ಲಾನ್ ಬೌಲ್ಸ್: ದ. ಆಫ್ರಿಕಾ ವಿರುದ್ಧ ಭಾರತ ವನಿತಾ ತಂಡದ ಚಿನ್ನದ ಬೇಟೆ
Team Udayavani, Aug 2, 2022, 6:56 PM IST
ಬರ್ಮಿಂಗ್‌ಹ್ಯಾಮ್: ಅಪರೂಪದ ಕ್ರೀಡೆಯಾದ ಲಾನ್ ಬೌಲ್ಸ್‌ನಲ್ಲಿ ಭಾರತದ ವನಿತಾ ತಂಡ ಐತಿಹಾಸಿಕ ಗೆಲುವನ್ನು ಸಾಧಿಸಿದ್ದು, ಚೊಚ್ಚಲ ಚಿನ್ನದ ಪದಕ ಗೆದ್ದುಕೊಂಡಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಎದುರಾಳಿಗಳನ್ನು 17-10 ಅಂತರದಿಂದ ಸೋಲಿಸಿ ಚಿನ್ನ ಗೆದ್ದುಕೊಂಡಿತು.
ಲವ್ಲಿ ಚೌಬೆ, ಪಿಂಕಿ, ನಯನ್ಮೋನಿ ಸೈಕಿಯ ಮತ್ತು ರೂಪಾರಾಣಿ ಟಿರ್ಕಿ ಅವರನ್ನೊಳಗೊಂಡ ತಂಡ ರೋಚಕ ಪಂದ್ಯದಲ್ಲಿ ಮೊದಲ ಪದಕವನ್ನು ಗಳಿಸುವುದರೊಂದಿಗೆ ಇತಿಹಾಸ ಪುಟಗಳಲ್ಲಿ ತಮ್ಮ ಹೆಸರನ್ನು ಬರೆದಿದೆ.
ಇದನ್ನೂ ಓದಿ: ಏಷ್ಯಾ ಕಪ್ 2022 ವೇಳಾಪಟ್ಟಿ ಪ್ರಕಟ: ಇಂಡೋ – ಪಾಕ್ ಮುಖಾಮುಖಿ ಯಾವಾಗ ?
ಈ ರೀತಿಯ ವಿಶ್ವಕೂಟವೊಂದರಲ್ಲಿ ಭಾರತ ಫೈನಲ್‌ಗೇರಿದ್ದೇ ಇದು ಮೊದಲು. ಸೋಮವಾರ ನ್ಯೂಜಿಲೆಂಡನ್ನು ಸೋಲಿಸಿ ಫೈನಲ್‌ಗೇರಿದ್ದಾಗ ಅದೇ ಮಹತ್ವದ ಸಾಧನೆ ಅನ್ನಿಸಿಕೊಂಡಿತ್ತು. ಪರಿಸ್ಥಿತಿ ಹೀಗಿರುವಾಗ ಎದುರಾಳಿ ದ.ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ 17-10 ಅಂಕಗಳ ಅಂತರದಿಂದ ಭಾರತ ಗೆಲುವು ಸಾಧಿಸಿತು.
ಪಂದ್ಯದ ವೇಳೆ ಸಂಪೂರ್ಣ ರೋಚಕ ಹೋರಾಟ ನಡೆಯಿತು. ಒಂದು ಹಂತದಲ್ಲಿ ಭಾರತ 8-2 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಈ ಹಂತದಲ್ಲಿ ದ.ಆಫ್ರಿಕಾ ತಂಡ ಎಚ್ಚೆತ್ತುಕೊಂಡಿತು. ಥಬೆಲೊ ಮುಹ್ವಾಂಗೊ, ಬ್ರಿಜೆಟ್ ಕ್ಯಾಲಿಝ್, ಕ್ರುಗೆರ್, ಜೊಹಾನ್ನಾ ಸ್ನೆ„ಮನ್ ಅವರಿದ್ದ ತಂಡ ತಿರುಗಿಬಿದ್ದು ಅಂಕಗಳನ್ನು 8-8ರಿಂದ ಸರಿಸಮಗೊಳಿಸಿತು.
