ಮತ್ತೆ ಸ್ಥಗಿತದತ್ತ ಪ್ರಿಪೇಯ್ಡ್ ಆಟೋ ಸೇವೆ
Team Udayavani, Dec 24, 2022, 6:10 PM IST
ಹುಬ್ಬಳ್ಳಿ: ಇಲ್ಲಿನ ಸಿದ್ಧಾರೂಢಸ್ವಾಮಿ ರೈಲ್ವೆ ನಿಲ್ದಾಣದಲ್ಲಿ ಮೂರನೇ ಬಾರಿಗೆ ಉದ್ಘಾಟನೆಗೊಂಡಿರುವ ಪ್ರಿಪೇಯ್ಡ್ ಆಟೋರಿಕ್ಷಾ ಸೇವೆ ಮತ್ತೆ ಸ್ಥಗಿತಗೊಳ್ಳುವ ಸ್ಥಿತಿ ತಲುಪಿದೆ. ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಎರಡು ಬಾರಿ ಉದ್ಘಾಟನೆಗೊಂಡಿರುವ ಪ್ರಿಪೇಯ್ಡ್ ಆಟೋರಿಕ್ಷಾ ಕೇಂದ್ರ ಇದೀಗ ಮೂರನೇ ಬಾರಿಗೆ ಉದ್ಘಾಟನೆಗೊಂಡಿದ್ದು, ಈ ಬಾರಿಯೂ ಬಂದ್ ಆಗುವ ಆತಂಕದಲ್ಲಿದೆ. ಪ್ರಿಪೇಯ್ಡ್ ಆಟೋರಿಕ್ಷಾ ಕೇಂದ್ರವು ಚಾಲಕರ ಹಾಗೂ ಇಲಾಖೆಗಳ ಸರಿಯಾದ ಸಹಕಾರವಿಲ್ಲದೆ ಸ್ಥಗಿತಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಬೆಂಗಳೂರು ಮೂಲದ ಪ್ರಿಪೇಯ್ಡ ಆಟೋರಿಕ್ಷಾ ಆ್ಯಂಡ್ ಟ್ಯಾಕ್ಸಿ ಸರ್ವೀಸ್ (ಪಾಟ್ಸ್) ಸಂಸ್ಥೆ ಡಿ.3ರಂದು ನಿಲ್ದಾಣದ ಎದುರು 24/7 ಪ್ರಿಪೇಯ್ಡ್ ಸೇವೆ ಆರಂಭಿಸಿದೆ.
ಆಟೋ ಚಾಲಕರ ಸಮಸ್ಯೆ: ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋರಿಕ್ಷಾ ಕೇಂದ್ರದಡಿ ನೋಂದಾಯಿಸಿಕೊಳ್ಳದ ಆಟೋರಿಕ್ಷಾ ಚಾಲಕರು, ನಿಲ್ದಾಣದ ಹೊರಗೆ ಪ್ರಯಾಣಿಕರು ಬರುವ ಪೂರ್ವವೇ ಅವರ ಜತೆ ಬಾಡಿಗೆ ದರ ಮಾತಾಡಿಕೊಂಡು ತಮ್ಮ ಆಟೋಗಳಲ್ಲಿ ಕರೆದೊಯ್ಯುತ್ತಿದ್ದಾರೆ. ಇದನ್ನು ತಪ್ಪಿಸುವಂತೆ ಸಂಸ್ಥೆ ರೈಲ್ವೆ ಇಲಾಖೆ, ಪೊಲೀಸ್ ಇಲಾಖೆಗೆ ವಿನಂತಿಸಿಕೊಂಡಿದ್ದು, ಇದುವರೆಗೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲವಂತೆ. ಸರ್ಕಾರ ನಿಗದಿಪಡಿಸಿದ ದರದಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರು ಹೇಳಿದ ಸ್ಥಳಕ್ಕೆ ಕರೆದೊಯ್ಯುತ್ತೇವೆ. ಅವರಿಂದ ಯಾವುದೇ ಕಾರಣಕ್ಕೂ ಹೆಚ್ಚುವರಿ ಅಥವಾ ಬೇಕಾಬಿಟ್ಟಿ ಹಣ ವಸೂಲಿ ಮಾಡುವುದಿಲ್ಲ. ಆದರೆ, ನೋಂದಣಿ ಮಾಡಿಕೊಳ್ಳದ ಕೆಲವು ಆಟೋರಿಕ್ಷಾ ಚಾಲಕರು ಪ್ರಯಾಣಿಕರು ಹೊರಗೆ ಬರುವ ಪೂರ್ವವೇ 50 ರೂ.ನಲ್ಲಿ ತಲುಪಬಹುದಾದ ಸ್ಥಳಕ್ಕೆ 100ರೂ., 150 ಪಡೆಯುತ್ತಿದ್ದಾರೆ ಎಂಬುದು ಚಾಲಕರ ಅಂಬೋಣ.
