ಕೋವಿಡ್ ಪ್ರಕರಣ ಇಳಿಮುಖ: ಮುನ್ನೆಚ್ಚರಿಕೆ ಮರೆಯದಿರಿ
ದಕ್ಷಿಣ ಕನ್ನಡ ಜಿಲ್ಲೆ: ಹತ್ತು ದಿನಗಳಲ್ಲಿ ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ
Team Udayavani, Dec 29, 2020, 4:16 AM IST
ಮಹಾನಗರ: ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೊಳಗಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಳೆದ ಹತ್ತು ದಿನಗಳಿಂದ ಶೂನ್ಯಕ್ಕಿಳಿದಿರುವುದು ಜಿಲ್ಲೆಯ ಮಟ್ಟಿಗೆ ಸಮಾಧಾನಕರ ಸಂಗತಿಯಾಗಿದೆ. ಆರೋಗ್ಯ ಇಲಾಖೆ ಕೊರೊನಾ ನಿಯಂತ್ರಣದಲ್ಲಿ ವಹಿಸಿದ ಶ್ರಮವೇ ಇದಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಇಳಿಮುಖ ವಾಗುತ್ತಿದೆ. ಆದರೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯುವಂತಿಲ್ಲ.
ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆ ಆರಂಭ ವಾದಂದಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಯೂ ಏರಿಕೆಯಾಗತೊಡಗಿತ್ತು. ಎಪ್ರಿಲ್ 18ರ ಬಳಿಕ ನಿರಂತರವಾಗಿ ಏರಿದ್ದ ಸಾವಿನ ಪ್ರಮಾಣ ಜಿಲ್ಲೆಯಲ್ಲಿ ಆತಂಕವನ್ನೇ ಸೃಷ್ಟಿಸಿತ್ತು. ಡಿ. 17ರ ವರೆಗೆ 732 ಮಂದಿ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾಗಿದ್ದಾರೆ.
ಜುಲೈ-ಅಕ್ಟೋಬರ್‌ನಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನವೊಂದಕ್ಕೆ 5-12ರ ವರೆಗೂ ಇತ್ತು. ಡಿಸೆಂಬರ್ ತಿಂಗಳಿನಲ್ಲಿ ಕೊರೊನಾದಿಂದ ಮೃತ ಪಟ್ಟವರ ಸಂಖ್ಯೆ 18 ಆಗಿದೆ.
ಅದರಲ್ಲೂ ಡಿ. 1, 2, 4, 13ರಿಂದ 16ರ ತನಕ ಶೂನ್ಯ ಸಾವು ಸಂಭವಿಸಿತ್ತು. ಈ ನಡುವೆ ದಿನಕ್ಕೆ ಒಂದೆರಡು ಸಾವುಗಳು ವರದಿಯಾಗಿದ್ದರೆ, ಡಿ. 18ರ ಬಳಿಕ ಯಾವುದೇ ಸಾವು ಸಂಭವಿಸಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಆತಂಕ ಸ್ವಲ್ಪ ಮಟ್ಟಿಗೆ ದೂರವಾಗಿದೆ.
ಕೊರೊನಾದಿಂದ ಮೃತಪಟ್ಟವರು ಕೇವಲ 17!
ಜಿಲ್ಲೆಯಲ್ಲಿ ಕೊರೊನಾ ದೃಢಪಟ್ಟು ಸಾವನ್ನಪ್ಪಿದವರ ಸಂಖ್ಯೆ ಇಲ್ಲಿಯವರೆಗೆ 732ಕ್ಕೆ ತಲುಪಿದ್ದರೂ ಇದರಲ್ಲಿ ಕೇವಲ ಕೊರೊನಾದಿಂದಾಗಿಯೇ ಸಾವನ್ನಪ್ಪಿದವರ ಸಂಖ್ಯೆ 17. ಉಳಿದ 715 ಮಂದಿ ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ, ಬಹು ಅಂಗಾಂಗ ವೈಫಲ್ಯ, ಕಿಡ್ನಿಯಲ್ಲಿನ ತೊಂದರೆ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಸಹಿತ ಇತರ ದೀರ್ಘಕಾಲಿಕ ತೊಂದರೆಗಳಿಂದ ಬಳಲುತ್ತಿದ್ದವರು. ಈ ಸಂಖ್ಯೆ ಯನ್ನು ಗಮನಿಸಿದರೆ ಆರೋಗ್ಯವಂತ ವ್ಯಕ್ತಿಗೆ ಕೊರೊನಾ ಮಾರಣಾಂತಿಕವಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಕೊನೆ ಕ್ಷಣದ ಚಿಕಿತ್ಸೆ: ಸಾವಿಗೆ ಕಾರಣ
ಕೊರೊನಾ ಲಕ್ಷಣ ಆರಂಭದ ಮುನ್ಸೂಚನೆ ಲಭಿಸಿದಾಗಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರೆ ಸಾವಿನ ಪ್ರಮಾಣ ಇನ್ನಷ್ಟು ತಗ್ಗುತ್ತಿತ್ತು. ಉಡುಪಿ, ಶಿವಮೊಗ್ಗ, ಕೊಡಗು, ಉ.ಕ., ದಾವಣಗೆರೆ ಮುಂತಾದೆಡೆಗಳಿಂದ ಕೊರೊನಾ ಚಿಕಿತ್ಸೆಗೆಂದು ರೋಗಿಗಳು ದ.ಕ. ಜಿಲ್ಲೆಗೆ ಆಗಮಿಸುತ್ತಾರೆ. ಆದರೆ ಹೀಗೆ ಬರುವವರೆಲ್ಲರೂ ತಮ್ಮ ಜಿಲ್ಲೆಗಳಲ್ಲಿ ಚಿಕಿತ್ಸೆಗೆ ತೆರಳಿ ಫಲಿಸದಾಗ ಕೊನೆ ಕ್ಷಣದಲ್ಲಿ ದ.ಕ. ಜಿಲ್ಲೆಯ ಆಸ್ಪತ್ರೆಗಳಿಗೆ ಬರುತ್ತಾರೆ. ಆದರೆ, ಆ ಹೊತ್ತಿಗಾಗಲೇ ರೋಗ ಉಲ್ಬಣಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಸಾವು ಸಂಭವಿಸುತ್ತಿದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಮಾತು.
ಪರೀಕ್ಷೆಗೊಳಪಡಿ
ಕೆಲವು ದಿನಗಳಿಂದೀಚೆಗೆ ಕೊರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ ಶೂನ್ಯಕ್ಕಿಳಿದಿರುವುದು ಜಿಲ್ಲೆಯ ಮಟ್ಟಿಗೆ ಸಮಾಧಾನಕರ ಸಂಗತಿಯಾಗಿದೆ. ಜಿಲ್ಲೆ ಮತ್ತು ಹೊರ ಜಿಲ್ಲೆಯ ರೋಗಿಗಳು ಆರಂಭಿಕ ಲಕ್ಷಣ ಗೋಚರಿಸಿದಾಗಲೇ ಆಸ್ಪತ್ರೆಗೆ ಬಂದು ಪರೀಕ್ಷೆಗೊಳಪಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕು. ಕೊನೆಯ ಕ್ಷಣದವರೆಗೆ ಕಾಯಬಾರದು. ಇದರಿಂದ ಆರೋಗ್ಯನಷ್ಟ, ಸಾವು ತಡೆಯಬಹುದು.
-ಡಾ| ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.