Desi Swara: ಋತುಗಳು ಬದಲಾದಂತೆ ಬದುಕಿನಲ್ಲೂ ಬದಲಾವಣೆಯಿರಲಿ
ಕಪ್ಪೆ ಚಿಪ್ಪಿನಿಂದ ಹೊರಬರೋಣ
Team Udayavani, Mar 23, 2024, 12:20 PM IST
ನೀವು ಪ್ರತಿನಿತ್ಯ ಧರಿಸುವ ವಸ್ತ್ರಗಳ ಬದಲು ಬೇರೆ ರೀತಿಯ ವಸ್ತ್ರಗಳನ್ನು ನೀವು ಧರಿಸಿ ಕಚೇರಿಗೆ ಹೋದರೆ ಅಂದು ಪ್ರತಿಯೊಬ್ಬರೂ ಅದನ್ನು ಗುರುತಿಸುವುದನ್ನು ನೀವು ಗಮನಿಸಿರಬಹುದು. ನಮ್ಮಲ್ಲಾಗುವ ಚಿಕ್ಕ ಬದಲಾವಣೆ ನಮ್ಮ ಗುರತನ್ನೇ ಬದಲಾಯಿಸಿ ಬಿಡುತ್ತದೆ. ಬದುಕು ಸ್ವಾರಸ್ಯಕರವಾಗಿ ಇರಬೇಕೆಂದರೆ ಹಿಂಜರಿಕೆ ಬಿಟ್ಟು ಬದಲಾವಣೆಗಳತ್ತ ಮಗ್ಗಲು ಬದಲಾಯಿಸಬೇಕು.
ಪ್ರಕೃತಿಯಲ್ಲಿ ಎಲ್ಲವೂ ಹಠಾತ್ ಆಗಿ ಬದಲಾಗುವುದಿಲ್ಲ. ಪ್ರತಿಯೊಂದು ಋತುಗಳು ಶುರುವಾಗುವ ಮುನ್ನ ಬದಲಾವಣೆಗಳಿಗೆ ತಯಾರಿ ತುಂಬ ಚೆನ್ನಾಗಿಯೇ ಆಗಿರುತ್ತದೆ. ಅದೇ ರೀತಿ ನಮ್ಮಲ್ಲಿ ಬದಲಾವಣೆಗಳು ತಂದುಕೊಳ್ಳಬೇಕಾದರೆ ಸಂಪೂರ್ಣ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿಯೊಂದು ವಿಷಯಗಳಲ್ಲಿ ಕಾಲಕ್ರಮೇಣ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ಒಂದೇ ಬಾರಿ ಕೆಲವೊಂದು ಬದಲಾವಣೆಗಳು ಕೈಲಿ ಸಾಧ್ಯವಾಗದೆ ಹೋದರು ಒಂದು ಪುಟ್ಟ ಹೆಜ್ಜೆ ಮುಂದೆ ಇಟ್ಟರೆ ಸಾಕು ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ.
