ಮತದಾರ ನಿಗೂಢ-ಪಕ್ಷಗಳಿಗೆ ದುಗುಡ
ಸಾಗರದ ಮತದಾರ ನಿಲುವು ಬದಲಿಸುವ ನಿರೀಕ್ಷೆ ಭವಿಷ್ಯದ ತಳಮಳಗಳಿಗೆ ಪ್ರಸ್ತುತದ ಭ್ರಮೆಗಳ ತಾತ್ಕಾಲಿಕ ಮುಲಾಮು
Team Udayavani, Apr 14, 2019, 1:43 PM IST
ಸಾಗರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡಾ ಸಿದ್ಧವಾಗಿದ್ದು, ಪ್ರಚಾರ ಎಗ್ಗಿಲ್ಲದೆ ಸಾಗಿದೆ. ಈ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಮತದಾರ ಮಾತ್ರ ದಿನದಿಂದ ದಿನಕ್ಕೆ ನಿಗೂಢನಾಗುತ್ತ ಹೋಗುತ್ತಿದ್ದಾನೆ. ವಿಧಾನಸಭೆ ಚುನಾವಣೆ ಲೆಕ್ಕಾಚಾರವೇ ಬೇರೆ, ಉಪ ಚುನಾವಣೆಯ ಲೆಕ್ಕಾಚಾರವೇ ಉಲ್ಟಾಪಲ್ಟಾ ಆಗಿ ಈ ಬಾರಿಯೂ ಅಚ್ಚರಿ ಫಲಿತಾಂಶ ಹೊರಬರಬಹುದೇ ಎಂಬ ಕುತೂಹಲ ಮೂಡಿದೆ.
2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ವಿಶ್ಲೇಷಕರು ಕಾಗೋಡು ತಿಮ್ಮಪ್ಪ, ಗೋಪಾಲಕೃಷ್ಣ ಬೇಳೂರು ಹಾಗೂ ಬಿ.ಆರ್. ಜಯಂತ್ ಹಿಂದಿನ ಚುನಾವಣೆಯಲ್ಲಿ ಪಡೆದ ಮತಗಳನ್ನು ಸೇರಿಸಿ, ಅದರಲ್ಲಿ ಶೇ.10ರಷ್ಟು ಸವಕಳಿ ಎಂದು ಕಳೆದರೂ ಗೆಲುವು ಗ್ಯಾರಂಟಿ ಎಂಬ ಲೆಕ್ಕ ಮಂಡಿಸುತ್ತಿದ್ದರೆ, ಇತ್ತ ಬಿಜೆಪಿಯ ಎಚ್. ಹಾಲಪ್ಪ ಎಂಟು ಸಾವಿರ ಮತಗಳಿಂದ ಜಯಬೇರಿ ಬಾರಿಸಿದ್ದರು. ಈ ಜಯ ಖುದ್ದು ಹಾಲಪ್ಪಗೆ, ಬಿಜೆಪಿ ಪ್ರಮುಖರಿಗೆ ಅಚ್ಚರಿ ತಂದಿತ್ತು. ನಂತರ ಹೆಚ್ಚು ವ್ಯವಸ್ಥಿತವಾಗಿ ಐದು ತಿಂಗಳ ಕೆಳಗೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ
ಸಾಗರದಲ್ಲಿ ಬೇರುಗಳೇ ಇಲ್ಲದ ಜೆಡಿಎಸ್ ಎಂಟು ಸಾವಿರ ಮತಗಳ ಮುನ್ನಡೆ ಪಡೆದು ಹಾಲಪ್ಪ ಅವರ ಮುಖಭಂಗಕ್ಕೆ ಕಾರಣವಾಗಿತ್ತು.
