ಒನ್ ಪ್ಲಸ್ ನಾರ್ಡ್ 2: ಉತ್ತಮ ಕ್ಯಾಮರಾ, ಸ್ಟೀಡ್ & ಸ್ಟೈಲಿಷ್, ಫಟಾಫಟ್ ಚಾರ್ಜಿಂಗ್.!
Team Udayavani, Nov 13, 2021, 4:42 PM IST
ಆರಂಭಿಕ ದರ್ಜೆ ಹಾಗೂ ಮಧ್ಯಮ ದರ್ಜೆಯ ಮೊಬೈಲ್ ಫೋನ್ ಗಳಿಗಿಂತ ಭಿನ್ನವಾಗಿ ಹಲವರು, ಇನ್ನಷ್ಟು ಉನ್ನತ ತಾಂತ್ರಿಕ ಗುಣಗಳುಳ್ಳ ಫೋನ್ ಗಳನ್ನು ಬಯಸುತ್ತಾರೆ. ಅಂಥ ತಾಂತ್ರಿಕ ಅಂಶಗಳು ಇಂಥದೇ ದುಬಾರಿ ಬೆಲೆಯ ಪ್ರತಿಷ್ಠಿತ ಕಂಪೆನಿಯ ಫೋನ್ ಗಳಲ್ಲಿ ಮಾತ್ರ ಇದೆ ಎಂದು ತಮ್ಮ ಹಳೆಯ ಬ್ರಾಂಡ್ ಗೆ ಸೆಟ್ಲ್ ಆಗಿರುತ್ತಾರೆ. ಇನ್ನೂ ಹಲವರು ತಾಂತ್ರಿಕ ಅಂಶಗಳಿಗಿಂತಲೂ ಹೆಚ್ಚಾಗಿ ನನ್ನ ಬಳಿ ಹೆಚ್ಚು ಬೆಲೆಯ ಫೋನ್ ಇರಬೇಕು. ಹಾಗೆ ಇದ್ದರೆ ನನ್ನ ಸುತ್ತಲಿನ ಜನರು ನನ್ನನ್ನು ನೋಡುವ ರೀತಿಯೇ ಬೇರೆ ಎಂದು ಹೇಳಿಕೊಳ್ಳುತ್ತಾರೆ. ಹೀಗಾಗಿ ಅವರಿಗೆ ಅಗತ್ಯವಿರಲಿ – ಇಲ್ಲದಿರಲಿ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಫೋನ್ ಗಳನ್ನು ಕೊಳ್ಳುತ್ತಾರೆ. ಈ ಎರಡು ವರ್ಗ ಬಿಟ್ಟು ಇನ್ನೊಂದು ವರ್ಗವಿದೆ. ಅವರು ಫೋನಿನಲ್ಲಿ ಅಳವಡಿಸಿರುವ ಪ್ರೊಸೆಸರ್, ಕ್ಯಾಮರಾ, ಹಾರ್ಡ್ ವೇರ್, ಸಾಫ್ಟ್ ವೇರ್ ಗುಣಮಟ್ಟ ನೋಡಿ, ವಿವಿಧ ಕಂಪೆನಿಗಳ ಅನೇಕ ಮಾಡೆಲ್ ಗಳನ್ನು ತುಲನೆ ಮಾಡಿ ಮೊಬೈಲ್ ಕೊಂಡು ಕೊಳ್ಳುತ್ತಾರೆ. ಅಂಥವರು ತಾವು ನೀಡುವ ಬೆಲೆಗೆ ತಕ್ಕ ಮೌಲ್ಯ ನೀಡುವ, ತಯಾರಿಕಾ ವೆಚ್ಚಕ್ಕೂ, ಮಾರಾಟ ವೆಚ್ಚಕ್ಕೂ ಅಜಗಜ ವ್ಯತ್ಯಾಸ ಇಲ್ಲದ, ಒಟ್ಟಾರೆ ಗುಣಮಟ್ಟದಲ್ಲಿ ರಾಜಿಯೂ ಆಗದ ಬ್ರಾಂಡ್ ಗಳನ್ನು ಆರಿಸಿಕೊಳ್ಳುತ್ತಾರೆ.