ಯುರೋಪಿನಾದ್ಯಂತ ಚಳಿಯ ವಾತಾವಾರಣ ನಿಧಾನವಾಗಿ ಮರೆಯಾಗುತ್ತಾ ವಸಂತ ಋತುವಿನ ಮಗ್ಗುಲಿಗೆ ಪ್ರಕೃತಿ ಹೊರಳುತ್ತಿದೆ. ಎಲೆಗಳನ್ನೆಲ್ಲ ಉದುರಿಸಿಕೊಂಡು ಬರಿದಾಗಿ ಚಳಿಯಲ್ಲಿ ಮುದುಡಿ ನಿಂತಂತೆ ಕಾಣಿಸುತ್ತಿದ್ದ ಗಿಡ, ಮರ ಹಾಗೂ ಬಳ್ಳಿಗಳಲ್ಲಿ ಗಿಣಿ ಹಸುರಿನ ಚಿಗುರು ಕಾಣಿಸಿಕೊಂಡು ಪ್ರಕೃತಿಗೆ ಹಸುರು ಸೀರೆ ಉಡಿಸುವ ದಾವಂತದಲ್ಲಿದ್ದಂತೆ ಕಾಣಿಸತೊಡಗಿದೆ. ರಸ್ತೆ ಬದಿಯಲ್ಲಿರುವ ಕೆಲವು ಜಾತಿಯ ಮರ ಗಿಡಗಳು ಹೂವಿನಿಂದ ತನ್ನನ್ನು ತಾನು ಅಲಂಕರಿಸಿಕೊಂಡು ವಸಂತ ಋತುವಿನ ಸ್ವಾಗತಕ್ಕೆ ನಿಂತಂತೆ ಭಾಸವಾಗುತ್ತಿದೆ. ಹಸುರು ಹುಲ್ಲಿನ ನಡುವೆಯಿಂದ ಬಣ್ಣ ಬಣ್ಣದ ಹೂವುಗಳು ತಲೆ ಎತ್ತಿ ನಿಂತು ಆಕಾಶಕ್ಕೆ ಮುಖ ಮಾಡಿ ಖುಷಿಯಿಂದ ಕೂಗುತ್ತ ಕುಳಿತಿವೆಯೇನೋ ಎಂಬಂತೆ ಅನಿಸುತ್ತಿದೆ.
ಭೂಮಿಯ ಒಡಲಲ್ಲಿ ಬೆಚ್ಚಗೆ ಮಲಗಿದ್ದ ಟುಲಿಪ್ ಗೆಡ್ಡೆಗಳು ಮೊಳಕೆಯೊಡೆದು ಹೊರಬಂದು ತನ್ನ ಹೂವಿನ ಮೊಗ್ಗನ್ನಾಗಲೇ ಪ್ರಕೃತಿಗೆ ಅರ್ಪಿಸಿಕೊಂಡುಬಿಟ್ಟಿದೆ. ಜನರ ಬದುಕಿನಲ್ಲಿ ಹಾಗೂ ಸಮಾಜದಲ್ಲಿ ನಡೆಯುತ್ತಿರುವುದಕ್ಕೂ ನಮಗೂ ಏನು ಸಂಬಂಧವಿಲ್ಲ, ನಮ್ಮ ಕೆಲಸ ನಮ್ಮ ಪಾಡಿಗೆ ಮಾಡಿಕೊಂಡಿರುತ್ತೇವೆ ಎನ್ನುವಂತೆ ಪ್ರಕೃತಿಯು ವಾತಾವರಣದ ಬದಲಾವಣೆಯ ಕಾರ್ಯಕ್ರಮಗಳಲ್ಲಿ ಮಗ್ನವಾಗಿದೆ.
ಪ್ರಕೃತಿಯಲ್ಲಿ ಆಗುತ್ತಿರುವ ಈ ಬದಲಾವಣೆಗಳು ಯಾವುದು ಹೊಸತಲ್ಲ, ಒಂದು ರೀತಿ ಪೂರ್ವ ನಿಯೋಜಿತವಾದ ಬದಲಾವಣೆಗಳೇ. ಗ್ರೀಷ್ಮ, ವಸಂತ, ಚೈತ್ರ, ಮಳೆ, ಬೇಸಗೆ ಋತುಗಳು ಪ್ರತೀ ವರುಷ ಆಗಮಿಸಿದರೂ ನಮಗೆ ಪ್ರತೀ ಬಾರಿ ಈ ಎಲ್ಲ ಋತುಗಳು ಹೊಸತರಂತೆ ಕಾಣಿಸುವುದೇ ಪ್ರಕೃತಿಯ ವಿಸ್ಮಯ. ಇಡೀ ವರುಷದಲ್ಲಿ ಒಂದೊಂದು ಋತುವು ಒಪ್ಪವಾಗಿ ಒಂದರ ಹಿಂದೆ ಒಂದು ಜೋಡಿಸಿಕೊಂಡಿರುವ ರೈಲಿನ ಡಬ್ಬಿಗಳಂತೆ ಒಂದರ ಅನಂತರ ಮತ್ತೂಂದು ಬರುತ್ತಲೇ ಇರುತ್ತದೆ. ವಿಪರ್ಯಾಸ ಏನೆಂದರೆ ಪ್ರಕೃತಿಯಲ್ಲಾಗುವ ಈ ಎಲ್ಲ ಬದಲಾವಣೆಗಳನ್ನು ಗಮನಿಸುವ ವ್ಯವಧಾನ ಮಾತ್ರ ನಮ್ಮಲ್ಲಿ ಇಲ್ಲ ಅಷ್ಟೇ.
