OnePlus Open: ಒನ್ ಪ್ಲಸ್ ನ ಚೊಚ್ಚಲ ಮಡಚುವ ಫೋನ್
ಸ್ಯಾಮ್ ಸಂಗ್ ಫೋಲ್ಡ್ ಗೆ ಪ್ರಬಲ ಎದುರಾಳಿ
Team Udayavani, Dec 16, 2023, 3:09 PM IST
ಕೈಗೆಟಕುವ ದರದಲ್ಲಿ ಪ್ರೀಮಿಯಂ ಫೋನ್ ಗಳನ್ನು ನೀಡುವುದರಲ್ಲಿ ಹೆಸರಾದ ಫ್ಲಾಗ್ ಶಿಪ್ ಕಿಲ್ಲರ್ ಎಂದೇ ಹೆಸರಾದ ಒನ್ ಪ್ಲಸ್ ಬ್ರಾಂಡ್, ದೈತ್ಯ ಸ್ಯಾಮ್ ಸಂಗ್ ಗೆ ಉತ್ತಮ ಪೈಪೋಟಿ ನೀಡುತ್ತಿದೆ.
ಮೊಬೈಲ್ ಫೋನ್ ಗಳೊಂದಿಗೆ ರಂಗಕ್ಕೆ ಕಾಲಿಟ್ಟ ಒನ್ ಪ್ಲಸ್, ಈಗ ಆಡಿಯೋ ಸಾಧನಗಳು, ಟ್ಯಾಬ್ ಲೆಟ್ ಗಳು, ಟಿ.ವಿ. ಮತ್ತು ಮಾನಿಟರ್ ಗಳಲ್ಲದೇ ಇತ್ತೀಚಿಗೆ ಟೈಪಿಂಗ್ ಕೀಬೋರ್ಡ್ ಅನ್ನು ಹೊರತರುವ ಮೂಲಕ ವ್ಯಾಪಕ ಶ್ರೇಣಿಯನ್ನು ಹೊಂದಿದೆ.
ಇಂತಹ ಒನ್ ಪ್ಲಸ್, ಮೊಬೈಲ್ ಫೋನ್ ಗಳ ವಿಭಾಗದಲ್ಲೇ ಸ್ಯಾಮ್ ಸಂಗ್ ನ ವಿಶೇಷತೆಯಾಗಿದ್ದ ಮಡಚುವ ಫೋನ್ (Foldable Phone) ವಿಭಾಗಕ್ಕೂ ಲಗ್ಗೆ ಇಟ್ಟಿದೆ. ತನ್ನ ಮೊದಲ ಮಡಚುವ ಫೋನ್ ಅನ್ನು ಒನ್ ಪ್ಲಸ್ ಓಪನ್ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ತಂದಿದೆ. ಈ ಫೋನಿನ ವಿಶೇಷತೆಗಳು, ಕಾರ್ಯನಿರ್ವಹಣೆಯ ವಿಶ್ಲೇಷಣೆ ಇಲ್ಲಿದೆ.
ವಿನ್ಯಾಸ: ಈ ಮಡಚುವ ಫೋನು ಪೂರ್ತಿ ಬಿಡಿಸಿದಾಗ 5.8 ಮಿ.ಮೀ. ದಪ್ಪವಿದ್ದು, ಮಡಚಿದಾಗ 11.7 ಮಿ.ಮೀ. ನಷ್ಟು ದಪ್ಪವಾಗುತ್ತದೆ. 239 ಗ್ರಾಂ ತೂಕವಿದೆ. ಅಂದರೆ ಐಫೋನ್ 14 ಪ್ರೊ ಮ್ಯಾಕ್ಸ್ ನಷ್ಟೇ ತೂಕವಿದೆ! ಮಾಮೂಲಿ ಫೋನ್ ನಷ್ಟು ತೂಕದಲ್ಲಿ ಫೋಲ್ಡಬಲ್ ಫೋನ್ ಅನ್ನು ತಯಾರಿಸಿರುವುದು ವಿಶೇಷ! ಬಿಡಿಸಿದಾಗ ಫೋನ್ ತೆಳುವಾಗಿದ್ದು, ಮಡಚಿದಾಗ ಕೂಡ ಕೈಯಲ್ಲಿ ಹಿಡಿಯಲು, ಜೇಬಿಗೆ ಹಾಕಿಕೊಳ್ಳಲು ಅಷ್ಟೇನೂ ದಪ್ಪ ಎನಿಸುವುದಿಲ್ಲ.