ಹೀಗಾಗಿಯೇ ಸಾಗರದ ಮತದಾರರನ್ನು ಅರ್ಥ ಮಾಡಿಕೊಳ್ಳಲಾಗದೆ ರಾಜಕೀಯ ಪಕ್ಷಗಳು ತಲೆ ಕೆರೆದುಕೊಳ್ಳುವಂತಾಗಿದೆ. ಕಳೆದ ಲೋಕಸಭಾ ಚುನಾವಣೆಯ
ಸಂದರ್ಭದಲ್ಲಿ ಪರಿಸ್ಥಿತಿ ತುಸು ಭಿನ್ನವಾಗಿತ್ತು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನಿರ್ದೇಶನದಲ್ಲಿ ಕಾಂಗ್ರೆಸ್ ತನ್ನವರಲ್ಲದ ಮಧು ಬಂಗಾರಪ್ಪ ಅವರ ಪರವಾಗಿ ವಿಶೇಷ ಪ್ರಯತ್ನಕ್ಕೆ ಮುಂದಾಗಿತ್ತು. ವಿಧಾನ ಪರಿಷತ್‌ನ ಅವಕಾಶ ಹಾಗೂ ಮಂತ್ರಿ ಪದವಿಯ ಕುರಿತಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾಗೋಡು ಅವರಿಗೆ ಕೊಟ್ಟ ಮಾತು ಕೂಡ ಸ್ಫೂರ್ತಿಯಾಗಿ ಕೆಲಸ ಮಾಡಿತ್ತು. ಆದರೆ ಸಾಗರದಲ್ಲಿ ಮುನ್ನಡೆಯ ಹೊರತಾಗಿಯೂ ಮಧು ಸೋಲು ಕಂಡಿದ್ದು ಸಿಎಂ ಮಾತುಗಳನ್ನು
ಸಾಕಾರಗೊಳಿಸಿಕೊಳ್ಳುವುದಕ್ಕೆ ತಡೆಯಾಗಿತ್ತು.
ಈಗಂತೂ ಆ ರೀತಿಯ ಆಮಿಷಗಳಿಲ್ಲದಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿ ನಿರುತ್ಸಾಹವೇ ಇದೆ. ಒಂದು ಕಾಲದಲ್ಲಿ ಶಾಸಕರನ್ನೇ ನೀಡಿದ್ದ ಸಾಗರದಲ್ಲಿ ಈಗ ಜೆಡಿಎಸ್‌ಗೆ ನೆಲಗಟ್ಟೇ ಇಲ್ಲ. ಇದ್ದೊಬ್ಬ ರವಿ ಕುಗ್ವೆ ಅಷ್ಟಿಷ್ಟು ಧ್ವನಿ ಮಾಡುತ್ತಿದ್ದವರು ಬಿಜೆಪಿಗೆ ವಲಸೆ ಹೋಗಿದ್ದಾರೆ. ಕಾಂಗ್ರೆಸ್‌ನಲ್ಲಂತೂ ಸ್ಥಳೀಯ ಪದಾಧಿಕಾರಿಗಳ ವಿಚಾರದ ಭಿನ್ನಮತ ಗುಪ್ತಗಾಮಿನಿಯಂತೆ ಚಾಲ್ತಿಯಲ್ಲಿದ್ದು ನಿಜವಾದ ಅರ್ಥದಲ್ಲಿ ಮಧು ಬಂಗಾರಪ್ಪ ಅವರ ಪರ ಪ್ರಚಾರ ವ್ಯಾಪಕತೆ ಪಡೆದಿಲ್ಲ. ಕ್ಷೇತ್ರದಲ್ಲಿನ ಸರಿಸುಮಾರು 1.90,000 ಮತದಾರರಲ್ಲಿ ಈಡಿಗರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರ ಮತಗಳು ನಿರ್ಣಾಯಕ ಎಂಬ ಮಾತು ಕೂಡ ವಿಧಾನಸಭಾ
ಚುನಾವಣೆಯಲ್ಲಿ ಹುಸಿಯಾಗಿದೆ.
ಈಡಿಗೇತರ ಮತಗಳು ಧ್ರುವೀಕರಣಗೊಂಡರೆ ಯಾವ ಸಮರ್ಥ ಅಭ್ಯರ್ಥಿಯೂ ಸೋಲಬಹುದು ಎಂಬುದನ್ನು ಮತದಾರ ಕಾಗೋಡು ಅವರಿಗೆ ಅರ್ಥ ಮಾಡಿಸಿದ್ದಾನೆ. ಹಿಂದುಳಿದ
ವರ್ಗಗಳು ಹಾಗೂ ಬ್ರಾಹ್ಮಣರ ಮತಗಳು ಹಾಲಪ್ಪ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಸುಳ್ಳಲ್ಲ. ಈಡಿಗರು, ಪರಿಶಿಷ್ಟ ಜಾತಿ ವರ್ಗಕ್ಕೂ ಬಿಜೆಪಿ ಅಪಥ್ಯವಾಗುತ್ತಿಲ್ಲ. ಈ ಚುನಾವಣೆಯಲ್ಲಿ ಈಡಿಗ ಯುವ ಸಮುದಾಯ ಯಾವ ಒಲವು ತೋರಿಸುತ್ತದೆ ಎಂಬ ತರ್ಕದ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿಂತಿದೆ. ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ 8 ಸಾವಿರ ಲೀಡ್ ಕೊಟ್ಟಿದ್ದ
ಕ್ಷೇತ್ರದಲ್ಲಿ ಮತ್ತೊಮ್ಮೆ ಮ್ಯಾಜಿಕ್ ನಡೆಯುವ ವಿಶ್ವಾಸದಲ್ಲಿ ಮೈತ್ರಿ ಪಕ್ಷ ಇದ್ದರೆ, ಅದನ್ನು ತಲೆಕೆಳಗಾಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.
