‘ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಬೀಳದೆ ವಿದ್ಯಾರ್ಜನೆಗೆ ಒತ್ತು ನೀಡಿ’
Team Udayavani, Jun 27, 2019, 5:44 AM IST
ಶಿರ್ವ: ಉಡುಪಿ ಜಿಲ್ಲಾ ಪೊಲೀಸ್, ಕಾರ್ಕಳ ಉಪ ವಿಭಾಗದ ಶಿರ್ವ ಪೊಲೀಸ್ ಠಾಣಾ ವತಿಯಿಂದ ಶಿರ್ವ ಎಂಎಸ್‌ಆರ್‌ಎಸ್ ಕಾಲೇಜು ಮತ್ತು ಹಿಂದೂ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಕಾನೂನು, ಮಾದಕ ದ್ರವ್ಯ ನಿರ್ಮೂಲನೆ ಜಾಗೃತಿ ಅರಿವು ಕಾರ್ಯಕ್ರಮವು ಕಾಲೇಜಿನ ಪ್ರಾಂಶುಪಾಲೆ ಡಾ| ನಯನಾ ಪಕ್ಕಳ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ, ಜಿಲ್ಲಾ ಪೊಲೀಸ್ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪಿ. ಕೃಷ್ಣಕಾಂತ್ ಕಾನೂನು ಮತ್ತು ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಯುವಜನತೆ ಸಮಾಜದ ಆಸ್ತಿಯಾಗಿದ್ದು ರಾಷ್ಟ್ರದ ಅಭಿವೃದ್ಧಿ, ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಯುವ ಸಮಾಜವನ್ನು ದುಶ್ಚಟಗಳಿಂದ ಮುಕ್ತಗೊಳಿಸಬೇಕಾಗಿದ್ದು ಜೀವನದ ಪ್ರತಿ ಹಂತದಲ್ಲೂ ಕಾನೂನು ಪರಿಪಾಲಿಸಬೇಕಾದ ಅನಿವಾರ್ಯತೆ ಇದೆ. ಹೆಚ್ಚುತ್ತಿರುವ ಕಳ್ಳತನ, ದರೋಡೆ, ರಸ್ತೆ ಅಪಘಾತ, ಲೈಂಗಿಕ ಚಟುವಟಿಕೆ, ಮಾದಕದ್ರವ್ಯ ಸೇವನೆಯಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳೇ ಕಂಡು ಬರುತ್ತಿದ್ದಾರೆ. ವಿದ್ಯಾರ್ಥಿಗಳು ಕಾನೂನು ಕ್ರಮ ಪಾಲಿಸಿ ಯಾವುದೇ ದುಶ್ಚಟಗಳಿಗೆ ಬಲಿಬೀಳದೆ ವಿದ್ಯಾರ್ಜನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ದೇಶದ ಪ್ರಜ್ಞಾವಂತ ನಾಗರಿಕರಾಗಿ ಬಾಳಬೇಕು ಎಂದರು.
ಶಿರ್ವ ಠಾಣಾಧಿಕಾರಿ ಅಬ್ದುಲ್ ಖಾದರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಯುವಜನತೆ ಮಾದಕ ವ್ಯಸನಗಳಿಗೆ ಬಲಿಬೀಳದೆ ಜಾಗೃತಿ ವಹಿಸಬೇಕಾಗಿದ್ದು , ಮಾದಕದ್ರವ್ಯ ಸೇವನೆ ಯಾ ಕಳ್ಳಸಾಗಾಟದ ಬಗ್ಗೆ ಸೂಚನೆ ಸಿಕ್ಕಿದಲ್ಲಿ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕೆಂದರು.
ಪ್ರೊಬೆಷನರಿ ಪಿಎಸ್‌ಐ ಮಹಾದೇವ ಬೋಸ್ಲೆ, ಎಎಸ್‌ಐ ಭೋಜ, ಹೆಡ್ ಕಾನ್‌ಸ್ಟೆಬಲ್ಗಳಾದ ದಯಾನಂದ , ಉಮೇಶ್, ವೆಂಕಟೇಶ್, ದಾಮೋದರ್, ಕಾಲೇಜಿನ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಡಾ| ನಯನಾ ಎಂ. ಪಕ್ಕಳ ಸ್ವಾಗತಿಸಿದರು. ಉಪನ್ಯಾಸಕ ಪ್ರೊ| ಮುರುಗೇಶಿ ಟಿ. ಕಾರ್ಯಕ್ರಮ ನಿರೂಪಿಸಿ , ಹಿಂದೂ ಪ.ಪೂ. ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಎ. ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.