B.C Road: ಮರೀಚಿಕೆ ಆಗುತ್ತಿರುವ ಬೀದಿ ಬದಿ ವ್ಯಾಪಾರಿ ವಲಯ
ನಗರದ ಮಧ್ಯದಲ್ಲೇ ನಡೆಯುತ್ತಿದೆ ಬೀದಿ ಬದಿ ವ್ಯಾಪಾರ, ಪ್ರತ್ಯೇಕ ಜಾಗವಿಲ್ಲ
Team Udayavani, Aug 20, 2024, 1:15 PM IST
ಬಂಟ್ವಾಳ: ನಗರ ಪ್ರದೇಶ ಎಂದಾಕ್ಷಣ ಅಲ್ಲಿ ಬೀದಿ ಬದಿ ವ್ಯಾಪಾರ ಸಾಮಾನ್ಯ. ಅದಕ್ಕಾಗಿ ನಗರದಲ್ಲೇ ಪ್ರತ್ಯೇಕ ಸ್ಥಳವಿದ್ದಾಗ ಅದು ನಗರದ ಸೌಂದರ್ಯಕ್ಕೂ ಪೂರಕವಾಗಿರುತ್ತದೆ. ಆದರೆ ಬಂಟ್ವಾಳ ಪುರಸಭೆಯು ಇನ್ನೂ ಬೀದಿ ಬದಿ ವ್ಯಾಪಾರಿ ವಲಯ ಗುರುತಿಸದೇ ಇರುವುದರಿಂದ ಬಿ.ಸಿ.ರೋಡ್‌ನಲ್ಲಿ ನಗರದ ಮಧ್ಯದಲ್ಲೇ ನಡೆಯುವ ಬೀದಿ ಬದಿ ವ್ಯಾಪಾರ ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಬಿ.ಸಿ.ರೋಡ್ ದಿನೇ ದಿನೇ ಬೆಳೆಯುತ್ತಿರುವ ಪರಿಣಾಮ ನಗರಕ್ಕೆ ಬರುವ ಜನರ ಜತೆಗೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಪಾರ್ಕಿಂಗ್ ಸಮಸ್ಯೆಯೂ ಇದೆ. ಈ ನಡುವೆ ಫ್ಲೈಓವರ್ ತಳ ಭಾಗದಲ್ಲಿ ಬೀದಿ ಬದಿ ವ್ಯಾಪಾರಿಗಳು ಕುಳಿತುಕೊಳ್ಳುವುದರಿಂದ ವಾಹನಗಳ ನಿಲುಗಡೆಗೂ ತೊಂದರೆಯಾಗುತ್ತದೆ. ರವಿವಾರ ಬಂತೆಂದರೆ ಸಾಕು ಮೂವತ್ತಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳು ಫ್ಲೈಓವರ್ ತಳ ಭಾಗದುದ್ದಕ್ಕೂ ಕೂತು ವ್ಯಾಪಾರ ಮಾಡುತ್ತಿರುತ್ತಾರೆ.
ವಲಯ ಗುರುತು ಇನ್ನೂ ಕಗ್ಗಂಟು
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರದ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ತಲಪಾಡಿಯ ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗ, ಬಂಟ್ವಾಳದ ಕೊಟ್ರಮನಗಂಡಿ ಬಸ್ ನಿಲ್ದಾಣ ಹಾಗೂ ಮೆಲ್ಕಾರ್ ಗುಡ್ಡೆಯಂಗಡಿ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವಲಯ ಮಾಡುವುದಕ್ಕೆ ಸ್ಥಳ ಗುರುತಿಸಲಾಗಿತ್ತು. ಆದರೆ ಈ ಮೂರು ಸ್ಥಳಗಳಿಗೂ ಪುರಸಭೆ ಸದಸ್ಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈ ಬಿಡಲಾಗಿತ್ತು.
ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗದ ಸ್ಥಳವನ್ನು ಅಂತಿಮಗೊಳಿಸಿ ಅಲ್ಲಿ ಮೂಲ ಸೌಕರ್ಯ ಒದಗಿಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರೂ ಬಳಿಕ ಅದನ್ನು ಕೈ ಬಿಡಲಾಗಿತ್ತು. ವ್ಯಾಪಾರಿಗಳು ಒಂದು ಮೂಲೆಯಲ್ಲಿರಲಿ ಎಂದು ಜನವೇ ಬಾರದ ಜಾಗದಲ್ಲಿ ಕೂರಿಸುವುದು ಕೂಡ ಸರಿಯಲ್ಲ. ಅದರ ಬದಲು ನಗರದ ಪಕ್ಕದಲ್ಲೇ ಒಂದು ಖಾಲಿ ಜಾಗ ಗುರುತಿಸಿದರೆ ವ್ಯಾಪಾರವೂ ಸುಸೂತ್ರವಾಗಿ ನಡೆಯುತ್ತದೆ.
ನಗರದಲ್ಲಿ ಬೀದಿ ಬದಿ ವ್ಯಾಪಾರ ನಡೆಯಲೇಬಾರದು ಎಂದು ಹೇಳು ವಂತಿಲ್ಲ. ಆದರೆ ಅವುಗಳಿಗೆ ಮೂಲ ಸೌಕರ್ಯದೊಂದಿಗೆ ಪ್ರತ್ಯೇಕ ವಲಯವನ್ನು ಗುರುತಿಸಿದಾಗ ನಗರದ ಸೌಂದರ್ಯಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ವ್ಯಾಪಾರಿಗಳಿಗೆ ಬೇಕಾದ ಶೌಚಾಲಯ, ನೀರಿನ ವ್ಯವಸ್ಥೆ, ಬೀದಿ ದೀಪ ಹೀಗೆ ಸಕಲ ಸೌಲಭ್ಯ ನೀಡಿದಾಗ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ಇಲ್ಲಿ ಹಲವರಲ್ಲಿದೆ.
ನಗರದಲ್ಲಿ ಜಾಗದ ಕೊರತೆ
ನಗರದಲ್ಲಿ ವ್ಯಾಪಾರಿ ವಲಯ ಮಾಡುವುದಕ್ಕೆ ಜಾಗವೇ ಇಲ್ಲವಾಗಿದ್ದು, ಹಿಂದೆ ನಗರಕ್ಕಿಂತ ಕೊಂಚ ಹೊರ ಭಾಗದಲ್ಲಿ ಜಾಗ ಗುರುತಿಸಲಾಗಿತ್ತು. ಆದರೆ ಅಲ್ಲಿ ವ್ಯಾಪಾರ ಆಗುವುದಿಲ್ಲ ಎನ್ನುವ ಕಾರಣಕ್ಕೆ ಅದನ್ನು ಕೈಬಿಡಲಾಗಿದೆ. ಈ ಎಲ್ಲ ಕಾರಣಕ್ಕೆ ಪ್ರತ್ಯೇಕ ವಲಯ ಗುರುತಿಸುವುದು ಸಾಧ್ಯವಾಗಿಲ್ಲ.
–ಲೀನಾ ಬ್ರಿಟ್ಟೋ, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ
ಪುರಸಭೆಯಿಂದ ಗುರುತಿನ ಚೀಟಿ ವಿತರಣೆ
ಬಿ.ಸಿ.ರೋಡ್ ಪೇಟೆಯ ಜತೆಗೆ ಬಂಟ್ವಾಳ ಪೇಟೆ, ಪಾಣೆಮಂಗಳೂರು, ಕೈಕಂಬ, ಬಂಟ್ವಾಳ ಬೈಪಾಸ್, ಮೆಲ್ಕಾರ್ ಮೊದಲಾದ ಭಾಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಕಾಣಬಹುದು. ಅದರಲ್ಲೂ ಬಿ.ಸಿ.ರೋಡ್ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯ ಬದಿ ದಿನೇ ದಿನೆ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಏರುತ್ತಲೇ ಇದೆ ಎಂಬ ಆರೋಪ ಕೇಳಿ ಬರುತ್ತಿದೆ. ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಗುರುತಿನ ಚೀಟಿಯನ್ನು ವಿತರಿಸಲಾಗುತ್ತಿದೆ. ಈ ಹಿಂದೆ ಪುರಸಭೆಯು ಒಟ್ಟು 72 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.