ಫೋನನ್ನು ಬಿಡಿಸಿದಾಗ ಎಡ ಬದಿಯ ಮೇಲ್ಭಾಗದಲ್ಲಿ ಸೈಲೆಂಟ್, ವೈಬ್ರೇಷನ್, ರಿಂಗ್ ಗೆ ನಿಲ್ಲಿಸುವ ಅಲರ್ಟ್ ಸ್ಲೈಡರ್ ಬಟನ್ ಇದೆ. ಇದು ಫೋಲ್ಡಬಲ್ ಫೋನುಗಳಲ್ಲಿ ಇದರಲ್ಲೇ ಪ್ರಥಮವಾದುದಾಗಿದೆ. ಬಲ ಬದಿಯ ಮೇಲ್ಭಾಗದಲ್ಲಿ ಧ್ವನಿ ಹೆಚ್ಚು ಕಡಿಮೆ ಮಾಡುವ ಬಟನ್, ಅದರ ಕೆಳಗೆ ಆನ್ ಅಂಡ್ ಆಫ್ ಬಟನ್ ಇದೆ. ಇದು ಬೆರಳಚ್ಚು ಸ್ಕ್ಯಾನರ್ ಆಗಿಯೂ ಕೆಲಸ ಮಾಡುತ್ತದೆ. ತಳಭಾಗದಲ್ಲಿ ಒಂದು ಸ್ಪೀಕರ್ ಮತ್ತು ಇನ್ನೊಂದು ಮೈಕ್ ಗ್ರಿಲ್ ಗಳಿವೆ. ಬಲ ಬದಿಯಲ್ಲಿ ಚಾರ್ಜಿಂಗ್ ಪೋರ್ಟ್ ಇದೆ. ಮೇಲ್ಭಾಗದಲ್ಲಿ ಸಹ ಒಂದು ಸ್ಪೀಕರ್, ಇನ್ನೊಂದು ಮೈಕ್ ಗ್ರಿಲ್ ಇದೆ. ಫೋನಿನ ಫ್ರೇಂ ಟೈಟಾನಿಯಂ ಲೋಹದ್ದಾಗಿದ್ದು, ಇದು ಹೆಚ್ಚಿನ ಕಠಿಣತೆ ಮಾತ್ರವಲ್ಲದೇ ಹಗುರವಾಗಿರಲು ಸಹಾಯಕವಾಗಿದೆ.
ಮಡಚುವ ಫೋನ್ ಗಳಲ್ಲಿ ಎಡಬಲ ಪರದೆಗಳನ್ನು ಒಂದಾಗಿ ಬಂಧಿಸುವ ಹಿಂಜ್ (ಇದನ್ನು ಮಡಚುವ ಫೋನಿನ ಬೆನ್ನುಮೂಳೆ ಎಂದೇ ಹೇಳಬಹುದು) ಬಹಳ ಮುಖ್ಯ. ಸಾಮಾನ್ಯವಾಗಿ ಇತರ ಫೋಲ್ಡಬಲ್ ಫೋನ್ ಗಳಲ್ಲಿ ಮೂರು ಪ್ಲೇಟ್ ಗಳುಳ್ಳ ಹಿಂಜ್ ಬಳಸಲಾಗುತ್ತದೆ. ಇದರಲ್ಲಿ ಒಂದೇ ಪ್ಲೇಟ್ ಉಳ್ಳ ಜಿರ್ಕೋನಿಯಂ ಎಂಬ ಕಠಿಣ ಲೋಹದ ಅಲಾಯ್ ಬಳಸಲಾಗಿದೆ. ಇದು ಸರ್ಜಿಕಲ್ ಸ್ಟೀಲ್ ಗಿಂತಲೂ ಹಲವು ಪಟ್ಟು ಕಠಿಣವಾದುದಾಗಿದೆ.
