Team Udayavani, Feb 18, 2020, 5:47 AM IST
ಬಬ್ರುವಾಹನ ಚಿತ್ರದಲ್ಲಿ ಅಣ್ಣಾವ್ರು “ಆರಾಧಿಸುವ ಮದನಾರಿ’ ಹಾಡಿನ ಕೊನೆಯಲ್ಲಿ ತತ್ತ ಧೀಂ ತಕಿಟ, ತಕತ ಧೀಂ ತಕಿಟ ಅಂತ ಹಾಡಿದಾಗ, ಏನು ಮಜ ಅಲ್ವಾ? ಇದೇ ಕೊನ್ನಕ್ಕೋಲ್ ಅನ್ನೋದು. ಈ ಕಲೆಯನ್ನು ಪ್ರೊಫೆಷನ್ ಆಗಿ ಮಾಡಿಕೊಂಡಿರುವ ಸೋಮಶೇಖರ ಜೋಯಿಸ್‌ರನ್ನು ನೋಡಿ ನಕ್ಕವರು ಬಹಳ ಮಂದಿ. ಇವತ್ತು ಜಗತ್ತಿನಾದ್ಯಂತ ಈ ವಿದ್ಯೆ ಪಸರಿಸುತ್ತಿರುವ ಇವರು ವಿಶಿಷ್ಠ ವೃತ್ತಿಯ ಬಗ್ಗೆ ಇಲ್ಲಿ ಮೆಲುಕು ಹಾಕಿದ್ದಾರೆ.
ಕೊನ್ನಕ್ಕೋಲ್ ಅಂದರೆ ಏನು ಗೊತ್ತಾ?
ಇದೇನು ಹೊಸ ಹೆಸರು? ಯಾವ ಬಿದಿರಿನಿಂದ ಮಾಡಿದ ಕೋಲಿದು ಅನ್ನಬೇಡಿ. ಈ ಕೊನ್ನಕ್ಕೋಲ್ ವೇದಗಳ ಕಾಲದಲ್ಲೂ ಇತ್ತು. ರಾಮಾಯಣದಲ್ಲಿ ಇದನ್ನು ಕಂಠ ತಾಳ ಅಂದ್ದಾರೆ. ಯೋಗ ಶಾಸ್ತ್ರದಲ್ಲಿ ಉಚ್ಛಾರ ಯೋಗ ಅಂದಿದ್ದಾರೆ. ಇವೆಲ್ಲ ಬಿಡಿ, ಬಬ್ರುವಾಹನ ಚಿತ್ರದಲ್ಲಿ ಅಣ್ಣಾವ್ರು “ಆರಾಧಿಸುವೆ ಮದನಾರಿ’ ಹಾಡಿನ ಕೊನೆಯಲ್ಲಿ, “ತತ್ತ ಧೀಂ ತಕಿಟ, ತಕತ ಧೀಂ ತಕಿಟ’ ಅಂತ ಹಾಡ್ತಾರೆ ಗೊತ್ತಾ? ಇದೇ ಕೊನ್ನಕ್ಕೋಲ್. ಈ ಕೊನ್ನಕ್ಕೋಲ್ ಬಗ್ಗೆ ಹೇಳ್ಳೋಕೆ ನಾವು ಇಷ್ಟೆಲ್ಲಾ ತ್ರಾಸ ಪಡುತ್ತಿರಬೇಕಾದರೆ, ಇದನ್ನೇ ಪ್ರೊಫೆಷನ್ ಆಗಿ ಮಾಡಿಕೊಂಡು, ಇಡೀ ಜಗತ್ತಿನಾದ್ಯಂತ ಕೊನ್ನಕ್ಕೋಲ್ ಕಂಪು ಹರಡುತ್ತಿರುವವರು ಬೆಂಗಳೂರಿನ ಈ ಸೋಮಶೇಖರ್ ಜೋಯಿಸ್.
