Mangaluru ವಿವಾಹ ನಿರಾಕರಿಸಿದ್ದ ಪ್ರಿಯತಮೆಯ ಹ*ತ್ಯೆ: ಅಪರಾಧಿಗೆ ಜೀವಾವಧಿ ಸಜೆ
Team Udayavani, Sep 5, 2024, 7:20 AM IST
ಮಂಗಳೂರು: ವಿವಾಹಕ್ಕೆ ನಿರಾಕರಿಸಿದ್ದ ಪ್ರಿಯತಮೆಯನ್ನು ಕೊಲೆಗೈದು ಆಕೆಯ ಮೊಬೈಲ್, ಎಟಿಎಂ ಕಾರ್ಡ್ ಸೊತ್ತುಗಳೊಂದಿಗೆ ಪರಾರಿಯಾಗಿದ್ದ ಯುವಕನಿಗೆ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾಂಡಾ ನಿವಾಸಿ ಸಂದೀಪ್ ರಾಥೋಡ್ (23) ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣದ ಹಿನ್ನೆಲೆ
ಸಂದೀಪ್ ರಾಥೋಡ್ ಮತ್ತು ಮೃತ ಅಂಜನಾ ವಸಿಷ್ಠ 2018ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದರು. ಬಳಿಕ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ. ಇಬ್ಬರ ನಡುವೆ ವಿವಾಹದ ಪ್ರಸ್ತಾಪ ಬಂದಿದ್ದು, ಉದ್ಯೋಗ ಸಿಕ್ಕಿದ ಬಳಿಕ ಮದುವೆಯಾಗುವ ಯೋಜನೆ ರೂಪಿಸಿದ್ದರು. ಈ ನಡುವೆ ರಾಥೋಡ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಲಿಖಿತ ಪರೀಕ್ಷೆಯ ಪೂರ್ವ ತಯಾರಿಗೆ ಮಂಗಳೂರಿಗೆ ಬಂದಿದ್ದ. ತಾವಿಬ್ಬರು ಗಂಡ-ಹೆಂಡತಿ ಎಂದು ಮನೆ ಮಾಲಕರಿಗೆ ನಂಬಿಸಿ ಅತ್ತಾವರ 6ನೇ ಕ್ರಾಸ್‌ನಲ್ಲಿರುವ ಪಾಯಿಸ್ ಕಾಟೇಜ್‌ನ ಮೊದಲ ಮಹಡಿಯಲ್ಲಿ ಅಂಜನಾ ಜತೆ ಉಳಿದುಕೊಂಡಿದ್ದ.
“ತನ್ನನ್ನು ಮರೆತು ಬಿಡು’ ಎಂದಿದ್ದಕ್ಕೆ ಹತ್ಯೆ!
ಅಂಜನಾ ಊರಿಗೆ ತೆರಳಿದ್ದ ಸಂದರ್ಭದಲ್ಲಿ ಆಕೆಯ ಮನೆಯವರು ಆಕೆಯ ವಿವಾಹಕ್ಕೆ ನಿರ್ಧರಿಸಿ ಹುಡುಗನನ್ನು ತೋರಿಸಿದ್ದರು. ತಂದೆ ತಾಯಿಯ ಆಸೆಯಂತೆ ಅವನೊಂದಿಗೆ ವಿವಾಹವಾಗಲು ಅಂಜನಾ ಒಪ್ಪಿಕೊಂಡಿದ್ದಳು. ಈ ವಿಚಾರವನ್ನು ಸಂದೀಪ್ ರಾಥೋಡ್‌ಗೆ ತಿಳಿಸಿ, ತನ್ನನ್ನು ಮರೆತು ಬಿಡುವಂತೆ ಹೇಳಿದ್ದಳು.
