Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ
Team Udayavani, Nov 23, 2024, 1:30 AM IST
ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿದ್ದು, ಭಾರತದಲ್ಲೇ ಇರುವ ಅವರ ಕುಟುಂಬವನ್ನು ಇಲ್ಲಿನ ಸರಕಾರ ವಶಕ್ಕೆ ಪಡೆದು ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವಿಚಾರವನ್ನು ಸಂಸತ್ ಅಧಿವೇಶನದಲ್ಲೂ ಚರ್ಚಿಸುವುದಾಗಿ ಹೇಳಿದರು.
ಶುಕ್ರವಾರ ಬೆಂಗಳೂರಿನಲ್ಲಿ ಅವರು ಮಾತನಾಡಿ, ಅದಾನಿ ಅವರು ಕಾನೂನುಬಾಹಿರ ಕೆಲಸಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ರಕ್ಷಣೆ ನೀಡುತ್ತಿದ್ದಾರೆ. ನಾವು ಈ ವಿಚಾರವನ್ನು ಮೊದಲಿನಿಂದಲೂ ಹೇಳುತ್ತಲೇ ಇದ್ದೆವು. ಈಗ ನಾವಷ್ಟೇ ಅಲ್ಲದೆ, ವಿದೇಶಗಳೂ ಹೇಳುತ್ತಿವೆ ಎಂದರು.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ನಾವು ಐದಾರು ವರ್ಷಗಳಿಂದ ಸತತವಾಗಿ ಆರೋಪಿಸುತ್ತಲೇ ಬಂದಿದ್ದೆವು. ಪ್ರಧಾನಿ ಮೋದಿ ಮಾತ್ರ ಚಕಾರ ಎತ್ತಲಿಲ್ಲ. ಅಮಿತ್ ಶಾ ಅವರು ಗೃಹ ಸಚಿವರಾಗಿದ್ದಾರೆ. ಅವರ ಕೈಯಲ್ಲೇ ಇ.ಡಿ., ಸಿಬಿಐ ಎಲ್ಲವೂ ಇದೆ. ಏಕೆ ತನಿಖೆ ಮಾಡುವುದಿಲ್ಲ? ಅದಾನಿ ವಿದೇಶದಲ್ಲಿ ತಲೆತಪ್ಪಿಸಿಕೊಂಡಿರುವ ಬಗ್ಗೆ ನಾವು ಆರೋಪಿಸಿದಾಗ ಅಲ್ಲಗಳೆದಿದ್ದರು. ಹಿಂಡನ್ಸ್‌ಬರ್ಗ್ ವಿಚಾರದಲ್ಲಿ ನಕಾರಾತ್ಮಕ ಮಾತುಗಳನ್ನಾಡಿದ್ದರು. ಈಗ ವಿದೇಶಗಳಲ್ಲೂ ಭ್ರಷ್ಟಾಚಾರ ಪ್ರಕರಣಗಳು ಹೊರಬರುತ್ತಿವೆ. ನಾವೇನೋ ರಾಜಕೀಯವಾಗಿ ಮಾತನಾಡಿದೆವು ಎನ್ನುತ್ತೀರಿ. ವಿದೇಶದಲ್ಲಿ ಏಕೆ ಎಲ್ಲರೂ ಹೇಳುತ್ತಿದ್ದಾರೆ? ಹಾಗಿಲ್ಲದಿದ್ದರೆ, ಮಾನನಷ್ಟ ಮೊಕದ್ದಮೆ ಹಾಕಿ ಎಂದು ಸವಾಲು ಹಾಕಿದರು.
ಅದಾನಿಯಿಂದ ಬಿಜೆಪಿಗೆ ಸಹಾಯ ?
ನಮ್ಮ ಕಾಳಜಿ ಇರುವುದು ನಮ್ಮ ದೇಶದ ಆಸ್ತಿಯನ್ನು ಅವರ ಕೈಗೆ ಕೊಡುತ್ತಿರುವ ಬಗ್ಗೆ. ವಿಮಾನ ನಿಲ್ದಾಣ, ಬಂದರು, ಸಾರ್ವಜನಿಕ ಉದ್ದಿಮೆ, ಅನೇಕ ಜಮೀನು, ಇಂಧನ ವಲಯದ ಅನೇಕ ಕೆಲಸಗಳನ್ನು ಅದಾನಿಗೆ ವಹಿಸಲಾಗಿದೆ. ಎಲ್ಲವನ್ನೂ ನ್ಯಾಯವಾಗಿ ಮಾಡಿಕೊಂಡಿದ್ದರೆ ಅಡ್ಡಿಯಿಲ್ಲ. ಸರಕಾರಿ ಜಮೀನು ಪಡೆದು, ಸಾವಿರಾರು ಕೋಟಿ ರೂ. ಸಾಲ ಪಡೆದಿದ್ದಾರೆ. ಸರಕಾರ ಅವರಿಗೆ ಸಂಪೂರ್ಣ ನೆರವು ನೀಡುವುದಲ್ಲದೆ, ಅವರ ಮೂಲಕ ಪಕ್ಷಕ್ಕೆ ಸಹಾಯ ಪಡೆದುಕೊಳ್ಳುತ್ತಿದ್ದಾರೆ ಎನಿಸುತ್ತದೆ. ಸ್ವತ್ಛ, ಶುದ್ಧ ಎಂದು ಹೊರಗಡೆ ಭಾಷಣ ಮಾಡಿದರೆ ಆಗುವುದಿಲ್ಲ. ನಡವಳಿಯೂ ಹಾಗೆ ಇರಬೇಕು ಎಂದು ಮಾತಿನಲ್ಲೇ ತಿವಿದರು.