ಇದೇನು ಮೃದಂಗ, ತಬಲ, ವೋಕಲ್ ಕಛೇರಿಯ ರೀತಿ ಕೇಂದ್ರ ಕಲೆಯಂತಿಲ್ಲ. ಊಟಕ್ಕೆ ಉಪ್ಪಿನ ಕಾಯಿ ರೀತಿ ಅಷ್ಟೇ. ಆಗಾಗ, ಉಪ್ಪಿನಕಾಯಿ ಬಹಳ ರುಚಿಯಾಗಿದೆ ಅಂತ ಚಪ್ಪರಿಸುವಂತೆ, ಕೊನ್ನಕ್ಕೋಲ್ ಚೆನ್ನಾಗಿದೆ ಅಂತಾರೆ. ಜೋಯಿಸರು, ಇದು ಕೂಡ ಊಟದಷ್ಟೇ ಸವಿರುಚಿ ಅಂತ ತೋರಿಸುವ ಸಲುವಾಗಿಯೇ ಅಕಾಡೆಮಿ ಮಾಡಿದ್ದಾರೆ. ಹಾಗಂತ, ಇವರಿಗೇನು ಬೇರೆ ಉದ್ಯೋಗ ಸಿಗದೆ ಇಲ್ಲಿಗೆ ಬಂದಿಲ್ಲ. ಜೋಯಿಸರು ಓದಿದ್ದು ಸೌಂಡ್ ಎಂಜಿನಿಯರಿಂಗ್. ಎಫ್ಎಂನಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು. ತಿಂಗಳಿಗೆ ಲಕ್ಷಾಂತರ ರೂ. ಪಗಾರ ಎಣಿಸುತ್ತಿದ್ದವರು. ಮೃದಂಗ ನುಡಿಸಾಣಿಕೆಯನ್ನು ಪ್ರವೃತ್ತಿಯಾಗಿಸಿಕೊಂಡಿದ್ದವರು. 18 ವರ್ಷ ವಿದ್ವಾನ್ ಕೆ.ಎನ್ ಕೃಷ್ಣ ಮೂರ್ತಿಗಳ ಬಳಿ ಮೃದಂಗ ಕಲಿತರು. ದೊಡ್ಡ ಕಲಾವಿದರೊಂದಿಗೆ ವೇದಿಕೆ ಹಂಚಿಕೊಂಡರು. ಚೆನ್ನೈನ ಕೆ.ವಿ ಪ್ರಸಾದ್ ಅವರಲ್ಲಿ ಪಳಗಿದರು. ಆಮೇಲೆ ಬಿ.ಸಿ ಮಂಜುನಾಥರ ಬಳಿ ಬಂದರು. ಅವರು ಕಛೇರಿ ಮಧ್ಯೆ ಕೊನ್ನಕ್ಕೋಲ್ ಹೇಳ್ಳೋರು. ಸೋಮಣ್ಣನಿಗೆ ಅವರನ್ನು ಅನುಕರಣೆ ಮಾಡುವ ಹುಕಿ ಹುಟ್ಟಿತು. ಸಂಸ್ಕೃತದ ಜೊತೆ ನಾಲ್ಕೈದು ಭಾಷೆ ನಾಲಿಗೆಯ ಮೇಲೆ ಓಡಾಡಿದ್ದರಿಂದ ಬಹಳ ಚೆನ್ನಾಗಿ ನಾಲಿಗೆ ತಿರುಗೋದು. ಇವರ ಕೊನ್ನಕ್ಕೋಲ್ ಕೇಳಿದ ಬಾಯಿ ವಾಹ್ ಅನ್ನೋದು. ಅಷ್ಟರಲ್ಲಿ ಆನೂರು ಅನಂತ ಕೃಷ್ಣ ಶರ್ಮ(ಶಿವು) ಸಿಕ್ಕರು. ಬಂಡೆಯಂತಿದ್ದ, ಸೋಮಶೇಖರರನ್ನು ಮೂರ್ತಿ ಮಾಡಿದ ಶಿಲ್ಪಿ ಇವರು. ತಾಳವಾದ್ಯದಲ್ಲಿ ಇವರ ದನಿ ಸೇರಿಸಿದರು. ಕಷ್ಟದ ತಾಳಗಳನ್ನು ಇವರ ನಾಲಿಗೆಗೆ ಕಲಾಯಿ ಮಾಡಿಸಿದರು. ಇದು, ಕೇಳುಗರಿಗೆ ಹೊಸತಾಗಿ ಕಂಡಿತು. ಇಷ್ಟರ ಮಧ್ಯೆ ಜೋಯಿಸರಿಗೆ ಇದನ್ನೇ ಪ್ರೊಫೆಷನ್ ಆಗಿ ತೆಗೆದುಕೊಳ್ಳುವ ನಿರ್ಧಾರ ದೃಢವಾಯಿತು.
