ಮಕ್ಕಳ ಶ್ರವಣ ಶಕ್ತಿ
ಕೆಲವು ಸೂಕ್ಷ್ಮ ಅಂಶಗಳು
Team Udayavani, Jul 12, 2020, 4:13 PM IST
ಒಂದು ದಿನ ಒಬ್ಬ ತಾಯಿಯು ತನ್ನ 12 ವಯಸ್ಸಿನ ಮಗನನ್ನು ನಮ್ಮ ವಾಕ್ ಶ್ರವಣ ವಿಭಾಗಕ್ಕೆ ಕರೆತಂದರು. “ನಿಮ್ಮ ಮಗನಿಗೆ ಏನು ತೊಂದರೆ ಇದೆ? ಎಂದು ನಾವು ಕೇಳಿದಾಗ, “ಇವನು ಶಾಲೆಯಲ್ಲಿ ಏನೂ ಓದುವುದಿಲ್ಲ. ಕಲಿಕೆಯಲ್ಲಿ ತುಂಬಾ ಹಿಂದೆ ಇದ್ದಾನೆ. ಪೆದ್ದರಂತೆ ಮಾತನಾಡುತ್ತಾನೆ. ಸರಿಯಾಗಿ ಮಾತನಾಡುವುದಿಲ್ಲ. ಇವನಿಗೆ ಬುದ್ಧಿ ಮಂದ ಎಂಬುದಾಗಿ ನಮಗೆ ಪ್ರಮಾಣಪತ್ರ ಬೇಕಿದೆ, ಏನು ಮಾಡಬೇಕು’ ಎಂದು ಪ್ರಶ್ನಿಸಿದರು. “ಅವನಿಗೆ ಕಿವಿ ಕೇಳಿಸುವುದರಲ್ಲಿ ಏನಾದರೂ ತೊಂದರೆ ಇದೆಯೇ? ನೀವು ಗಮನಿಸಿದ್ದೀರಾ?’ ಎಂದು ನಾವು ಪ್ರಶ್ನಿಸಿದಾಗ, “ಅದೇನೋ ಗೊತ್ತಿಲ್ಲ, ಕಿವಿ ಕೇಳುತ್ತದೆ’ ಎಂದರು.
ನಾವು ಪರೀಕ್ಷಿಸಿ ನೋಡಿದೆವು. ಹುಡುಗನಿಗೆ ಕಡಿಮೆ ತರಂಗಾಂತರ ಚೆನ್ನಾಗಿ ಕೇಳುತ್ತಿತ್ತು. ಆದರೆ ಹೆಚ್ಚು ತರಂಗಾಂತರದಲ್ಲಿ ತೀರಾ ಕಡಿಮೆ ಕೇಳಿಸುವ ತೊಂದರೆ ಇತ್ತು. ಅವನ ಬುದ್ಧಿಶಕ್ತಿ ಚೆನ್ನಾಗಿತ್ತು. ಸರಿಯಾಗಿ ಕೇಳಿಸದೇ ಇರುವುದರಿಂದ ಮಗುವಿನ ಮಾತಿನಲ್ಲಿ ಸ್ಪಷ್ಟತೆ ಇರಲಿಲ್ಲ. ಯಾವುದೇ ಮಗುವಿಗೆ ಯಾವುದೇ ಶಬ್ದಗಳು ಕೇಳಿಸದೆ ಇದ್ದರೆ ಮನೆಯಲ್ಲಿ ಹೆತ್ತವರು,
ಸಂಬಂಧಿಗಳು ಅಥವಾ ಕುಟುಂಬದವರಿಗೆ ಬೇಗನೇ ತಿಳಿಯುತ್ತದೆ. ಆದರೆ ಕೆಲವು ತರಂಗಾಂತರಗಳಲ್ಲಿ ಚೆನ್ನಾಗಿ ಕೇಳಿಸುತ್ತಿದ್ದು, ಮತ್ತೆ ಕೆಲವು ತರಂಗಾಂತರಗಳಲ್ಲಿ ಕಡಿಮೆ ಕೇಳಿಸುತ್ತಿದ್ದರೆ ಅಥವಾ ಕಡಿಮೆ ತೀವ್ರತೆಯ ಶ್ರವಣ ಶಕ್ತಿ ನಷ್ಟ ಇದ್ದರೆ ಯಾ ಒಂದು ಕಿವಿಯಲ್ಲಿ ಚೆನ್ನಾಗಿ ಕೇಳಿಸುತ್ತಿದ್ದು, ಇನ್ನೊಂದು ಕಿವಿಯಲ್ಲಿ ಸ್ವಲ್ಪ ಮಟ್ಟಿನ ತೊಂದರೆ ಇದ್ದರೆ ಹೆತ್ತವರಿಗೆ ಬೇಗನೇ ತಿಳಿಯುವುದಿಲ್ಲ. ಇದರಿಂದ ತೊಂದರೆ ಹಾಗೆಯೇ ಉಳಿದುಕೊಂಡು ಮಗುವಿನ ಮಾತು ಮತ್ತು ಭಾಷಾ ಕಲಿಕೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಇಂತಹ ಕೆಲವು ಅಂಶಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿ, ಪರೀಕ್ಷಿಸಿದರೆ ಉತ್ತಮ.
