ಮೇಟಿಕುಪ್ಪೆಯ ಆನೆಮರಿ ಮತ್ತು ದಾರಿ
Team Udayavani, Feb 25, 2018, 9:45 AM IST
ಆನೆ ಸೊಂಡಿಲಿನಿಂದ ಉದ್ದದ ಹುಲ್ಲನ್ನು ಕಿತ್ತು, ಎಂಟ್ಟತ್ತು ಕೊತ್ತಂಬರಿ ಸೂಡಿನಷ್ಟಿದ್ದ ಹುಲ್ಲಿನ ಕಂತೆಯನ್ನು ಪಾದಕ್ಕೆ ಹೊಡೆದುಕೊಂಡು, ಅಲ್ಲಿದ್ದ ಕಪ್ಪು ಮಣ್ಣನ್ನು ಕೊಡವಿ ಬಾಯಿಗೆ ತುರುಕಿಕೊಳ್ಳುತಿತ್ತು. ಆನೆ ನನಗೆ ಸುಮಾರು ಇಪ್ಪತ್ತು ಮೀಟರ್‌ನಷ್ಟು ದೂರದಲ್ಲಿದ್ದರೂ ಕಾಡಿನ ಶಾಂತತೆಯಿಂದ ಅದು ಹುಲ್ಲು ಕೀಳುವುದು, ಕಾಲಿಗೆ ಹುಲ್ಲನ್ನು ಮೆಲ್ಲಗೆ ಬಡಿಯುವ ಮತ್ತು ಅದು ಹುಲ್ಲನ್ನು ಅಗೆಯುವ ಶಬ್ದ ಸಹ ಕೇಳುತಿತ್ತು.
ನನ್ನ ಕೆಲಸದ ಮೇಲೆ ಒಮ್ಮೆ ಹೆಚ್.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆಯಿಂದ ನಾಗರಹೊಳೆ ಕಡೆಗೆ ಹೊರಟಿ¨ªೆ.
ಹೆಚ್.ಡಿ.ಕೋಟೆಯಿಂದ ಹೊರಟರೆ ಸೊಳ್ಳೇಪುರ, ಮೇಟಿಕುಪ್ಪೆ ದಾಟಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ್ನು ಈ ರಸ್ತೆ ಪ್ರವೇಶಿಸುತ್ತದೆ. ಮುಂದೆ ಹೋದರೆ ಹುಣಸೂರು-ನಾಗರಹೊಳೆ- ಕುಟ್ಟ ಮಾರ್ಗವನ್ನು ಸೇರುವ ಈ ರಸ್ತೆ 2000ರ ಮಧ್ಯ ಭಾಗದವರೆಗೆ ಮಣ್ಣಿನ ರಸ್ತೆಯಾಗಿತ್ತು, ಹಾಗಾಗಿ ವಾಹನಗಳು ಓಡಾಡುವುದು ಬಹು ಮಿತಿಯಲ್ಲಿತ್ತು. ಯಾರಾದರೂ ತೀರಾ ಅವಶ್ಯಕತೆಯಿದ್ದವರು, ಮೈಸೂರು ಜಿÇÉೆ ಯಲ್ಲಿರುವ ಮೇಟಿಕುಪ್ಪೆಯಿಂದ ಕೊಡಗಿನ ಬಾಳೆಲೆ ಅಥವಾ ಕುಟ್ಟದ ಕಡೆಗೆ ಹೋಗುವವರು ಅಥವಾ ಆ ಕಡೆಯಿಂದ ಈ ಕಡೆಗೆ ಬರುವವರು ಮಾತ್ರ ಹೆಚ್ಚಾಗಿ ಈ ರಸ್ತೆಯನ್ನು ಉಪಯೋಗಿಸುತ್ತಿದ್ದರು. ಕೆಲವೊಮ್ಮೆ ಬಾಳೆಲೆ ಕಡೆ ಕಾಫಿ ತೋಟಕ್ಕೆ ಕೆಲಸದವರನ್ನು ಮೇಟಿಕುಪ್ಪೆಯಿಂದ ಕರೆದುಕೊಂಡು ಹೋಗುವ ಜೀಪ್‌ಗ್ಳು, ಇಲ್ಲವೇ ಆಗೊಮ್ಮೆ ಈಗೊಮ್ಮೆ ಓಡಾಡುವ ಅಂಬಾಸಡರ್ ಕಾರ್‌ಗಳು ಮಾತ್ರ ಈ ರಸ್ತೆಯಲ್ಲಿ ಕಾಣುತ್ತಿದ್ದವು. ದಪ್ಪ ದಪ್ಪಜಲ್ಲಿಕಲ್ಲುಗಳಿಂದ ತುಂಬಿಕೊಂಡಿದ್ದ ರಸ್ತೆಯನ್ನು ಉಪಯೋಗಿಸಲು ಯಾರೂ ಇಷ್ಟಪಡುತ್ತಿರಲಿಲ್ಲ. ಸುಮಾರು ಒಂಬತ್ತು ಕಿಲೋಮೀಟರ್ ದೂರದ ಈ ಹಾದಿಯನ್ನು ಸವೆಸಬೇಕಾದರೆ ಮುಕ್ಕಾಲು ಗಂಟೆಯೇ ಬೇಕಾಗುತ್ತಿತ್ತು.
