ಹೊಸ ಸ್ಯಾಮ್ ಸಂಗ್ ಗೆಲಾಕ್ಸಿ ಎ22 5ಜಿ ಹೀಗಿದೆ ನೋಡಿ
Team Udayavani, Aug 23, 2021, 5:16 PM IST
ಈಗ ಭಾರತದಲ್ಲಿ ಎಲ್ಲ ಮೊಬೈಲ್ ಫೋನ್ ತಯಾರಕ ಕಂಪೆನಿಗಳಿಗೂ 5ಜಿ ಫೋನನ್ನು ಮಾರುಕಟ್ಟೆಗೆ ಬಿಡುವ ಧಾವಂತ! ಹೀಗಾಗಿಯೇ ಈ ಮುಂಚೆ 5ಜಿ ಸವಲತ್ತು ಹೊರತುಪಡಿಸಿ ಹೊರಬಿಡಲಾಗಿದ್ದ ಮಾಡೆಲ್‍ಗಳನ್ನುಒಂದಷ್ಟು ಬದಲಾವಣೆ ಮಾಡಿ, ಅದೇ ಹೆಸರಿನ ಮುಂದೆ 5ಜಿ ಸೇರಿಸಿ ಬಿಡುಗಡೆ ಮಾಡಲಾಗುತ್ತಿದೆ. ಸ್ಯಾಮ್ ಸಂಗ್ ಗೆಲಾಕ್ಸಿ ಎ22 ಎಂಬ ಮಾದರಿಯನ್ನು ಬಿಡುಗಡೆ ಮಾಡಿತ್ತು. ಅದು ಬಂದ ಸ್ವಲ್ಪ ದಿನಗಳಿಗೇ ಈಗ ಗೆಲಾಕ್ಸಿ ಎ22 5ಜಿಯನ್ನು ಹೊರತರಲಾಗಿದೆ.
ಈ ಫೋನ್ ಭಾರತದಲ್ಲಿ ಎರಡು ಆವೃತ್ತಿಗಳಲ್ಲಿ ದೊರಕುತ್ತಿದೆ. 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಹಾಗೂ ಇನ್ನೊಂದು 8 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ. ದರ ಕ್ರಮವಾಗಿ 19,999 ರೂ. ಹಾಗೂ 21,999 ರೂ.
ವಿನ್ಯಾಸ: 20 ಸಾವಿರದೊಳಗಿನ ಫೋನ್‍ಗಳಲ್ಲಿ ಬರುವ ವಿನ್ಯಾಸಕ್ಕೆ ಹೋಲಿಸಿದಾಗ ಇದರ ಹೊರ ನೋಟ ಗಮನ ಸೆಳೆಯುತ್ತದೆ. 9 ಮಿ.ಮೀ. ನಷ್ಟು ಸ್ಲಿಮ್ ಆಗಿದೆ. ಫೋನಿನ ಫ್ರೇಂ ಲೋಹದ್ದಾಗಿದೆ. ಹಿಂಬದಿ ವಿನ್ಯಾಸ ಪ್ಲಾಸ್ಟಿಕ್ ಇದೆ. ಆದರೆ ಇದು ಮಾಮೂಲಿ ಪ್ಲಾಸ್ಟಿಕ್‍ನಂತಿಲ್ಲದೇ ವಿಶಿಷ್ಟವಾಗಿದೆ. ಹಿಂಬದಿ ಎಡ ಮೂಲೆಯಲ್ಲಿ ಮೂರು ಲೆನ್ಸ್ ಹಾಗೂ ಒಂದು ಫ್ಲಾಶ್ ಇರುವ ಚಚ್ಚೌಕದ ಡಿಸೈನ್ ಮಾಡಲಾಗಿದೆ. ಒಟ್ಟಾರೆ ಫೋನಿನ ಡಿಸೈನ್ ಪ್ರೀಮಿಯಂ ಆಗಿದೆ.
ಪರದೆ: 6.6 ಇಂಚಿನ ಎಲ್‍ಸಿಡಿ ಡಿಸ್ ಪ್ಲೇ ನೀಡಲಾಗಿದೆ. ಸಾಮಾನ್ಯವಾಗಿ ಸ್ಯಾಮ್‍ಸಂಗ್ ಮೊಬೈಲ್‍ಗಳು ಅಮೋಲೆಡ್ ಡಿಸ್‍ಪ್ಲೇಗೆ ಪ್ರಸಿದ್ಧ. ಈ ಫೋನಿನಲ್ಲಿ ಅಮೋಲೆಡ್ ಇರದಿರುವುದು ಅಚ್ಚರಿಯ ಅಂಶ. ಮಧ್ಯದಲ್ಲಿ ಸೆಲ್ಫೀ ಕ್ಯಾಮರಾಕ್ಕೆ ಜಾಗ ಬಿಡಲು ವಾಟರ್ ಡ್ರಾಪ್ ವಿನ್ಯಾಸ ಮಾಡಲಾಗಿದೆ. ಫುಲ್ ಎಚ್‍ಡಿ ಪ್ಲಸ್ ಡಿಸ್‍ಪ್ಲೇ ಇದ್ದು, 90 ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಅಮೋಲೆಡ್ ಇಲ್ಲದಿದ್ದರೂ ಡಿಸ್‍ಪ್ಲೇ ಗುಣಮಟ್ಟ ಚೆನ್ನಾಗಿದೆ. ಅಮೋಲೆಡ್ ಇದ್ದರೆ ಸೂಪರ್ ಆಗಿರುತ್ತಿತ್ತು!