ಮಕ್ಕಳ ಶ್ರವಣ ಶಕ್ತಿಯ ವಿಚಾರದಲ್ಲಿ ನಾವು ಕೆಲವು ಅಂಶಗಳನ್ನು ಅರಿತಿರಬೇಕು ಅಥವಾ ತಿಳಿದುಕೊಂಡಿರಬೇಕು :
ಮಗುವಿಗೆ ತರಗತಿಯಲ್ಲಿ ಪಾಠದ ಕಡೆಗೆ ಗಮನವಿರಿಸಲು ಸಾಧ್ಯವಾಗುತ್ತಿಲ್ಲವೇ? : ಪಾಠದ ಕಡೆಗೆ ಗಮನ ಕೇಂದ್ರೀಕರಿಸಲು ಸಾಧ್ಯವಾಗದೇ ಇರಲು ಹಲವಾರು ಕಾರಣಗಳಿರಬಹುದು. ಸರಿಯಾಗಿ ಕೇಳಿಸದೇ ಇರುವುದು ಕೂಡ ಇವುಗಳಲ್ಲಿ ಒಂದು. ಎಲ್ಲ ಪದಗಳು ಸರಿಯಾಗಿ ಕೇಳಿಸದೇ ಇರುವುದರಿಂದ ಪಾಠವನ್ನು ಅರ್ಥ ಮಾಡಿಕೊಳ್ಳಲು ಅಥವಾ ಉತ್ತರಿಸಲು ಹೆಚ್ಚಿನ ಗಮನವನ್ನು ಕೊಡಬೇಕಾಗುತ್ತದೆ. ಇದು ಸಾಧ್ಯವಾಗದೇ ಇದ್ದಾಗ ಕ್ರಮೇಣ ಅದರ ಬಗ್ಗೆ ಆಸಕ್ತಿ ಕುಂಠಿತವಾಗುತ್ತದೆ. ಇದರಿಂದ ಕಲಿಕೆಯಲ್ಲಿ ಹಿಂದುಳಿಯುತ್ತಾರೆ.
