ಮೀಸಲಾತಿ ವಿಚಾರ; ದೇವೆಗೌಡರ ಕೊಡುಗೆ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ: ಎಚ್ ಡಿಕೆ
Team Udayavani, Oct 28, 2022, 7:01 PM IST
ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಎಸ್ಟಿ ಸಮುದಾಯದವರಿಗೆ ಕೊಟ್ಟಿರುವ ಮೀಸಲಾತಿ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಮಾಡಲು ನಾನು ಸಿದ್ಧನಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಹಾಗೂ ರಾಷ್ಟ್ರೀಯ ಪರಿಷತ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರ ಅವರು ತಳ ಮಟ್ಟದ ಹಾಗೂ ದುರ್ಬಲ ಸಮುದಾಯಗಳನ್ನು ಗುರುತಿಸಿ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ದೇವೇಗೌಡರು ಮಾಡಿದರು. ಮೀಸಲು ಸೌಲಭ್ಯ ಕೊಟ್ಟು ಮೇಲೆತ್ತುವ ಕಾರ್ಯ ಮಾಡಿದರು. ಈ ಬಗ್ಗೆ ಚರ್ಚೆ ನಡೆಯಲು ಕೆಲವರು ಬಿಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ:
ಜೆಡಿಎಸ್ಗೆ 20- 25 ಸೀಟ್ ಬರುತ್ತವೆ ಎಂದು ಹೇಳುತ್ತಿದ್ದಾರೆ. ಆದರೆ ಅದನ್ನು ಬಿಟ್ಟುಬಿಡಿ. ನನ್ನ ಜೊತೆ ನೀವು ಕೈ ಜೋಡಿಸಿ ಜನರ ಮುಂದೆ ನಮ್ಮ ಯೋಜನೆ ಬಗ್ಗೆ ತಿಳಿಸಿ. ನೀವು ಎಷ್ಟು ಜನರ ಮುಂದೆ ಹೋಗುತ್ತೀರೋ ಅಷ್ಟು ನಮ್ಮ ಪಕ್ಷಕ್ಕೆ ಒಳ್ಳೆಯ ಫಲಿತಾಂಶ ಬರುತ್ತದೆ. ರಾಷ್ಟ್ರೀಯ ಪಕ್ಷಗಳ ಪೂರ್ವ ಸಮೀಕ್ಷೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಈ ರಾಜ್ಯದಲ್ಲಿ ಸ್ವಾತಂತ್ರ್ಯವಾಗಿ ಅಧಿಕಾರಕ್ಕೆ ಬರುತ್ತೇವೆ ಎಂದು ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಸಲಹೆ ನೀಡಿದರು.
ದೇವೇಗೌಡರಿಗೆ ಅಭಿನಂದನೆ:
ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಯ್ಕೆ ಮಾಡಿದ್ದಕ್ಕೆ ಕಾರ್ಯಕಾರಿಣಿ ಸಮಿತಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿಗಳು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿ ನಮಗೆಲ್ಲ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.
ಕರ್ನಾಟಕ ಮತ್ತು ಕೇರಳದಲ್ಲಿ ನಮ್ಮ ಶಕ್ತಿ ಉಳಿಸಿಕೊಂಡು ಬಂದಿದ್ದೇವೆ. 13 ರಾಜ್ಯಗಳ ರಾಜ್ಯಾಧ್ಯಕ್ಷರು ಈ ಸಭೆಯಲ್ಲಿ ಭಾಗವಹಿಸಿರುವುದು ಸಂತಸ ಉಂಟು ಮಾಡಿದೆ. ಸಮಸ್ಯೆ ಏನೇ ಇದ್ದರೂ ತಮ್ಮ ತಮ್ಮ ರಾಜ್ಯಗಳಲ್ಲಿ ಪಕ್ಷ ಉಳಿಸುವ ಕೆಲಸವನ್ನು ನಾಯಕರು ಮಾಡಿದ್ದಾರೆ ಎಂದು ಅವರು ಹೇಳಿದರು.
ಪಂಚರತ್ನ ರಥಯಾತ್ರೆ:
ಜನರ ಬದುಕು ಕಟ್ಟಿಕೊಳ್ಳಲು ಪಂಚರತ್ನ ಎಂಬ 5 ಯೋಜನೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ರಥಯಾತ್ರೆಗೆ ನವೆಂಬರ್ 1ರಂದು ಚಾಲನೆ ನೀಡುತ್ತಿದ್ದೇವೆ. ನಿನ್ನೆ ಸಾಂಕೇತಿಕವಾಗಿ ಪಂಚರತ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ನವೆಂಬರ್ 1ರಿಂದ 35 ತಾಲ್ಲೂಕಿನಲ್ಲಿ 35 ದಿನ ರಥಯಾತ್ರೆ ಮಾಡುತ್ತೇವೆ. ಮುಳಬಾಗಿಲಿನಲ್ಲಿ ಗಣಪತಿ ಮತ್ತು ಆಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತೇವೆ. ಪ್ರತಿ ಹಳ್ಳಿ ಹಳ್ಳಿಗೂ ಕಾರ್ಯಕರ್ತರು ಭೇಟಿ ನೀಡಿ ಕಾರ್ಯಕ್ರಮ ಬಗ್ಗೆ ತಿಳಿಸಬೇಕು ಎಂದು ಕರೆ ನೀಡಿದರು.
ಪಂಚರತ್ನ ಯೋಜನೆಯಲ್ಲಿ ವೃದ್ಧರಿಗೆ 5 ಸಾವಿರ ಮಾಶಾಸನ, ವಿಧವೆಯರಿಗೆ 2,500 ಸಾವಿರ ವಿಧವಾ ವೇತನ ಜಾರಿಗೆ ತರುವ ಕಾರ್ಯಕ್ರಮ ರೂಪಿಸಲಾಗಿದ್ದು, ಇದನ್ನು ಜನರಿಗೆ ತಿಳಿಸಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಕೃಷ್ಣ ಮತ್ತು ಮಹಾದಾಯಿ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ಪಾದಯಾತ್ರೆ ಮಾಡಲು ಹೊರಟಿದೆ. ಐದು ವರ್ಷ ಸರ್ಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು.
ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಬಿ.ಎಂ. ಫಾರೂಕ್, ಜಫ್ರುಲ್ಲಾ ಖಾನ್, ಕೇರಳ ಸರ್ಕಾರದ ಇಂಧನ ಸಚಿವ ಕೃಷ್ಣನ್ ಕುಟ್ಟಿ, ಕೇರಳದ ಶಾಸಕ, ಜೆಡಿಎಸ್ ಘಟಕ ಅಧ್ಯಕ್ಷ ಮ್ಯೂಥ್ಯೂ ಟಿ.ಥಾಮಸ್, ಮಾಜಿ ಶಾಸಕ ನಾಡಾರ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಪ್ರಚಾರ ವಾಹನಗಳಿಗೆ ಪೂಜೆ:
ಇದಾದ ನಂತರ ಕುಮಾರಸ್ವಾಮಿ ಅವರು ಪಂಚರತ್ನ ಪ್ರಚಾರ ವಾಹನಗಳಿಗೆ ಪಕ್ಷದ ಕಚೇರಿ ಮುಂದೆಯೇ ಪೂಜೆ ನೆರವೇರಿಸಿ ಅವುಗಳಿಗೆ ಹಸಿರು ನಿಶಾನೆ ತೋರಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.