C.T.Ravi; ನನ್ನ ಬಂಧನ ನ್ಯಾಯಾಂಗ ತನಿಖೆಯಾಗಲಿ…ಈಗಲೂ ಜೀವ ಬೆದರಿಕೆ ಇದೆ
ಪೊಲೀಸರಿಗೆ ನಿರ್ದೇಶನ ಕೊಟ್ಟವರು ಯಾರು ಎಂಬುದು ಬಹಿರಂಗವಾಗಲಿ..
Team Udayavani, Dec 22, 2024, 12:03 AM IST
ಬೆಂಗಳೂರು: ತಮ್ಮ ಬಂಧನ ಪ್ರಕರಣ ವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದ್ದು, ಬಂಧಿಸಿದ ಬಳಿಕ ರಾತ್ರಿಯೆಲ್ಲ ಸುತ್ತಾಡಿಸಿ ಹಿಂಸೆ ಕೊಡಲು ಪೊಲೀಸರಿಗೆ ನಿರ್ದೇಶನ ನೀಡಿದವರು ಯಾರು ಎಂಬುದು ಬಹಿರಂಗ ವಾಗಬೇಕಾದರೆ ನ್ಯಾಯಾಂಗ ತನಿಖೆಯೇ ನಡೆಯಬೇಕು ಎಂದಿದ್ದಾರೆ. ನನ್ನ ಮೊಬೈಲ್ ಟ್ಯಾಪ್ ಆಗುತ್ತಿದ್ದು, ಸ್ಯಾಟಲೈಟ್ ಹಾಗೂ ಸಿಡಿಆರ್ ತನಿಖೆ ನಡೆಯಬೇಕು.ನಿಗೂಢ ಪ್ರದೇಶಕ್ಕೆ ಕರೆದೊಯ್ದು ಯಾರನ್ನೋ ಕರೆಸಿ ನನ್ನನ್ನು ಕೊಲೆ ಮಾಡುವ ಷಡ್ಯಂತ್ರ ಇತ್ತು. ಇಲ್ಲವಾದರೆ ಕ್ರಷರ್ ಮಧ್ಯೆ ಕರೆದೊಯ್ದು ತಡರಾತ್ರಿ ಏಕೆ ಪೊಲೀಸರು ವಾಹನ ನಿಲ್ಲಿಸುತ್ತಿದ್ದರು? ಪದೇಪದೆ ಕರೆ ಮಾಡಿ ಪೊಲೀಸರಿಗೆ ನಿರ್ದೇಶನ ಕೊಡುತ್ತಿದ್ದವರು ಯಾರು? ಅದು ಡಿಕೆಶಿಯವರೋ ಅಥವಾ ಲಕ್ಷ್ಮೀ ಹೆಬ್ಟಾಳ್ಕರ್ ಅವರೋ ಎಂಬುದು ಬಯಲಾಗಬೇಕು ಎಂದರು.
ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಂಧನದಿಂದ ಬಿಡುಗಡೆಯವರೆಗಿನ 30 ತಾಸುಗಳ ಬೆಳವಣಿಗೆಗಳನ್ನು ವಿವರಿಸಿದ ಅವರು, ನಾನು ಕ್ರಿಮಿನಲ್, ಆತಂಕವಾದಿ ಎಂಬಂತೆ ಪೊಲೀಸರು ವರ್ತಿಸಿದ್ದಾರೆ. ಘಟನೆ ಬಗ್ಗೆ ಸಭಾಪತಿಗಳು ರೂಲಿಂಗ್ ಕೊಟ್ಟ ಬಳಿಕವೂ ಈ ರೀತಿ ವರ್ತಿಸಿದ್ದಾರೆ ಎಂದರೆ ಅರ್ಥವೇನು? ಬಿಹಾರ, ತಮಿಳುನಾಡಿನಲ್ಲಿ ನಡೆಯುತ್ತಿದ್ದ ವರ್ತನೆ ಕರ್ನಾಟಕದಲ್ಲಿ ನಡೆಯುತ್ತಿದೆ. ಕರ್ನಾಟಕ ನಂದನವನವೇ ವಿನಾ ಬನಾನಾ ರಿಪಬ್ಲಿಕ್ ಅಥವಾ ಕನಕಪುರ-ಬೆಳಗಾವಿ ರಿಪಬ್ಲಿಕ್ ಅಲ್ಲ. ಲಕ್ಷ್ಮೀ ಹೆಬ್ಟಾಳ್ಕರ್ ಕ್ಷೇತ್ರದಲ್ಲಿ ನನ್ನನ್ನು ಜೀವಂತವಾಗಿ ಬಿಟ್ಟದ್ದೇ ಹೆಚ್ಚು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇದು ಡಿಸಿಎಂ ಘನತೆಗೆ ತಕ್ಕ ಹೇಳಿಕೆಯಲ್ಲ ಎಂದು ವಾಗ್ಧಾಳಿ ನಡೆಸಿದರು.