ವಾಸ್ತವವಾಗಿ ಬಿಜೆಪಿ ಸ್ಥಳೀಯವಾಗಿ ಮತ ಆಕರ್ಷಣೆಯ ಅಂಶಗಳನ್ನು ಕಳೆದುಕೊಂಡಿದೆ. ವಿರೋಧ ಪಕ್ಷದ ನಾಯಕರಾದ
ಬಿ.ಎಸ್. ಯಡಿಯೂರಪ್ಪ ಅವರು ಹೆಚ್ಚೆಂದರೆ ಲಿಂಗಾಯತರ ನಾಯಕರಾಗಿ ಕಾಣುತ್ತಿದ್ದಾರೆಯೇ ವಿನಃ ಮೊದಲಿನಂತೆ
ರೈತರ ಭರವಸೆಯಾಗಿ ಉಳಿದಿಲ್ಲ. ಕಳೆದ ಚುನಾವಣೆಯಲ್ಲಿ ಈ ಭಾಗದ ಜನರ ತುಮರಿ ಸೇತುವೆ ವಿಚಾರದಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಕೈಯಲ್ಲಿ ಉದ್ಘಾಟನೆ ಮಾಡಿಸಿದ ದೊಡ್ಡ ನಾಟಕದ ನಂತರ ಜನ ಬಿಜೆಪಿಯ ಭರವಸೆಗಳಿಗೆ
ಬೆದರುತ್ತಿದ್ದಾರೆ. ಶಾಸಕ ಹಾಲಪ್ಪ ಅವರ ಚಟುವಟಿಕೆಗಳಲ್ಲಿ
ಭಿನ್ನತೆ ಕಾಣುತ್ತಿದ್ದೆಯಾದರೂ, ಜನರ ಸಂಕಟಗಳಿಗೆ ಸೆಟೆದು ನಿಲ್ಲುವ ಗುಣ ಕಾಣದಿರುವುದರಿಂದ ಮತದಾರ ಅವರ ಲೆಕ್ಕದಲ್ಲಿ ಮತ ಚಲಾಯಿಸಲು ಮುಂದಾಗುವುದು ಸಂಶಯ ಎಂಬ ವಿಶ್ಲೇಷಣೆ ಕೇಳಿಬಂದಿದೆ.