ಹೆಚ್ಚಾಗಿ ಮಗುವು ಒಂದೇ ಬದಿಯ ಕಿವಿಯಿಂದ ಕೇಳಿಸಿಕೊಳ್ಳಲು ಬಯಸುವುದು ಅಥವಾ ಒಂದೇ ಕಿವಿಗೆ ಫೋನ್ ಹಿಡಿಯಲು ಬಯಸುತ್ತದೆಯೇ? : ಶ್ರವಣ ಶಕ್ತಿ ನಷ್ಟ ಒಂದು ಕಿವಿಯಲ್ಲಿ ಇರಬಹುದು ಅಥವಾ ಎರಡೂ ಕಿವಿಗಳಲ್ಲಿ ತೊಂದರೆ ಇರಬಹುದು. ಕೇಳಿಸುವ ತೀವ್ರತೆಯ ಮಟ್ಟವು ಎರಡೂ ಕಿವಿಗಳಲ್ಲಿ ಬೇರೆ ಬೇರೆಯಾಗಿರಬಹುದು. ಅಂದರೆ ಒಂದು ಕಿವಿಯಲ್ಲಿ ಹೆಚ್ಚು ಚೆನ್ನಾಗಿ ಕೇಳಿಸಬಹುದು, ಇನ್ನೊಂದು ಕಿವಿಯಲ್ಲಿ ಏನೂ ಕೇಳಿಸದೇ ಇರಬಹುದು. ಅಂತಹವರು ಒಂದು ಬದಿಯಲ್ಲಿ ಕೇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಒಂದು ಕಡೆ ಮಾತಾಡಿದಾಗ ಮಾತ್ರ ಬೇಗನೇ ಉತ್ತರಿಸುವುದು, ಇನ್ನೊಂದು ಕಡೆಯಿಂದ ಮಾತಾಡಿದಾಗ ನಿರ್ಲಕ್ಷಿಸುವುದು ಇತ್ಯಾದಿ ಕಂಡುಬರುತ್ತದೆ. ಹೆತ್ತವರು ಇದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಈ ರೀತಿಯ ತೊಂದರೆ ಗಮನಕ್ಕೇ ಬರದೇ ಇರುವುದು ಹೆಚ್ಚು. ಹೆಡ್ ಫೋನ್ ಹಾಕಿ ಸಂಗೀತ ಕೇಳುವಾಗ ಎಷ್ಟೋ ಜನರಿಗೆ ಒಂದು ಕಿವಿಯಲ್ಲಿ ಮಾತ್ರ ಕೇಳುತ್ತಿದೆ, ಇನ್ನೊಂದು ಕಿವಿಯಲ್ಲಿ ಇಲ್ಲ ಎಂಬುದು ಅರಿವಿಗೆ ಬಂದು ಪರೀಕ್ಷಿಸಿಕೊಳ್ಳಲು ಬಂದ ಎಷ್ಟೋ ಉದಾಹರಣೆಗಳಿವೆ.
ಹಿಂದುಗಡೆಯಿಂದ ಮಾತನಾಡಿದಾಗ ಏನೂ ಪ್ರತಿಕ್ರಿಯೆ ತೋರಿಸುವುದಿಲ್ಲವೇ? : ಕೆಲವೊಮ್ಮೆ ಎದುರಿನಿಂದ ಮಾತನಾಡಿದಾಗ ತುಟಿ ಚಲನೆಯನ್ನು ನೋಡಿ ಅರ್ಥ ಮಾಡಿ ಉತ್ತರಿಸುತ್ತಾರೆ. ಆದರೆ ಹಿಂದುಗಡೆಯಿಂದ ಮಾತನಾಡಿದಾಗ ಉತ್ತರಿಸದೇ ಇದ್ದಾಗ ಅಥವಾ ಕರೆದರೂ ನೋಡದೇ ಇದ್ದರೆ ವ್ಯತ್ಯಾಸವನ್ನು ಗಮನಿಸಿ, ಪರೀಕ್ಷೆಗೆ ಒಳಪಡಿಸಿ.
ಶೀತ ಯಾ ನೆಗಡಿಯಾದಾಗ ಕೇಳುವಿಕೆಯಲ್ಲಿ ವ್ಯತ್ಯಾಸವನ್ನು ಗಮನಿಸಿದ್ದೀರಾ? : ಆಗಾಗ ಶೀತ/ನೆಗಡಿಯಾಗುವ ಮಕ್ಕಳಲ್ಲಿ ಕೆಲವು ದಿನ ಸರಿಯಾಗಿ ಕೇಳಿ ಉತ್ತರಿಸುವುದು, ಕೆಲವು ದಿನ ಕೇಳಿಸದೇ ಇರುವುದು ಕಂಡುಬರುತ್ತದೆ. ಇದನ್ನು ನಾವು ವ್ಯತ್ಯಾಸಗೊಳ್ಳುವ ಶ್ರವಣ ಶಕ್ತಿ ನಷ್ಟ ಎನ್ನುತ್ತೇವೆ. ಶೀತ, ಕಫ ಕಟ್ಟಿ ಕಿವಿಯು ಬ್ಲಾಕ್ ಆಗಿ ಕೇಳಿಸುವುದು ಕಡಿಮೆಯಾಗಬಹುದು. ಶೀತ/ನೆಗಡಿ ಕಡಿಮೆಯಾದಾಗ ಅದು ಸರಿಯಾಗಬಹುದು. ಇದೇ ತರಹ ಪದೇ ಪದೇ ಆದರೆ ಮಗುವು ಕಲಿಕೆಯಲ್ಲಿ ಹಿಂದುಳಿಯಬಹುದು. ನಿರ್ಲಕ್ಷಿಸಿದರೆ ಕೇಳುವ ಮಟ್ಟ ಇನ್ನೂ ಕಡಿಮೆಯಾಗಬಹುದು. ಕಿವಿ, ಮೂಗು, ಗಂಟಲು ತಜ್ಞರನ್ನು ಭೇಟಿ ಮಾಡಿ ಪರೀಕ್ಷಿಸುವುದು ಉತ್ತಮ.