ಅಂಥದ್ದೊಂದು ಬ್ರಾಂಡ್ ಒನ್‍ಪ್ಲಸ್. ಒನ್ ಪ್ಲಸ್ ನಲ್ಲೂ ಫ್ಲಾಗ್‍ಶಿಪ್ ಫೋನ್ ಗಳ ದರ 60-70 ಸಾವಿರ ರೂ.ವರೆಗೂ ಬಂದು ನಿಂತಿದೆ. ಅಷ್ಟೊಂದು ದುಬಾರಿಯಾದರೆ ಕಷ್ಟ ಕಷ್ಟ ಎನ್ನುವವರಿಗಾಗಿ ಒನ್ ಪ್ಲಸ್ ಕಂಪೆನಿ ನಾರ್ಡ್ ಸರಣಿಯಲ್ಲಿ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡುತ್ತಿದೆ. ಈ ನಾರ್ಡ್ ಸರಣಿಯ ಫೋನುಗಳು ಹತ್ತಿರ ಹತ್ತಿರ ಫ್ಲಾಗ್ ಶಿಪ್ ಫೋನ್ ಗಳ ಗುಣಮಟ್ಟ, ಪ್ರೊಸೆಸರ್, ಬಿಲ್ಡ್ ಕ್ವಾಲಿಟಿ ಹೊಂದಿರುತ್ತವೆ. ಒನ್ ಪ್ಲಸ್ ನಾರ್ಡ್, ನಾರ್ಡ್ ಸಿಇ 5ಜಿ ಬಳಿಕ, ಹೊರತಂದಿರುವ ಫೋನೆಂದರೆ ಒನ್ ಪ್ಲಸ್ ನಾರ್ಡ್ 2 5ಜಿ.
ಈ ಫೋನಿನ ದರ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸಂಗ್ರಹ ಮಾದರಿಗೆ 29,999 ರೂ. ಹಾಗೂ 12 ಜಿಬಿ ರ್ಯಾಮ್, 256 ಜಿಬಿ ಸಂಗ್ರಹ ಮಾದರಿಗೆ 34,999 ರೂ. ಇದೆ. ಒನ್‍ಪ್ಲಸ್ ಆನ್‍ಲೈನ್ ಮತ್ತು ಆಫ್‍ಲೈನ್ ಸ್ಟೋರ್ ಮತ್ತು ಅಮೆಜಾನ್.ಇನ್ ನಲ್ಲಿ ಮಾತ್ರ ದೊರಕುತ್ತದೆ. ಅಮೆಜಾನ್.ಇನ್ ನಲ್ಲಿ ಈಗ ಈ ಫೋನಿಗೆ ಎಸ್‍ಬಿಐ ಕ್ರೆಡಿಟ್ ಕಾರ್ಡ್ ವತಿಯಿಂದ 1500 ರೂ. ರಿಯಾಯಿತಿ ಸಹ ಇದೆ. ಒನ್ ಪ್ಲಸ್ ಫೋನ್ ಕೊಳ್ಳುವವರು ಗಮನಿಸಬೇಕು, ಒನ್‍ಪ್ಲಸ್ ಫೋನ್ ಗಳು ಒನ್‍ಪ್ಲಸ್ ಆನ್‍ಲೈನ್ ಸ್ಟೋರ್ ಹೊರತುಪಡಿಸಿದರೆ ಅಮೆಜಾನ್‍ನಲ್ಲಿ ಮಾತ್ರ ದೊರಕುವುದು. ಫ್ಲಿಪ್‍ಕಾರ್ಟ್ ಅಥವಾ ಇನ್ನಾವುದೇ ಆನ್‍ಲೈನ್ ತಾಣದಲ್ಲಿ ದೊರಕುವುದಿಲ್ಲ. ಅಕಸ್ಮಾತ್ ದೊರೆತರೆ ಆ ಸೆಲ್ಲರ್ ಅಧಿಕೃತ ಮಾರಾಟಗಾರ ಅಲ್ಲ. ಇರಲಿ, ಈಗ ನಾರ್ಡ್ 2 ಫೋನಿನ ವೈಶಿಷ್ಟ್ಯ, ಅದು ದಿನನಿತ್ಯದ ಬಳಕೆಯಲ್ಲಿ ಹೇಗನಿಸುತ್ತದೆ ಎಂಬುದರ ಬಗ್ಗೆ ತಿಳಿಯೋಣ.