ಕೊನ್ನಕ್ಕೋಲ್ ನಂಬಿಕೊಂಡ್ರೆ ಊಟ ಸಿಗಲ್ಲ. ನೀನು ಚೆನ್ನಾಗಿ ಹೇಳ್ತೀಯ. ಆದರೆ, ನಿನ್ನ ಪ್ರೋಗ್ರಾಂಗೆ ಹಾಕ್ಕೊಂಡ್ರೆ ಚಪ್ಪಾಳೆ ನಿಂಗೇ ಬಿದ್ದು ಬಿಡ್ತೆ ಅಂದರು ಒಂದಷ್ಟು ಜನ. ಯು ಆರ್ ವೆರಿ ಟ್ಯಾಲೆಂಟೆಡ್. ನನ್ನ ಮೈಂಡ್‌ನಲ್ಲಿ ನಿನ್ನ ಇಟ್ಕೊಂಡಿರ್ತೀನಿ ಅಂತೆಲ್ಲ ಶಹಭಾಷ್ ಗಿರಿ ದೊರೆತಾಗ ಜೋಯಿಸರಿಗೆ ಪುಳಕವಾದದ್ದೇ ದೊಡ್ಡ ಲಾಭ. ಆದರೆ, ಹೀಗೆ ಹೇಳಿದವರಲ್ಲಿ ಎಷ್ಟೋ ಜನ ಅವಕಾಶ ಕೊಡಲಿಲ್ಲ. ಕೊನ್ನಕ್ಕೋಲಿಗೆ ಇತಿಹಾಸವೇ ಇಲ್ಲ, ಸಂಪ್ರದಾಯವೇ ಗೊತ್ತಿಲ್ಲ ಅಂದವರಿಗೆ ಉತ್ತರ ಕೊಡಲು ವಿದ್ವಾನ್ ಸನಕ್‌ಕುಮಾರ್ ಆತ್ರೇಯರ ಮಾರ್ಗದರ್ಶನದಲ್ಲಿ ಸಂಶೋಧನೆಗೆ ಇಳಿದರು. ಕೈಯಲ್ಲಿದ್ದ ಎಫ್ಎಂ ಕೆಲಸವನ್ನು ಬಿಟ್ಟು, ವಿಶ್ವ ಕೊನ್ನಕ್ಕೋಲ್ ಅಕಾಡೆಮಿ ತೆರೆದೇ ಬಿಟ್ಟರು. ಐದು ಜನ ಬರಲಿ, ಆಮೇಲೆ ನೋಡೋಣ ಅಂದವರು, ಇವತ್ತು ಜಗತ್ತಿನಾದ್ಯಂತ ವಿದ್ಯಾರ್ಥಿಗಳನ್ನು ಗುಡ್ಡೆ ಹಾಕಿಕೊಂಡು ಪಾಠ ಮಾಡುತ್ತಿದ್ದಾರೆ.
ಇಷ್ಟಾದರೂ ಕೊನ್ನಕ್ಕೋಲ್ ಹಿಂದೆ ಬಿದ್ದದ್ದು ಏಕೆ ಅಂದರೆ… “ನಾನು ಏನಾದರೂ ವಿಶೇಷವಾಗಿ ಮಾಡಬೇಕು ಅಂದುಕೊಳ್ಳುತ್ತಿದ್ದೆ. ಹಾಗಾಗಿ, ಈ ದಾರಿ ಹಿಡಿದೆ. ಹಾಗಂತ ಇದೇನು ಕಲ್ಲು ಮುಳ್ಳು ಇಲ್ಲದ, ಬರೀ ಹೂವು ಹಾಸಿದ ನ್ಯಾಷನಲ್ ಹೈವೇ ಆಗಿರಲಿಲ್ಲ. ಎಲ್ಲವನ್ನು ದಾಟಿ ಈಗ ಮುನ್ನುಗ್ಗುತ್ತಿದ್ದೀನಿ. ಕೊನ್ನಕ್ಕೋಲ್ ನಂಬಿ ಬದುಕಬಹುದೇ? ಅನ್ನೋರಿಗೆ ಉತ್ತರವಾಗಿ ನಾನೇ ಇದ್ದೀನಿ’ ಅಂತಾರೆ ಜೋಯಿಸ್.
ಜೋಯಿಸರು ಕೊನ್ನಕ್ಕೋಲ್ ಎಂಬ ಸಂಗೀತಕ್ಕೆ ಸ್ವತಂತ್ರವಾಗಿ ಸ್ಟಾಂಡ್ ಹಾಕಿ, ನಿಲ್ಲಿಸೋಕೆ ಒಂದೊಂದು ಶ್ರಮ ಹಾಕಿಲ್ಲ. ಆಲ್‌ಇಂಡಿಯಾ ರೇಡಿಯೋದಲ್ಲಿ ಇದಕ್ಕೆ ಪರೀಕ್ಷೆಯೇ ಇರಲಿಲ್ಲ. ಕೊನ್ನೋಕ್ಕೋಲ್ ಹಾಡ್ತೀನಿ ಅಂತ ಕದ ತಟ್ಟಿದಾಗ.. “ಸ್ವಾಮಿ, ಅದಕ್ಕೆ ನಮ್ಮ ಆಡೀಷನ್ನೇ ಇಲ್ಲ. ಇನ್ನೆಲ್ಲಿ ಹೇಳಿಸೋದು’ ಅಂದುಬಿಟ್ಟರಂತೆ. ಕೊನ್ನಕ್ಕೋಲ್ ವಿದೇಶಿಯದ್ದಲ್ಲ. ನಮ್ಮ ಸಂಗೀತ ಸಂಪ್ರದಾಯದ ಕೂಸು. ಸ್ಯಾಕ್ಸಫೋನ್, ಡ್ರಮ್ಸ್ ಇವಕ್ಕೆಲ್ಲ ಅವಕಾಶ ಇದೆ. ನಮ್ಮ ಬೇರನ್ನು ನೀವು ಏಕೆ ಬೆಳೆಯಲು ಬಿಡುತ್ತಿಲ್ಲ ಅಂತ ದೆಹಲಿಯ ಎಐಆರ್‌ಗೆ ಪತ್ರ ಬರೆದರು. ಆಗಲೆ, ಆಕಾಶವಾಣಿಯಲ್ಲೂ ಕೊನ್ನಕ್ಕೋಲ್‌ಗೆ ರೆಡ್‌ಕಾಪೆìಟ್ ಹಾಕಿದ್ದು. ಇವತ್ತು ಇಡೀ ರಾಜ್ಯದಲ್ಲಿ ಕೊನ್ನಕ್ಕೋಲ್‌ನ ಎ ಗ್ರೇಡ್ ಆರ್ಟಿಸ್ಟ್ ಈ ಸೋಮಶೇಖರ ಜೋಯಿಸ್ ಒಬ್ಬರೇ.