ಕ್ರಮ ಕೈಗೊಳ್ಳಿ
ಗೃಹ ಸಚಿವ ಪರಮೇಶ್ವರ್ ಕೆಟ್ಟವ ರಲ್ಲ. ಆದರೆ ಈ ಘಟನೆ ಬಳಿಕ ಗೃಹ ಇಲಾಖೆ ಅವರ ನಿಯಂತ್ರಣದಲ್ಲಿ ಇದೆಯಾ ಎಂಬ ಅನುಮಾನ ಮೂಡುತ್ತಿದೆ. ನನ್ನನ್ನು ರಾತ್ರಿಯೆಲ್ಲ ಸುತ್ತಾಡಿಸಿದ ಬಗ್ಗೆ ಅವರಿಗೆ ಮಾಹಿತಿಯೇ ಇರಲಿಲ್ಲ, ಇದೆಲ್ಲ ಬೇಕಿತ್ತಾ ಎಂದು ಅವರು ಆತ್ಮೀಯರ ಬಳಿ ಹೇಳಿಕೊಂಡಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ತತ್‌ಕ್ಷಣ ಅಮಾನತು ಮಾಡಲಿ ಎಂದು ಪರಮೇಶ್ವರ್ ಆಗ್ರಹಿಸಿದರು.
ಮಾನವ ಹಕ್ಕು ಉಲ್ಲಂಘನೆ
ಈ ಪ್ರಕರಣದಲ್ಲಿ ನನ್ನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ನನ್ನನ್ನು ಬಂಧಿಸುವುದಕ್ಕೆ ನೋಟಿಸ್ ನೀಡಿದ್ದರಾ ಅಥವಾ ಸಭಾಪತಿಗಳ ಅನುಮತಿ ಪಡೆದಿದ್ದರಾ? ಇದೊಂದು ಷಡ್ಯಂತ್ರ. ಇದರಲ್ಲಿ ಡಿಸಿಎಂ, ಲಕ್ಷ್ಮೀ ಹೆಬ್ಟಾಳ್ಕರ್ ಭಾಗಿಯಾಗಿದ್ದಾರೆ. ಪರಿಷತ್‌ನಲ್ಲಿ ಡಿ.ಕೆ. ಶಿವಕುಮಾರ್, ಲಕ್ಷ್ಮಿ ಹೆಬ್ಬಾಳ್ಕರ್, ಚನ್ನರಾಜ್ ಹಟ್ಟಿಹೊಳಿ ಯಾವ ರೀತಿ ವರ್ತಿಸಿದರು ಎಂಬ ದಾಖಲೆಯಿದೆ. ನನಗೆ ಈಗಲೂ ಜೀವ ಬೆದರಿಕೆ ಇದೆ. ನನಗೇನಾದರೂ ಅನಾಹುತವಾದರೆ ಇವರೇ ಹೊಣೆ. ಈ ಬಗ್ಗೆ ನಾನು ಮಾನವ ಹಕ್ಕು ಆಯೋಗಕ್ಕೆ ದೂರು ನೀಡುತ್ತೇನೆ ಎಂದರು.
ಭದ್ರತಾ ದೃಷ್ಟಿಯಿಂದ ಒಂದು ಠಾಣೆಯಿಂದ ಇನ್ನೊಂದು ಠಾಣೆಗೆ ನನ್ನನ್ನು ಸುತ್ತಾಡಿಸಲಾಯಿತು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕಾನೂನು ಪಂಡಿತರಾದ ನಿಮ್ಮಿಂದ ಈ ಮಾತನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ವ್ಯಂಗ್ಯವಾಡಿದರು.
ರಾತ್ರಿ 11.45ರ ಸುಮಾರಿಗೆ ನನ್ನನ್ನು ಕಿತ್ತೂರು ಠಾಣೆಯಿಂದ ಬಲವಂತವಾಗಿ ಜೀಪಿನಲ್ಲಿ ತುಂಬಿಕೊಂಡು ನಂದಗಢಕ್ಕೆ ಹೋದರು. ಕುಡಿಯುವುದಕ್ಕೆ ನೀರನ್ನು ಕೊಡಲಿಲ್ಲ. ಮೂತ್ರ ಮಾಡುವುದಕ್ಕೂ ಅವಕಾಶ ನೀಡಲಿಲ್ಲ. ವಾಂತಿ ಬಂದಂತೆ ಆಗುತ್ತಿದೆ ಎಂದರೆ ಇಬ್ಬರು ಅಧಿಕಾರಿಗಳು ಭದ್ರವಾಗಿ ಹಿಡಿದುಕೊಂಡರು. ಎಲ್ಲಿಗೆ ಕರೆದೊಯ್ತುತ್ತಿದ್ದೀರಿ ಎಂದು ಕಿರುಚಿದರೂ ಉತ್ತರ ನೀಡಲಿಲ್ಲ. ಹೊರಗೆ ನೋಡಿದರೆ ನಮ್ಮ ವಾಹನ ಧಾರವಾಡ ಹೈಕೋರ್ಟ್ ಬಳಿ ಇತ್ತು. ಆ ಸಂದರ್ಭದಲ್ಲಿ ನಾನು