ಕುಂದಾಪುರ ಫ್ಲೈಓವರ್ ಈ ಡಿಸೆಂಬರ್‌ಗೆ ಪೂರ್ಣ: ಎಸಿ
Team Udayavani, Jun 26, 2019, 5:32 AM IST
ಕುಂದಾಪುರ: ಶಾಸ್ತ್ರಿ ಸರ್ಕಲ್ನಲ್ಲಿ 7 ವರ್ಷಗಳಿಂದ ಬಾಕಿಯಾಗಿರುವ ಫ್ಲೈಓವರ್ ಹಿಂದಿನ ಎಸಿಯವರ ಆದೇಶದಂತೆ ಮಾರ್ಚ್‌ಗೆ ಮುಗಿಸ ಬೇಕಿ ತ್ತಾದರೂ ಹಣಕಾಸಿನ ಸಮಸ್ಯೆಯಿಂದ ಬಾಕಿಯಾಗಿದೆ. ಈ ವರ್ಷ ಡಿಸೆಂಬರ್ ಅಂತ್ಯಕ್ಕೆ ಮುಗಿಸುವುದಾಗಿ ನವಯುಗ ಸಂಸ್ಥೆ ಹೊಸ ಅಫಿದವಿತ್ ಸಲ್ಲಿಸಿದೆ ಎಂದು ಸಹಾಯಕ ಕಮಿಷನರ್ ಡಾ| ಎಸ್.ಎಸ್. ಮಧುಕೇಶ್ವರ್ ಹೇಳಿದ್ದಾರೆ.
ಅವರು ಮಂಗಳವಾರ ಸಂಜೆ ಪುರಸಭೆಯಲ್ಲಿ ಜನಸ್ಪಂದನದಲ್ಲಿ ನ್ಯಾಯವಾದಿ ವಿಕಾಸ್ ಹೆಗ್ಡೆ, ಹೆದ್ದಾರಿ ಹೋರಾಟ ಸಮಿತಿಯ ಕಿಶೋರ್ ಕುಮಾರ್ ಕುಂದಾಪುರ ಅವರ ಪ್ರಶ್ನೆಗೆ ಉತ್ತರಿಸಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳನ್ನು ಚರ್ಚಿಸುವುದಾಗಿ ಹೇಳಿದರು.
ಇಂದು ಸಭೆ
ಹೆದ್ದಾರಿಯಲ್ಲಿ ನೀರು ನಿಂತು ಸಮಸ್ಯೆಯಾಗುವುದು, ಹೆದ್ದಾರಿಯಿಂದ ಕುಂದಾಪುರ ಸಂತೆ, ಪೇಟೆಗೆ ಬರಲು ಜಂಕ್ಷನ್ ಅಗತ್ಯವಿರುವುದು ಕುರಿತು ಪುರಸಭೆ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ, ಶ್ರೀಧರ ಸೇರೆಗಾರ್, ಸಂದೀಪ್ ಖಾರ್ವಿ, ದೇವಕಿ ಸಣ್ಣಯ್ಯ, ಹೆದ್ದಾರಿ ಹೋರಾಟ ಸಮಿತಿಯ ಸೋಮಶೇಖರ ಶೆಟ್ಟಿ ಕೆಂಚನೂರು ಮೊದಲಾದವರ ಪ್ರಶ್ನೆಗೆ ಉತ್ತರಿಸಿದ ಎಸಿಯವರು, ಹಂಗಳೂರಿನಿಂದ ಸಂಗಂವರೆಗೆ ಸರ್ವೆ ಮಾಡಲಾಗಿದ್ದು ಹೆದ್ದಾರಿ ನೀರು ಸ್ಥಳೀಯಾಡಳಿತದ ತೋಡಿಗೆ ಬಿಡಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಹಂಗಳೂರು ಪಂಚಾಯತ್ ವಿರೋಧಿಸಿದ್ದು ಶುಕ್ರವಾರ ಸಭೆ ನಡೆಯಲಿದೆ ಎಂದರು.
