ಚಿರತೆಯ ದಾಳಿ, ಅನಂತರ ಆಸ್ಪತ್ರೆಯ ಪಾಳಿ!
Team Udayavani, Mar 18, 2018, 7:00 AM IST
ಇಪ್ಪತ್ತು ನಿಮಿಷ ಕಾದ ಮೇಲೆ ಬಂದರು ಧನ್ವಂತರಿ ದೇವರು. “ಏನಾಗಿದೆ ತೋರಿಸ್ರಿ’ ಎಂದು ಬಿರುಸಾಗಿ ಕೇಳಿದರು. “ಬಲಗೈ ಎಲ್ಲಾ ಕಚ್ಚಿದೆ ಮತ್ತು ಬಲ ಸೊಂಟದಲ್ಲಿ ಸಾಕಷ್ಟು ಗಾಯ ಆಗಿದೆ’ ಎಂದೆ. “ಸೊಂಟದಲ್ಲಿ ಏನೂ ಆಗಿಲ್ಲ, ಕೈಗೆ ಸ್ವಲ್ಪ ಲೋಕಲ್ ಅನಸ್ತೇಸಿಯಾ ಕೊಟ್ಟು ಸ್ಟಿಚ್ ಮಾಡಬೇಕಾಗುತ್ತದೆ’ ಅಂದರು ಡಾಕ್ಟರ್ ಸಾಹೇಬರು. “ಸರ್ ಇಲ್ಲ, ನನಗೇಕೋ ಇದಕ್ಕೆ ಜನರಲ್ ಅನಸ್ತೇಸಿಯಾ ಬೇಕಾಗುತ್ತದೆ ಅನ್ನಿಸುತ್ತೆ, ಅಲ್ಲದೆ ಪ್ರಾಣಿ ಕಚ್ಚಿದರೆ ಹೊಲಿಗೆ ಈಗಲೇ ಹಾಕಬಾರದು, ಇನ್ಫೆಕ್ಷನ್ ಆಗಬಹುದು’ ಎಂದೆ.
ಅಷ್ಟರಲ್ಲಿ ಹಿಂದೆ ಹಿಂದೆ ನಡೆಯುತ್ತಿದ್ದ ನನಗೆ ನೆಲದಲ್ಲಿ ಹಾಕಿದ್ದ ತರಿತರಿಯಾಗಿದ್ದ ಟೈಲ್‌ಗಳ ಎಡತಾಕಿ ಹಿಂದಕ್ಕೆ ಬಿದ್ದುಬಿಟ್ಟಿದ್ದೆ.
ಎಡಕ್ಕೆ ತಿರುಗಿ ನೋಡಿದ ಚಿರತೆಯು ನನ್ನನ್ನು ಕಂಡೊಡನೆ ಶರವೇಗದಲ್ಲಿ, ಜೋರಾಗಿ ಗರ್ಜಿಸಿಕೊಂಡು ನನ್ನ ಕಡೆಗೆ ಓಡಿಬರಲು ಪ್ರಾರಂಭಿಸಿತು. ಅದಕ್ಕಿಂತ ಹೆಚ್ಚು ವೇಗದಲ್ಲಿ ನನ್ನ ಮನಸ್ಸು ಓಡುತಿತ್ತು. ನನ್ನ ಗಂಟಲಿಗೆ ಪ್ರಾಣಿ ಬಾಯಿ ಹಾಕಿದರೆ ಉಳಿಯುವ ಅವಕಾಶವಿರಲಿಲ್ಲ. ನನ್ನ ಜೀವನದಲ್ಲಿ ಎಂದೂ ಇರದಿದ್ದ ಶಾಂತತೆ ನೆಲೆ ಮಾಡಿತ್ತು. ಬೇರೆ ಯಾವುದೇ ಯೋಚನೆ ಮನಸ್ಸಿನಲ್ಲಿ ಇರಲಿಲ್ಲ, ಉದ್ವೇಗವಿರಲಿಲ್ಲ, ಭಯವಿಲ್ಲ, ಯಾವ ಯೋಚನೆಯೂ ಇಲ್ಲ. ಅಷ್ಟರಲ್ಲಿ ಚಿರತೆ ಬಂದೇ ಬಿಟ್ಟಿತು. ನನ್ನ ಬಲಗೈಯನ್ನು ನನ್ನ ಕುತ್ತಿಗೆಗೆ ಅಡ್ಡ ತಂದಿದ್ದೆ. ಚಿರತೆಯು ಲಾಂಗ್ ಜಂಪ್ ಮಾಡಿದಂತೆ ನನ್ನ ದಿಕ್ಕಿನಲ್ಲಿ ಸುಮಾರು ಏಳೆಂಟು ಅಡಿ ಹಾರಿ ತನ್ನ ಬಲ ಪಾದದಿಂದ ನನ್ನ ತೊಡೆಯನ್ನು ತಳ್ಳಿ ಅರ್ಧ ಕೂತ ಭಂಗಿಯಲ್ಲಿದ್ದ ನನ್ನನ್ನು ಚಿರತೆ, ಹುಲಿಗಳು ಜಿಂಕೆಯನ್ನು ಕೆಳಗೆ ಕೆಡವುವ ಹಾಗೆ ತಳ್ಳಿತು. ಅದರ ಶಕ್ತಿಗೆ ಸಂಪೂರ್ಣವಾಗಿ ಕೆಳಗೆ ಬಿದ್ದುಬಿಟ್ಟೆ. ತನ್ನ ಪಂಜ ಮತ್ತು ಪಾದದಿಂದ ನನ್ನ ದೇಹವನ್ನು ಹಿಡಿದು ಬಲ ರಟ್ಟೆಗೆ ಬಾಯಿ ಹಾಕಿತು. ಪಂಜಗಳಿಂದ ಎದೆ, ಹೊಟ್ಟೆಯ ಮೇಲೆಲ್ಲಾ ಪರಚುತ್ತಿತ್ತು. ಅದರ ಕಣ್ಣುಗಳು ನನ್ನ ಕಣ್ಣುಗಳಿಂದ ಕೆಲವೇ ಸೆಂಟಿಮೀಟರ್ ದೂರದಲ್ಲಿದ್ದವು. “ಗೊರ್, ಗೊರ್’ ಎಂದು ನನ್ನ ಕಿವಿಯ ಪಕ್ಕದಲ್ಲೇ ಕೂಗುತ್ತಿದ್ದದ್ದು ಜ್ಞಾಪಿಸಿಕೊಂಡರೆ ಇಂದಿಗೂ ಅದರ ಕೂಗಿನ ಅನುಭವವಾಗುತ್ತದೆ. ಇಷ್ಟು ಹತ್ತಿರದಿಂದ ಚಿರತೆಯ ಧ್ವನಿಯನ್ನು ಎಂದೂ ಕೇಳಿ ರಲಿಲ್ಲ. ಆಶ್ಚರ್ಯವೆಂದರೆ ಅದು ಪರಚುತ್ತಿದ್ದದ್ದು, ಕಚ್ಚುತ್ತಿದ್ದದ್ದು ಯಾವುದೂ ನನಗೆ ನೋವೆನ್ನಿಸುತ್ತಿರಲಿಲ್ಲ. ಬಹುಶಃ ನಮ್ಮ ಜ್ಞಾನೇಂದ್ರಿಯಗಳು ಇಂತಹ ಸಮಯಗಳಲ್ಲಿ ನೋವಿಗೆ ಪ್ರತಿಕ್ರಿಯಿಸುವುದಿಲ್ಲವೇನೊ. ಜೀವನ್ಮರಣದ ಹೊಸ್ತಿಲಲ್ಲಿ ನಿಂತಾಗ ನೋವು ಗೊತ್ತಾಗುವುದಿಲ್ಲವೇನೋ!
