ಆರು ವರ್ಷಗಳ ಬಳಿಕ ದಾಖಲೆಯತ್ತ ಉಷ್ಣಾಂಶ: ನಗರದಲ್ಲಿ ವ್ಯಾಪಾರ ಕುಂಠಿತ
Team Udayavani, Apr 24, 2019, 5:50 AM IST
ಮಹಾನಗರ: ಆರು ವರ್ಷಗಳ ಹಿಂದೆ ಕರಾವಳಿಯಲ್ಲಿದ್ದ ಉರಿ ಬಿಸಿಲು ಮತ್ತೆ ಸೃಷ್ಟಿಯಾಗಿದೆ. ಕರಾವಳಿ ಪ್ರದೇಶದಲ್ಲಿ ದಿನದ ಸರಾಸರಿ ಗರಿಷ್ಠ ಉಷ್ಣಾಂಶ 37 ಡಿ.ಸೆ. ತಲುಪುತ್ತಿದ್ದು, ಇದೇ ರೀತಿ ಮುಂದುವರಿದರೆ, ಮುಂದಿನ ಕೆಲವು ದಿನಗಳಲ್ಲಿ ತಿಂಗಳ ಗರಿಷ್ಠ ಉಷ್ಣಾಂಶ ದಾಖಲಾಗಲಿದೆ.
ಬಿಸಿಲಿನ ಪ್ರಮಾಣ ದಿನದಿಂದ ದಿನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗುತ್ತಿದ್ದು, ಸಾರ್ವಜನಿಕರ ಓಡಾಟವೂ ವಿರಳವಾಗುತ್ತಿದೆ. ಉರಿ ಬಿಸಿಲಿನ ಹೊಡೆತ ತಡೆದುಕೊಳ್ಳಲಾಗದೆ ಬೀದಿ ವ್ಯಾಪಾರಸ್ಥರು ಕೂಡ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಳಗ್ಗೆ, ಸಂಜೆ ವೇಳೆ ಸಾರ್ವಜನಿಕರು ಚಹಾ-ಕಾಫಿ ಕುಡಿಯುವ ಬದಲು ಜ್ಯೂಸ್, ಎಳನೀರಿಗೆ ಮೊರೆ ಹೋಗುತ್ತಿದ್ದಾರೆ.
ನಗರದಲ್ಲಿ ಓಡಾಡುವ ಸಿಟಿ ಬಸ್‌ಗಳಲ್ಲಿಯೂ ಮಧ್ಯಾಹ್ನದ ವೇಳೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಈ ಹಿಂದೆ ಒಂದು ಟ್ರಿಪ್‌ನಲ್ಲಿ 50 ಮಂದಿ ಇರುತ್ತಿದ್ದು, ಇದೀಗ 30 ಮಂದಿಗೆ ಇಳಿದಿದೆ. ಸಿಟಿ ಬಸ್‌ಗಳಲ್ಲಿ ಮಧ್ಯಾಹ್ನ ವೇಳೆ ಒಂದು ಟ್ರಿಪ್‌ನಲ್ಲಿ ಸರಾಸರಿ 600 ರೂ. ಸಿಗುತ್ತಿತ್ತು, ಇದೀಗ 300 ರೂ.ಗೆ ಇಳಿದಿದೆ.
ಈಗಿನ ಹವಾಮಾನ ವೈಪರಿತ್ಯವು ಮೀನು ಉತ್ಪಾದನ ಕ್ಷೇತ್ರದ ಮೇಲೂ ಪರಿಣಾಮ ಬೀರಿದ್ದು, ಆಳ ಸಮುದ್ರದಲ್ಲಿ ಅಂದುಕೊಂಡಷ್ಟು ಮೀನು ಸಿಗುತ್ತಿಲ್ಲ. ಹಾಗಾಗಿ ಮೀನುಗಾರರು ಕಂಗಾಲಾಗಿದ್ದಾರೆ. ಮೀನುಗಾರಿಕೆಗೆಂದು ತಮಿಳುನಾಡು ಕಡೆಗೆ ತೆರಳುವ ಮೀನುಗಾರರ ಕಾರ್ಮಿಕರು ಹನ್ನೊಂದು ದಿನಗಳ ಬಳಿಕ ಬರುವಾಗ ಈ ಹಿಂದೆ ಒಂದು ಬೋಟ್‌ನಲ್ಲಿ ಸುಮಾರು 7 ಲಕ್ಷ ರೂ. ಮೌಲ್ಯದ ಮೀನುಗಳನ್ನು ಹೊತ್ತು ತರುತ್ತಿದ್ದರು. ಇದೀಗ ಸುಮಾರು 75 ಸಾವಿರ ರೂ.ಗಳಷ್ಟು ನಷ್ಟ ಅನುಭವಿಸುತ್ತಿದ್ದಾರೆ.