ಇದರಿಂದ ಕೋಪಗೊಂಡ ಆರೋಪಿ ರಾಥೋಡ್ ಆಕೆಯನ್ನು 2019ರ ಜೂ. 7ರಂದು ಪುಸಲಾಯಿಸಿ ಅತ್ತಾವರದ ತಾನು ತಂಗಿದ್ದ ಮನೆಗೆ ಕರೆಸಿ, ಆಕೆಯೊಂದಿಗೆ ಜಗಳವಾಡಿ ಟಿವಿ ಕೇಬಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ.
ಎಟಿಎಂ ಕಾರ್ಡ್, ಮೊಬೈಲ್ ದೋಚಿದ್ದ
ಅಂಜನಾರನ್ನು ಕೊಲೆ ಮಾಡಿದ ಬಳಿಕ ಮೃತಳ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಕಳವು ಮಾಡಿದ್ದ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿರುವ ಬ್ಯಾಂಕ್‌ನಿಂದ 15 ಸಾವಿ ರೂ. ಹಣವನ್ನು ವಿತ್‌ಡ್ರಾ ಮಾಡಿಕೊಂಡು ವಿಜಯಪುರ ಸಿಂದಗಿಯ ಹೊಟೇಲೊಂದರಲ್ಲಿ ಉಳಿದುಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ, ಕರೆತಂದು ತನಿಖೆ ನಡೆಸಿದ್ದರು. ಆರೋಪಿ ವಿರುದ್ಧ ಪಾಂಡೇಶ್ವರ ಠಾಣೆಯ ಆಗಿನ ಪಿಎಸ್‌ಐ ರಾಜೇಂದ್ರ ಬಿ. ಹಾಗೂ ಇನ್‌ಸ್ಪೆಕ್ಟರ್ ಎಂ. ಕುಮಾರ್ ಆರಾಧ್ಯ ಪ್ರಮುಖ ತನಿಖೆ ನಡೆಸಿ, ಇನ್‌ಸ್ಪೆಕ್ಟರ್ ಲೋಕೇಶ್ ಎ.ಸಿ. ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
45 ಸಾಕ್ಷಗಳು, 100 ದಾಖಲೆಗಳು
ಈ ಪ್ರಕರಣದಲ್ಲಿ ಒಟ್ಟು 45 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು. 100 ದಾಖಲೆಗಳನ್ನು ಗುರುತಿಸಲಾಗಿತ್ತು. ಸಂಪೂರ್ಣ ವಿಚಾರಣೆಯ ಬಳಿಕ ನ್ಯಾಯಾಧೀಶರಾದ ರವೀಂದ್ರ ಎಂ. ಜೋಶಿ ಅವರು ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆ ಕಲಂ 302ರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 3 ತಿಂಗಳ ಸಾದಾ ಸಜೆ, ಭಾರತೀಯ ದಂಡ ಸಂಹಿತೆ ಕಲಂ 380ರ ಅಪರಾಧಕ್ಕೆ 3 ತಿಂಗಳ ಸಜೆ ಹಾಗೂ 1 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದರೆ 15 ದಿನಗಳ ಸಾದ ಸಜೆ, ಭಾರತೀಯ ದಂಡ ಸಂಹಿತೆ ಕಲಂ 403ರ ಅಪರಾಧಕ್ಕೆ 3 ತಿಂಗಳ ಸಜೆ ಮತ್ತು 500 ರೂ. ದಂಡ, ತಂಡ ತೆರಳು ತಪ್ಪಿದರೆ 15 ದಿನಗಳ ಸಾದ ಸಜೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆಯಡಿ ಮೃತಳ ಮನೆಯವರಿಗೆ ಪರಿಹಾರ ನೀಡಬೇಕೆಂದು ನಿರ್ದೇಶಿಸಿ ತೀರ್ಪು ನೀಡಿದೆ.
ಸರಕಾರದ ಪರ ನಿವೃತ್ತ ಸರಕಾರಿ ಅಭಿಯೋಜಕ ಬಿ. ಶೇಖರ್ ಶೆಟ್ಟಿ ಸಾಕ್ಷಿ ವಿಚಾರಣೆ ನಡೆಸಿದ್ದಾರೆ. ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಹೆಚ್ಚುವರಿ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.