ಚಿರತೆಯು ಒಂದೆರೆಡು ಬಾರಿ ಬಿಟ್ಟು-ಬಿಟ್ಟು ರಟ್ಟೆಯನ್ನು ಕಚ್ಚಿತ್ತು. ಮೂರನೇ ಬಾರಿ ಭರ್ಜರಿಯಾಗಿ ಕಚ್ಚಿದಾಗ “ಅಮ್ಮಾ…’ ಎಂದು ಕೂಗಿಕೊಂಡೆ. ಚಿರತೆಯ ಹಲ್ಲು ಮೊಣಕೈ ಮೂಳೆಯನ್ನು ಮುರಿದದ್ದು ಸ್ಪಷ್ಟವಾಗಿ ಕೇಳಿಸಿತು. ಅದರ ಬಲ ಪಾದ ನನ್ನ ಕಂಕುಳನ್ನು ಮತ್ತು ಎಡ ಪಾದ ನನ್ನ ಬಲ ತೋಳಿನ ಹಿಂಭಾಗವನ್ನು ಬೆಚ್ಚಗೆ ಗಟ್ಟಿಯಾಗಿ ಹಿಡಿದಿರುವುದು ಭಾಸವಾಗುತ್ತಿತ್ತು. ನನ್ನ ರಟ್ಟೆಯನ್ನು ಹಿಡಿದು ಜೋರಾಗಿ ಅಲ್ಲಾಡಿಸುತ್ತಿದ್ದ ಚಿರತೆಯ ನಡೆ, ಬಲಿಪ್ರಾಣಿಯ ಗಂಟಲು ಹಿಡಿದು ಅದನ್ನು ಉಸಿರುಕಟ್ಟಿಸಲು ಮಾಡುವ ವರ್ತನೆಯಂತಿತ್ತು. ಕಾಡಿನಲ್ಲಿ ಕೆಲವು ಬಾರಿ ಮಾಂಸಾಹಾರಿ ಪ್ರಾಣಿಗಳು ಬಲಿಪ್ರಾಣಿಗಳನ್ನು ಕೊಲ್ಲುವ ರೀತಿ ನೋಡಿದ ಅನುಭವ ಅಂದು ನನಗಾಗುತ್ತಿತ್ತು.
ನನ್ನ 23 ವರ್ಷದ ಹಳೆಯ ದುರ್ಬೀನು ಬಲಗೈಲಿ ಇದ್ದದ್ದು ಜ್ಞಾಪಕಕ್ಕೆ ಬಂದಿತು. ಇನ್ನು ನಾನು ಹೀಗೆಯೇ ಮಲಗಿದ್ದರೆ ಹೆಚ್ಚು ಹಾನಿಯಾಗುವುದು ಖಚಿತವಾಯಿತು. ಪ್ರಾಣಿಯೊಂದಿಗೆ ಸೆಣಸ ಲೇಬೇಕೆನ್ನುವುದು ನನ್ನ ಮನಸ್ಸಿಗೆ ಬಂದಿತು. ಬಲ ರಟ್ಟೆಯನ್ನು ಪ್ರಾಣಿಯ ಬಾಯಿಂದ ಎಳೆದುಕೊಳ್ಳಲು ಪ್ರಯತ್ನಿಸಿದರೆ ನನ್ನ ಸಕಲ ಮಾಂಸಖಂಡಗಳೂ ಅದರ ಬಾಯಿಯಲ್ಲಿಯೇ ಉಳಿ ಯುತ್ತವೆ, ಎಳೆದರೆ ಪ್ರಯೋಜನವಿಲ್ಲವೆಂದು ಮನಸಿನಲ್ಲೇ ಲೆಕ್ಕಹಾಕಿದೆ. ನನ್ನಲ್ಲಿದ್ದ ಶಕ್ತಿಯೆನ್ನೆಲ್ಲಾ ಒಗ್ಗೂಡಿಸಿ ಎಡಗೈ ಮೇಲೆ ಭಾರ ಹಾಕಿ ಮೇಲೆದ್ದು ನಿಲ್ಲಲು ಪ್ರಯತ್ನಿಸಿದೆ. ಬಲಗೈ ರಟ್ಟೆ ಇನ್ನೂ ಚಿರತೆಯ ಬಾಯಲ್ಲಿಯೇ ಇತ್ತು. ಅದರ ದವಡೆಯ ಶಕ್ತಿ ನನ್ನ ಬಲಗೈ ರಟ್ಟೆಯನ್ನು ಇನ್ನೂ ಬಲವಾಗಿ ಹಿಡಿದಿಟ್ಟಿತ್ತು. ಬಲ ಮಂಡಿಯ ಮೇಲೆ ಭಾರವನ್ನು ಹಾಕಿ ಎದ್ದೇಳಲು ಪ್ರಯತ್ನಿಸಿದರೆ ಚಿರತೆಯ ಭಾರ ಮತ್ತು ಅದರ ಶಕ್ತಿ ನನ್ನನ್ನು ಹಿಂದೂಡಿತು. ಒಮ್ಮೆ ತಡವರಿಸಿದವನು ಮತ್ತೆ ಎಲ್ಲ ಭಾರವನ್ನು ಎಡಗೈ ಹಸ್ತದ ಮೇಲೆ ಹಾಕಿ, ಹಸ್ತವನ್ನು ನೆಲಕ್ಕೆ ಒರಗಿಸಿ ನನ್ನನ್ನು ಮೇಲಕ್ಕೆತ್ತಿಕೊಂಡೆ. ಅದೃಷ್ಟವಶಾತ್ ಮೇಲೇಳಲು ಆಯಿತು. ಎದ್ದರೆ ಚಿರತೆಯು ಎರಡು ಕಾಲುಗಳ ಮೇಲೆ ಕುಳಿತು ಮುಂದಿನ ಎರಡೂ ಕಾಲುಗಳಿಂದ ನನ್ನ ಬಲಗೈಯನ್ನೂ ಹಿಡಿದಿದೆ ಹಾಗೂ ರಟ್ಟೆಯನ್ನು ಮತ್ತಷ್ಟು ಕಚ್ಚುತ್ತಿದೆ. ನಿಂತವನೇ ನನ್ನ ಎಡಗೈಯನ್ನು ಚಿರತೆಯ ಕುತ್ತಿಗೆಗೆ ಹಾಕಿ ಬಲವಾಗಿ ತಳ್ಳಿದೆ. ಪವಾಡದಂತೆ ಚಿರತೆ ತನ್ನ ಕೋರೆಹಲ್ಲುಗಳನ್ನು ರಟ್ಟೆಯಿಂದ ಹಿಂತೆಗೆದು ನನ್ನ ಕೈಯನ್ನು ಬಿಟ್ಟು “ಗೊರ್’ ಎಂದು ಒಮ್ಮೆ ಕೂಗಿ ನನಗೆ ಬೆನ್ನು ಹಾಕಿತು. ನನ್ನ ದುರ್ಬೀನಿನ ಬೆಲ್ಟ್ ಎರಡೂ ಕೈಯಲ್ಲಿ ಹಿಡಿದು ಚಿರತೆಯ ಕಡೆ ಬೀಸಲು ಹಿಂದಕ್ಕೆ ತಂದೆ. ಅಷ್ಟರಲ್ಲಿ ಪ್ರಾಣಿ ನನ್ನನ್ನು ಬಿಟ್ಟು ಎರಡಡಿಯಷ್ಟು ದೂರ ಹೋಗಿತ್ತು.
ಅಷ್ಟರಲ್ಲೇ “ಧಡ್’ ಎಂದು ಸುಮಾರು ಆರೇಳು ಅಡಿ ಉದ್ದದ, ಬಹು ತೂಕದ ಕಬ್ಬಿಣದ “ಎಲ್’ ಆಂಗಲ್ ಕಾಲ ಹತ್ತಿರ ಬಿದ್ದಿತು. ಯಾರೋ ಎಲ್ಲಿಂದಲೋ ನನ್ನ ಸಹಾಯಕ್ಕೆ ಕಬ್ಬಿಣವನ್ನು ಎಸೆದರು. ಒಂದು ವೇಳೆ ಅದು ನನ್ನ ತಲೆಯ ಮೇಲೆ ಬಿದ್ದಿದ್ದರೆ ಚಿರತೆಯಿಂದ ತಪ್ಪಿಸಿಕೊಂಡ ನಾನು ಹಾಸ್ಯಾಸ್ಪದವಾಗಿ ‘ಅಯ್ಯೋ ಕಬ್ಬಿಣದ “ಎಲ್’ನಿಂದ ಪೆಟ್ಟಾಯಿತು’ ಎಂದು ಹೇಳಿಕೊಂಡು ತಿರುಗಬೇಕಾಗಿತ್ತು. ಇನ್ನೆರೆಡು