ವಿಪರೀತ ಸೆಕೆಯಿಂದಾಗಿ ತರಕಾರಿಗಳು ಕೊಳೆಯುತ್ತಿವೆ. ಸೊಪ್ಪುಗಳು ಸಂಜೆಯಾಗುತ್ತಿದ್ದಂತೆ ಒಣಗುತ್ತಿವೆ. ಬೀನ್ಸ್, ಅಲಸಂಡೆ, ಮೆಣಸು, ಟೊಮೇಟೊ ಸಾಮಾನ್ಯವಾಗಿ ಮೇ ತಿಂಗಳ ಕೊನೆಯವರೆಗೆ ಯಥೇತ್ಛವಾಗಿ ಸಿಗುತ್ತಿತ್ತು. ಆದರೆ, ಈ ಬಾರಿ ಎಪ್ರಿಲ್‌ನಲ್ಲಿಯೇ ಕೊರತೆ ಯಿದೆ. ತರಕಾರಿ ವ್ಯಾಪಾರಸ್ಥರಿಗೆ ಬಿಸಿಲಿನ ಪರಿಣಾಮ ಶೇ.30ರಿಂದ 40ರಷ್ಟು ವ್ಯಾಪಾರ ಕುಂಠಿತವಾಗಿದೆ.
ನಗರದಲ್ಲಿರುವ ಹೊಟೇಲ್ ಉದ್ಯಮದ ಮೇಲೂ ಬಿಸಿಲಿನ ಪೆಟ್ಟು ಬಿದ್ದಿದ್ದು, ತರಕಾರಿ, ಹಣ್ಣುಗಳ ಬೆಲೆ ಏರಿಕೆಯಿಂದಾಗಿ ದರ ಕೂಡ ಹೆಚ್ಚಳ ಮಾಡಲಾಗಿದೆ. ನಗರದ ಇಕ್ಕೆಲಗಳಲ್ಲಿ ನೆಟ್ಟಿರುವ ಗಿಡಗಳು ಸೊರಗಿವೆ. ಬಿಸಿಲಿನ ತೀವ್ರತೆ ಜತೆ ನಗರದಲ್ಲಿ ಕುಡಿಯುವ ನೀರಿಗೂ ತಾತ್ವಾರ ಇದೆ. ಮಕ್ಕಳು ಸೆಕೆಯಿಂದ ರಕ್ಷಿಸಲು ನೀರಾಟದ ಮೊರೆ ಹೋಗುತ್ತಿದ್ದಾರೆ. ಹವಾಮಾನ ಇಲಾಖೆಯ ತಜ್ಞರ ಪ್ರಕಾರ, ಇತ್ತೀಚೆಗೆಯಷ್ಟೇ ಕರಾವಳಿಯ ಅನೇಕ ಪ್ರದೇಶಗಳಲ್ಲಿ ಮಳೆಯಾಗಿದ್ದು, ಮಳೆ ಬಂದು ಕೆಲವು ದಿನಗಳವರೆಗೆ ಹೆಚ್ಚಿನ ಪ್ರಮಾಣದ ಬಿಸಿಲು ಇರುತ್ತದೆ. ಕೆಲವು ದಿನಗಳ ಬಳಿಕ ಮತ್ತೆ ಮಳೆಯಾಗಬಹುದು. ಇದೇ ರೀತಿಯ ಹವಾಮಾನ ಮುಂದಿನ ಮುಂಗಾರುವರೆಗೆ ಇರುವ ಸಾಧ್ಯತೆಯಿದೆ ಎನ್ನುತ್ತಾರೆ.
ಬಾಡಿ ಹೋಗುತ್ತಿದೆ ಹೂವು
ಬಿಸಿಲಿನ ಹೆಚ್ಚಳದಿಂದಾಗಿ ಹೂವು ಒಣಗುತ್ತಿದೆ. ಅದರಲ್ಲಿಯೂ ಸೇವಂತಿಗೆ ಹೂವು ಸಾಮಾನ್ಯವಾಗಿ ಎರಡು ದಿನ ಒಣಗುವುದಿಲ್ಲ. ಆದರೆ, ಇದೀಗ ಸಂಜೆ ವೇಳೆಗೆ ಬಾಡುತ್ತಿದೆ. ಕಾಕಡ ಮಲ್ಲಿಗೆ ಪ್ರಿಡ್ಜ್ನಿಂದ ತೆಗೆಯುವ ಹಾಗಿಲ್ಲ. ಹಾಗಾಗಿ ಹೂವಿನ ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಯತಿರಾಜ್ ಮೇಗಿನಬೈಲು.
