ ಮಾಡಿ, ಒಂದು ಕ್ಲಿಕ್‌ನಲ್ಲಿ ಅಳಿಸಬಹುದು.
4 ಡ್ರಾಯಿಂಗ್ ಟೂಲ್ಸ್: ಚಿತ್ರ ಬಿಡಿಸಲು ಮತ್ತು ಅಂದವಾಗಿಸಲು ಬಹಳಷ್ಟು ಪರಿಕರಗಳು ಈ ಸಿಸ್ಟಮ್‌ನಲ್ಲಿ ಅಡಕವಾಗಿವೆ. ಉದಾ: ಬಗೆಬಗೆಯ ಆಕೃತಿಗಳ ಗುಂಪಿನಿಂದ ಬೇಕಾದ ಆಕೃತಿ ಯನ್ನು ಆಯ್ದುಕೊಳ್ಳ ಬಹುದು. ಅದನ್ನು ಬೇಕಾದ ಗಾತ್ರಕ್ಕೆ ಅಳವಡಿಸಿಕೊಳ್ಳಬಹುದು. ವಿವಿಧ ಬಣ್ಣಗಳ ಸಂಗ್ರಹದಿಂದ ಬೇಕಾದ ಬಣ್ಣವನ್ನು ಬೇಕಾದ ಕಡೆಗೆ ಬಳಸುವ ಅನುಕೂಲ ದೊರೆಯುತ್ತದೆ. ನೇರವಾದ ರೇಖೆಯನ್ನು ಎಳೆಯಲು ಸ್ಕೇಲ್‌ನ ಆವಶ್ಯಕತೆ ಕೂಡ ಇರುವುದಿಲ್ಲ.
5 ರೂಲ್ಡ್ /ಅನ್‌ರೂಲ್ಡ್ ಪೇಪರ್ ಆಪ್ಶನ್: ವಿದ್ಯಾರ್ಥಿಗಳು ತಮ್ಮ ಆವಶ್ಯಕತೆಗೆ ತಕ್ಕಂತೆ ಗೆರೆಯಿರುವ ಅಥವಾ ಗೆರೆಯಿಲ್ಲದ ಟೆಂಪ್ಲೇಟ್‌ಗಳನ್ನು ಬಳಸಬಹುದು. ಮಧ್ಯದಲ್ಲಿ ಆವಶ್ಯಕತೆ ಇದ್ದರೆ ಬದಲಾಯಿಸಲು ಕೂಡ ಸಾಧ್ಯವಿದೆ.
– ಡಾ| ಎಚ್. ಮಧುಕರ್ ಮಲ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.