ಕ್ಷಣ ಹೋಗಿರಬೇಕು, ಇನ್ನೇನು ಚಿರತೆ ಎದುರಿಗಿದ್ದ ಇನ್ನೊಂದು ಬಚ್ಚಲು ಮನೆಯೊಳಗೆ ಸೇರಿಕೊಳ್ಳುತ್ತಿದೆ ಎನ್ನುವಾಗ “ಪಟಾರ್’ ಎಂದು ಹಿಂದಿನಿಂದ ಸ¨ªಾಯಿತು. ನನ್ನಿಂದ ಕೆಲ ಅಡಿಗಳ ದೂರದಲ್ಲಿ ಏನೋ ಬಹು ವೇಗವಾಗಿ ಹೋದ ಭಾವನೆ. ಹೋದ ವಸ್ತು ಚಿರತೆಯಿಂದ ಒಂದರ್ಧ ಅಡಿಯಲ್ಲಿ ನೆಲಕ್ಕೆ ತಾಗಿ ನೆಲದಿಂದ ಟೈಲ್ಸ್ ಚೂರಾಗಿ ಹಾರಿತು. ನೋಡಿದರೆ ಯಾರೋ ಗುಂಡು ಹೊಡೆದಿದ್ದರು. ಕೆಲ ಕ್ಷಣಗಳಲ್ಲಿ ಅಂದು ಮೂರನೇ ಬಾರಿ ಅಪಘಾತದಿಂದ ಪಾರಾಗಿದ್ದೆ.
ಕೈಯಿಂದ ಧಾರಾಕಾರವಾಗಿ ಹರಿಯುತ್ತಿರುವ ರಕ್ತ! ಅಲ್ಲಿಯ ವರೆಗೆ ಸುತ್ತಮುತ್ತಲೂ ಏನು ಆಗುತ್ತಿದೆಯೆಂದು ಸಹಾ ನನಗೆ ಅರಿವಾಗುತ್ತಿರಲಿಲ್ಲ, ಈಗ ಸುತ್ತಲೂ ಜನ ಕೂಗುತ್ತಿರುವುದು ಕೇಳುತ್ತಿದೆ. ನಿತಂಬದಲ್ಲಿ ಸಾಕಷ್ಟು ನೋವು. ಸುಧಾರಿಸಿಕೊಂಡು ಸ್ವಲ್ಪ ಹಿಂದೆ ನಡೆದೆ. “ಚಿರತೆ ಬಚ್ಚಲು ಮನೆಯೊಳಗೆ ಸೇರಿಕೊಂಡಿದೆ ಅದನ್ನು ಮುಚ್ಚಿ, ಅದನ್ನು ಮುಚ್ಚಿ’ ಎಂದು ಕೂಗಿಕೊಳ್ಳುತ್ತಿದ್ದೇನೆ. ಹಿನ್ನೆಲೆಯಲ್ಲಿ ಯಾರೋ “ಅಯ್ಯೋ ಸಂಜಯ… ಸರ್‌ಗೆ ಗಾಯ ವಾಗಿದೆ’ ಎಂದು ಕೂಗುತ್ತಿದ್ದಾರೆ. ಅಷ್ಟರಲ್ಲಿ ವನ್ಯಜೀವಿ ಸ್ವಯಂ ಸೇವಕ ಗೋಪಿ ಓಡಿ ಬಂದವನೇ ನನ್ನನ್ನು ಹಿಡಿದು “ಬನ್ನಿ ಹೋಗೋಣ’ ಎಂದು ಕರೆದೊಯ್ದ. ಕೈಯಲ್ಲಿ ಅಪಾರ ನೋವು, ನಡೆಯಲು ಕಷ್ಟವಾಗುತ್ತಿದೆ. ಆದರೂ ಗೋಪಿಯ ಬಿರುಸಿನ ಹೆಜ್ಜೆಯೊಟ್ಟಿಗೆ ತಾಳ ಹಾಕಲು ಪ್ರಯತ್ನಿಸಿದೆ. ಅಷ್ಟೂ ಹೊತ್ತು ಚೆಲ್ಲಾಪಿಲ್ಲಿಯಾಗಿ ಖಾಲಿಯಾಗಿದ್ದ ಈಜು ಕೊಳದ ಒಂದು ಮೂಲೆಯಲ್ಲಿ ಈಗ ಎಲ್ಲಿಂದಲೋ ಜನ ಪ್ರತ್ಯಕ್ಷರಾಗಿದ್ದಾರೆ. ಅವರ ಬಳಿ ತಲುಪಿದೊಡನೆ ಕೆಲವರು ನಾನು ಸೆಲೆಬ್ರಿಟಿಯೆಬಂತೆ ನನ್ನನ್ನು, ರಕ್ತ ಹರಿಯುತ್ತಿದ್ದ ನನ್ನ ಕೈಯನ್ನು ಮೊಬೈಲ್ ಫೋನಿನಲ್ಲಿ ಸೆರೆಹಿಡಿಯಲು ಪ್ರಯತ್ನಿಸುತ್ತಿ¨ªಾರೆ. ಇನ್ನೂ ಕೆಲವರು ತಮಗೂ ಇದಕ್ಕೂ ಸಂಬಂಧವೇ ಇಲ್ಲದವರ ಹಾಗೆ ಬೇರೆಲ್ಲೋ ನೋಡುತ್ತಾ ನಿಂತಿದ್ದರು. ಗೋಪಿ ಮಾತ್ರ “ಗುಬ್ಬಿ ಸರ್‌ಗೆ ಪೆಟ್ಟಾಗಿದೆ, ಗುಬ್ಬಿ ಸರ್‌ಗೆ ಪೆಟ್ಟಾಗಿದೆ, ಜೀಪ್ ತನ್ನಿ, ಗಾಡಿ ತನ್ನಿ’ ಎಂದು ಕೂಗುತ್ತಾ ನನ್ನನ್ನು ಎಳೆದುಕೊಂಡು ಓಡುತ್ತಿದ್ದ.
ದೂರದಲ್ಲಿ, ಸ್ವಲ್ಪ ಹೊತ್ತಿನ ಮುಂಚೆ ವಿವರವಾಗಿ ಚರ್ಚಿಸಿದ್ದ ಅರಣ್ಯಾಧಿಕಾರಿ ದೀಪಿಕಾ ಬಾಜಪೈ ನನ್ನನ್ನೇ ನೇರ ದೃಷ್ಟಿಯಿಂದ ನೋಡುತ್ತಿದ್ದದ್ದು ಕಂಡಿತು. ಯಾವುದೋ ಜೀಪಿನೊಳಗೆ ಕುಳಿತೆ, ಅದು ವೇಗವಾಗಿ ಶಾಲೆಯ ಕಾಂಪೌಂಡ್ ದಾಟಿ ರಸ್ತೆಗಿಳಿಯಿತು. ಒಂದೆರೆಡು ಕಿಲೋಮೀಟರ್ ದಾಟಿದ ಮೇಲೆ “ಇಲ್ಲಿ ಯಾವುದೋ ಕ್ಲಿನಿಕ್ ಇದೆ’ ಅಂದು ಆ ಕಡೆ ಜೀಪ್ ತಿರುಗಿಸಿದ ಡ್ರೈವರ್. ಜೀಪಿಳಿದು ಒಳಗೆ ಹೋದೆ. “ಏನಾಯಿ?’ ಎಂದು ಯಾರೋ ಕೇಳಿದರು, “ಚಿರತೆ ಕಚಿºಟ್ಟಿದೆ’ ಅಂತ ಯಾರೋ ಹೇಳಿದರು. “ಸರಿ, ಅಲ್ ಮಲಗ್ಸಿ, ಡಾಕುó ಬರ್ತಾರೆ’ ಎಂದು ಉತ್ತರ ಬಂದಿತು. ನೋಡಲಿಕ್ಕೆ ಖಾಸಗಿ ಕ್ಲಿನಿಕ್ ತರಹ ಕಂಡರೂ, ಉತ್ತರವೆಲ್ಲ ಸರ್ಕಾರಿ ಆಸ್ಪತ್ರೆಯ ಧಾಟಿ. ಯಾವುದೋ ಮೂಲೆಯಲ್ಲಿ ಮಬ್ಟಾಗಿ “ಆಪೋ…’ ಎಂದು ಬೋರ್ಡ್ ಕಂಡಿತು.
ಇಪ್ಪತ್ತು ನಿಮಿಷ ಕಾದ ಮೇಲೆ ಬಂದರು ಧನ್ವಂತರಿ ದೇವರು. “ಏನಾಗಿದೆ ತೋರಿಸ್ರಿ’ ಎಂದು ಬಿರುಸಾಗಿ ಕೇಳಿದರು.
