ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರ: ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಹೆಚ್ಚಳ
Team Udayavani, Jun 18, 2019, 10:50 AM IST
ಮಂಗಳೂರು/ಉಡುಪಿ: ಪಶ್ಚಿಮ ಬಂಗಾಲದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಮತ್ತು ಆರೋಗ್ಯ ಸಂಸ್ಥೆಗಳ ಮೇಲಿನ ದಾಳಿ ತಡೆಯಲು ಕಾಯ್ದೆ ರೂಪಿಸುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ ನೀಡಿರುವ ಮುಷ್ಕರ ಕರೆಗೆ ವೈದ್ಯಕೀಯ ಸಂಘದ ಜಿಲ್ಲಾ ಘಟಕಗಳು ಬೆಂಬಲ ಸೂಚಿಸಿದ್ದು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಬೆಂಬಲ ಸೂಚಿಸಿದವು. ಆಯುಷ್ ವೈದ್ಯರ ಸಂಘವೂ ಬೆಂಬಲ ನೀಡಿತ್ತು.
ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಹಾಗೂ ಕ್ಲಿನಿಕ್ ಬಂದ್ ಹಿನ್ನೆಲೆಯಲ್ಲಿ ಅಜ್ಜರಕಾಡು ಸರಕಾರಿ ಜಿಲ್ಲಾಸ್ಪತ್ರೆ ರೋಗಿಗಳಿಂದ ತುಂಬಿ ಹೋಗಿತ್ತು. ಕೆಲ ಖಾಸಗಿ ಆಸ್ಪತ್ರೆಗಳ ಸಿಬಂದಿಗಳೇ ಸರಕಾರಿ ಆಸ್ಪತ್ರೆಗೆ ಹೋಗುವಂತೆ ರೋಗಿಗಳಿಗೆ ತಿಳಿಸುತ್ತಿದ್ದರು. ಬಂದ್ ಕುರಿತು ಶನಿವಾರವೇ ಮಾಹಿತಿ ನೀಡಿದ್ದರಿಂದ ಮತ್ತು ತುರ್ತು ಸೇವೆ ಲಭ್ಯವಿದ್ದುದರಿಂದ ರೋಗಿಗಳಿಗೆ ಹೆಚ್ಚಿನ ತೊಂದರೆ ಉಂಟಾಗಲಿಲ್ಲ. ಈ ಬಗ್ಗೆ ಮಾಹಿತಿ ಇಲ್ಲದವರು ಆಸ್ಪತ್ರೆಗೆ ಆಗಮಿಸಿ ವಿಚಾರಿಸಿ ತೆರಳಿದರು.
ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರಕ್ಕೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಸರಕಾರಿ ವೈದ್ಯರು, ಸಿಬಂದಿಗೆ ಸೋಮವಾರ ರಜೆ ಮಾಡದೆ ಕರ್ತವ್ಯ ಸಲ್ಲಿಸಲು ಹಾಗೂ ಅಗತ್ಯ ಬಿದ್ದರೆ ಹೆಚ್ಚುವರಿ ಸಮಯ ಕೆಲಸ ಮಾಡಲು ಸೂಚನೆ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆ ವೈದ್ಯರು ನಿರಂತರವಾಗಿ ಕೆಲಸಕ್ಕೆ ಹಾಜರಾಗಿದ್ದರು.
ಜಿಲ್ಲಾಸ್ಪತ್ರೆಯಲ್ಲಿ ಸರತಿ ಸಾಲು
ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಚಿಕಿತ್ಸೆ ಲಭ್ಯವಾಗದ ಕಾರಣ ಜಿಲ್ಲಾಸ್ಪತ್ರೆಯಲ್ಲಿ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸಿದ್ದರು. ಸಾಮಾನ್ಯ ದಿನಗಳಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ 500ರಿಂದ 550 ರೋಗಿಗಳು ಬಂದರೆ ಸೋಮವಾರ ಮಾತ್ರ ರೋಗಿಗಳ ಸಂಖ್ಯೆ 700ರಷ್ಟಿತ್ತು. ರೋಗಿಗಳ ಸಂಖ್ಯೆ ಹೆಚ್ಚಳವಾದ ಕಾರಣ ಹೊರರೋಗಿಗಳ ವಿಭಾಗ, ಕೌಂಟರ್‌ನಲ್ಲಿ ಚಿಕಿತ್ಸೆ ಪಡೆಯಲು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂತು. ಇದೇ ರೀತಿ ತಾಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿಗೆ ಇತ್ತು.
ಐಎಂಎ ಪ್ರತಿಭಟನೆ
ಮಂಗಳೂರು: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ವತಿಯಿಂದ ನಗರದ ಐಎಂಎ ಸಭಾಂಗಣದಲ್ಲಿ ಸಾಂಕೇತಿಕ ಪ್ರತಿಭಟನ ಸಭೆ ನಡೆಯಿತು.ಐಎಂಎ ಮಂಗಳೂರು ಅಧ್ಯಕ್ಷ ಡಾ| ಸಚ್ಚಿದಾನಂದ ರೈ, ಮಂಗಳೂರು ಘಟಕದ ಕಾರ್ಯದರ್ಶಿ ಡಾ| ಸುಧೀಂದ್ರ ರಾವ್, ನಿಯೋಜಿತ ಅಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್, ಖಜಾಂಚಿ ಡಾ| ವಿನಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿಲ್ಲದಿರುವ ಬಗ್ಗೆ ಹೆಚ್ಚಿನ ರೋಗಿಗಳಿಗೆ ಮೊದಲೇ ಮಾಹಿತಿ ಇತ್ತು. ಸಹಜವಾಗಿ ಹೆಚ್ಚಿನವರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ಸೋಮವಾರ ರೋಗಿಗಳ ಸಂಖ್ಯೆ 700ರಷ್ಟಿತ್ತು. ತುರ್ತು ಚಿಕಿತ್ಸೆಗೂ ಯಾವುದೇ ತೊಂದರೆಯಾಗಿಲ್ಲ. ಸಿಬಂದಿ ಸರ್ವ ರೀತಿಯಲ್ಲಿ ಸಹಕಾರ ನೀಡಿದರು.
– ಡಾ| ಮಧುಸೂದನ್ ನಾಯಕ್, ಜಿಲ್ಲಾ ಸರ್ಜನ್, ಉಡುಪಿ
ಸರಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಸೇವೆ ನೀಡಲಾಗಿದೆ. ರೋಗಿಗಳ ಸಂಖ್ಯೆಯೂ ಹೆಚ್ಚಳವಾಗಿತ್ತು.
–ಡಾ| ಎಂ.ಜಿ.ರಾಮ, ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.