Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
Team Udayavani, Jan 10, 2025, 10:53 AM IST
ಹೊಸ ವರ್ಷದ ಆರಂಭದಲ್ಲೇ ಕನ್ನಡ ಚಿತ್ರರಂಗದ ಹಳೆಯ ಸಮಸ್ಯೆಯೊಂದು ಮತ್ತೆ ತಲೆದೋರಿದೆ. ಅದು ಪರಭಾಷಾ ಸಿನಿಮಾಗಳಿಂದ ಕನ್ನಡ ಚಿತ್ರಗಳಿಗೆ ಆಗುವ ಚಿತ್ರಮಂದಿರ ಸಮಸ್ಯೆ. ಒಂದೇ ಮಾತಲ್ಲಿ ಹೇಳುವುದಾದರೆ ಈ ಸಮಸ್ಯೆಯನ್ನು ಬಗೆಹರಿಸುವ ಆಸಕ್ತಿ, ಅದಕ್ಕೊಂದು ಕಾನೂನು, ನಿಯಮ ರೂಪಿಸುವ ಉತ್ಸಾಹ ನಮ್ಮ ಸ್ಯಾಂಡಲ್‌ವುಡ್ ಮಂದಿಗೆ, ಸರ್ಕಾರಕ್ಕೆ ಇಲ್ಲವೋ ಅಥವಾ ನಮಗ್ಯಾಕೆ ಈ ಉಸಾಬರಿ ಎಂಬ ಅಸಡ್ಡೆಯ ಫಲವೋ ಆಗಾಗ ಕನ್ನಡ ನಿರ್ಮಾಪಕರು ತೊಂದರೆಗೆ ಸಿಲುಕುತ್ತಿರುವುದಂತೂ ಸತ್ಯ.
ಈ ವಾರ ಮತ್ತೆ ಕನ್ನಡ ನೆಲದಲ್ಲಿ ನಮ್ಮ ಕನ್ನಡ ಸಿನಿಮಾಕ್ಕೆ ಚಿತ್ರಮಂದಿರ ಸಿಗುತ್ತಿಲ್ಲ ಎಂಬ ಕೂಗು ಜೋರಾಗಿದೆ. ಮತ್ತೆ ಮಂಡಳಿ ಮುಂದೆ ದೂರು. ಅಲ್ಲೊಂದು ಸಭೆ, ಚರ್ಚೆ.. ಎಲ್ಲವೂ ನಡೆಯುತ್ತಿದೆ. ಈ ವಾರದ ಸಮಸ್ಯೆಗೆ ಕಾರಣ “ಗೇಮ್ ಚೇಂಜರ್’.
ರಾಮ್‌ಚರಣ್ ತೇಜಾ ನಟನೆಯ ತೆಲುಗು ಚಿತ್ರ “ಗೇಮ್ ಚೇಂಜರ್’. ಈ ಚಿತ್ರ ಇಂದು ತೆರೆಕಾಣುತ್ತಿದೆ. ಪ್ರತಿ ಬಾರಿಯೂ ಪರಭಾಷಾ ಸ್ಟಾರ್ ಚಿತ್ರಗಳನ್ನು ಇಲ್ಲಿನ ವಿತರಕರು ದೊಡ್ಡ ಮೊತ್ತ ಕೊಟ್ಟ ಖರೀದಿಸುತ್ತಾರೆ. ಹಾಕಿದ ಬಂಡವಾಳವನ್ನು ವಾರದೊಳಗೆ ಡಬಲ್ ಮಾಡಲು ಸಣ್ಣ ಸಣ್ಣ ಊರಿನ ಚಿತ್ರಮಂದಿರಗಳನ್ನು ಬಿಡದೇ ಆ ಸಿನಿಮಾಗಳನ್ನು ಹಾಕುತ್ತಾರೆ. ಈ ಬಾರಿಯೂ “ಗೇಮ್ ಚೇಂಜರ್’ ಚಿತ್ರ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಇದರ ನೇರ ಎಫೆಕ್ಟ್ ಆಗಿರುವುದು ಈ ವಾರ ತೆರೆಗೆ ಸಿದ್ಧವಾಗಿರುವ “ಛೂ ಮಂತರ್’ ಹಾಗೂ “ಸಂಜು ವೆಡ್ಸ್ ಗೀತಾ-2′ ಚಿತ್ರಗಳ ಮೇಲೆ ನೇರವಾಗಿ ಆಗಿದೆ. ಬಯಸಿದ ಚಿತ್ರಮಂದಿರಗಳು ಸಿಗುತ್ತಿಲ್ಲ. ಅಪ್ಪಟ ಕನ್ನಡ ಸೆಂಟರ್‌ಗಳೆಂದು ಕರೆಸಿಕೊಳ್ಳುವ ಚಿತ್ರಮಂದಿರಗಳು ಕೂಡಾ ತೆಲುಗು ಚಿತ್ರಗಳತ್ತ ವಾಲಿವೆ ಎನ್ನುವುದು ತಂಡದ ಆರೋಪ. ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಬಗೆಹ ರಿಸಲೇ ಬೇಕು, ಇದಕ್ಕೊಂದು ಶಾಶ್ವತ ಪರಿಹಾರ ಕಂಡು ಕೊಳ್ಳಬೇಕು ಎಂಬ ದೃಢ ನಿರ್ಧಾರ, ಸಂಕಲ್ಪ ಯಾರಲ್ಲೂ ಇಲ್ಲ. ಇದರ ಹಿಂದಿನ ಕಾರಣಗಳು ಹಲವು.