ಪ್ರೊಸೆಸರ್: ಇದರಲ್ಲಿರುವುದು ಮೀಡಿಯಾಟೆಕ್ ಡೈಮೆನ್ಸಿಟಿ 700 5ಜಿ (7ಎನ್ ಎಂ) ಪ್ರೊಸೆಸರ್. ಬಜೆಟ್ ದರದ 5ಜಿ ಫೋನ್‍ಗಳನ್ನು ನೀಡಲು ಈಗ ಅನೇಕ ಕಂಪೆನಿಗಳು ಮೀಡಿಯಾಟೆಕ್ ಪ್ರೊಸೆಸರ್ ಗಳ ಮೊರೆ ಹೋಗುತ್ತಿವೆ! ಸ್ನಾಪ್‍ಡ್ರಾಗನ್ ಪ್ರೊಸೆಸರ್ ವೆಚ್ಚ ಹೆಚ್ಚಿರುವುದರಿಂದ ಸರಿದೂಗಿಸುವ ಸಲುವಾಗಿ ಸ್ಯಾಮ್‍ಸಂಗ್ ಸಹ ಈಗ ಮೀಡಿಯಾಟೆಕ್ ಪ್ರೊಸೆಸರ್ ಬಳಸುತ್ತಿದೆ.
ಆಂಡ್ರಾಯ್ಡ್ 11 ಓಎಸ್ ಹೊಂದಿದ್ದು, ಇದಕ್ಕೆ ಸ್ಯಾಮ್ಸಂಗ್ ನ ಒನ್ ಯೂಐ 3.1 ಅನ್ನು ಮಿಶ್ರಣ ಮಾಡಲಾಗಿದೆ. ಡೈಮೆನ್ಸಿಟಿ 700 ಪ್ರೊಸೆಸರ್ ಮೇಲ್ಮಧ್ಯಮ ವರ್ಗದ ಮೊಬೈಲ್‍ಗಳಲ್ಲಿ ವೇಗದ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ. ಹೀಗಾಗಿ ಮೊಬೈಲ್ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ಲ್ಯಾಗ್ ಅನುಭವಕ್ಕೆ ಬರಲಿಲ್ಲ.
ವಿಶೇಷವೆಂದರೆ, ಈ ಮೊಬೈಲ್‍ಗೆ 2 ವರ್ಷಗಳ ಕಾಲ ಗ್ಯಾರಂಟಿಯಾಗಿ ಸಾಫ್ಟ್ ವೇರ್ ಅಪ್‍ಡೇಟ್ ನೀಡುವುದಾಗಿ ಸ್ಯಾಮ್‍ಗಂಗ್ ತಿಳಿಸಿದೆ.
11 ಬ್ಯಾಂಡ್ 5ಜಿ: ಈ ಫೋನಿನಲ್ಲಿ 11 ಬ್ಯಾಂಡ್‍ಗಳಲ್ಲಿ ಕೆಲಸ ಮಾಡುವ 5ಜಿ ನೆಟ್ ವರ್ಕ್ ಇದೆ. ಕೆಲವು ಹೊಸ 5ಜಿ ಫೋನ್‍ಗಳು ಕೆಲವೇ ಬ್ಯಾಂಡ್‍ಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಅಂದರೆ ಕೆಲವು ಮೊಬೈಲ್ ನೆಟ್‍ವರ್ಕ್ ಕಂಪೆನಿಗಳು ನಿರ್ದಿಷ್ಟ ಬ್ಯಾಂಡ್‍ಗಳ 5 ಜಿ ಸೌಲಭ್ಯ ಹೊಂದಿರುತ್ತವೆ. ಇದರಲ್ಲಿ ಹೆಚ್ಚು ಬ್ಯಾಂಡ್‍ಗಳಿರುವುದರಿಂದ ಬಹುತೇಕ 5ಜಿ ನೆಟ್‍ವರ್ಕ್ ಗಳಲ್ಲಿ ಇದು ಕಾರ್ಯನಿರ್ವಹಿಸಲು ಅನುಕೂಲಕರವಾಗಿದೆ.