ತರಕಾರಿ ವ್ಯಾಪಾರ ಕಂಠಿತ
ಕೆಲವು ದಿನಗಳಿಂದ ಅಲಸಂಡೆ, ಟೊಮೇಟೊ ಸಹಿತ ಹಲವು ತರಕಾರಿ ಗಳಿಗೆ ಬೇಡಿಕೆ ಜಾಸ್ತಿ ಇದ್ದರೂ ಪೂರೈಕೆ ಕಡಿಮೆ. ಬಿಸಿಲಿನ ಪರಿಣಾಮ ತರಕಾರಿ ವ್ಯಾಪಾರ ಕ್ಷೇತ್ರದಲ್ಲೂ ಆಗಿದ್ದು, ಶೇ.30-40ರಷ್ಟು ವ್ಯಾಪಾರ ಕುಂಠಿತ ವಾಗಿದೆ.
– ಡೇವಿಡ್ ಡಿ’ಸೋಜಾ, ತರಕಾರಿ ವ್ಯಾಪಾರಸ್ಥರು
ಹೊಟೇಲ್ ಉದ್ಯಮಕ್ಕೆ ನಷ್ಟ
ಬಿಸಿಲಿನ ಪರಿಣಾಮ ಹೊಟೇಲ್ ಉದ್ಯಮದ ಮೇಲೂ ಬಿದ್ದಿದೆ. ನಗರ ಪ್ರದೇಶಗಳಲ್ಲಿ ಜನಸಂಚಾರ ವಿರಳ ಇರುವುದರಿಂದ ಹೆಚ್ಚಿನ ಮಂದಿ ಹೊಟೇಲ್‌ಗಳಿಗೆ ಬರುತ್ತಿಲ್ಲ. ಶೇ.10ರಷ್ಟು ನಷ್ಟ ಅನುಭವಿಸುತ್ತಿದ್ದೇವೆ.
– ಕುಡ್ಪಿ ಜಗದೀಶ ಶೆಣೈ, ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ
ಆರು ವರ್ಷದ ಹಿಂದೆ ಇದೇ ಬಿಸಿಲು
ಹವಾಮಾನ ವೈಪರಿತ್ಯದಿಂದಾಗಿ ಉರಿ ಬಿಸಿಲು ಹೆಚ್ಚುತ್ತಿದೆ. ಹವಾಮಾನ ಇಲಾಖೆ ಅಂಕಿ ಅಂಶದ ಪ್ರಕಾರ ಎಪ್ರಿಲ್‌ನಲ್ಲಿ 2013ರಲ್ಲಿ 37.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಎಪ್ರಿಲ್‌ನಲ್ಲಿ ದಾಖಲಾದ ಅತೀ ಗರಿಷ್ಠ ಉಷ್ಣಾಂಶ ಇದಾಗಿತ್ತು. ಈ ಬಾರಿ ಮತ್ತದೇ ರೀತಿ ಉಷ್ಣಾಂಶ ಏರಿಕೆಯಾಗುತ್ತಿದೆ.
ಹೆಚ್ಚಿನ ಉಷ್ಣಾಂಶ
ಕರಾವಳಿಯಲ್ಲಿ ಇತ್ತೀಚೆಗೆಯಷ್ಟೇ ಮಳೆ ಬಂದಿದ್ದು, ಮಳೆ ಬಂದ ಬಳಿಕ ಇದೇ ರೀತಿಯ ಸೆಕೆ ಮತ್ತು ಬಿಸಿಲು ಇರುತ್ತದೆ. ಕರಾವಳಿಯಲ್ಲಿ ವಾಡಿಕೆ ಗರಿಷ್ಠ ಉಷ್ಣಾಂಶಕ್ಕಿಂತ 2-3 ಡಿ.ಸೆ. ಹೆಚ್ಚಿದೆ. ಮುಂದಿನ ಮುಂಗಾರು ಪ್ರಾರಂಭದವರೆಗೆ ಇದೇ ರೀತಿ ಮಳೆ, ಬಿಸಿಲು, ಸೆಕೆ ಇರಬಹುದು.
– ಸುನಿಲ್ ಗವಾಸ್ಕರ್, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವಿಜ್ಞಾನಿ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.