international women’s day 2023; ನಾರೀ ನಾಟಿ ವೈದ್ಯಾಯ ನಮಃ
ಗ್ರಾಮಾಂತರ ಪ್ರದೇಶದ ನಾಟೀವೈದ್ಯೆಯರ ಸಾಮಾಜಿಕ ಕೊಡುಗೆಗಳನ್ನು ಸಂಗ್ರಹಿಸಿ ಕೊಡುತ್ತಿದ್ದೇವೆ.
Team Udayavani, Mar 8, 2023, 11:35 AM IST
ಇಂದು (ಮಾ. 8) ನಡೆಯುತ್ತಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಎಲೆಮರೆಯ ಕಾಯಿಯಂತೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಗ್ರಾಮಾಂತರ ಪ್ರದೇಶದ ನಾಟೀವೈದ್ಯೆಯರ ಸಾಮಾಜಿಕ ಕೊಡುಗೆಗಳನ್ನು ಸಂಗ್ರಹಿಸಿ ಕೊಡುತ್ತಿದ್ದೇವೆ.
ಕುರ್ಕಾಲು ಲೀಲಾ ಆಚಾರ್ಯ
ಕಟಪಾಡಿ: ವಂಶವಾಹಿನಿಯಾಗಿ ಅಜ್ಜಿಯಿಂದ ಹರಿದು ಬಂದ ನಾಟಿ ಔಷಧ ಸಿದ್ಧಪಡಿಸಿ ನೀಡುವ ನಾಟಿ ವೈದ್ಯೆ ಲೀಲಾ ಆಚಾರ್ಯ ಅವರು ಸಹಸ್ರಾರು ಮಂದಿಗೆ ನಾಟಿ ಔಷಧವನ್ನು ನೀಡಿ ಕಾಯಿಲೆ ಗುಣಪಡಿಸಿದ ಸಂತೃಪ್ತ ಭಾವನೆಯನ್ನು ಹೊಂದಿದ್ದಾರೆ.
ಕುರ್ಕಾಲು ಗ್ರಾ.ಪಂ. ವ್ಯಾಪ್ತಿಯ ನೂಜಿ ಹೌಸ್‌ನ ಈ ನಾಟಿ ವೈದ್ಯೆ ಅಜ್ಜಿಯ ಬಳಿಕ ತಾಯಿ ಭಾಗೀರಥಿ ಜತೆಗೂಡಿ ನಾಟಿ ಔಷಧವನ್ನು ಸಿದ್ಧಪಡಿಸುತ್ತಿದ್ದು, ಪ್ರಮುಖವಾಗಿ ಅರಸಿನ ಕುತ್ತ ಮತ್ತು ಸರ್ಪ ಸುತ್ತು ರೋಗಗಳಿಗೆ ನಾಟಿ ಔಷಧವನ್ನು ನೀಡುವಲ್ಲಿ ಸಿದ್ಧ ಹಸ್ತರಾಗಿದ್ದು, ಕಳೆದ ಸುಮಾರು 49 ವರ್ಷಗಳಿಂದ ಸ್ವತಃ ನಾಟಿ ವೈದ್ಯೆಯಾಗಿ ಸೇವೆಯನ್ನು ನೀಡುತ್ತಿದ್ದು, ಅಜ್ಜಿ ಅಕ್ಕಯ್ಯ ಆಚಾರ್ಯರಿಂದ ಕಲಿತ ವಿದ್ಯೆ ಎನ್ನುತ್ತಿದ್ದಾರೆ. ಸಂಪೂರ್ಣ ಸುತ್ತುವರಿದ ಸರ್ಪ ಸುತ್ತು ಕಾಯಿಲೆ
ಬಾಧಿಸಿ ಉರಿ ಜ್ವಾಲೆಯಿಂದ ಕೂಗಾಡುತ್ತಾ ಬಂದವರಿಗೂ ದೇವರನ್ನು ಪ್ರಾರ್ಥಿಸಿ ಔಷಧ ನೀಡಿ ಶೀಘ್ರವಾಗಿ ಉಪಶಮನಪಡಿಸುತ್ತಾರೆ.
ಅರಸಿನ ಕುತ್ತ ಕಾಯಿಲೆಯವರನ್ನು ಕಣ್ಣು ಮತ್ತು ಇತರ ವಿಧದ ಮೂಲಕ ಪರಿಶೀಲನೆ ನಡೆಸಿ ಮನದಟ್ಟು ಮಾಡಿಕೊಂಡು ಬಳಿಕ ನಾಟಿ ಔಷಧಯನ್ನು ನೀಡಿ ಗುಣಪಡಿಸಲಾಗುತ್ತದೆ ಎನ್ನುವ ಈಕೆ ಪುತ್ರ ರಾಜೇಶ್ ಆಚಾರ್ಯರಿಗೂ ನಾಟಿ ಔಷಧ ತಯಾರಿಕೆ ಮತ್ತು ಕಾಯಿಲೆ ಪರಿಶೀಲಿಸಿ ನಾಟಿ ಔಷಧ ನೀಡುವ ವಿಧಾನವನ್ನು ಕಲಿಸಿದ್ದು, ಈ ವಿದ್ಯೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಿದ ಹೆಮ್ಮೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಂಪರ್ಕ: 9742446524
ಪಾಂಗಾಳದ ಲಕ್ಷ್ಮೀ
ಉಡುಪಿ: 15 ವರ್ಷಗಳಿಂದ ಹಲವಾರು ರೀತಿಯ ಕಾಯಿಲೆಗಳಿಗೆ ನಾಟಿ ಔಷಧ ನೀಡಿ ಗುಣಪಡಿಸಿದವರು ಲಕ್ಷ್ಮೀ. 84 ವರ್ಷದ ಇವರು ಮೂಲತಃ ಕೇರಳದವರು. ಪ್ರಸ್ತುತ ಪತಿಯ ಮನೆಯಾದ ಪಾಂಗಾಳದಲ್ಲಿ ವಾಸವಾಗಿದ್ದಾರೆ. ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಮೂಛೆìರೋಗ, ವಾತ, ಪಿತ್ಥ, ಕಫ, ಗಂಟುನೋವು, ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಸ್ಥಳೀಯವಾಗಿ ದೊರೆಯುವ ಔಷಧದ ಗಿಡಗಳನ್ನು ಉಪಯೋಗಿಸಿ ಔಷಧ ನೀಡುತ್ತಾರೆ. ಇವರ ಪತಿ ಆಯುರ್ವೇದ ಪಂಡಿತರಾಗಿದ್ದು, ಅವರೊಂದಿಗೆ ಸೇರಿ 50 ವರ್ಷಗಳಿಂದ ಔಷಧ ನೀಡುತ್ತಿದ್ದರು. ಕಳೆದ 15 ವರ್ಷಗಳಿಂದ ಇವರೇ ಔಷಧ ನೀಡುತ್ತಿದ್ದಾರೆ. ಇವರು ಯಾರಿಂದಲೂ ಶುಲ್ಕ ಪಡೆಯುವುದಿಲ್ಲ. ಹಲವಾರು ಮಂದಿ ದೂರದ ಊರುಗಳಿಂದ ವಿಚಾರಿಸಿ ಬರುವುದೂ ಉಂಟು.
