“ಬ್ಯಾರಿ’ ಸಿನೆಮಾ ಪ್ರದರ್ಶನಕ್ಕೆ ಕೋರ್ಟ್ ತಡೆ
ಕೃತಿಚೌರ್ಯ ಆರೋಪ ಸಾಬೀತು
Team Udayavani, Jul 2, 2019, 10:40 AM IST
ಮಂಗಳೂರು: “ಸ್ವರ್ಣ ಕಮಲ ರಾಷ್ಟ್ರ ಪ್ರಶಸ್ತಿ ಪಡೆದ ಬ್ಯಾರಿ ಭಾಷೆಯ ಮೊತ್ತ ಮೊದಲ “ಬ್ಯಾರಿ’ ಹೆಸರಿನ ಚಲನಚಿತ್ರವು ಸಾಹಿತಿ ಸಾರಾ ಅಬೂಬಕರ್ ಅವರ ಕಾದಂಬರಿ “ಚಂದ್ರಗಿರಿಯ ತೀರದಲ್ಲಿ’ ಕೃತಿಯ ಕತೆಯನ್ನು ಕೃತಿ ಚೌರ್ಯವೆಸಗಿ ಮಾಡಿರುವುದು ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಚಿತ್ರವನ್ನು ಇನ್ನು ಮುಂದೆ ಎಲ್ಲೂ ಪ್ರದರ್ಶಿಸಬಾರದು ಎಂದು ಆದೇಶ ನೀಡಿದೆ.
ಕೃತಿ ಚೌರ್ಯಕ್ಕಾಗಿ ಲೇಖಕಿಗೆ 2 ಲ.ರೂ. ಮೊತ್ತದ ಪರಿಹಾರ ನೀಡಬೇಕು ಹಾಗೂ ಜತೆಗೆ ವಿಚಾರಣಾವಧಿಯ (8 ವರ್ಷ 12 ದಿನಗಳು) ಕಾಲದ ಬಡ್ಡಿ ಹಾಗೂ ನ್ಯಾಯಾಲಯದ ವೆಚ್ಚವನ್ನೂ ಪಾವತಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ ಎಂಬುದಾಗಿ ಸಾರಾ ಅಬೂಬಕರ್ ತಿಳಿಸಿದ್ದಾರೆ.
ಅಲ್ತಾಫ್ ಹುಸೇನ್ ಅವರು ಈ ಚಿತ್ರವನ್ನು ನಿರ್ಮಿಸಿ, ಸಿನೆಮಾ ದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿ ಕೊಂಡಿದ್ದರು. ಸುವೀರನ್ ಚಿತ್ರವನ್ನು ನಿರ್ದೇಶಿಸಿದ್ದರು. 59ನೇ ರಾಷ್ಟ್ರೀಯ ಸಿನೆಮಾ ಪ್ರಶಸ್ತಿಯಲ್ಲಿ “ಬ್ಯಾರಿ’ ಚಿತ್ರ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
“ಚಂದ್ರಗಿರಿಯ ತೀರದಲ್ಲಿ’ ಕೃತಿಯನ್ನು ಆಧರಿಸಿ ಮಾಡಿರುವುದು ಸಾರಾ ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಚಿತ್ರ ನಿರ್ಮಾಪಕರು, ನಿರ್ದೇಶಕರ ವಿರುದ್ಧ 2011ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. 3ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಮುರಳೀಧರ ಪೈ ಬಿ. ತೀರ್ಪು ನೀಡಿದ್ದಾರೆ.
“ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದು, ಸಾರ್ವಜನಿಕವಾಗಿ ತೀವ್ರ ಚರ್ಚೆಗೊಳಗಾಗಿರುವ ಕೃತಿಯಾಗಿತ್ತು. ಅಪಾರ ಓದುಗರನ್ನು ಹೊಂದಿದ್ದ ಈ ಕಾದಂಬರಿಯ ಕತೆಯನ್ನು, ನನ್ನ ಯಾವುದೇ ಅನುಮತಿಯಿಲ್ಲದೆ ಕದ್ದು ಸಿನಿಮಾ ಮಾಡಿರುವು ದರಿಂದ ನ್ಯಾಯಾಲಯದ ಮೆಟ್ಟಿಲೇರುವುದು ನನಗೆ ಅನಿವಾರ್ಯವಾಗಿತ್ತು ಎಂದು ಸಾರಾ ಅಬೂಬಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನನ್ನ ಪರವಾಗಿ ಹಿರಿಯ ವಕೀಲ ದಿ| ಗೌರಿಶಂಕರ್ ಸುಮಾರು 10 ವರ್ಷಗಳ ಕಾಲ ವಾದಿಸಿದರು. ಬಳಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಇನ್ನೋರ್ವ ವಕೀಲ ಶ್ಯಾಮರಾವ್ ಅವರಿಗೆ ಪ್ರಕರಣ ವಿಚಾರಣೆ ಹಸ್ತಾಂತರಿಸಿದರು. ನನ್ನ ಪರವಾಗಿ ವಾದಿಸಿ ಈ ಮೊಕದ್ದಮೆಯನ್ನು ಗೆಲ್ಲಿಸಿಕೊಟ್ಟ ಇವರಿಗೆ ನನ್ನ ಕೃತಜ್ಞತೆ, ನನಗೆ ನ್ಯಾಯ ದೊರಕುವುದಕ್ಕೆ ನೆರವಾಗಿರುವ ಸರ್ವರಿಗೂ ಕೃತಜ್ಞಳಾಗಿದ್ದೇನೆ ಎಂದೂ ಸಾರಾ ಅಬೂಬಕರ್ ವಿವರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.