ಆದರೆ ಭಾರತೀಯರು ಹೋರಾಟವನ್ನು ಬಿಟ್ಟುಕೊಡಲಿಲ್ಲ. ನಿರಂತರವಾಗಿ ಉತ್ತಮ ಆಟವಾಡುತ್ತ ಹೋಗಿ ತನ್ನ ಅಂಕಗಳನ್ನು 17ಕ್ಕೇರಿಸಿಕೊಂಡಿತು. ದ.ಆಫ್ರಿಕಾಕ್ಕೆ ಹೆಚ್ಚುವರಿಯಾಗಿ ಗಳಿಸಲು ಸಾಧ್ಯವಾಗಿದ್ದು 2 ಅಂಕಗಳು ಮಾತ್ರ. ವಿಶೇಷವೆಂದರೆ ಇದು ಭಾರತಕ್ಕೆ ಈ ಬಾರಿ ಬಂದ 4ನೇ ಬಂಗಾರ. ಇನ್ನೂ ವಿಶೇಷವೆಂದರೆ ವೇಟ್‌ಲಿಫ್ಟಿಂಗ್ ಹೊರತಾಗಿ ಬಂದ ಮೊದಲ ಬಂಗಾರವೂ ಹೌದು!
ಲಾನ್ ಬೌಲ್ಸ್ ಬಗ್ಗೆ ಗೊತ್ತಾ?
ಭಾರತೀಯರ ಪೈಕಿ ಕೆಲವೇ ಕೆಲವು ಕ್ರೀಡಾಸಕ್ತರು ಮಾತ್ರ ಲಾನ್ ಬೌಲ್ಸ್ ಬಗ್ಗೆ ಕೇಳಿರುತ್ತಾರೆ. ಹೀಗೆ ಹೆಸರು ಕೇಳಿದ್ದವರಿಗೂ ಕ್ರೀಡೆಯ ನಿಯಮಗಳು, ರೀತಿ ನೀತಿಯ ಬಗ್ಗೆ ಗೊತ್ತಿರುವುದು ಕಷ್ಟ. ಆದ್ದರಿಂದ ಈ ಕ್ರೀಡೆಯ ಸಂಕ್ಷಿಪ್ತ ಪರಿಚಯ ಇಲ್ಲಿ ನೀಡಲಾಗಿದೆ. ಹುಲ್ಲಿನ ಮೈದಾನದಲ್ಲಿ ಒಂದು ವಿಶೇಷ ಚೆಂಡನ್ನು (ಜ್ಯಾಕ್) ಮೊದಲ ತಂಡ ಉರುಳಿಸುತ್ತದೆ. ಇದು ಕನಿಷ್ಠ 23 ಮೀಟರ್ ದೂರ ಹೋಗಲೇಬೇಕು. ನಂತರ ಈ ಜ್ಯಾಕನ್ನು ಗುರಿಯಾಗಿಸಿಕೊಂಡು ಎದುರಾಳಿ ತಂಡ ತನ್ನ ಚೆಂಡನ್ನು ಉರುಳಿಸುತ್ತದೆ. ಹೀಗೆ ಎಸೆಯುವಾಗ ಯಾವ ತಂಡ ಗುರಿಗೆ ಅತಿಸನಿಹವಾಗಿ ತನ್ನ ಚೆಂಡುಗಳನ್ನು ಎಸೆದಿರುತ್ತದೋ, ಅದಕ್ಕೆ ಅಂಕಗಳನ್ನು ನೀಡಲಾಗುತ್ತದೆ. ಗರಿಷ್ಠ ಅಂಕಗಳ ಆಧಾರದಲ್ಲಿ ವಿಜಯೀ ಎಂದು ಪರಿಗಣಿಸಲಾಗುತ್ತದೆ. ಈ ಕ್ರೀಡೆಯಲ್ಲಿ ನಾಲ್ಕು ಮಾದರಿಗಳಿವೆ. ಸಿಂಗಲ್ಸ್‌ನಲ್ಲಿ ತಲಾ ಒಬ್ಬರು ಸ್ಪರ್ಧಿಸುತ್ತಾರೆ, ಪೇರ್ಸ್‌ನಲ್ಲಿ ಜೋಡಿ ಆಟಗಾರರು, ಟ್ರಿಪಲ್ಸ್‌ನಲ್ಲಿ ಮೂವರು, ಫೋರ್ಸ್‌ನಲ್ಲಿ ನಾಲ್ವರು ಆಟಗಾರರು ಇರುತ್ತಾರೆ. ಪ್ರಸ್ತುತ ಭಾರತ ಚಿನ್ನ ಗೆದ್ದಿದ್ದು ಫೋರ್ಸ್ ವಿಭಾಗದಲ್ಲಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.