ಸಂಪರ್ಕ: 8970949527
ನಂದಿಕೂರಿನ ರತ್ನಮ್ಮ
ಪಡುಬಿದ್ರಿ: ನಂದಿಕೂರು ಗ್ರಾಮದಲ್ಲಿ ವಾಸಿಸುತ್ತಿರುವ ರತ್ನಮ್ಮ ಅವರನ್ನು ಅರಸಿ ಬರುವವರು ಅಸಂಖ್ಯ ಮಂದಿ. ಮನೆ ಮುಂದಿನ ಇವರ ತೆಂಗಿನ ತೋಟದ ಬುಡದಲ್ಲಿ ಕಾಣ ಸಿಗುವ ಬಿಂದಿಗೆಗಳೇ ಇವರ ಕತೆಯನ್ನು ಹೇಳುತ್ತವೆ. ಕಟೀಲು ಅಪ್ಪುರಾಯರ ಪತ್ನಿ, ನಂದಿಕೂರು ಶಾಮಣ್ಣ ಹಾಗೂ ಲಕ್ಷ್ಮೀಯಮ್ಮರ ಪುತ್ರಿಯಾಗಿರುವ ರತ್ನಮ್ಮ ಅವರ ನಾಟಿ ವೈದ್ಯ ಪದ್ಧತಿಯನ್ನು ಶ್ರೀ ಧ.ಮಂ. ಆಯುರ್ವೇದ ಕಾಲೇಜಿನ ಸಂಶೋಧನ ಕೇಂದ್ರದ ವೈದ್ಯರೂ ಕೂಡ ಪ್ರಶಂಸಿಸಿದ್ದಾರೆ. ಸೋಮವಾರ ಹಾಗೂ ಶನಿವಾರ ಹೊರತುಪಡಿಸಿ ಉಳಿದ ಐದು ದಿನಗಳಲ್ಲಿ ದೇಶದ ಮೂಲೆ ಮೂಲೆಗಳಿಂದಲೂ ಇಲ್ಲಿಗೆ ಜನರು ಬರುತ್ತಾರೆ. ಮಂಗಳವಾರವಂತೂ ಸುಮಾರು 30 – 50 ಮಂದಿ ಹೊಟ್ಟೆಯ ಕಲ್ಮಶವನ್ನು ಹೊರ ತೆಗೆಸಿಕೊಳ್ಳಲು ಬರುತ್ತಾರೆ. ಸಿನೆಮಾ ನಟ, ನಟಿಯರು, ರಾಜಕಾರಣಿಗಳು ಕೂಡಾ ಇಲ್ಲಿಗೆ ಬಂದು ರತ್ನಮ್ಮ ಅವರಿಂದ ಮದ್ದು ಪಡೆದು ಉತ್ಸಾಹದಿಂದ ತೆರಳಿ ಮರು ಜೀವನ ನಡೆಸುತ್ತಿರುವರು.
ಸಂಪರ್ಕ: 9535644952
ಉಳಿಯಾರು ಸುಮತಿ ಆಚಾರ್ಯ
ಕಾಪು: ಉಳಿಯಾರು ಸುಮತಿ ಅಚ್ಯುತ ಆಚಾರ್ಯ 30 ವರ್ಷಗಳಿಂದ ಸರ್ಪ ಸುತ್ತು ಕಾಯಿಲೆಗೆ ಮದ್ದು ನೀಡುತ್ತಿದ್ದಾರೆ. ಮಾವ ರಾಮಪ್ಪ ಆಚಾರ್ಯ ಅವರಿಂದ ಬಳುವಳಿಯಾಗಿ ಬಂದ ನಾಟಿ ವೈದ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಸುಮತಿ ಅಚ್ಯುತ ಆಚಾರ್ಯ ಅವರು ಔಷಧ ತಯಾರಿಕೆಗೆ ಆವಶ್ಯಕವಾಗಿರುವ ಗಿಡ ಮೂಲಿಕೆಗಳನ್ನು ಕಾಡಿನೊಳಗೆ ತೆರಳಿ ಗುರುತಿಸಿ ಸಂಗ್ರಹಿಸುತ್ತಾರೆ. ಇವರ ಬಳಿಗೆ ದೂರದೂರುಗಳಿಂದಲೂ ಔಷಧಗಾಗಿ ಆಗಮಿಸುತ್ತಿರುತ್ತಾರೆ. ಸುಮತಿ ಆಚಾರ್ಯರು ಮಗ ಹರೀಶ್ ಆಚಾರ್ಯ ಮತ್ತು ಮಗಳು ಸುಜಯ ಆಚಾರ್ಯ ಅವರಿಗೆ ನಾಟಿ ವೈದ್ಯ ವಿದ್ಯೆಯನ್ನು ಕಲಿಸಿಕೊಡುತ್ತಿದ್ದು ತನ್ನ ಬಳಿಕ ತನ್ನ ಮಕ್ಕಳು ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಆಶಯವನ್ನು ಹೊಂದಿದ್ದಾರೆ.
ಸಂಪರ್ಕ : 9844741790
ಕಾಪು ಪ್ರಮೀಳಾ ಸುಧಾಕರ್
ಕಾಪು: ವಿಷಪೂರಿತ ಹಾವುಗಳಿಂದ ಕಡಿತಕ್ಕೊಳಗಾಗಿ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುವ ಅದೆಷ್ಟೋ ಜೀವಗಳಿಗೆ ಕಾಪು ಪಡುಗ್ರಾಮದ ಪ್ರಮೀಳಾ ಸುಧಾಕರ್ ಸಾಲ್ಯಾನ್ ಅವರು ಸಂಜೀವಿನಿ. ಎರ್ಮಾಳು ದಿ| ಈಶ್ವರ್ ಪಾಲನ್ ಮತ್ತು ದಿ| ವನಜ ದಂಪತಿಯ ಪುತ್ರಿ ಪ್ರಮೀಳಾ ಅವರು ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ. ಅಲ್ಲೇ ಎಸ್ ಎಸ್‌ಎಲ್‌ಸಿವರೆಗಿನ ಶಿಕ್ಷಣವನ್ನು ಪಡೆದಿರುವ ಅವರು 2010ರಲ್ಲಿ ಕಾಪು ಪಡುಗ್ರಾಮದ ಸುಧಾಕರ್ ಸಾಲ್ಯಾನ್ ಅವರನ್ನು ವಿವಾಹವಾಗಿ, ಪತಿ ಸುಧಾಕರ್ ಮತ್ತು ಅವರ ಸಹೋದರಿ ಭಾರತಿ ಅವರ ಮೂಲಕವಾಗಿ ಪಾರಂಪರಿಕ ನಾಟಿ ವೈದ್ಯ ವಿದ್ಯೆ ಕಲಿತರು.
13 ವರ್ಷಗಳಿಂದ ಮದ್ದು ನೀಡುತ್ತಿರುವ ಅವರು ವಿಷದ ಹಾವು ಕಡಿತಕ್ಕೆ ಪಾರಂಪರಿಕವಾಗಿ ಬಳಸುವ ಕಲ್ಲು ಇರಿಸಿ ವಿಷ ಹೊರಕ್ಕೆ ತೆಗೆಯುತ್ತಾರೆ. ಬಳಿಕ ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಮದ್ದನ್ನು ಗಾಯಕ್ಕೆ ಲೇಪಿಸಿ, ಸೇವನೆಗೂ ನೀಡುತ್ತಾರೆ. ಕನ್ನಡಿ ಹಾವು (ಕೊಳಕು ಮಂಡಳ) ಕಡಿತಕ್ಕೆ ಮೂರು ತಿಂಗಳ ಆಹಾರ ನಿಯಂತ್ರಣದ ಮಾರ್ಗದರ್ಶನದೊಂದಿಗೆ ನಾಟಿ ಮದ್ದು ನೀಡುತ್ತಿದ್ದರೆ, ನಾಗರ ಹಾವು ಕಡಿತಕ್ಕೆ ಮೂರು ದಿನದ ಮದ್ದು ಮತ್ತು ಒಂದು ತಿಂಗಳ ಆಹಾರ ನಿಯಂತ್ರಣಕ್ಕೆ ಸಲಹೆ ನೀಡುತ್ತಾರೆ. 47 ವರ್ಷದ ಪ್ರಮೀಳಾ ಈವರೆಗೂ ಸುಮಾರು 500ಕ್ಕೂ ಆಧಿಕ ಮಂದಿಗೆ ಜೀವದಾನ ನೀಡಿದ್ದಾರೆ. ಟೈಲರಿಂಗ್ ಮತ್ತು ಬೀಡಿ ಕಟ್ಟುವ ಕಸುಬು ಮಾಡುತ್ತಿದ್ದಾರೆ.