ಇದು ಫೋನಿನ ತೂಕವನ್ನು ಕಡಿಮೆ ಮಾಡಲು ಸಹಕಾರಿ. ಸಾಮಾನ್ಯವಾಗಿ ಪೋಲ್ಡಬಲ್ ಫೋನ್ ಗಳನ್ನು ಮಡಚಿದಾಗ ಹಿಂಜ್ ಇರುವ ಜಾಗದಲ್ಲಿ ಮುಂಬದಿಗಿಂತ ಹಿಂಬದಿ ಕಿಂಡಿ ಬಿಟ್ಟುಕೊಳ್ಳುತ್ತದೆ. (ಮಡಚುವ ಫೋನ್ ಬಳಸಿದವರಿಗೆ ಇದರ ಅನುಭವವಾಗಿರುತ್ತದೆ) ಆದರೆ ಈ ಫೋನ್ ನಲ್ಲಿ ಕಿಂಡಿ ಬಿಟ್ಟುಕೊಳ್ಳದೇ ಒಂದೇ ಸಮಾನಾಂತರ ರೇಖೆಯಲ್ಲಿ ಫೋನ್ ಮಡಚಿಕೊಳ್ಳುತ್ತದೆ.
ಇನ್ನು ಫೋನಿನ ಹಿಂಭಾಗ ಮೂರು ಲೆನ್ಸ್ ನ ಕ್ಯಾಮರಾ ಅಳವಡಿಸಲಾಗಿದೆ. ಮೂರು ಲೆನ್ಸ್ ಗಳನ್ನು ಒಂದು ದೊಡ್ಡ ವೃತ್ತಾಕಾರದಲ್ಲಿ ಬಂಧಿಸಲಾಗಿದೆ. ಒಟ್ಟಾರೆಯಾಗಿ ಫೋನನ್ನು ಮಡಚಿದಾಗಲೂ ಕೈಯಲ್ಲಿ ಹಿಡಿದುಕೊಳ್ಳಲು, ಕಿವಿಯಲ್ಲಿಟ್ಟು ಮಾತನಾಡಲು ಫೋನ್ ಅನುಕೂಲಕರವಾಗಿದೆ. ಭಾರ ಅನಿಸುವುದಿಲ್ಲ.
ಪರದೆ: ತೆರೆದಾಗ 7.82 ಇಂಚಿನ ಎಲ್ಟಿಪಿಓ3 ಅಮೋಲೆಡ್ ಪರದೆ ಹೊಂದಿದೆ. ಇದು ಡಾಲ್ಬಿ ವಿಷನ್, ಎಚ್ಡಿಆರ್ 10, ಎಚ್ಡಿಆರ್ 10ಪ್ಲಸ್, 120 ಹರ್ಟ್ಜ್ ರಿಫ್ರೆಶ್ ರೇಟ್, 2800 ನಿಟ್ಸ್ ಪ್ರಕಾಶಮಾನತೆ ಹೊಂದಿದೆ. ಪರದೆಯಲ್ಲಿ ತೆಳುವಾದ ಬೆಜೆಲ್ ಇದ್ದು ಬಲ ಮೂಲೆಯಲ್ಲಿ 32 ಮೆ.ಪಿ. ಮುಂಬದಿ ಕ್ಯಾಮರಾ ಅಳವಡಿಸಲಾಗಿದೆ.