ಯುರೋಪಿನಲ್ಲಿ ನಿಮಗೆ ಬದಲಾಗುವ ಋತುಗಳು, ಪ್ರಕೃತಿಯಲ್ಲಿ ಆಗುವ ಬದಲಾವಣೆಗಳು ಎದ್ದು ಕಾಣುತ್ತವೆ. ಪ್ರತೀ ಬಾರಿ ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ಗಮನಿಸಿದಾಗೆಲ್ಲ ನಮ್ಮ ಬದುಕಿನಲ್ಲಿ ಹಾಗಾದರೆ ಈ ರೀತಿಯ ಪೂರ್ವ ನಿಯೋಜಿತ ಬದಲಾವಣೆಗಳೇ ಆಗುತ್ತಿಲ್ಲವೇ?, ಆ ಬದಲಾವಣೆಗೆ ಮನಸ್ಸು ಮಾಡುತ್ತಿಲ್ಲವೇ ಅಥವಾ ಆ ಬದಲಾವಣೆಗಳ ಆವಶ್ಯಕತೆ ನಮಗಿಲ್ಲ ಎಂಬ ಅಹಂಭಾವವೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದಂತೂ ನಿಜ. ಕ್ಯಾಲೆಂಡರ್‌ನ ಮೊದಲ ದಿನ ನಾವು ಮಾಡಿದ ಸಂಕಲ್ಪಗಳಾಗಲೇ ಮರೆತು ಹೋಗಿ ಮತ್ತದೇ ಹಳೆ ಧಾವಂತದ ಬದುಕಿಗೆ ಮುಖಮಾಡಿ ಓಡಲು ಶುರು ಮಾಡಿಯಾಗಿದೆ. ಕಾರ್ಯರೂಪಕ್ಕೆ ತರಬೇಕೆಂದುಕೊಂಡಿದ್ದ ಪೂರ್ವ ನಿಯೋಜಿತ ಯೋಜನೆಗಳಲ್ಲ ಜಾರಿಯಾಗದೇ, ಆಗಾಗ ನಿಂತು ಹೋಗುವ ರೆಕಾರ್ಡ್‌ರ್ ಅನ್ನು ಬಡಿದು ಸರಿ ಮಾಡಿಕೊಂಡು ಅದೇ ರಾಗ ಅದೇ ಹಾಡು ಎಂಬಂತ ಏರುಪೇರಿಲ್ಲದ ಜೀವನದಲ್ಲಿ ಮುಳುಗಿಹೋಗಿದ್ದೇವೆ. ಬದಲಾವಣೆಗಳು ಎಲ್ಲಿ ಸಮಸ್ಯೆಗಳನ್ನೂ ತಂದೊಡ್ಡುವುದೋ ಎಂಬ ಭಯಕ್ಕೆ ಯಾವುದೇ ಹೊಸ ಕಾರ್ಯಗಳಿಗೆ ಕೈ ಹಾಕದೆ, ಇದ್ದದ್ದು ಇದ್ದ ಹಾಗೆ ಇದ್ದರೇ ಸಾಕು ಎಂಬ ಅಲ್ಪ ತೃಪ್ತಿಗೆ ಸಮಾಧಾನ ಮಾಡಿಕೊಂಡುಬಿಟ್ಟಿದ್ದೇವೆ.