ನೀವು ಕ್ರಿಕೆಟರ್ ಆಗಬೇಕೆಂದರೆ, ಮಾಡೆಲ್‌ಗಳಾಗಿ ಧೋನಿ, ಕೋಹ್ಲಿ ಇದ್ದಾರೆ, ಟೆನ್ನಿಸ್‌ಗೆ ಲಿಯಾಂಡರ್‌ಫೇಸ್, ಒಳ್ಳೆ ಗಾಯಕನಾಗಬೇಕು ಎನ್ನುವವರಿಗೆ ಮಾದರಿಯಾಗಿ ಭೀಮಸೇನ್ ಜೋಶಿ, ಎಂ.ಎಸ್. ಸುಬ್ಬಲಕ್ಷ್ಮೀ ಮಾಡೆಲ್ ಕಾಣಸಿಗುತ್ತಾರೆ. ಆದರೆ, ಕೊನ್ನಕ್ಕೋಲ್ ನಲ್ಲಿ ಏನಾದರೂ ಮಾಡಬೇಕು ಅಂದರೆ ರೋಲ್ ಮಾಡೆಲ್ ಯಾರೂ ಇಲ್ಲ. ಜೋಯಿಸರಿಗೂ ಇದೇ ತಲೆನೋವಾಗಿದ್ದು. ಆದರೆ, ಇವತ್ತು ಅವರೇ ರೋಲ್ ಮಾಡೆಲ್ ಆಗಿದ್ದಾರೆ.
ಸಿಲಬಸ್ ಇದೆ !
ಕೊನ್ನಕ್ಕೋಲ್‌ಗೆ ತನ್ನದೇ ಆದ ಪಠ್ಯವೂ ಇದೆ. ಎಲ್ಲವೂ ಇತಿಹಾಸದಲ್ಲಿ ಹೂತು ಹೋಗಿತ್ತು. ಜೋಯಿಸರು ಅವನ್ನೆಲ್ಲ ಹುಡುಕಿ, ತಮ್ಮ ಅನುಭವ ಸೇರಿಸಿ ಹೊಸ ಸಿಲಬಸ್ ಕೂಡ ಮಾಡಿದ್ದಾರೆ. ಕೊನ್ನಕ್ಕೋಲ್‌ನಲ್ಲಿ ನಾಲಿಗೆ ಕುಣಿಸಿ,ತಿರುಗಿಸುವುದು ದೊಡ್ಡ ಚಾಲೆಂಜ್. ಅದನ್ನು ತಿರುಗಿಸಿ, ಸ್ಪುಟವಾಗಿ ಹೇಳಿ, ವೇಗವಾಗಿ ಅಕ್ಷರಗಳಿಗೆ ಶಬ್ದವನ್ನು ಲೇಪಿಸುವುದಕ್ಕೆಲ್ಲ ಅನುಭವ ಬೇಕು. ಒಂದಷ್ಟು ಪದಪುಂಜಗಳ ಸೇರಿಸಿ ಸೊಲ್‌ಕಟ್, ಒಂದಷ್ಟು ಸೊಲ್‌ಕಟ್‌ಗಳನ್ನು ಸೇರಿ ಜತಿ ಮಾಡುತ್ತಾರೆ. ಹೀಗೆ, ಸಂಗೀತ ಒಂದು ಭಾಷೆ ಎನ್ನುವುದಾದರೆ, ಅದರೊಳಗಿನ ಲಯಕ್ಕಿರುವ ಇನ್ನೊಂದು ಭಾಷೆ ಈ ಕೊನ್ನಕ್ಕೋಲ್.
ಕಟ್ಟೆ ಗುರುರಾಜ್