ಮಡಚಿದಾಗ ಬರುವ ಮೇಲ್ಮೈ ಪರದೆ 6.31 ಇಂಚಿದೆ. ಪರದೆಯ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗಾಜಿಗಿಂತಲೂ ಹೆಚ್ಚಿನ ರಕ್ಷಣೆ ನೀಡುವ ಸೆರಾಮಿಕ್ ಗಾರ್ಡ್ ಅಳವಡಿಸಲಾಗಿದೆ. ಇದು ಗೀರು, ತರಚು ಆಗದಂತೆ ಪರದೆಯನ್ನು ರಕ್ಷಿಸುತ್ತದೆ. ಪರದೆಯ ಗುಣಮಟ್ಟ ಗರಿಷ್ಠ ಮಟ್ಟದಲ್ಲಿದೆ. ಚಿತ್ರಗಳು ವಿಡಿಯೋಗಳು ಹೆಚ್ಚು ಸ್ಪಷ್ಟವಾಗಿ, ರಿಚ್ ಆಗಿ ಮೂಡಿಬರುತ್ತವೆ. 120 ರಿಫ್ರೆಶ್ ರೇಟ್ ಇರುವುದರಿಂದ ಪರದೆಯನ್ನುಸ್ಕ್ರೋಲ್ ಮಾಡಿದಾಗ ಯಾವುದೇ ಅಡೆತಡೆಯಿಲ್ಲದೇ ಸರಾಗವಾಗಿ ಚಲಿಸುತ್ತದೆ.
ಪ್ರೊಸೆಸರ್, ಕಾರ್ಯಾಚರಣೆ: ಇದರಲ್ಲಿ ಸ್ನಾಪ್ಡ್ರಾಗನ್ 8 ಜೆನ್ 2 ಪ್ರೊಸೆಸರ್ ಇದೆ. ಆಂಡ್ರಾಯ್ಡ್ 13 ಗೆ, ಆಕ್ಸಿಜನ್ ಓಎಸ್ 13.2 ಮಿಶ್ರಗೊಳಿಸಲಾಗಿದೆ.
ಇದು ಫೋಲ್ಡಬಲ್ ಫೋನ್ ಆದ್ದರಿಂದ ಇದರಲ್ಲಿ ಮಾಮೂಲಿ ಏಕ ಪರದೆಯ ಫೋನ್ ಗಳಿಗಿಂತ ಬೇರೆಯದೇ ಆದ ಅನುಕೂಲಗಳಿವೆ. ಉದಾಹರಣೆಗೆ ಯಾವುದೇ ಆಪ್ ತೆರೆದಾಗ, ಕಂಪ್ಯೂಟರ್ ಮಾನಿಟರ್ ರೀತಿಯಲ್ಲಿ ತಳಭಾಗದಲ್ಲಿ ಟಾಸ್ಕ್ ಬಾರ್ ಇದೆ, ಹೀಗಾಗಿ ಒಂದು ಆಪ್ ತೆರೆದಿದ್ದರೂ ಅದನ್ನು ಕ್ಲೋಸ್ ಮಾಡದೇ ಇನ್ನೊಂದು ಆಪ್ ಒತ್ತಬಹುದು.
ವಾಟ್ಸಪ್ ನಲ್ಲಿ ಎಡಬದಿಯಲ್ಲಿ ಕಾಂಟಾಕ್ಟ್ ಗಳಿದ್ದರೆ, ಬಲ ಬದಿಯ ಪರದೆ ಪೂರ್ತಿ ಒಂದು ಕಾಂಟಾಕ್ಟ್ ತೆರೆದು ಅದರ ಮೆಸೇಜುಗಳನ್ನು ಫೋಟೋಗಳನ್ನು ಕಣ್ಣಿಗೆ ತ್ರಾಸವಾಗದಂತೆ ದೊಡ್ಡದಾಗಿ ನೋಡಬಹುದು. ಒಂದು ಫೋನಿನ ಸಣ್ಣಗಾತ್ರ, ಮತ್ತು ಒಂದು ಟ್ಯಾಬ್ನ ಅಗಲವಾದ ಪರದೆ ಎರಡೂ ಸಹ ಮಡಚುವ ಫೋನ್ ಗಳಲ್ಲಿ ದೊರಕುತ್ತದೆ. ಇದು ಬ್ಯುಸಿನೆಸ್, ಕಚೇರಿ ವೃತ್ತಿಪರರಿಗೆ ಬಹಳ ಅನುಕೂಲಕರ.
