ಕೈ ಬಿಟ್ಟ ಪಾರಂಪರಿಕ ಮತಗಳ ಮೇಲೆ ಕಣ್ಣು!
ಲಂಬಾಣಿ ಮತ ಸೆಳೆಯಲು ತಾಂಡಾಗಳಿಗೆ ಸುತ್ತಾಟ | ಡಿಕೆಶಿ ಹೋದಲ್ಲೆಲ್ಲ ಲಂಬಾಣಿ ಸಮುದಾಯ ಹೊಗಳಿಕೆ
Team Udayavani, Jul 19, 2021, 7:47 PM IST
ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಕಾಂಗ್ರೆಸ್‌ನ ಅಧಿನಾಯಕಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಪಕ್ಕಾ ಕಾಂಗ್ರೆಸ್ ಪಕ್ಷದ ಪಾರಂಪರಿಕ ಮತಗಳಾಗಿದ್ದ ಲಂಬಾಣಿ ಸಮಾಜವನ್ನು ಪುನಃ ತನ್ನತ್ತ ಸೆಳೆಯಲು ತಯಾರಿ ನಡೆಸಲಾಗುತ್ತಿದೆ. ಅದಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಉತ್ತರ ಕರ್ನಾಟಕದ ಬಹುತೇಕ ತಾಂಡಾಗಳತ್ತ ಮುಖ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಹೌದು, ಲಂಬಾಣಿ ಸಮಾಜ, ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತ ಬಂದಿತ್ತು. ಇದೀಗ ಕಳೆದ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಜಿಲ್ಲೆಯ 47 ಲಂಬಾಣಿ ತಾಂಡಾಗಳ ಮತ ವಿಭಜನೆಯ ಲೆಕ್ಕಾಚಾರ ಮಾಡಿದರೆ, ಅವು ಬಿಜೆಪಿಗೆ ಹೆಚ್ಚು ವಾಲಿರುವುದು ಚುನಾವಣೆಯ ಬಳಿಕ ನಡೆದ ಆತ್ಮಾವಲೋಕನ ಸಭೆಯಲ್ಲಿ ಕೇಳಿ ಬಂತ ಮಾತು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡಿರುವ ಕಾಂಗ್ರೆಸ್, ಲಂಬಾಣಿ ಸಮಾಜದ ಮತಗಳನ್ನು ಪುನಃ ಸೆಳೆಯಲು ಕಾರ್ಯತಂತ್ರ ರೂಪಿಸಿದೆ ಎನ್ನಲಾಗಿದೆ.
ಸಮಾಜದ ಪ್ರಮುಖರು- ದೇವಸ್ಥಾನಗಳಿಗೆ ಭೇಟಿ: ಒಂದು ಇಡೀ ದಿನದ ಭೇಟಿಗಾಗಿ ಜಿಲ್ಲೆಗೆ ಆಗಮಿಸಿದ್ದ ಡಿ.ಕೆ. ಶಿವಕುಮಾರ, ರವಿವಾರ ಇಡೀ ದಿನ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡರು. ಬೆಳಗ್ಗೆ ಜಮಖಂಡಿಯಿಂದ ಆರಂಭಗೊಂಡ ಅವರ ಪ್ರವಾಸ, ರಬಕವಿ- ಬನಹಟ್ಟಿಯಲ್ಲಿ ನೇಕಾರರೊಂದಿಗೆ ಸಂವಾದ ನಡೆಸಿದರು. ಬಳಿಕ ಮಹಾಲಿಂಗಪುರಕ್ಕೆ ಆಗಮಿಸಿ ಕೊರೊನಾದಿಂದ ಸಂಕಷ್ಟ ಎದುರಿಸಿದವರ ಮನೆಗೆ ಭೇಟಿ ನೀಡಿದರು. ಅಲ್ಲಿಂದ ಮುಧೋಳಕ್ಕೆ ಆಗಮಿಸಿ ಉದಯ ನಾಯಕ ಅವರ ನಿವಾಸದಲ್ಲಿ ಉಪಹಾರ ಸೇವಿಸಿದರು. ನಂತರ ದಿ. ಪಾರ್ಕ್ ಹೊಟೇಲ್‌ನಲ್ಲಿ ಲಂಬಾಣಿ ಸಮಾಜದ ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ಅಲ್ಲಿಂದ ಲೋಕಾಪುರಕ್ಕೆ ಆಗಮಿಸಿ ಈಚೆಗೆ ನಿಧನರಾದ ಜಿಪಂ ಮಾಜಿ ಸದಸ್ಯ ದಿ| ಮಹಾಂತೇಶ ಉದಪುಡಿ ಅವರ ನಿವಾಸಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಅಲ್ಲಿಂದ ಗದ್ದನಕೇರಿ ಕ್ರಾಸ್‌ಗೆ ಆಗಮಿಸಿ, ಲಂಬಾಣಿ ಸಮಾಜದ ಯುವಕರೊಂದಿಗೆ ಬೈಕ್ ರ್ಯಾಲಿ ಮೂಲಕ ಗದ್ದನಕೇರಿ ತಾಂಡಾವರೆಗೂ ಬಂದರು.