ಯುಜಿಡಿ ಸಮಸ್ಯೆ
ಯುಜಿಡಿ ಸಮಸ್ಯೆ ಕುರಿತು ಸದಸ್ಯರಾದ ಚಂದ್ರಶೇಖರ ಖಾರ್ವಿ, ದೇವಕಿ ಸಣ್ಣಯ್ಯ ಗಮನ ಸೆಳೆದರು. ರಿಂಗ್ ರೋಡ್ ಸಮಸ್ಯೆ ಕುರಿತು ಸದಸ್ಯ ರಾಘವೇಂದ್ರ ಖಾರ್ವಿ ಮದ್ದುಗುಡ್ಡೆ, ಕಿಶೋರ್ ಕುಮಾರ್ ದುರಸ್ತಿಯ ಅವಶ್ಯವನ್ನು ಒತ್ತಾಯಿಸಿದರು. ಕುಡಿಯುವ ನೀರಿನ ಕಾಮಗಾರಿಗೆ ಅಲ್ಲಲ್ಲಿ ಅಗೆದು ಹಾಕಿದ್ದು ಅಪೂರ್ಣ ಕಾಮಗಾರಿ ಮಾಡಲಾಗಿದೆ. ಇದರಿಂದ ಇಂಟರ್‌ಲಾಕ್, ರಸ್ತೆ ಹಾಳಾಗಿದೆ ಎಂದು ಕೋಡಿ ಸದಸ್ಯ ಅಶ್ಪಕ್ ಹೇಳಿದರು. ಕಾಮಗಾರಿಗಳ ಗುಣಮಟ್ಟ ಕಾಪಾಡಿ ಸಮರ್ಪಕ ಕಾಮಗಾರಿ ಮಾಡುವಂತೆ ಎಸಿ ತಾಕೀತು ಮಾಡಿದರು.
ಹಕ್ಕುಪತ್ರ
ಕೋಡಿ ಭಾಗದ 113 ಮನೆಗಳಿಗೆ ಹಕ್ಕುಪತ್ರ ನಿರಾಕರಿಸ ಲಾಗುತ್ತಿದೆ. ಖಾರ್ವಿಕೇರಿಯ 300ಕ್ಕೂ ಹೆಚ್ಚಿನ ಮನೆಗಳಿಗೆ ವಾಸಿಸುವವನೇ ಮನೆಯೊಡೆಯ ಯೋಜನೆಯಂತೆ ಹಕ್ಕುಪತ್ರ ನೀಡಬೇಕಿದೆ ಎಂದು ವಿಕಾಸ್ ಹೆಗ್ಡೆ ಹೇಳಿದರು. ಈ ಕುರಿತು ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು, ಎಸ್‌ಇಝೆಡ್ ಕಾರಣದಿಂದ ಅರ್ಜಿ ತಿರಸ್ಕೃತವಾಗಿದ್ದರೆ ಮರು ಮನವಿ ನೀಡಿ. ಈ ವಾರದಲ್ಲಿ ಕಡತ ವಿಲೇವಾರಿ ಸಪ್ತಾಹ ನಡೆಸಲಾಗುವುದು ಎಂದು ಎಸಿಯವರು ಹೇಳಿದರು.
ಚರಂಡಿ ಸಮಸ್ಯೆ
ನಾನಾಸಾಹೇಬ್ ವಾರ್ಡಿನ ಉದಯ್ ಕುಮಾರ್ , ಗಾಂಧಿ ಪಾರ್ಕ್‌ನಲ್ಲಿ ಅನೈತಿಕ ಚಟುವಟಿಕೆಯಾಗುತ್ತಿದೆ, ಹಾಸ್ಟೆಲ್ಗಳು ತ್ಯಾಜ್ಯ ನೀರು ಚರಂಡಿಗೆ ಬಿಡುತ್ತಿವೆ ಎಂದು, ಸದಸ್ಯರಾದ ರಾಘವೇಂದ್ರ ಖಾರ್ವಿ, ಸಂತೋಷ್ ಕುಮಾರ್ ಶೆಟ್ಟಿ ಸುಡುಗಾಡು ತೋಡಿನ ಸಮಸ್ಯೆ ಕುರಿತು, ಪ್ರಭಾಕರ ಕೋಡಿ ಅವರು ಚಕ್ರೇಶ್ವರ ದೇವಸ್ಥಾನ ಬಳಿ ಡಾಮರಿಲ್ಲ ಎಂದರು.
ಮುಖ್ಯಾಧಿಕಾರಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.