ಕ್ಯಾಮರಾ: ಒನ್ ಪ್ಲಸ್ ಓಪನ್ ಫೋನು, ಇತ್ತೀಚಿನ ಒನ್ ಪ್ಲಸ್ ಪ್ರೀಮಿಯಂ ಫೋನ್ ಗಳಲ್ಲಿರುವಂತೆ ಹ್ಯಾಸೆಲ್ ಬ್ಲಾಡ್ ಕ್ಯಾಮರಾ ಹೊಂದಿದೆ. ಇದರಲ್ಲಿ ಹಿಂಬದಿ ಮೂರು ಕ್ಯಾಮರಾ ಇವೆ. 48 ಮೆ.ಪಿ. ಪ್ರಾಥಮಿಕ ಕ್ಯಾಮರಾ, 48 ಮೆ.ಪಿ. ಅಲ್ಟ್ರಾವೈಡ್ ಕ್ಯಾಮರಾ, 64 ಮೆ.ಪಿ. ಟೆಲೋಫೋಟ್ ಕ್ಯಾಮರಾಗಳಿವೆ. ಪ್ರಾಥಮಿಕ ಕ್ಯಾಮರಾ ಸೋನಿ, ಎಲ್ವೈಟಿ 808 ಸೆನ್ಸರ್ ಹೊಂದಿದೆ. ಇದು ಉತ್ತಮ ಫೋಟೋಗಳನ್ನು ಸೆರೆಹಿಡಿಯುತ್ತದೆ.
ವಸ್ತುವಿನ ಹೆಚ್ಚಿನ ವಿವರ, ಹೆಚ್ಚು ಕಾಂಟ್ರಾಸ್ಟ್, ವೈವಿಧ್ಯಮಯ ಬಣ್ಣಗಳನ್ನು ದಾಖಲಿಸುತ್ತದೆ. ಅಲ್ಟ್ರಾ ವೈಡ್ ಕ್ಯಾಮರಾ 48 ಮೆ.ಪಿ. ಸೋನಿ ಐಎಂಎಕ್ಸ್ 581 ಸೆನ್ಸರ್ ಹೊಂದಿದ್ದು, ಇದು 3.5 ಸೆ.ಮೀ. ಹತ್ತಿರದಲ್ಲೂ ಸೂಕ್ಷ್ಮ ಚಿತ್ರಗಳನ್ನು ಸೆರೆ ಹಿಡಿಯುತ್ತದೆ. ಟೆಲೆಫೋಟೋ ಲೆನ್ಸ್ 3x ಆಪ್ಟಿಕಲ್ ಝೂಮ್, 6x ಇನ್ ಸೆನ್ಸರ್ ಲಾಸ್ ಲೆಸ್ ಝೂಮ್ ಅನ್ನು ಫೋಟೋಗಳನ್ನು ಗುಣಮಟ್ಟ ಕಳೆದುಕೊಳ್ಳೆದಂತೆ ಸೆರೆ ಹಿಡಿಯುತ್ತದೆ. 120x ವರೆಗೂ ಅಲ್ಟ್ರಾ ರೆಸ್ (ಡಿಜಿಟಲ್) ಝೂಮ್ ಇದೆ. ದೂರದ ಫೋಟೋಗಳನ್ನು ಸೆರೆ ಹಿಡಿಯುವ ವಿಷಯಕ್ಕೆ ಬಂದಾಗ ಈ ಕ್ಯಾಮರಾ ಅತ್ಯುತ್ತಮ ಎಂದು ಹೇಳಬಹುದು.