ಸಂಪರ್ಕ: 9901329819
ಕೊಜಕುಳಿಯ ವನಜಾ ಆಚಾರ್ಯ
ಮಲ್ಪೆ: ತೆಂಕನಿಡಿಯೂರು ಗ್ರಾಮದ ಕೊಜಕುಳಿ ಬಳಿಯ ನಾರಾಯಣ ಆಚಾರ್ಯ ಅವರ ಪತ್ನಿ ವನಜಾ ಆಚಾರ್ಯ (75) ಅವರು ಸರ್ಪ ಸುತ್ತು ಆದವರಿಗೆ ಔಷಧ ನೀಡುತ್ತಾರೆ. ಹಿಂದೆ ವನಜಾ ಆಚಾರ್ತಿ ಅವರ ಮಾವ ಅನಂತ ಆಚಾರ್ಯ ಅವರು ಈ ಕಾಯಿಲೆಗೆ ಮದ್ದು ನೀಡುತ್ತಿದ್ದರು. ಅವರ ಕಾಲವಾದ ಅನಂತರ ವನಜಾ ಅವರು ಆ ಕಾಯಕವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಕಳೆದ 40 ವರ್ಷದಿಂದ ಜಿಲ್ಲೆಯ ನಾನಾ ಭಾಗಗಳಿಂದ ಬರುವ ಸಾವಿರಾರು ಮಂದಿಗೆ ಮನೆಮದ್ದನ್ನು ನೀಡಿ ಈ ಕಾಯಿಲೆಯಿಂದ ರಕ್ಷಿಸಿದ್ದಾರೆ. ವನಜಾ ಅವರೇ ಹೇಳುವಂತೆ ವೈರಸ್, ಸೋಂಕು ಹೆಚ್ಚಾಗಿ ದೇಹದಲ್ಲಿ ನೋವು, ಉರಿಯುಳ್ಳ ಚಿಕ್ಕ, ಚಿಕ್ಕ ಗುಳ್ಳೆಗಳು ಏಳುತ್ತವೆ. ಇದನ್ನು ನಾವು ಸರ್ಪ ಸುತ್ತು ಅಂತ ಭಾವಿಸುತ್ತೇವೆ. ಕೆಲವೊಂದು ನಾರು, ಸೊಪ್ಪನ್ನು ಅರೆದು ಮೈಗೆಲ್ಲಾ ಹಚ್ಚಬೇಕು, ಒಂದು ಬಾರಿ ಆದನ್ನು ಸೇವಿಸಬೇಕು. ಇದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಅದರೆ ಕಾಯಿಲೆಗೆ ತುತ್ತಾದ ರೋಗಿ ಮಾತ್ರ ಕೆಲವೊಂದು ಆಹಾರಗಳನ್ನು ತ್ಯಜಿಸುವ ಮೂಲಕ ಪಥ್ಯ ಮಾಡಬೇಕು ಎನ್ನುತ್ತಾರೆ.
ಸಂಪರ್ಕ: 9481842039
ಕನರಾಡಿ ಜಾನಕಿ ಆಚಾರ್ಯ
ಕಟಪಾಡಿ: ಮಣಿಪುರ ಗ್ರಾ.ಪಂ. ವ್ಯಾಪ್ತಿಯ ಕನರಾಡಿಯ ಜಾನಕಿ ಆಚಾರ್ಯ ಅವರು ನಾಟಿ ವೈದ್ಯೆಯಾಗಿ ಕಳೆದ 20 ವರ್ಷದಿಂದ ಸೇವೆಯನ್ನು ನೀಡುತ್ತಿದ್ದಾರೆ. ಈಕೆಯ ಅತ್ತೆ ಅಕ್ಕು ಆಚಾರ್ಯರು ಸುಮಾರು 50 ವರ್ಷಗಳಿಂದ ಸರ್ಪಸುತ್ತು ಕಾಯಿಲೆಗೆ ನಾಟಿ ಔಷಧಯನ್ನು ನೀಡುತ್ತಾ ಬಂದಿದ್ದು, ಅವರಿಂದ ಕಲಿತ ನಾಟಿ ಔಷಧ ಸಿದ್ಧಪಡಿಸುವಿಕೆ ಹಾಗೂ ಪರಿಶೀಲಿಸಿ ನೀಡುತ್ತಿದ್ದು, ಅತ್ತೆಯ ಜೀವಿತಾವಧಿಯ ಬಳಿಕ ಜಾನಕಿ ಆಚಾರ್ಯರು ಮುಂದುವರಿಸಿಕೊಂಡು ಬಂದಿರುತ್ತಾರೆ.