ವಿನ್ಯಾಸ: ಫೋನಿನ ಉದ್ದ 158.9 ಮಿ.ಮೀ ಇದ್ದರೆ, ಅಗಲ 73 ಮಿ.ಮೀ. ಇದೆ. ಮಂದ 8.3 ಮಿ.ಮೀ. ಇದೆ. ತೂಕ 189 ಗ್ರಾಂ ಇದೆ. ಫೋನನ್ನು ಕೈಯಲ್ಲಿ ಹಿಡಿದರೆ ಹಗುರ ಮತ್ತು ಬಹಳ ಸ್ಲಿಮ್ ಆಗಿದೆ. ಸ್ಟೈಲಿಷ್ ಆಗಿದೆ. ಹಿಂಬದಿಗೆ ಪ್ಲಾಸ್ಟಿಕ್ ಬಾಡಿ ಇದ್ದರೂ, ಹಸಿರು ಬಣ್ಣದ ಮಾದರಿಯಲ್ಲಿ, ಅದನ್ನು ಚರ್ಮದ ಕವರ್ ನಂತೆ ವಿನ್ಯಾಸ ಮಾಡಿರುವುದರಿಂದ, ಪ್ರೀಮಿಯಂ ಲುಕ್ ಕಾಣುತ್ತದೆ, ಕೈಯಲ್ಲಿ ಹಿಡಿದರೆ ಜಾರುವುದಿಲ್ಲ.
ಹಿಂಬದಿಯ ಮೇಲ್ಭಾಗದ ಎಡ ಮೂಲೆಯಲ್ಲಿ ಎರಡು ದೊಡ್ಡ ಲೆನ್ಸ್ ಹಾಗೂ ಒಂದು ಪುಟ್ಟ ಲೆನ್ಸ್ ಕಾಣುವಂತೆ ತ್ರಿವಳಿ ಕ್ಯಾಮರಾ ಅಳವಡಿಸಲಾಗಿದೆ. ಮೊಬೈಲಿನ ಫ್ರೇಮ್ ಲೋಹದ್ದು. ಹಾಗಾಗಿ ಫೋನ್ ಗಟ್ಟಿಮುಟ್ಟಾಗಿದೆ. ಬಲದ ಸೈಡಿನಲ್ಲಿ ಆನ್-ಆಫ್ ಸ್ವಿಚ್ ಇದೆ. ಅದರ ಮೇಲೆ ಒನ್‍ಪ್ಲಸ್ ನಲ್ಲಿ ಮಾತ್ರ ಕಾಣಬಹುದಾದ ವೈಬ್ರೈಟ್, ಸೈಲೆಂಟ್, ರಿಂಗ್ ಮೋಡ್‍ಗೆ ನಿಲ್ಲಿಸುವ ಸ್ವಿಚ್ ಇದೆ. ಎಡಬದಿಯಲ್ಲಿ ಧ್ವನಿ ಹೆಚ್ಚು ಕಡಿಮೆ ಮಾಡುವ ಬಟನ್ ಇದೆ. ಕೆಳಭಾಗದಲ್ಲಿ ಸಿಮ್ ಸ್ಲಾಟ್, ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಎರಡು ಸ್ಪೀಕರ್ ಗಳಿವೆ. ಮೇಲ್ಭಾಗದಲ್ಲಿ ನಾಯ್ಸ್ ಕ್ಯಾನ್ಸೆಲಿಂಗ್ ಮೈಕ್ ಇದೆ. ಒಟ್ಟಾರೆ ಡೀಸೆಂಟ್ ಆದ ಡಿಸೈನ್ ಮಾಡಲಾಗಿದೆ.
