ಅಜ್ಜರಕಾಡು ಭುಜಂಗ ಪಾರ್ಕ್ ಗಾಂಧಿ ಮಂಟಪಕ್ಕೆ ಅಪಚಾರ!
ಕುಡುಕರ, ಪ್ರೇಮಿಗಳ, ಬೀದಿ ನಾಯಿಗಳ ತಾಣ
Team Udayavani, Jul 5, 2019, 5:21 AM IST
ಉಡುಪಿ: ಮಹಾತ್ಮಾ ಗಾಂಧೀಜಿಯವರು ಉಡುಪಿಗೆ ಭೇಟಿ ನೀಡಿ ಭಾಷಣ ಮಾಡಿದ ಸ್ಥಳವೀಗ ಮದ್ಯಪಾನಿಗಳು, ಪ್ರೇಮಿಗಳ ಸರಸ ಸಲ್ಲಾಪದ ತಾಣವಾಗಿದೆ.
ಮದ್ಯ ಮುಕ್ತ ಸಮಾಜದ ಕನಸು ಕಂಡಿದ್ದ ಗಾಂಧೀಜಿ ಅವರ ಪುತ್ಥಳಿಯ ಸಮೀಪದಲ್ಲಿ ಕುಡುಕರು ಮದ್ಯ ಸೇವನೆ ಮಾಡುತ್ತಿದ್ದಾರೆ. ಅಮಲೇರಿದ ಬಳಿಕ ಮಂಟಪದ ಜಗುಲಿಯ ಮೇಲೆ ಕುಡುಕರು ಮಲಗುತ್ತಾರೆ. ಅತಿ ಮದ್ಯ ಸೇವನೆ ಮಾಡಿ ಅಲ್ಲಿಯೇ ವಾಂತಿ ಮಾಡುವುದೂ ಇದೆ.
ಗಾಂಧೀಜಿ ಅವರ ಸ್ವಚ್ಛ ಭಾರತದ ಕನಸಿಗೂ ಅಪಚಾರವಾಗುತ್ತಿದೆ. ರಾತ್ರಿಯ ಸಮಯದಲ್ಲಿ ಕುಡುಕರಿಂದ ಅಮಲು ಪಾನ ಕೂಟಗಳು ನಡೆಯುದಲ್ಲದೆ ಮಾಂಸದ ಊಟ ಪಾರ್ಸೆಲ್ ತಂದು ಇಲ್ಲಿ ಊಟ ಮಾಡುತ್ತಾರೆ. ಮದ್ಯದ ಬಾಟಲಿಗಳನ್ನೂ ಅಲ್ಲೇ ಎಸೆದು ಹೋಗುವುದಿದೆ.
ಇದರಿಂದಾಗಿ ಅಲ್ಪಸ್ವಲ್ಪ ಆಹಾರದ ಆಸೆಯಿಂದ ಬರುವ ಬೀದಿ ನಾಯಿಗಳು ಇದೇ ಕಟ್ಟೆ ಮೇಲೆ ಮಲಗುತ್ತವೆ. ನಾಯಿಗಳು ಗಾಂಧಿ ಪೀಠಕ್ಕೆ ಮೂತ್ರ ವಿಸರ್ಜನೆ ಮಾಡುವುದೂ ಇದೆ. ಈ ಬೀದಿನಾಯಿಗಳು ವಾಯುವಿಹಾರಿಗಳಿಗೆ ಕಚ್ಚಿ ಭಯದ ವಾತಾವರಣವೂ ಸೃಷ್ಟಿಯಾಗಿದೆ.
ಗಾಂಧೀಜಿ ಅವರು 1934 ಫೆ. 25ರಂದು ಇಲ್ಲಿಗೆ ಭೇಟಿ ನೀಡಿದ್ದರು. ಅಂದಿನ ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದ ಹಾಜಿ ಆಬ್ದುಲ್ಲಾ ಸಾಹೇಬರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಗಾಂಧೀಜಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅಂದಿನ ಆಗಮನದ ನೆನಪು ಶಾಶ್ವತವಾಗಿರಲು ಉಡುಪಿ ನಗರಸಭೆ ಭುಜಂಗ ಪಾರ್ಕಿನಲ್ಲಿ ಮಹಾತ್ಮ ಗಾಂಧೀಜಿ ಮಂಟಪ ಸ್ಥಾಪನೆ ಮಾಡಿ ಗಾಂಧೀಜಿ ಅವರ ಶಿಲಾ ಪುತ್ಥಳಿಯನ್ನು ಪ್ರತಿಷ್ಠಾಪಿಸಿದೆ. ರಾಷ್ಟ್ರೀಯ ದಿನಾಚರಣೆ, ಗಾಂಧಿ ಜಯಂತಿ, ಗಾಂಧಿ ಪುಣ್ಯ ತಿಥಿ ಮೊದಲಾದ ಸಂದರ್ಭಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ.
ಕುಡುಕರು, ಬೀದಿ ನಾಯಿಗಳು ಮಂಟಪದ ಒಳಗೆ ಹೋಗದಂತೆ ಕಬ್ಬಿಣದ ಬೇಲಿಯನ್ನು ಅಳವಡಿಸಬೇಕು. ವಿಶೇಷ ದಿನಗಳಲ್ಲಿ ಗಾಂಧಿ ಪುತ್ಥಳಿಗೆ ಗೌರವ ಸಲ್ಲಿಸಲು ಒಳ ಪ್ರವೇಶಿಸಲು ಬಾಗಿಲಿನ ವ್ಯವಸ್ಥೆಗೊಳಿಸಬೇಕು. ಹೀಗೆ ಮಾಡಿದರೆ ಇಲ್ಲಿ ನಡೆಯುವ ಬೀದಿ ನಾಯಿಗಳ ಒಳಪ್ರವೇಶಕ್ಕೂ ತಡೆಯಾಗುತ್ತದೆ. ಅನೈತಿಕ ಚಟುವಟಿಕೆಗಳಿಗೆ ಮುಕ್ತಿ ದೊರೆಯುತ್ತದೆ. ಈ ಬಗ್ಗೆ ನಗರಾಡಳಿತ, ಜಿಲ್ಲಾಡಳಿತವು ಸಮಸ್ಯೆ ಪರಿಶೀಲಿಸಿ ಕಾರ್ಯಪ್ರವೃತ್ತರಾಗ ಬೇಕಿದೆ. ಗಾಂಧೀಜಿ ಅವರ ತಣ್ತೀ ಸಿದ್ಧಾಂತಗಳಿಗೆ ಅಪಚಾರ ಆಗದಂತೆ ತಡೆಯಬೇಕಾಗಿದೆ ಎಂದು ತಾರಾನಾಥ ಮೇಸ್ತ ಆಗ್ರಹಿಸಿದ್ದಾರೆ.