ಕೆಲಸದಲ್ಲಿ ಬಡ್ತಿಗಾಗಿಯೋ, ಕೆಲಸದ ಸ್ವರೂಪವನ್ನು ಬದಲಾಯಿಸಿಕೊಳ್ಳಬೇಕೆಂಬ ಯೋಜನೆಗಳಿದ್ದರೂ ಯಾವುದೋ ಹಿಂಜರಿಕೆಯಿಂದ ಕಾರ್ಯರೂಪಕ್ಕೆ ತರುವಲ್ಲಿ ತಡ ಮಾಡಿಕೊಳ್ಳುತ್ತಾ, ಬದುಕಿನಲ್ಲಿ ಬದಲಾವಣೆ ಬೇಕಿದ್ದರೂ ಸಹ ಆ ಯೋಜನೆಗಳನ್ನು ಮುಂದೆ ಹಾಕುತ್ತಲೇ ಹೋಗುತ್ತೇವೆ. ಬದಲಾವಣೆ ಅನ್ನುವುದು ಕೇವಲ ಕೆಲಸಕ್ಕೆ ಸಂಬಂಧಪಟ್ಟ ವಿಷಯವಲ್ಲ.
ಮಾನಸಿಕವಾಗಿಯೂ, ದೈಹಿಕವಾಗಿಯೂ ನಮ್ಮಲ್ಲಿ ಬದಲಾವಣೆಗಳು ಬರಬೇಕು. ಚಿಂತನೆಗಳು, ಆಲೋಚನೆಗಳು, ಬದುಕುವ ಕ್ರಮಗಳು, ಜೀವನ ಶೈಲಿ, ಆರ್ಥಿಕತೆ ಹೀಗೆ ಪ್ರತಿಯೊಂದು ವಿಷಯಗಳಲ್ಲಿ ಕಾಲಕ್ರಮೇಣ ಬದಲಾವಣೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲೇಬೇಕು. ಬದುಕು ಸ್ವಾರಸ್ಯಕರವಾಗಿ ಇರಬೇಕೆಂದರೆ ಹಿಂಜರಿಕೆ ಬಿಟ್ಟು ಬದಲಾವಣೆಗಳಿಗೆ ಮುಖ ಮಾಡದಿದ್ದರೆ ಬದುಕು ನೀರಸವೆನಿಸಿ, ಬದುಕಿನಲ್ಲಿ ನಿರಾಸಕ್ತಿಗೆ ಕಾರಣವಾಗುತ್ತದೆ. ಕಪ್ಪೆ ಚಿಪ್ಪಿನೊಳಗೆ ಹುದುಗಿಕೊಂಡ ಹುಳದಂತೆ ಆಗಿಬಿಡುತ್ತದೆ ಜೀವನ. ಒಂದೇ ಬಾರಿ ಕೆಲವೊಂದು ಬದಲಾವಣೆಗಳು ಕೈಲಿ ಸಾಧ್ಯವಾಗದೆ ಹೋದರು ಒಂದು ಪುಟ್ಟ ಹೆಜ್ಜೆ ಮುಂದೆ ಇಟ್ಟರೆ ಸಾಕು ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ. ನಮ್ಮ ಸುತ್ತ ನಾವೇ ಕಟ್ಟಿಕೊಂಡ ಕೋಟೆಯಿಂದ ಹೊರಬರಬೇಕು ಎಂಬ ಆಲೋಚನೆಯಾದರು ಮೂಡುತ್ತದೆ.