ತಾಂಡಾದಲ್ಲಿ ಶಿವಕುಮಾರ ಪರ ಘೋಷಣೆ: ಬೈಕ್ ರ್ಯಾಲಿ ಮೂಲಕ ಗದ್ದನಕೇರಿ ತಾಂಡಾಕ್ಕೆ ರಾತ್ರಿ 7:45ಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಈ ವೇಳೆ ಲಂಬಾಣಿ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು.
ಉತ್ತರ ಕರ್ನಾಟಕದ ಶಕ್ತಿ ದೇವತೆ ಗದ್ದನಕೇರಿ ತಾಂಡಾದ ದುರ್ಗಾವೇದಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಶಿವಕುಮಾರ ಅವರನ್ನು ಸನ್ಮಾನಿಸಲಾಯಿತು. ಅಲ್ಲಿಂದ ಬಾಗಲಕೋಟೆ ತಾಲೂಕಿನ ನೀಲಾನಗರ ತಾಂಡಾಕ್ಕೆ ತೆರಳಿ ಲಂಬಾಣಿ ಸಮಾಜದ ಪ್ರಮುಖರೊಂದಿಗೆ ಸಂವಾದ ನಡೆಸಿದರು. ರಾತ್ರಿ ನವನಗರದ ಕಾಂಗ್ರೆಸ್ ಪಕ್ಷದ ಕಚೇರಿಗೆ ಆಗಮಿಸಿ, ಪಕ್ಷದ ನೂತನ ಕಚೇರಿ ವೀಕ್ಷಣೆ, ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ಬಳಿಕ ಡಿಸಿಸಿ ಬ್ಯಾಂಕ್ ಸಭಾ ಭವನದಲ್ಲಿ ಜಿಲ್ಲೆಯ ನೇಕಾರ ಸಮುದಾಯದ ಪುಮುಖರೊಂದಿಗೆ ಸಂವಾದ ನಡೆಸಿದರು.
ಸದಾಶಿವ ಆಯೋಗದ ವರದಿ ಚರ್ಚೆ: ಇದೆಲ್ಲದ ಮಧ್ಯೆ ಶಿವಕುಮಾರ ಅವರು ತಾಂಡಾಗಳಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನ್ಯಾ| ಸದಾಶಿವ ಆಯೋಗದ ವರದಿಯೂ ಚರ್ಚೆಗೆ ಬಂತು. ಲಂಬಾಣಿ ಸಮುದಾಯ ಈ ವರದಿ ಜಾರಿಗೆ ಪ್ರಬಲ ವಿರೋಧ ಮಾಡಿದ್ದು, ಡಿ.ಕೆ. ಶಿವಕುಮಾರ ಅವರ ನಿಲುವು ಏನು ಎಂಬ ಕುತೂಹಲವೂ ಸಮಾಜ ಬಾಂಧವರಲ್ಲಿತ್ತು. ಈ ವಿಷಯದಲ್ಲಿ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ ಅವರು, ನಾವು ಎಲ್ಲ ಸಮಾಜಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವರು. ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಈ ಆಯೋಗ ರಚನೆ ಮಾಡಿದ್ದೇ ನಾವು. ಆದರೆ, ತರಾತುರಿಯಲ್ಲಿ ಆಯೋಗದ ವರದಿ ಜಾರಿಗೊಳಿಸುತ್ತೇವೆ ಎಂದು ಬಿಜೆಪಿಯವರು ಪ್ರಚಾರ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಇಂದಿಗೂ ವರದಿ ಜಾರಿಗೊಂಡಿಲ್ಲ. ಯಾವುದೇ ಸಮಾಜಗಳಿಗೆ ಅನ್ಯಾಯವಾದರೂ ನಾವು ಸಹಿಸುವುದಿಲ್ಲ. ಒಗ್ಗಟ್ಟಿನಿಂದ ಕರೆದುಕೊಂಡು ಹೋಗುವುದೇ ನಮ್ಮ ಗುರಿ ಎಂದು ಹೇಳಿಕೊಂಡರು. ಒಟ್ಟಾರೆ, ಜಿಲ್ಲೆಯ ನೇಕಾರರು ಮತ್ತು ಲಂಬಾಣಿ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಡಿ.ಕೆ. ಶಿವಕುಮಾರ ಮೂಲಕ ಸೆಳೆಯಲು ಮುಂದಾಗಿದೆ ಎಂಬ ಚರ್ಚೆ ಕೇಳಿ ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.