“ಬಲಗೈ ಎಲ್ಲಾ ಕಚ್ಚಿದೆ ಮತ್ತು ಬಲ ಸೊಂಟದಲ್ಲಿ ಸಾಕಷ್ಟು ಗಾಯ ಆಗಿದೆ’ ಎಂದೆ. “ಸೊಂಟದಲ್ಲಿ ಏನು ಆಗಿಲ್ಲ, ಕೈಗೆ ಸ್ವಲ್ಪ ಲೋಕಲ್ ಅನಸ್ತೇಸಿಯಾ ಕೊಟ್ಟು ಸ್ಟಿಚ್ ಮಾಡಬೇಕಾಗುತ್ತದೆ’ ಅಂದರು ಡಾಕ್ಟರ್ ಸಾಹೇಬರು. “ಸರ್ ಇಲ್ಲ, ನನಗೇಕೋ ಇದಕ್ಕೆ ಜನರಲ್ ಅನಸ್ತೇಸಿಯಾ ಬೇಕಾಗುತ್ತದೆ ಅನ್ನಿಸುತ್ತೆ, ಅಲ್ಲದೆ ಪ್ರಾಣಿ ಕಚ್ಚಿದರೆ ಹೊಲಿಗೆ ಈಗಲೇ ಹಾಕಬಾರದು, ಇನ್ಫೆಕ್ಷನ್ ಆಗಬಹುದು’ ಎಂದೆ. “ಇಲ್ಲ ರೀ ಬರೀ ಫಸ್ಟ್ ಏಡ್ ಕೊಡ್ತೀನಿ. ಆಮೇಲೆ ಬೇರೆ ಕಡೆ ಹೋಗ್ಬಹುದು’ ಎಂದು ಅಧಿಕಾರಿವಾಣಿಯಲ್ಲಿ ಹೇಳಿದರು. ಚರಕ, ಸುಶ್ರುತ, ವಾಗಟ ಎಲ್ಲರನ್ನೂ ನೆನೆದು, ಎಲ್ಲಾ ಭಾರವನ್ನೂ ವೈದ್ಯರ ಮೇಲೆ ಹಾಕಿ ಒಪ್ಪಿಕೊಂಡೆ. ಇನ್ನೂ ಹತ್ತು ನಿಮಿಷ ಕಳೆಯಿತು, ಮತ್ತೆ ಒಳಗೆ ಹೋದ ಡಾಕ್ಟರ್ ಸಾಹೇಬರ ಪತ್ತೆಯೇ ಇಲ್ಲ. ನರ್ಸ್ ಕರೆದು ಕೇಳಿದೆ, “ತುಂಬಾ ನೋವಾಗ್ತಿದೆ ಡಾಕ್ಟ್ರರ್‌ನ ಕರೀತೀರಾ?’
“ಇನ್ನೊಬ್ಬ ಪೇಷಂಟ್‌ನ ನೋಡ್ತಾ ಇದ್ದಾರೆ. ಬರ್ತಾರೆ ತಡೀರಿ..’ ಅಂತ ಮುಖತಿರುಗಿಸಿ ಹೊರಟರು. ಕೈಯಿಂದ ರಕ್ತ ಹರಿದು ಹೋಗುತ್ತಿರುವುದು ಕಾಣುತ್ತಿದೆ, ಕೆಲವೊಮ್ಮೆ ಕಣ್ಣು ಮಬ್ಟಾಗುವ ಹಾಗೆ ಅನಿಸುತ್ತಿದೆ. ತುಟಿ ಕಚ್ಚಿ ನೋವು ಸಹಿಸಿ ಕಾದೆ. ಎಷ್ಟು ಹೊತ್ತು ಕಳೆಯಿತೊ ಗೊತ್ತಿಲ್ಲ. “ಕೈಯೆತ್ತಿ’ ಎಂಬ ಧ್ವನಿ ಕೇಳಿತು. ಬಲಗೈ ಎತ್ತಿದೆ. ಗಾಯದ ಪಕ್ಕ ಸೂಜಿ ಚುಚ್ಚಿದ ಅನುಭವ. ಆ ಭಾಗ ಮರ ಗಟ್ಟಿತು. ಇದು ಒಂದೆರೆಡು ಬಾರಿ ಆದಮೇಲೆ ಬಿಳಿ ಬ್ಯಾಂಡೇಜ್ ಕಟ್ಟಲು ಪ್ರಾರಂಭಿಸಿದರು. “ಸರ್, ಇನ್ನು