ಪರದೆ: 6.43 ಇಂಚಿನ 90 ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿರುವ ಅಮೋಲೆಡ್ ಡಿಸ್‍ಪ್ಲೇ ಹೊಂದಿದೆ. 2400*1080 ಪಿಕ್ಸಲ್ಸ್ ರೆಸ್ಯೂಲೇಷನ್ ಇದೆ. ಡಿಸ್ ಪ್ಲೇ ಗುಣಮಟ್ಟ ಚೆನ್ನಾಗಿದೆ. ಅಮೋಲೆಡ್ ಪರದೆ ಎಂದ ಮೇಲೆ ಅದರ ರಿಚ್‍ನೆಸ್ ಬಗ್ಗೆ ಮಾತಾಡುವಂತಿಲ್ಲ. ಫೋನ್ ಬಳಸುವಾಗ, ವಿಡಿಯೋ, ಫೋಟೋ ನೋಡುವಾಗ ಅದು ಗೊತ್ತಾಗುತ್ತದೆ. ಪರದೆ ಸುಲಭಕ್ಕೆ ಒಡೆಯದಂತೆ ಗೊರಿಲ್ಲಾ ಗ್ಲಾಸ್ 5 ಲೇಪನದ ರಕ್ಷಣೆಯಿದೆ. ಹೊರ ಬೆಳಕಿನ ಅಗತ್ಯಕ್ಕೆ ತಕ್ಕಂತೆ ಪರದೆಯ ಬೆಳಕನ್ನು ಹೆಚ್ಚು ಕಡಿಮೆ ಮಾಡುವ ಆಯ್ಕೆ ಮಾಡಿಕೊಂಡರೆ ಬಳಕೆಗೆ ತಕ್ಕಂತೆ ಬ್ರೈಟ್‍ನೆಸ್ ಇರುತ್ತದೆ. ಇದರಿಂದ ಬ್ಯಾಟರಿ ಬಾಳಿಕೆಯೂ ಬರುತ್ತದೆ. ಪರದೆಯ ಮೇಲೆಯೇ ಬೆರಳಚ್ಚು ಸ್ಕ್ಯಾನರ್ ಇದೆ. ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ.
ಪ್ರೊಸೆಸರ್: ಈ ಫೋನನ್ನು ಈ ದರಕ್ಕೆ ನೀಡಲು ಒನ್‍ಪ್ಲಸ್ ಗೆ ಸಾಧ್ಯವಾಗಿರುವುದು, ಅದರಲ್ಲಿ ಹಾಕಿರುವ ಮೀಡಿಯಾಟೆಕ್ ಪ್ರೊಸೆಸರ್ ನಿಂದಾಗಿ. ಇದೇ ಫೋನಿಗೆ ಸ್ನಾಪ್ ಡ್ರಾಗನ್ ಪ್ರೊಸೆಸರ್ ಹಾಕಿದ್ದರೆ ಕನಿಷ್ಟ 10 ಸಾವಿರ ರೂ. ಹೆಚ್ಚು ದರ ನಿಗದಿ ಮಾಡಬೇಕಾಗುತ್ತಿತ್ತು. ಈಗ ಮೀಡಿಯಾಟೆಕ್ ಪ್ರೊಸೆಸರ್ ಗಳು, ಬಜೆಟ್ ಫೋನ್‍ಗಳ ಡಾರ್ಲಿಂಗ್ ಆಗಿವೆ. ನಾರ್ಡ್ 2 ನಲ್ಲಿರುವುದು ಮೀಡಿಯಾಟೆಕ್ ಡೈಮೆನ್ಸಿಟಿ 1200 ಎಂಟು ಕೋರ್ ಗಳ ಪ್ರೊಸೆಸರ್. ಇದೊಂದು ಫ್ಲಾಗ್‍ಶಿಪ್ ದರ್ಜೆಯ ವೇಗದ ಚಿಪ್‍ಸೆಟ್. ಹೀಗಾಗಿ ಫೋನಿನ ವೇಗಕ್ಕೆ ಯಾವುದೇ ಬಾಧಕವಿಲ್ಲ. ಗೇಮ್‍ಗಳನ್ನು ಸರಾಗವಾಗಿ ಆಡಬಹುದು, ನಿತ್ಯ ಬಳಕೆಯಲ್ಲೂ ಅಡೆತಡೆ ಇಲ್ಲವೇ ಇಲ್ಲ. ಇದಕ್ಕೆ ಆಂಡ್ರಾಯ್ಡ್ 11 ಓಎಸ್ ಇದ್ದು, ಒನ್‍ಪ್ಲಸ್‍ನ ಆಕ್ಸಿಜನ್ ಓಎಸ್ ಅನ್ನು ಮಿಳಿತ ಮಾಡಲಾಗಿದೆ. ಆಕ್ಸಿಜನ್ ಓಎಸ್ ಹೆಚ್ಚೂ ಕಮ್ಮಿ ಸ್ಟಾಕ್ ಆಂಡ್ರಾಯ್ಡ್ ನಂತೆಯೇ. (ಆದರೆ, ಮುಂಬರುವ ಒನ್‍ಪ್ಲಸ್ ಫೋನ್ ಗಳಲ್ಲಿ ಆಕ್ಸಿಜನ್ ಓಎಸ್ ಅನ್ನು ಒಪ್ಪೋದ ಕಲರ್ ಓಎಸ್ ಜೊತೆಗೆ ವಿಲೀನ ಮಾಡುವುದಾಗಿ ಒನ್‍ಪ್ಲಸ್ ಪ್ರಕಟಿಸಿದೆ. ಇದು ಆಕ್ಸಿಜನ್ ಓಎಸ್ ಪ್ರೇಮಿಗಳ ಮುನಿಸಿಗೂ ಕಾರಣವಾಗಿದೆ!) ಎರಡು ಸಿಮ್‍ಗಳಿಗೂ 5ಜಿ ಸವಲತ್ತು ಕಲ್ಪಿಸುತ್ತದೆ. ಸದ್ಯ ಭಾರತದಲ್ಲಿ 5ಜಿ ಬಂದಿಲ್ಲ.
ಕ್ಯಾಮರಾ: ಮೊಬೈಲ್‍ನಲ್ಲಿ ಉತ್ತಮ ಕ್ಯಾಮರಾ ಇರಬೇಕು ಕಣ್ರೀ ಎಂದು ಕೇಳುವವರಿಗೆ ಈ ಫೋನ್ ಹೊಂದುತ್ತದೆ. ಯಾಕೆಂದರೆ ಸೋನಿ ಐಎಂಎಕ್ಸ್ 766 ಲೆನ್ಸ್ ಇರುವ 50 ಮೆಗಾಪಿಕ್ಸಲ್ ಕ್ಯಾಮರಾ ಅಳವಡಿಸಲಾಗಿದೆ. ಇದಕ್ಕೆ 8 ಮೆ.ಪಿ. ಅಲ್ಟ್ರಾ ವೈಡ್ ಮತ್ತು 2 ಮೆ.ಪಿ.ಮೋನೋಕ್ರೋಮ್ ಲೆನ್ಸ್ ಗಳನ್ನು ಅಳವಡಿಸಲಾಗಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ (ಓಐಎಸ್) ಸೌಲಭ್ಯ ಇರುವುದರಿಂದ ಮೊಬೈಲ್ ಅಲುಗಾಡಿದರೂ, ಫೋಟೋಗಳು ಉತ್ತಮವಾಗಿ ಮೂಡಿಬರುತ್ತವೆ. ವಿಡಿಯೋ ಗೆ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಷನ್ (ಇಐಎಸ್) ಇರುವುದರಿಂದಲೂ ನೀವು ಓಡಾಡುತ್ತಾ ವಿಡಿಯೋ ಮಾಡಿದಾಗ ವಿಡಿಯೋ ದೃಶ್ಯೀಕರಣದಲ್ಲಿ ಹೆಚ್ಚು ಅಲುಗಾಡುವಿಕೆ ಇರುವುದಿಲ್ಲ. ಈ ಫೀಚರ್ ಗಳ ಹೊರತಾಗಿಯೂ ಕ್ಯಾಮರಾದಲ್ಲಿ ಫೋಟೋಗಳ ಗುಣಮಟ್ಟ ಚೆನ್ನಾಗಿದೆ. ಹೊರಾಂಗಣ ಮಾತ್ರವಲ್ಲ, ಒಳಾಂಗಣದಲ್ಲಿ, ಮಂದ ಬೆಳಕಿನಲ್ಲೂ ಫೋಟೋಗಳು ಚೆನ್ನಾಗಿ ಮೂಡಿಬರುತ್ತವೆ. ಸೆಲ್ಫೀಗೆ 32 ಮೆ.ಪಿ. ಕ್ಯಾಮರಾ ಇದ್ದು, ಇದರಲ್ಲಿ ಹಿನ್ನೆಲೆ ಮಸುಕು ಮಾಡುವ ಪೋಟ್ರೆಟ್ ಮೋಡ್ ಸಹ ಇದೆ. ಸಾಮಾನ್ಯ 16 ಮೆ.ಪಿ. ಮುಂಬದಿ ಕ್ಯಾಮರಾ ನೀಡುವ ಒನ್‍ಪ್ಲಸ್ ಇದರಲ್ಲಿ 32 ಮೆ.ಪಿ. ಲೆನ್ಸ್ ಹಾಕಿರುವುದು ವಿಶೇಷ. ಒಟ್ಟಾರೆ, 30 ಸಾವಿರ ರೂ. ದರಪಟ್ಟಿಯಲ್ಲಿ ಇದು ಉತ್ತಮ ಕ್ಯಾಮರಾ ಫೋನ್ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇದನ್ನೂ ಓದಿ:“ಕಾಂಡೋಮ್” ಹಿಡಿದು ಬಂದ ಛತ್ರಿವಾಲಿ ನಟಿ ರಾಕುಲ್ ಪ್ರೀತ್ ಸಿಂಗ್!
