US: ಭಾರತೀಯ ವಿದ್ಯಾರ್ಥಿನಿ ಹತ್ಯೆ; ಅಮೆರಿಕ ಸರ್ಕಾರದಿಂದ ತನಿಖೆ ಭರವಸೆ
ರಾಯಭಾರಿ ತರಣ್‌ಜಿತ್ ಸಿಂಗ್ ಸಂಧುಗೆ ಆಶ್ವಾಸನೆ-ಮೊದಲೇ ಏಕೆ ಮಾಹಿತಿ ಬಿಡುಗಡೆ ಮಾಡಿಲ್ಲ: ಕುಟುಂಬ ಸದಸ್ಯರ ಪ್ರಶ್ನೆ
Team Udayavani, Sep 14, 2023, 9:00 PM IST
ವಾಷಿಂಗ್ಟನ್/ಸಿಯಾಟಲ್: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಜಾಹ್ನವಿ ಕಂಡೂಲರನ್ನು ಅಮೆರಿಕದ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಹತ್ಯೆ ಮಾಡಿದ್ದಲ್ಲದೆ, ಗಹಗಹಿಸಿ ನಕ್ಕು ಕ್ರೌರ್ಯ ಮೆರೆದ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಲಾಗುತ್ತದೆ ಎಂದು ಅಮೆರಿಕದಲ್ಲಿ ಇರುವ ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಅವರಿಗೆ ಬೈಡೆನ್ ಸರ್ಕಾರ ಭರವಸೆ ನೀಡಿದೆ.
ಈ ಬಗ್ಗೆ ಸಂಧು ಅವರು ಅಮೆರಿಕ ಸರ್ಕಾರದ ಜತೆಗೆ ಮಾತುಕತೆ ನಡೆಸಿ, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಭಾರತೀಯ-ಅಮೆರಿಕನ್ ಸಮುದಾಯಕ್ಕೆ ಸೇರಿದ ಸಂಸದರಾದ ರೋ ಖನ್ನಾ, ಪ್ರಮೀಳಾ ಜಯಪಾಲ್ ಪೊಲೀಸ್ ಅಧಿಕಾರಿ ನಡೆಸಿದ ಕುಕೃತ್ಯವನ್ನು ಕಟುವಾಗಿ ಟೀಕಿಸಿ, ಆಕ್ಷೇಪ ಮಾಡಿದ್ದರು. ತನಿಖೆ ಬಗ್ಗೆ ನೇರವಾಗಿ ವಾಷಿಂಗ್ಟನ್‌ನಿಂದಲೇ ನಿಗಾ ಇರಿಸಲಾಗುತ್ತದೆ ಎಂದು ಭಾರತದ ರಾಯಭಾರಿಗೆ ಭರವಸೆ ನೀಡಲಾಗಿದೆ.
100 ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದರು:
ನಾರ್ತ್ ಈಸ್ಟರ್ನ್ ಯುನಿವರ್ಸಿಟಿ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದ ಜಾಹ್ನವಿ ಅವರು ಜ.23ರಂದು ರಸ್ತೆ ದಾಟುತ್ತಿದ್ದ ವೇಳೆ ಪೊಲೀಸ್ ಅಧಿಕಾರಿ ಕೆವಿನ್ ಡೇವ್ 119 ಕಿಮೀ ವೇಗದಲ್ಲಿ ಜೀಪ್ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದರು. ಆ ರಭಸಕ್ಕೆ ಆಕೆ 100 ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದರು. ನಿಯಮಗಳ ಪ್ರಕಾರ ಆರೋಪಕ್ಕೆ ಗುರಿಯಾಗಿರುವ ಪೊಲೀಸ್ ಅಧಿಕಾರಿ ಪ್ರತಿ ಗಂಟೆಗೆ 40 ಕಿಮೀ ವೇಗದಲ್ಲಿ ವಾಹನ ಚಲಾಯಿಸಬೇಕಾಗಿತ್ತು.
ಕುಟುಂಬದವರ ಆಕ್ರೋಶ:
“ಆಕೆಯ ಜೀವಕ್ಕೆ ಹೆಚ್ಚೇನೂ ಬೆಲೆಯಿಲ್ಲ’ ಎಂಬ ಪೊಲೀಸ್ ಅಧಿಕಾರಿಯ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಯಾರಾದರೂ ಈ ರೀತಿ ಮಾತನಾಡಬಹುದೇ ಎಂದು ಜಾಹ್ನವಿ ಕಂಡೂಲರ ತಾತ ಪ್ರಶ್ನಿಸಿದ್ದಾರೆ. ಆಕೆಯ ಹೆತ್ತವರು ಮಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಮಾಹಿತಿಯನ್ನು ಮೊದಲೇ ಏಕೆ ಬಿಡುಗಡೆ ಮಾಡಿರಲಿಲ್ಲ. ಇದು ನಿಜಕ್ಕೂ ಆಘಾತಕಾರಿ ಎಂದಿದ್ದಾರೆ.
ಕುಟುಂಬ ಸದಸ್ಯರೂ ಹೇಳಿಕೆ ಬಿಡುಗಡೆ ಮಾಡಿ “ಪೊಲೀಸ್ ಅಧಿಕಾರಿ ಜವಾಬ್ದಾರಿ ಇಲ್ಲದ ಹೇಳಿಕೆ ನೀಡಿದ್ದು ಆಘಾತ ತಂದಿದೆ. ನಮ್ಮ ಪುತ್ರಿ ಯಾವುದೇ ಡಾಲರ್ ಮೌಲ್ಯಕ್ಕಿಂತ ಹೆಚ್ಚು. ಯಾವುದೇ ಮಾನವ ಜೀವ ಮೌಲ್ಯಯುತವಾದದ್ದು’ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.