ಗಾಯಗಳು ಇವೆ’ ಎಂದೆ. “ಇಲ್ಲ ಇಷ್ಟೇ’ ಎಂದರು! ಕೈಗೆಲ್ಲ ಬಿಳಿ ಬ್ಯಾಂಡೇಜ್ ಕಟ್ಟಿ ಆದ ಮೇಲೆ “ಕೈಯೆತ್ತಿ’ ಎಂದರು. ಕಷ್ಟ ಪಟ್ಟು ಕೈಯೆತ್ತಿದೆ. ಎಲ್ಲಿಂದಲೋ ಇಳಿಯುತ್ತಿದ್ದ ದ್ರವದಿಂದ ಬ್ಯಾಂಡೇಜ್ ಎಲ್ಲ ಒದ್ದೆಯಾಯಿತು. “ಅಯ್ಯೋ, ಇಲ್ಲೂ ಗಾಯ ಇದೆ. ಬ್ಯಾಂಡೇಜ್ ಬಿಚ್ಚು’ ಎಂದು ಆಜ್ಞೆಯಾಯಿತು. ಬ್ಯಾಂಡೇಜ್ ಬಿಚ್ಚಿ ಮತ್ತೆ ಗಾಯದ ಬಳಿ ಸೂಜಿ ಚುಚ್ಚಿ ಹೊಲಿಗೆ ಹಾಕಲಾಯಿತು. ಮತ್ತೆ ಬ್ಯಾಂಡೇಜ್ ಹಾಕಿದರು. “ಸರ್, ಇನ್ನೂ ಗಾಯಗಳು ಇವೆ’ ಎಂದು ಉಸುರಿದೆ. “ಇಲ್ಲಾರಿ, ಕೈಯೆತ್ತಿ’ ಎಂದು ಆಜ್ಞೆಯಾಯಿತು.
ಕೈಯೆತ್ತಿದರೆ ಮತ್ತದೇ ಅನು ಭವ, ಬ್ಯಾಂಡೇಜ್ ಎಲ್ಲ ಮತ್ತೆ ಕೆಂಪು ಕಲೆಯಿಂದ ಒದ್ದೆಯಾಗುತ್ತಿದೆ. ಕಣ್ಣುಗಳು ಮಬ್ಟಾಗುತ್ತಿವೆ, ಆದರೆ ಯಾಕೋ ಇವರು ಮಾಡುತ್ತಿ ರುವುದು ಸರಿಯಿಲ್ಲವೆಂದು ಅನಿಸುತ್ತಿದೆ. ಮುಚ್ಚಿಕೊಳ್ಳುತ್ತಿರುವ ಕಣ್ಣುಗಳನ್ನು ಬಲವಂತವಾಗಿ ತೆಗೆದಿಟ್ಟುಕೊಂಡೆ. ಅಷ್ಟರಲ್ಲಿ ಯಾರೋ ಹತ್ತಿರ ಬಂದು “ಸಾರ್, ನಾವು ಟಿ.ವಿ.ಯವರು. ನಿಮ್ಮ ರಿಯಾಕ್ಷನ್ ಬೇಕಿತ್ತು’ ಅಂದರು. ಎರಡು ಸಲ ಅದನ್ನೇ ಉಚ್ಚರಿ ಸಿದರು, ನನ್ನಿಂದ ಉತ್ತರ ಬರದಿದ್ದನ್ನು ಕಂಡು ಆಚೆ ನಡೆದರು…
(ಮುಂದುವರಿಯುವುದು)
ಚಿತ್ರಸಂಪುಟ ಒಳಗೊಂಡ ವಿಡಿಯೋ ನೋಡಲು ಈ ಲಿಂಕ್ ಟೈಪ್ ಮಾಡಿ: bit.ly/2FPR0Ho
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
MUST WATCH
ಹೊಸ ಸೇರ್ಪಡೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.