ಸಾವಿರಕ್ಕೂ ಅಧಿಕ ಮಂದಿಗೆ ಇದುವರೆಗೂ ನಾಟಿ ಔಷಧಯನ್ನು ನೀಡಿ ಗುಣಪಡಿಸಿರುವ ಈಕೆ ಔಷಧ ತಯಾರಿಕೆಗೆ ಆವಶ್ಯಕ ಗಿಡ ಮೂಲಿಕೆಗಳನ್ನು ಪರಿಸರದ ಕಾಡಿನೊಳಗೆ ತೆರಳಿ ಗುರುತಿಸಿ ಸಂಗ್ರಹಿಸುತ್ತಾರೆ. ದೂರದ ಊರುಗಳಿಂದಲೂ ಔಷಧಕ್ಕಾಗಿ ಹುಡುಕಿಕೊಂಡು ಬರುವ ಮಂದಿಗೆ ಮೈಮೇಲಿನ ಗುಳ್ಳೆಗಳ ಪರಿಶೀಲನೆ ನಡೆಸಿ ಆವಶ್ಯಕತೆಗೆ ತಕ್ಕಂತಹ ಔಷಧವನ್ನು ದೇವರ ಪ್ರಾರ್ಥಿಸಿ ಕೊಡುತ್ತಿದ್ದಾರೆ. 65ರ ಹರೆಯದ ಜಾನಕಿ ಆಚಾರ್ಯ ಇದುವರೆಗೆ ನೀಡಿದ ನಾಟಿ ಔಷಧ ವಿಫಲವಾಗಿಲ್ಲ ಎಂಬ ಸಂತೃಪ್ತಿಯನ್ನು ವ್ಯಕ್ತಪಡಿಸುತ್ತಾರೆ.
ಸಂಪರ್ಕ: 7760221219
ಪಕ್ಕಾಲು ರುಕ್ಮಿಣೀ ಆಚಾರ್ಯ
ಹಿರಿಯಡಕ: ಕಳೆದ 26 ವರ್ಷಗಳಿಂದ ನಾಟಿ ವೈದ್ಯೆಯಾಗಿರುವ ಪೆರ್ಡೂರಿನ ದರ್ಖಾಸು ಪಕ್ಕಾಲು ನಿವಾಸಿ 65 ವರ್ಷದ ರುಕ್ಮಿಣೀ ಆಚಾರ್ಯ ವಿದೇಶಕ್ಕೂ ನಾಟಿ ಔಷಧ ನೀಡಿ ಸೈ ಎನಿಸಿಕೊಂಡ ಮಹಿಳೆ. ತನ್ನ ತಾಯಿ ಭಾಗೀರಥೀ ಅವರು ಅವರ ತಂದೆಯಿಂದ ಕಲಿತು ಮುಂದುವರಿಸಿ ಕೊಂಡು ಬಂದಿರುವುದನ್ನು ಮಗಳು ರುಕ್ಮಿಣೀ ತಾನು ಕಲಿತರು.
ಸರ್ಪಸುತ್ತು, ತಲೆನೋವು, ಮೈಯಲ್ಲಿ ಬಾವು ಬಂದಿರುವುದಕ್ಕೆ, ಸಣ್ಣ ಮಕ್ಕಳು ಊಟ ಮಾಡದೆ ಇರುವುದಕ್ಕೆ ಇವರು ಔಷಧ ಕೊಡುತ್ತಾರೆ. ಎಷ್ಟೋ ಮಂದಿ ಆಗುವುದಿಲ್ಲ ಎಂದು ಹೇಳಿದ ಪ್ರಕರಣವೂ ಇವರಿಂದ ವಾಸಿಯಾಗಿದೆ. ಸರ್ಪ ಸುತ್ತಿಗೆ ಔಷಧ ಮಾಡಿ ಗುಣವಾಗದ ಅದೆಷ್ಟೋ ಪ್ರಕರಣಗಳನ್ನು ಇವರು ಗುಣಪಡಿಸಿದ್ದಾರೆ. ಬಾವು ಉಂಟಾಗಿ ಹಲವಾರು ವರ್ಷಗಳಿಂದ ವಿದೇಶದಲ್ಲಿ ಔಷಧ ಮಾಡಿ ಗುಣವಾಗದೇ ಬಳಲುತ್ತಿದ್ದ ವ್ಯಕ್ತಿಯೋರ್ವರನ್ನು ಇವರು ನಾಟಿ ಔಷಧದಿಂದ ಗುಣಪಡಿಸಿದ್ದಾರೆ. ಇವರ ಚಿಕಿತ್ಸೆಗೆ ನಿಗದಿತ ಶುಲ್ಕವಿಲ್ಲ. ಪ್ರೀತಿಯಿಂದ ಕೊಟ್ಟರೆ ಸ್ವೀಕರಿಸುತ್ತಾರೆ. ಗುಣಮುಖ ಹೊಂದಿದವರು ಇವರನ್ನು ದೇವರಂತೆ ಕಾಣುತ್ತಾರೆ. ಇವರ ಸೇವೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಗೌರವಿಸಿವೆ.
ಸಂಪರ್ಕ: ಮೊ.6366016237
ಕೊಕ್ಕರ್ಣೆ ಸೀತಾ ಬಾೖ
ಬ್ರಹ್ಮಾವರ: ಹಲ್ಲು ನೋವಿಗೆ ಕೊಕ್ಕರ್ಣೆ ಪಡುಜೆಡ್ಡು ಪುಟ್ಟಯ್ಯ ನಾಯ್ಕರ ಪತ್ನಿ ಸೀತಾ ಬಾೖ ಅವರ ನಾಟಿ ಔಷಧ ರಾಮಬಾಣ. ಹಲ್ಲು ನೋವಿನಿಂದ ಬಳಲು ತ್ತಿರುವವರನ್ನು ಮುಂಜಾನೆಯೇ ಬರಲು ಹೇಳುತ್ತಾರೆ. ಹಿಂದಿನ ದಿನವೇ ಬೇರು ಸಹಿತ ಐದಾರು ಬಗೆಯ ಆಯುರ್ವೇದದ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿದ್ದನ್ನು ಎಲೆಯ ಮೂಲಕ ಕಿವಿಯಲ್ಲಿ ಇಡುತ್ತಾರೆ. ಅರ್ಧ ಗಂಟೆ ಹಾಗೆಯೇ ಕುಳಿತಿರಬೇಕು. ಹಲ್ಲಿನ ಹುಳ ಎಲೆಯ ಮೂಲಕ ಹೊರಬರುತ್ತದೆ.
ಈ ರೀತಿ ಎರಡು ದಿನ ಮಾಡಿಸಿಕೊಂಡರೆ ಹಲ್ಲುನೋವು ಗುಣವಾಗುತ್ತದೆ ಎನ್ನಲಾಗಿದೆ. ಇದುವರೆಗೆ 1,000ಕ್ಕೂ ಮಿಕ್ಕಿ ಮಂದಿಗೆ ಔಷಧ ನೀಡಿದ್ದಾರೆ. ಮುಂಡಾಡಿಯ ತಾಯಿಮನೆಯಲ್ಲಿರುವಾಗ ತಾಯಿ ಯಿಂದ ಕಲಿತಿದ್ದ ಸೀತಾ ಬಾೖ ಮದುವೆಯ ಅನಂತರ ಪಡುಬೆಟ್ಟಿನಲ್ಲಿ ಸೇವೆಯನ್ನು ದುವರಿಸಿದ್ದರು. ಉಳಿದ ಸಮಯ ಕೃಷಿ ಇವರ ಚಟುವಟಿಕೆ. ಇವರಿಂದ ಹಿರಿಯ ಸೊಸೆ ವಿದ್ಯೆ ಕಲಿತಿದ್ದು ಮುನ್ನಡೆಸಲು ತಯಾರಾಗುತ್ತಿದ್ದಾರೆ. ಸೀತಾ ಬಾೖ ದಂಪತಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು.