ಎರಡು ಬಾರಿಯ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಕಾಂಗ್ರೆಸ್- ಜೆಡಿಎಸ್‌ಗಳು ಕೂಡ ಮತ ತಂದುಕೊಡಬಲ್ಲ ನಾಯಕ ಎಂಬ ನಂಬಿಕೆಯನ್ನು ಕಳೆದುಕೊಂಡಿವೆ. ತಾಲೂಕಿನಲ್ಲಿ ಮಂಗನ ಕಾಯಿಲೆಯ ಆತಂಕ ಮೂಡಿಸಿದಾಗ ಕಾಣಿಸಿಕೊಳ್ಳದೆ, ಈಗ ಮಾಟಮಂತ್ರದ ನೆಪ ಹೇಳುವ ಮೂಲಕ ಬೇಳೂರು ಹಾಸ್ಯಾಸ್ಪದರಾಗಿ ಜನರಿಗೆ ಕಾಣಿಸುತ್ತಿದ್ದಾರೆ. ಚುನಾವಣಾ ರಾಜಕಾರಣದಲ್ಲಿ ಪಳಗಿದ ಪಂಟರ್‌ರಂತೆ ಕೆಲಸ ಮಾಡುತ್ತಿದ್ದ ಬೇಳೂರು ಮಾಧ್ಯಮಗಳಲ್ಲಿ ವೈರಲ್ ಆಗುವ ಹೇಳಿಕೆ ಕೊಡುವುದಕ್ಕೆ ಸೀಮಿತವಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೋದಿ ಅವರ ಚರಿಷ್ಮಾವನ್ನೇ ಹೆಚ್ಚಾಗಿ ನಂಬಿಕೊಂಡಿದೆ. ಜನಕ್ಕೂ ವಿಷಯಗಳಿಲ್ಲದೆ, ಪರ್ಯಾಯ ನಾಯಕತ್ವದ ಬಗ್ಗೆ ಭರವಸೆ ಹುಟ್ಟದಿರುವುದರಿಂದ ಈ ಬಾರಿಯೂ ಮೋದಿ ಮತ ಗಳಿಸಿಕೊಡುವ ಪ್ರಾಡಕ್ಟ್ ಎಂಬ ಅನಿಸಿಕೆ ಬಲವಾಗಿದೆ. ಸಾಗರ ತಾಲೂಕಿನಲ್ಲಿಯೂ ವ್ಯವಸ್ಥಿತ ಪ್ರಚಾರ ವೈಖರಿ, ಯುದ್ಧ ದೇಶಭಕ್ತಿ ಹಾಗೂ ಮೋದಿ ಬಿಜೆಪಿ ಪರವಾಗಿ ಹೆಚ್ಚು ಕೆಲಸ ಮಾಡಿಕೊಡಬಹುದು. ಒಟ್ಟಾರೆಯಾಗಿ ಈ ಬಾರಿಯ ಚುನಾವಣೆಯಲ್ಲಿ ಜನ ಹಲವು ರೀತಿಯಲ್ಲಿ ಚರ್ಚಿಸುತ್ತಿದ್ದರೂ ಒಲವು ಯಾರ ಪರ ಎಂಬುದು ಗುಟ್ಟಾಗಿಯೇ ಉಳಿದಿದ್ದು, ಫಲಿತಾಂಶದ ನಂತರವೇ ಮತದಾರರ ನಿರ್ಧಾರ ಬಹಿರಂಗವಾಗಲಿದೆ.
ಸ್ಥಳೀಯ ಸಮಸ್ಯೆಗಳು
ಬಗರ್‌ಹುಕುಂ ಸಾಗುವಳಿ ರೈತರಿಗೆ ಚೀಟಿ, ಅರಣ್ಯವಾಸಿಗಳಿಗೆ ನೀರು, ವಿದ್ಯುತ್, ರಸ್ತೆ ವ್ಯವಸ್ಥೆ, ಲಿಂಗನಮಕ್ಕಿ ಅಣೆಕಟ್ಟು
ನಿರಾಶ್ರಿತರಿಗೆ ಪರಿಹಾರ, ಮಂಗನ ಕಾಯಿಲೆ ನಿಯಂತ್ರಣಕ್ಕೆ ಪ್ರತ್ಯೇಕ ಲ್ಯಾಬ್, ಆಸ್ಪತ್ರೆ ವ್ಯವಸ್ಥೆ, ತುಮರಿ ಸೇತುವೆ ವಿಷಯಗಳು ಪ್ರತಿಬಾರಿ
ಪ್ರತಿಧ್ವನಿಸುತ್ತಿವೆ. ಈವರೆಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಅರಣ್ಯ ಭೂಮಿಯ ಜನರ ತೆರವು ಕಾರ್ಯಾಚರಣೆ ಸೇರಿದಂತೆ ಬಹುತೇಕ ಸ್ಥಳೀಯ ವಿಷಯಗಳು ಚುನಾವಣಾ ವಿಷಯಗಳಾಗಿ ಗಮನ ಸೆಳೆಯುತ್ತಿಲ್ಲ. ಅಭಿವೃದ್ಧಿಯ ಚರ್ವಿತ ಚರ್ವಣ ಮಾತಿನ ಹೊರತಾಗಿ ಉಳಿದ ವಿಚಾರಗಳನ್ನು ಬಂಡವಾಳವಾಗಿ ತೊಡಗಿಸಲು ಎರಡೂ ಪಕ್ಷಗಳಿಗೆ ಪಾಪಪ್ರಜ್ಞೆ ಕಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.