ಅಪರೂಪಕ್ಕೆ ನೀವು ಪ್ರತಿನಿತ್ಯ ಧರಿಸುವ ವಸ್ತ್ರಗಳ ಬದಲು ಬೇರೆ ರೀತಿಯ ವಸ್ತ್ರಗಳನ್ನು ನೀವು ಧರಿಸಿ ಕಚೇರಿಗೆ ಹೋದರೆ ಅಂದು ಪ್ರತಿಯೊಬ್ಬರೂ ಅದನ್ನು ಗುರುತಿಸುವುದನ್ನು ನೀವು ಗಮನಿಸಿರಬಹುದು. ನಿಮ್ಮಲ್ಲಾದ ಆ ಒಂದು ಚಿಕ್ಕ ಬದಲಾವಣೆ ನಿಮ್ಮ ಗುರುತನ್ನು ಬದಲಾಯಿಸಿಬಿಡುತ್ತದೆ ಅಲ್ಲವೇ. ಹಾಗೆಯೇ ನಿಮ್ಮ ಮಾತಿನ ಶೈಲಿ, ಸೇವಿಸುವ ಆಹಾರ ಪದ್ಧತಿ, ಕೆಲಸ ಮಾಡುವ ಶೈಲಿ, ಬಿಡುವಿನ ವೇಳೆಯಲ್ಲಿ ಹೊಸ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದು, ಹೀಗೆ ಸಣ್ಣ-ಪುಟ್ಟ ಬದಲಾವಣೆಗಳು ತಂದುಕೊಂಡರೆ ನಿಮ್ಮ ಬದುಕು ಕೂಡ ಪ್ರಕೃತಿಯ ಋತುಗಳಂತೆ ಸುಂದರವಾಗಿರುತ್ತದೆ ಅಲ್ಲವೇ.
ನೀವು ಪ್ರಕೃತಿಯನ್ನು ಗಮನಿಸಿ ನೋಡಿದರೆ ಎಲ್ಲ ಋತುಗಳು ಹಠಾತ್ ಆಗಿ ಬದಲಾಗುವುದಿಲ್ಲ. ಪ್ರತಿಯೊಂದು ಋತುಗಳು ಶುರುವಾಗುವ ಮುನ್ನಬದಲಾವಣೆಗಳಿಗೆ ತಯಾರಿ ತುಂಬ ಚೆನ್ನಾಗಿಯೇ ಆಗಿರುತ್ತದೆ. ಅದೇ ರೀತಿ ನಮ್ಮಲ್ಲಿ ಬದಲಾವಣೆಗಳು ತಂದುಕೊಳ್ಳಬೇಕಾದರೆ ಸಂಪೂರ್ಣ ತಯಾರಿ ನಾವು ಕೂಡ ಮಾಡಿಕೊಳ್ಳಬೇಕಾಗುತ್ತದೆ. ಒಂದು ಸಣ್ಣ ಬದಲಾವಣೆಯಿಂದ ಬದುಕಿನಲ್ಲಿ ಅನುಕೂಲವಾಗುತ್ತದೆ ಎಂದು ಅನಿಸಿದರೆ ಹಿಂಜರಿಕೆ ಬಿಟ್ಟು ಮುನ್ನುಗ್ಗಬೇಕು ಅಷ್ಟೇ. ನಮ್ಮ ಬದುಕು ನಮ್ಮದೇ ಆಗಿರುವುದರಿಂದ ಪ್ರಕೃತಿಯು ಹೇಗೆ ಸಮಾಜದ ಬಗ್ಗೆ ಆಲೋಚಿಸುವುದಿಲ್ಲವೋ ಹಾಗೆ ನಮ್ಮ ಪಾಡಿಗೆ ನಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು. ಪ್ರಕೃತಿ ಹೇಳಿ ಕೊಡುವ ಈ ಬದಲಾವಣೆಯ ಪಾಠ ಕೇಳಿಸಿಕೊಳ್ಳುವ ವ್ಯವಧಾನ ನಮ್ಮಲ್ಲಿದ್ದರೆ ನಮ್ಮ ಬದುಕಿನ ಋತುಗಳು ಸಹ ಬದಲಾಗಬಹುದೇನೋ ಅಲ್ಲವೇ.
*ಶ್ರೀನಾಥ್ ಹರದೂರು ಚಿದಂಬರ, ನೆದರ್‌ಲ್ಯಾಂಡ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.