ಜಿಲ್ಲಾಧಿಕಾರಿಗಳೊಂದಿಗೆ ಸಭೆ: ಪ್ರಿಪೇಯ್ಡ್ ಆಟೋರಿಕ್ಷಾ ಸೇವೆಗೆ ಆಗುತ್ತಿರುವ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳು, ಮಹಾನಗರ ಪೊಲೀಸ್ ಆಯುಕ್ತರು, ಆರ್‌ಟಿಒ ಅಧಿಕಾರಿಗಳು, ಆರ್‌ಪಿಎಫ್ ಪೊಲೀಸರ ಗಮನಕ್ಕೆ ತರಲಾಗಿದೆ. ಸದ್ಯದಲ್ಲಿಯೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಯಬೇಕಿದೆ. ಸಭೆಯಲ್ಲಿ ಇದೆಲ್ಲದಕ್ಕೂ ಪರಿಹಾರ ಸಿಕ್ಕಲ್ಲಿ ಸೇವೆ ಮುಂದುವರಿಸಲು, ಇಲ್ಲದಿದ್ದಲ್ಲಿ ಜನೆವರಿ ಎರಡನೇ ವಾರದಲ್ಲಿ ಸೇವೆ ಸ್ಥಗಿತಕ್ಕೆ ಸಂಸ್ಥೆ ಚಿಂತನೆ ನಡೆಸಿದೆ ಎನ್ನಲಾಗಿದೆ.
ಎರಡು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು: ರೈಲ್ವೆ ನಿಲ್ದಾಣದಿಂದ ಪ್ರತಿದಿನ ಸುಮಾರು ಎರಡು ಸಾವಿರಕ್ಕೂ ಅಧಿಕ ಪ್ರಯಾಣಿಕರು ನಗರದ ವಿವಿಧೆಡೆ ಪ್ರಯಾಣಿಸುತ್ತಾರೆ. ಅವರಲ್ಲಿ ಕನಿಷ್ಟ 200 ಮಂದಿ ಪ್ರಿಪೇಯ್ಡ್ ಆಟೋರಿಕ್ಷಾಗಳಲ್ಲಿ ಸಂಚರಿಸಿದರೂ ಸೆಂಟರ್‌ನ ಖರ್ಚು ವೆಚ್ಚ ಸರಿದೂಗಿಸಿಕೊಳ್ಳಬಹುದು. ಆದರೆ ಅದು ಸಾಧ್ಯವಾಗುತ್ತಿಲ್ಲ. ಇದರಿಂದ ಪ್ರಿಪೇಯ್ಡ ಆಟೋ ಸೆಂಟರ್ ನಡೆಸುವುದು ಕಷ್ಟದಾಯಕವಾಗಿದೆ.
ಕೇವಲ 678 ರೂ. ಸಂಗ್ರಹ
ರೈಲ್ವೆ ನಿಲ್ದಾಣದ ಮುಖ್ಯದ್ವಾರದಿಂದ 75 ಆಟೋರಿಕ್ಷಾಗಳು, ಅಂಡರ್ ಗ್ರೌಂಡ್‌ನಿಂದ 120 ಆಟೋರಿಕ್ಷಾಗಳು ಹಾಗೂ ಹಿಂಭಾಗದ ದ್ವಾರದಿಂದ 30 ಆಟೋರಿಕ್ಷಾಗಳಿಗೆ ಅವಕಾಶ ನೀಡಲಾಗಿದೆ. ಡಿ.1ರಿಂದ ಡಿ. 16ರವರೆಗೆ ಪ್ರಿಪೇಯ್ಡ್ ಕೌಂಟರ್‌ನಲ್ಲಿ 226 ಟಿಕೆಟ್ ಗಳು ಮಾತ್ರ ಮಾರಾಟವಾಗಿದೆ.