ಬ್ಯಾಟರಿ: ಇದರಲ್ಲಿ 4500 ಎಂಎಎಚ್ ಬ್ಯಾಟರಿ ಇದೆ. ಇದಕ್ಕೆ 65 ವ್ಯಾಟ್ಸ್ ವಾರ್ಪ್ ವೇಗದ ಚಾರ್ಜರ್ ನೀಡಲಾಗಿದೆ. ಒಂದು ದಿನದ ಬ್ಯಾಟರಿ ಬಾಳಿಕೆ ಬರುತ್ತದೆ. ಇದರಲ್ಲಿ 15 ನಿಮಿಷ ಚಾರ್ಜ್ ಮಾಡಿದರೆ ಶೇ. 1 ರಿಂದ ಶೇ. 60ರಷ್ಟು ಜಾರ್ಜ್ ಆಗುತ್ತದೆ. 33 ನಿಮಿಷಕ್ಕೆ ಶೇ. 100ರಷ್ಟು ಚಾರ್ಜ್ ಆಗುತ್ತದೆ. ಚಾರ್ಜ್ ಮುಗಿದಿದೆ ಎಂದು ತಲೆ ಕೆಡಿಸಿಕೊಳ್ಳುವಂತಿಲ್ಲ, ಚಾರ್ಜ್ ಗೆ ಹಾಕಿ 10 ನಿಮಿಷ ಆದರೆ ಶೇ. 40ರಷ್ಟು ಬ್ಯಾಟರಿ ಭರ್ತಿಯಾಗುತ್ತದೆ.
ಇದರಲ್ಲಿ 3.5 ಎಂ.ಎಂ. ಆಡಿಯೋ ಪೋರ್ಟ್ ಇಲ್ಲ. ಈಗ ಟ್ರೂ ವೈರ್ ಲೆಸ್ ಇಯರ್ ಬಡ್‍ಗಳ ಕಾಲ. ಅವುಗಳು ಹೊಮ್ಮಿಸುವ ಎಚ್‍ಡಿ ಆಡಿಯೋ ಗುಣಮಟ್ಟ ನಿಜಕ್ಕೂ ಅದ್ಭುತ. ಹೀಗಾಗಿ ಈಗ ಬರುತ್ತಿರುವ ಕೆಲವು ಫೋನ್‍ಗಳಲ್ಲಿ 3.5 ಎಂಎಂ ಆಡಿಯೋ ಪೋರ್ಟ್ ಇಲ್ಲ ಎನ್ನುವುದು ಕೊರತೆ ಅಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, 30 ಸಾವಿರ ರೂ ದರ ಪಟ್ಟಿಯಲ್ಲಿ ಉತ್ತಮ ಕ್ಯಾಮರಾ, ವೇಗದ ಪ್ರೊಸೆಸರ್, ಅತ್ಯಂತ ವೇಗದ ಚಾರ್ಜಿಂಗ್, ಸ್ಟೈಲಿಶ್ ಆದ ಫೋನ್ ಬೇಕೆನ್ನುವವರಿಗೆ ಒನ್‍ಪ್ಲಸ್ ನಾರ್ಡ್ 2 5ಜಿ ಒಂದು ಉತ್ತಮ ಆಯ್ಕೆ ಎನ್ನಬಹುದು.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.