ಮಗುವಿನ ಮಾತಿನಲ್ಲಿ ಉಚ್ಚಾರಣೆ ದೋಷವಿದೆಯೇ? : ಕಿವಿ ಕೇಳಿಸದೇ ಇರುವ ಮಗುವಿನಲ್ಲಿ ಉಚ್ಚಾರಣೆ ದೋಷ ಕಂಡುಬರುತ್ತದೆ. ಹೊಸ ಹೊಸ ಪದಗಳ ಕಲಿಕೆ ಮತ್ತು ಉಚ್ಚರಿಸಲು ಕಷ್ಟ ಪಡುತ್ತಾರೆ. ಅವರಿಗೆ, ಅವರೇ ಹೇಳಿದ ಪದಗಳು ಸರಿಯಾಗಿ ಕೇಳಿಸದೇ ಇರುವುದರಿಂದ ವ್ಯತ್ಯಾಸ ಗೊತ್ತಾಗುವುದಿಲ್ಲ .
ಮಗುವು ಟಿವಿ ಅಥವಾ ರೇಡಿಯೋ ಜೋರಾಗಿ ಇಡಲು ಬಯಸುತ್ತದೆಯೇ? : ಮನೆಯಲ್ಲಿ ಟಿವಿ, ರೇಡಿಯೋ ಕೇಳುವಾಗ ವಾಲ್ಯೂಮ್ ಜೋರಾಗಿ ಇಟ್ಟುಕೊಳ್ಳುತ್ತಾರೆಯೋ ಎಂದು ಗಮನಿಸಿ. ಈಗ ಹೆಚ್ಚಿನ ಮಕ್ಕಳು ಹೆಚ್ಚಾಗಿ ಅವರಿಗೆ ಇಷ್ಟವಾದ ಕಾರ್ಯಕ್ರಮವನ್ನು ಜೋರಾಗಿ ಇಟ್ಟು ಆನಂದಿಸುತ್ತಾರೆ. ಅದಲ್ಲದೇ ಎಲ್ಲ ಸಮಯದಲ್ಲೂ ತುಂಬಾ ಜೋರಾಗಿ ಇಟ್ಟುಕೊಳ್ಳುತ್ತಾರೆಯೇ ಗಮನಿಸಿ.
ಮಗುವು ನಿಮ್ಮ ಪ್ರಶ್ನೆಗಳಿಗೆ ಅಸಂಬದ್ಧವಾಗಿ ಉತ್ತರಿಸುತ್ತದೆಯೇ? ಮಗು ನೀಡುವ ಉತ್ತರವು ಕೇಳಿದ ಪ್ರಶ್ನೆಗಳಿಗೆ ಹೊಂದಿಕೆಯಾಗುವುದಿಲ್ಲವೇ? : ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡದೇ ಇರುವುದು ಶ್ರವಣ ಶಕ್ತಿ ನಷ್ಟ ಹೊಂದಿರುವ ಮಕ್ಕಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ, ನೀನು ಶಾಲೆಗೆ ಹೋಗುತ್ತೀಯಾ ಎಂದು ಕೇಳಿದರೆ, ನನ್ನ ಶಾಲೆಯು ಹಸುರು ಎಂದು ಉತ್ತರಿಸಬಹುದು. ಅಂದರೆ ಮಗುವಿಗೆ ಎಲ್ಲ ಶಬ್ದಗಳು ಕೇಳಿಸುವುದಿಲ್ಲ ಎಂದು ಅರ್ಥ.