ಕ್ಯಾಮರಾ: 48 ಮೆಗಾಪಿಕ್ಸಲ್ ಮುಖ್ಯ ಕ್ಯಾಮರಾ, ಅದಕ್ಕೆ 5 ಮೆಪಿ ವೈಡ್ ಲೆನ್ಸ್ ಹಾಗೂ 2 ಮೆ.ಪಿ. ಡೆಪ್ತ್ ಲೆನ್ಸ್ ಅಳವಡಿಸಲಾಗಿದೆ ಸೆಲ್ಫೀಗೆ 8 ಮೆ.ಪಿ. ಕ್ಯಾಮರಾ ಇದೆ.
ಹಿಂಬದಿ ಕ್ಯಾಮರಾ ಗುಣಮಟ್ಟ ತೃಪ್ತಿದಾಯಕ. ವೈಡ್ ಆಂಗಲ್ ಲೆನ್ಸ್ ಕಿರಿದಾದ ಜಾಗದಲ್ಲಿ ನಿಂತು ಎದುರಿನ ಫೋಟೋ ಫೋಕಸ್ ಮಾಡಿ ಫೋಟೋಗ್ರಫಿ ಮಾಡಲು ಅನುಕೂಲಕರವಾಗಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಇಲ್ಲ. ಮ್ಯಾಕ್ರೋ ಲೆನ್ಸ್ ಹೊಂದಿಲ್ಲ. ಮುಂಬದಿ ಇರುವ 8 ಮೆ.ಪಿ. ಕ್ಯಾಮರಾದ ಗುಣಮಟ್ಟ ಅಷ್ಟೊಂದು ತೃಪ್ತಿದಾಯಕವಾಗಿಲ್ಲ. 20 ಸಾವಿರಕ್ಕೆ 5ಜಿ ಸೌಲಭ್ಯ ನೀಡುವ ಸಲುವಾಗಿ ರೂಪಿಸಿರುವುದರಿಂದ ಕ್ಯಾಮರಾ ವಿಭಾಗದಲ್ಲಿ ಕೆಲವು ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.
ಬ್ಯಾಟರಿ: 5000 ಎಂಎಎಚ್ ಬ್ಯಾಟರಿ ಹಾಕಲಾಗಿದ್ದು,ಶೇ. 100 ಚಾರ್ಜ್ ಆದ ಬ್ಯಾಟರಿ ಒಂದು ದಿನ ಪೂರ್ತಿ ಬಾಳಿಕೆ ಬರುತ್ತದೆ. 15 ವ್ಯಾಟ್ಸ್ ಚಾರ್ಜರ್ ನೀಡಲಾಗಿದೆ. ಟೈಪ್ ಸಿ ಪೋರ್ಟ್ ಇದೆ. ಬ್ಯಾಟರಿ ಶೂನ್ಯದಿಂದ ಶೇ. 100ಕ್ಕೆ ಚಾರ್ಜ್ ಆಗಲು ಎರಡೂವರೆ ಗಂಟೆ ತೆಗೆದುಕೊಳ್ಳುತ್ತದೆ. 30 ನಿಮಿಷಕ್ಕೆ ಶೇ. 25 ಅಷ್ಟೇ ಜಾರ್ಜ್ ಆಗುತ್ತದೆ. ಪ್ರತಿಸ್ಪರ್ಧಿಗಳು ಈ ದರಕ್ಕೆ 33 ವ್ಯಾಟ್ಸ್ ಚಾರ್ಜರ್ ಕೊಡುತ್ತವೆ. ಸ್ಯಾಮ್‍ಸಂಗ್ 15 ವ್ಯಾಟ್ಸ್ ಚಾರ್ಜರ್ 5000 ಎಂಎಎಚ್ ಬ್ಯಾಟರಿಗೆ ಸಾಲದು. ವೇಗದ ಚಾರ್ಜರ್ ವಿಷಯದಲ್ಲಿ ಸ್ಯಾಮ್ ಸಂಗ್ ಜುಗ್ಗತನ ಬಿಟ್ಟು, ಹೆಚ್ಚು ವ್ಯಾಟ್ಸ್ ನ ಚಾರ್ಜ್ ನೀಡಲು ಗಮನ ಹರಿಸಬೇಕು.
ಸಾರಾಂಶ: 5ಜಿ ಸೌಲಭ್ಯ ನೀಡುವುದಕ್ಕಾಗಿ ಈ ಮಾದರಿಯಲ್ಲಿ ದರ ಹೆಚ್ಚಳವಾಗದಂತೆ ನೋಡಿಕೊಳ್ಳಲು ಕ್ಯಾಮರಾ, ಡಿಸ್‍ಪ್ಲೇ (ಅಮೋಲೆಡ್ ಇಲ್ಲದ), ವೇಗದ ಚಾರ್ಜಿಂಗ್ ನಂಥ ಅಂಶಗಳಿಗೆ ಸ್ವಲ್ಪ ಕಡಿಮೆ ಒತ್ತು ನೀಡಲಾಗಿದೆ. ಆದರೂ ನೀಡುವ ದರಕ್ಕೆ ಮೌಲ್ಯ ನೀಡುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.