ಬೇರೆ ರಾಜ್ಯಗಳಲ್ಲಿ ಕನ್ನಡ ಚಿತ್ರಗಳು 10 ಚಿತ್ರಮಂದಿರ ಬಿಡಿ, 10 ಶೋ ಪಡೆಯಲು ಒದ್ದಾಡಬೇಕು. ಅಲ್ಲಿನ ಮಂದಿ ತಮ್ಮ ನೆಲದ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುವ ಜೊತೆಗೆ ಪರಭಾಷಾ ಚಿತ್ರಗಳನ್ನು ನಿರ್ದಾಕ್ಷಿಣ್ಯವಾಗಿ ನಿಯಂತ್ರಿಸುತ್ತಿದ್ದಾರೆ. ಆದರೆ, ನಮ್ಮಲ್ಲಿನ “ಮೃದು’ ಧೋರಣೆಯೇ ಹಳೆಯ ಸಮಸ್ಯೆಯೊಂದು ಇಷ್ಟು ವರ್ಷ ವಾದರೂ ಬಗೆಹರಿಯದೇ ಮುಂದುವರೆಯುತ್ತಲೇ ಇದೆ.
ಫೆಬ್ರವರಿಯಲ್ಲಿ ಮತ್ತೆ ಉಲ್ಬಣ
ಸದ್ಯ ಈ ವಾರ ಎದ್ದಿರುವ ಚಿತ್ರಮಂದಿರ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದರೂ ಫೆಬ್ರವರಿಯಲ್ಲಿ ಮತ್ತೆ ಉಲ್ಬಣಿಸಲಿದೆ. ಅದಕ್ಕೆ ಕಾರಣ ಫೆಬ್ರವರಿಯಲ್ಲಿ ಕನ್ನಡ ಸಿನಿಮಾಗಳ ಜಾತ್ರೆ. ಪ್ರತಿ ವರ್ಷ ಫೆಬ್ರವರಿಯಲ್ಲಿ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತವೆ. ಲವ್‌ಸ್ಟೋರಿಗಳು ಪ್ರೇಮಿಗಳ ದಿನವನ್ನು ಟಾರ್ಗೆಟ್ ಮಾಡಿ ಬಿಡುಗಡೆಯಾದರೆ, ಅದರ ಹಿಂದಿನ-ಮುಂದಿನ ವಾರಗಳಲ್ಲೂ ಸಾಕಷ್ಟು ಸಿನಿಮಾಗಳು ಬರುತ್ತವೆ.
ಈ ಬಾರಿಯೂ ಕನ್ನಡದಿಂದ ಸಾಕಷ್ಟು ಸಿನಿಮಾಗಳು ಫೆಬ್ರವರಿಯಲ್ಲಿ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಫೆ. 7 ರಿಂದ ಆರಂಭವಾಗಿ ಫೆ.28ರವರೆಗೆ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುವ ಮೂಲಕ ಚಿತ್ರಮಂದಿರ ಸಮಸ್ಯೆ ಕಾಣಿಸಿಕೊಳ್ಳಲಿದೆ. 2024ರಲ್ಲಿ ಫೆಬ್ರವರಿಯಲ್ಲಿ ಬರೋಬ್ಬರಿ 30 ಚಿತ್ರಗಳು ತೆರೆಕಂಡಿದ್ದವು. ಈ ವರ್ಷವೂ 25ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಲಿವೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.