ಇನ್ನು ಸೆಲ್ಫೀ ಕ್ಯಾಮರಾ ವಿಷಯಕ್ಕೆ ಬಂದರೆ, ಇದರಲ್ಲಿ ಎರಡು ಸೆಲ್ಫೀ ಕ್ಯಾಮರಾ ಇವೆ. ಫೋನನ್ನು ಮುಚ್ಚಿದಾಗ ಕವರ್ ಸ್ಕ್ರೀನ್ ನಲ್ಲಿರುವ 32 ಮೆ.ಪಿ. ಲೆನ್ಸ್ ಹೊಂದಿದ್ದು, ತೆರೆದಾಗ ಬರುವ ದೊಡ್ಡ ಪರದೆಯಲ್ಲಿ 20 ಮೆ.ಪಿ. ಲೆನ್ಸ್ ಇದೆ. ಎರಡೂ ಸೆಲ್ಫಿ ಕ್ಯಾಮರಾಗಳ ಗುಣಮಟ್ಟ ಚೆನ್ನಾಗಿದೆ. ಸದ್ಯ ಸೆಲ್ಫಿ ಫೋಟೋ ತೆಗೆದಾಗ ಮುಖವನ್ನು ಬ್ಲೀಚ್ ಮಾಡದೇ ನೈಜವಾಗಿ ಸೆರೆ ಹಿಡಿಯುತ್ತದೆ. ಮುಖ ಬಿಳಿಯಾಗಬೇಕೆಂದರೆ ಹೊಂದಾಣಿಕೆ ಮಾಡಿಕೊಳ್ಳುವ ಆಯ್ಕೆಯೂ ಇದೆ. ಪ್ರಾಥಮಿಕ ಕ್ಯಾಮರಾ 4ಕೆ 30ಎಫ್ಪಿಎಸ್, ಡಾಲ್ಬಿ ವಿಷನ್ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ವಿಡಿಯೋಗಳು ಉತ್ತಮ ಗುಣಮಟ್ಟ ಹೊಂದಿವೆ.
ಬ್ಯಾಟರಿ: 4,805 ಎಂಎಎಚ್ ಬ್ಯಾಟರಿಯನ್ನು ಈ ಫೋನ್ ಹೊಂದಿದೆ. ಇದರ ಜೊತೆ 80 ವ್ಯಾಟ್ಸ್ ಸೂಪರ್ ವೂಕ್ ಚಾರ್ಜರ್ ನೀಡಲಾಗಿದೆ. ಚಾರ್ಜಿಂಗ್ ವೇಗ 67 ವ್ಯಾಟ್ಸ್ ಇದೆ. ಶೇ. 1ರಿಂದ 100ಕ್ಕೆ 40 ನಿಮಿಷಗಳಲ್ಲಿ ಚಾರ್ಜ್ ಆಗುತ್ತದೆ. ಸಾಮಾನ್ಯ ಬಳಕೆಗೆ ಒಂದು ದಿನ ಪೂರ್ತಿ ಬ್ಯಾಟರಿ ಬಾಳಿಕೆ ಬರುತ್ತದೆ.
ಈ ಮಡಚುವ ಫೋನ್ ಒಂದೇ ಆವೃತ್ತಿ ಹೊಂದಿದೆ. 512 ಜಿಬಿ ಆಂತರಿಕ ಸಂಗ್ರಹ, 16 ಜಿಬಿ ರ್ಯಾಮ್ ಹೊಂದಿದೆ. ಕಪ್ಪು ಮತ್ತು ಹಸಿರು ಬಣ್ಣದಲ್ಲಿ ಲಭ್ಯ. ಇದರ ದರ 1,39,999 ರೂ. ಇದೆ. ಫೋಲ್ಡಬಲ್ ಫೋನ್ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಿರುವ ಸ್ಯಾಮ್ ಸಂಗ್ ಗೆ ಪ್ರಬಲ ಪೈಪೋಟಿ ನೀಡುವಲ್ಲಿ ಒನ್ ಪ್ಲಸ್ ನ ಚೊಚ್ಚಲ ಮಡಚುವ ಫೋನ್, ಒನ್ ಪ್ಲಸ್ ಓಪನ್ ಯಶಸ್ವಿಯಾಗಿದೆ.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.