ಮೊಬೈಲ್‌ನಿಂದ ಲೈವ್ ಲೊಕೇಶನ್ ಪತ್ನಿಗೆ ಕಳುಹಿಸಿದೆ. ಗರಗ, ಸವದತ್ತಿ, ರಾಮದುರ್ಗ, ಯಾದವಾಡ ಸುತ್ತಾಡಿಸಿ ಕಬ್ಬಿನಗದ್ದೆಯೊಂದರ ಬಳಿ ವಾಹನ ನಿಲ್ಲಿಸಿದರು. ಆಗ ಮಾಧ್ಯಮದ ಪ್ರತಿನಿಧಿಗಳು ಹಾಗೂ ಪರಿಷತ್ ಸದಸ್ಯ ಕೇಶವಪ್ರಸಾದ್ ಸ್ಥಳಕ್ಕೆ ಆಗಮಿಸಿದರು. ಅಲ್ಲಿಂದ ಡಿವೈಎಸ್‌ಪಿ ಕಚೇರಿಗೆ ನನ್ನನ್ನು ಕರೆದೊಯ್ದು ಕುಳ್ಳಿರಿಸಿ, ವಾಶ್ ರೂಂಗೆ ಹೋಗಲು ಅವಕಾಶ ಕೊಟ್ಟರು. ಆಗ ಬೆಳಗಿನ ಜಾವ 3 ಗಂಟೆಯಾಗಿತ್ತು. ಕನ್ನಡಿಯಲ್ಲಿ ನೋಡಿಕೊಂಡಾಗ ತಲೆಯಿಂದ ಹರಿದ ರಕ್ತ ಮುಖದ ಮೇಲೆಲ್ಲ ಹೆಪ್ಪುಗಟ್ಟಿದ್ದು ಕಾಣಿಸಿತು ಎಂದರು.
ಆಗ ಮುಧೋಳದಿಂದ ಗ್ರಾಮಾಂತರ ಎಸ್ಪಿ ಭೀಮಾಶಂಕರ್ ಗುಳೇದ್ ಬಂದರು. ನಿಮಗೆ ಏನೂ ತೊಂದರೆಯಾಗುವುದಿಲ್ಲ. ಫೋನ್ ಕೊಟ್ಟುಬಿಡಿ ಎಂದರು. ದಡೂತಿ ವ್ಯಕ್ತಿಯೊಬ್ಬ ಫೋನ್ ಕಿತ್ತುಕೊಳ್ಳುವುದಕ್ಕೆ ಪ್ರಯತ್ನ ನಡೆಸಿದ. ಆದರೆ ನಾನು ಮೊಬೈಲ್ ಗಟ್ಟಿಯಾಗಿ ಹಿಡಿದುಕೊಂಡು ಚೀರಿದೆ. 10 ನಿಮಿಷದ ಬಳಿಕ ಅಂಕಲಿ ಠಾಣೆಗೆ ನನ್ನನ್ನು ಕರೆತಂದರು. ಆಗ ಅಧಿಕಾರಿಯೊಬ್ಬರು ಇವೆಲ್ಲದರ ಬಗ್ಗೆ ಬೇಸರ ವ್ಯಕ್ತಪಡಿಸಿದರು ಎಂದು ರವಿ ಹೇಳಿದರು.
ಈ ಪ್ರಕರಣದಲ್ಲಿ ಬೆಳಗಾವಿ ಕಮಿಷನರ್, ಎಸ್ಪಿ ಗುಳೇದ್, ಎಸಿಪಿ, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್ ಳಗೊಂಡಂತೆ ಎಂಟು ಜನರ ವರ್ತನೆ ಅನುಮಾನಾಸ್ಪದವಾಗಿದೆ ಎಂದರು.
ಹೆಬ್ಬಾಳ್ಕರ್ ಬಗ್ಗೆ ದ್ವೇಷ ಇಲ್ಲ
ನಾನೇನು ಮಾತನಾಡಿದೆ ಎಂಬುದು ನನಗೆ ಗೊತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ನನಗೆ ದ್ವೇಷ ಇಲ್ಲ. ಅಶ್ಲೀಲ ಪದ ಬಳಸುವ ಸಂಸ್ಕೃತಿ ನನ್ನದಲ್ಲ ಎಂದರು.
ಸಿ.ಟಿ. ರವಿಗೆ ಹೂಮಳೆ ಸ್ವಾಗತ
ಶನಿವಾರ ಸಿ.ಟಿ. ರವಿ ಮಲ್ಲೇಶ್ವರ ಬಿಜೆಪಿ ಕಚೇರಿಗೆ ಆಗಮಿಸು ತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅಭೂತ ಪೂರ್ವವಾಗಿ ಸ್ವಾಗತ ಮಾಡಿದರು. ಸಿ.ಟಿ. ರವಿ ಮೇಲೆ ಹೂಮಳೆ ಸುರಿಸಿ ಅದ್ದೂರಿಯಾಗಿ ಬರಮಾಡಿಕೊಂಡರು. ಈ ವೇಳೆ ಕಾರ್ಯಕರ್ತರು ಸಿ.ಟಿ. ರವಿ ಪರ ಜಯ ಘೋಷಣೆ ಕೂಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.