ಕೇಂದ್ರ ಕ್ರಮ ವಹಿಸಲಿ: ಡಿಕೆಶಿ
ಕೋಟ್ಯಂತರ ರೂ. ಮೌಲ್ಯದ ಭ್ರಷ್ಟಾಚಾರ ಎಸಗಿರುವ ಗ್ರೀನ್ ಇಂಡಿಯಾ ಕಂಪೆನಿಯ ಗೌತಮ್ ಅದಾನಿ ಮತ್ತಿತರರ ವಿರುದ್ಧ ಕೇಂದ್ರ ಸರಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇನ್ನೂ ಅವರನ್ನು ಬೆಂಬಲಿಸಬೇಡಿ. ಇದು ದೇಶ, ಪ್ರಧಾನಿ ಹಾಗೂ ಕೇಂದ್ರ ಸರಕಾರದ ಗೌರವದ ಪ್ರಶ್ನೆ ಎಂದಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅದಾನಿ ಕಂಪೆನಿ ಬಗ್ಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಏಳೆಂಟು ವರ್ಷಗಳಿಂದ ಸಾರ್ವಜನಿಕರ ಗಮನ ಸೆಳೆದಿದ್ದರು. ಸಂಸತ್ ಸೇರಿದಂತೆ ಹಲವು ವೇದಿಕೆಯಲ್ಲಿ ಚರ್ಚೆಗಳಾದವು. ಆದರೆ, ಕೇಂದ್ರ ಸರಕಾರ ಮತ್ತದರ ತನಿಖಾ ಸಂಸ್ಥೆಗಳು ಇದನ್ನೆಲ್ಲ ಅಲ್ಲಗಳೆದು ಬೆಂಬಲಿಸಿದ್ದವು ಎಂದರು. ಕರ್ನಾಟಕದಲ್ಲೂ ಅದಾನಿ ಕಂಪೆನಿಯ ಸಹಭಾಗಿಗಳು, ಬೆಂಬಲಿಗರ ಆಸ್ತಿ ಇದೆ. ಅದನ್ನು ಜಪ್ತಿ ಮಾಡುವ ತಾಕತ್ತಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ. ಕರ್ನಾಟಕದಲ್ಲೂ ಬೇಕಾದಷ್ಟು ವ್ಯವಹಾರ ಇದೆ. ಇಲ್ಲ ಎನ್ನಲ್ಲ. ಇಷ್ಟು ನಮ್ಮ ನಾಯಕರು ಪ್ರಶ್ನಿಸಿಕೊಂಡು ಬಂದರೆ, ಕೇಂದ್ರ ಸರಕಾರ ರಕ್ಷಣೆ ಮಾಡಿಕೊಂಡು ಬಂದಿದೆ. ಮೊದಲು ಕೇಂದ್ರ ಸರಕಾರ ಅಪರಾಧ ಪ್ರಕ್ರಿಯೆ ಶುರು ಮಾಡಿ, ನಮಗೆ ಕ್ರಮ ಜರುಗಿಸಲು ಬರೆದರೆ ಅನಂತರ ನಾವೂ ಮಾಡುತ್ತೇವೆ ಎಂದರು.
ಕರ್ನಾಟಕದಲ್ಲಿ ಅದಾನಿ ಕಂಪೆನಿಯು 20 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ. ಮುಂದೆ ಹೂಡಿಕೆದಾರರ ಸಮಾವೇಶದಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಕಂಪೆನಿಯ ಸಿಇಒ ಹೇಳಿದ್ದರು. ಅವರೊಂದಿಗೆ ಯಾವುದೇ ಒಡಂಬಡಿಕೆ ಮಾಡಿಕೊಳ್ಳುವುದಿಲ್ಲ ಎನ್ನಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.