ಅದರಿಂದ ಸೇವಾ ಶುಲ್ಕ ಕೇವಲ 678 ರೂ. ಸಂಗ್ರಹವಾಗಿದೆ. ಇದು ಹೀಗೆ ಮುಂದುವರಿದರೆ ಮೂವರು ಸಿಬ್ಬಂದಿಗೆ ವೇತನ, ವಿದ್ಯುತ್ ಶುಲ್ಕ, ಇಂಟರ್‌ನೆಟ್ ಶುಲ್ಕ ಹಾಗೂ ಇತರೆ ವೆಚ್ಚ ಭರಿಸಲು ಸಾಧ್ಯವಾಗದೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರುವುದು ಅನಿವಾರ್ಯ ಎಂದು ಹುಬ್ಬಳ್ಳಿ ಪಾಟ್ಸ್ ಅಧ್ಯಕ್ಷ ಎನ್. ಎನ್. ಇನಾಮದಾರ್ ತಿಳಿಸಿದ್ದಾರೆ.
ಪ್ರಿಪೇಯ್ಡ್ ದರ ಪಟ್ಟಿ
ಸೇವಾ ಶುಲ್ಕ ಪ್ರತಿ ಬಾಡಿಗೆಗೆ 5 ರೂ.; ಕನಿಷ್ಟ ಬಾಡಿಗೆ ದರ 1.6 ಕಿಮೀಗೆ 30 ರೂ.; ನಂತರದ ಪ್ರತಿ ಒಂದು ಕಿಮೀಗೆ 15 ರೂ.; ಕಾಯುವ ದರ ಮೊದಲ 15 ನಿಮಿಷ ಉಚಿತ; ನಂತರ ಪ್ರತಿ 15 ನಿಮಿಷಕ್ಕೆ 5 ರೂ.; ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ದರ ನಿಗದಿಪಡಿಸಲಾಗಿದೆ.
ಪ್ರಿಪೇಯ್ಡ್ ಆಟೋರಿಕ್ಷಾ ಕೇಂದ್ರ ಈಗಷ್ಟೇ ಆರಂಭವಾಗಿದ್ದು, ಇಲಾಖೆಯಿಂದ ಎಲ್ಲ ಸಹಕಾರ ನೀಡಲಾಗುತ್ತದೆ. ಈಗಾಗಲೇ ಆಟೋ ಚಾಲಕರೊಂದಿಗೆ ಸುಮಾರು ಒಂದೂವರೆ ಗಂಟೆ ಸಭೆ ನಡೆಸಿ ಅವರಿಗೆ ತಿಳಿಸಿ ಹೇಳಲಾಗಿದೆ. ಅವರ ಬೇಡಿಕೆ ಹಾಗೂ ಪ್ರಯಾಣಿಕರ ಗಮನದಲ್ಲಿಟ್ಟುಕೊಂಡು ದರ ನಿಗದಿಪಡಿಸಲಾಗಿದೆ. ಆಟೋ ಚಾಲಕರು ಅದಕ್ಕೆ ಸಹಕಾರ ನೀಡಬೇಕು. ದಾಖಲಾತಿಗಳಿಲ್ಲದ ಆಟೋಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಜಿಲ್ಲಾಡಳಿತ ಮಾಡಿರುವ ಆದೇಶಕ್ಕೆ ಎಲ್ಲರೂ ಬೆಂಬಲ ನೀಡಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಅನಿವಾರ್ಯ.
ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ
ಪ್ರಿಪೇಯ್ಡ್ ಆಟೋರಿಕ್ಷಾ ಸೆಂಟರ್‌ನಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಆದರೆ ಕೆಲವಷ್ಟು ಆಟೋರಿಕ್ಷಾ ಚಾಲಕರಿಂದ ಸಮಸ್ಯೆಯಾಗುತ್ತಿದ್ದು, ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿವೇಶನದ ನಂತರ ಅವರು ಸಭೆ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾದಲ್ಲಿ ಸೆಂಟರ್ ಮುಂದುವರಿಯಲಿದೆ. ಇಲ್ಲದಿದ್ದಲ್ಲಿ ಜ. 15ರಂದು ನಮ್ಮ ಸೆಂಟರ್‌ಗೆ ಕೊನೆಯ ದಿನವಾಗಬಹುದು.
ಎನ್.ಎನ್. ಇನಾಮದಾರ,
ಹುಬ್ಬಳ್ಳಿ ಪಾಟ್ಸ್ ಅಧ್ಯಕ್ಷ
ಬಸವರಾಜ ಹೂಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.