ಮಗುವು ಅವನ/ಅವಳ ಸಹಪಾಠಿಗಳೊಂದಿಗೆ ಬೆರೆಯಲು ಹಿಂದೇಟು ಹಾಕುತ್ತದೆಯೇ? ; ಹೆಚ್ಚಾಗಿ ಮಕ್ಕಳು ತನ್ನ ಸಹಪಾಠಿಗಳು / ಒಂದೇ ವಯಸ್ಸಿನ ಮಕ್ಕಳ ಜತೆ ಆಟವಾಡಲು ಇಷ್ಟ ಪಡುತ್ತಾರೆ. ಕೇಳಿಸುವ ತೊಂದರೆ ಇರುವ ಮಗುವಿಗೆ ಅವನ/ಳ ಸಹಪಾಠಿಗಳು ಆಡಿದ ಮಾತುಗಳು ಕೇಳಿಸದೇ ಇರುವುದರಿಂದ, ಆಟದ ನಿಯಮಗಳು ತಿಳಿಯದೇ ಅದಕ್ಕೆ ಸ್ಪಂದಿಸದೇ ಇರುವುದರಿಂದ, ಈ ತರಹದ ಮಕ್ಕಳನ್ನು ಅವರ ಗುಂಪಿಗೆ ಸೇರಿಸಿಕೊಳ್ಳುವುದಿಲ್ಲ ಅಥವಾ ಅವರು ಈ ಮಗುವಿಗೆ ಅಪಹಾಸ್ಯ ಮಾಡುವುದು, ಕೀಟಲೆ ಕೊಡುವುದು ಮಾಡುತ್ತಿರುತ್ತಾರೆ. ಅದಕ್ಕಾಗಿ ಈ ಮಗುವು ಅವರ ಜತೆ ಆಡಲು ಇಷ್ಟಪಡದೇ ಒಂಟಿಯಾಗಿ ಇರಲು ಬಯಸುತ್ತದೆ.
ಸಂಭಾಷಣೆ ನಡೆಸುವಾಗ ಪ್ರತೀ ಬಾರಿ ಇನ್ನೊಮ್ಮೆ ಹೇಳಿ ಎಂದು ಕೇಳುತ್ತದೆಯೇ ? : ಸಾಮಾನ್ಯವಾಗಿ ನಮಗೆ ಸರಿಯಾಗಿ ಕೇಳಿಸದೇ ಇದ್ದರೆ ನಾವು ಆ… ಆ… ಎಂದು ಹೇಳುತ್ತೇವೆ. ಅಂದರೆ ಅವರು ಪುನಃ ಹೇಳಲಿ ಎಂದು ಅಪೇಕ್ಷಿಸುತ್ತೇವೆ. ಇಂತಹ ಸನ್ನಿವೇಶಗಳು ಮಗುವಿನಲ್ಲಿ ಹೆಚ್ಚಾಗಿ ಕಂಡುಬಂದಲ್ಲಿ ಕಿವಿ ಪರೀಕ್ಷೆ ಮಾಡುವುದು ಉತ್ತಮ. ಸೂಕ್ತ ಸಮಯದಲ್ಲಿ ಪರೀಕ್ಷಿಸಿ ಚಿಕಿತ್ಸೆ / ತರಬೇತಿಯನ್ನು ನೀಡಿದರೆ ಮಗುವಿಗೆ ಮಾತು ಮತ್ತು ಭಾಷಾ ಕಲಿಕೆಯಲ್ಲಿ ಸಹಕಾರಿಯಾಗುತ್ತದೆ.
ರೇಖಾ ಪಾಟೀಲ್ ಎಸ್.
ಅಸಿಸ್ಟೆಂಟ್ ಲೆಕ್ಚರರ್,
ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ
ಮಾಹೆ, ಮಣಿಪಾಲ