ಸಂಪರ್ಕ: 6361109776
ಕುತ್ಯಾರು ಸುಜಾತಾ ಆಚಾರ್ಯ
ಶಿರ್ವ: ಸರ್ಪಸುತ್ತು ಕಾಯಿಲೆಗೆ ಕುತ್ಯಾರು ಕೆಳ ಅರಮನೆ ಬಳಿಯ ನಿವಾಸಿ ನಾಟಿ ವೈದ್ಯೆ ಸುಜಾತಾ ಪುರಂದರ ಆಚಾರ್ಯರು ಔಷಧ ನೀಡುತ್ತಾರೆ. ಕಳೆದ ಸುಮಾರು 35 ವರ್ಷಗಳಿಂದ ಸರ್ಪಸುತ್ತು ಕಾಯಿಲೆಗೆ ಚಿಕಿತ್ಸೆ ನೀಡುವ ಸುಜಾತಾ ಆಚಾರ್ಯ ಅವರಿಗೆ ತಾಯಿಯೇ ಪ್ರೇರಣೆ. ತನ್ನ ಹಿರಿ ಮಗನಿಗೆ ಕಾಯಿಲೆ ಬಂದ ಸಂದರ್ಭ ತಾಯಿ ನೀಡಿದ ಸಲಹೆಯಂತೆ ಗಿಡಮೂಲಿಕೆ ಚಿಕಿತ್ಸೆ ನೀಡಿದಾಗ ಮಗನ ಕಾಯಿಲೆ ಗುಣವಾಗಿತ್ತು. ಅಂದಿ ನಿಂದ ಸರ್ಪಸುತ್ತು ಕಾಯಿಲೆಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದು, ದೂರ ದೂರುಗಳಿಂದ ಜನರು ಚಿಕಿತ್ಸೆಗಾಗಿ ಬರುತ್ತಿದ್ದಾರೆ.
ಸರ್ಪಸುತ್ತು ನಾಗಸಂಬಂಧಿ/ಉಷ್ಣ ಪ್ರಕೋಪದಿಂದ ಬರುತ್ತದೆ ಎನ್ನುತ್ತಾರೆ. ಗಿಡಮೂಲಿಕೆ ಬೇರನ್ನು ಲಿಂಬೆರಸ ದಿಂದ ತೇದು ಗಾಯಕ್ಕೆ ಹಚ್ಚಲಾಗುತ್ತದೆ. ಈ ಕಾಯಿಲೆಗೆ ಶರೀರದೊಳಗಿನ ಗಾಯ ಗುಣವಾಗುವವರೆಗೆ ಚಿಕಿತ್ಸೆ ನೀಡಬೇಕಾಗಿದ್ದು, ರೋಗ ಲಕ್ಷಣ ಹೆಚ್ಚಿದ್ದ ಸಂದರ್ಭಗಳಲ್ಲಿ ರೋಗಿಯನ್ನು ಮನೆಗೆ ಕರೆಸಿ ಚಿಕಿತ್ಸೆ ನೀಡುತ್ತಾರೆ. ನಾಟಿ ಚಿಕಿತ್ಸೆಗೆ ಬೇಕಾದ ಗಿಡಮೂಲಿಕೆ ಬೇರುಗಳು, ಲಿಂಬೆಹುಳಿ ಮತ್ತಿತರ ಸಾಮಗ್ರಿಗಳು ಮನೆಯಲ್ಲೇ ಸಿದ್ಧವಿದ್ದು, ಮಕ್ಕಳು ಸಹಕಾರ ನೀಡುತ್ತಿದ್ದಾರೆ.
ಸಂಪರ್ಕ : 9880872232
*ವರದಿ: ನಟರಾಜ ಮಲ್ಪೆ, ಪುನೀತ್ ಸಾಲ್ಯಾನ್, ಪ್ರವೀಣ್ ಮುದ್ದೂರು, ಸತೀಶ ಶೆಟ್ಟಿ ಶಿರ್ವ, ರಾಕೇಶ್ ಕುಂಜೂರು, ವಿಜಯ ಆಚಾರ್ಯ ಉಚ್ಚಿಲ, ಹೆಬ್ರಿ ಉದಯಕುಮಾರ್ ಶೆಟ್ಟಿ, ರಾಮಚಂದ್ರ ಆಚಾರ್ಯ ಪಡುಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.