ನಾವು ಆ ಭಾಗದಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದ ಸಲುವಾಗಿ ಈ ರಸ್ತೆಯನ್ನು ಬಳಸುವ ಅವಶ್ಯಕತೆ ಸಹ ಬಹಳಷ್ಟಿತ್ತು. ಆದ್ದರಿಂದ ಈ ರಸ್ತೆಯಲ್ಲಿ ಓಡಾಡುವುದೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಮೇಟಿಕುಪ್ಪೆಯ ಭಾಗ ಒಣ ಕಾಡು ಪ್ರದೇಶ. ಮರಗಳ ದಟ್ಟಣೆಯೂ ಕಡಿಮೆ. ಆದ್ದರಿಂದ ಬೇಸಿಗೆಯಲ್ಲಿ ಕಾಡು ಒಣಗಿ ದೂರದವರೆಗೆ ಕಾಣುತ್ತದೆ. ಈ ರಸ್ತೆಯ ಬದಿಯÇÉೇ ಪಾರಕಟ್ಟೆ ಎಂಬ ಪುಟ್ಟ ನೀರಿನ ಕಟ್ಟೆಯಿದೆ. ಹಾಗಾಗಿ ಆನೆ, ಜಿಂಕೆ, ಕಡವೆ, ಕಾಟಿ, ಸೀಳು ನಾಯಿ ಹೀಗೆ ಅನೇಕ ವನ್ಯಜೀವಿಗಳನ್ನು ಈ ರಸ್ತೆಯಲ್ಲಿ ಕಾಣುವುದಂತೂ ಖಚಿತ. ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ ಇದ್ದ ಕಾರಣ ವನ್ಯಜೀವಿಗಳಿಗೂ ವಾಹನಗಳಿಂದ ತೊಂದರೆಯಾಗುತ್ತಿರಲಿಲ್ಲ. ಆಗ ನಾಗರಹೊಳೆಯಲ್ಲಿ ಪ್ರವಾಸೋದ್ಯಮ ಕೂಡ ಅಷ್ಟಿರಲಿಲ್ಲ, ಹಾಗಾಗಿ ವಾಹನದ ದಟ್ಟಣೆ ಕಡಿಮೆಯಿರಲು ಅದೂ ಇನ್ನೊಂದು ಕಾರಣವಾಗಿತ್ತು. ಹಲವಾರು ವರ್ಷಗಳು ಈ ರಸ್ತೆಯಲ್ಲಿ ವನ್ಯಜೀವಿಗಳನ್ನು ನೋಡಿ ಆನಂದಪಟ್ಟಿದ್ದೇನೆ.
2007ರ ಮಳೆಗಾಲವಿನ್ನೂ ಸಂಪೂರ್ಣವಾಗಿ ಪ್ರಾರಂಭವಾಗಿರಲಿಲ್ಲ. ಹೆಚ್.ಡಿ.ಕೋಟೆಯಲ್ಲಿ ಕೆಲಸ ಮುಗಿಸಿ ನಾಗರಹೊಳೆಯ ಕಡೆ ಹೊರಟಿ¨ªೆ. ಬೆಳಿಗ್ಗೆ ಸುಮಾರು ಏಳುವರೆಯಷ್ಟು ಸಮಯ. ಒಂದೆರೆಡು ಮಳೆಯಾಗಿ ಕಾಡಾಗಲೇ ಸಾಕಷ್ಟು ಹಸಿರಾಗಿತ್ತು. ರಸ್ತೆಯ ಬದಿಯಲ್ಲಿ ಹುಲ್ಲು ಯಥೇತ್ಛವಾಗಿ ಬೆಳೆದಿತ್ತು. ಈ ಮಣ್ಣಿನ ರಸ್ತೆಯನ್ನು ಇತ್ತೀಚೆಗಷ್ಟೇ ಡಾಂಬರು ಹಾಕಿ ಪಕ್ಕಾ ರಸ್ತೆಯನ್ನಾಗಿ ಪರಿವರ್ತಿಸಿದ್ದರು. ಅದೃಷ್ಟವಶಾತ್ ರಸ್ತೆಯನ್ನು ಅಗಲ ಮಾಡಿರಲಿಲ್ಲ, ಇನ್ನೂ ಸುಮಾರು ಆರು ಮೀಟರ್‌ನಷ್ಟು ಅಗಲವಿತ್ತು. ಮನಸ್ಸಿನ ಮೂಲೆಯಲ್ಲಿ ನನಗೆ ಅಸಮಾಧಾನವಿತ್ತು, ರಸ್ತೆಯನ್ನು ಡಾಂಬರೀಕರಣ ಮಾಡುವ ಅವಶ್ಯಕತೆಯೇ ಇರಲಿಲ್ಲವೆಂದು.
ಕಾಡಿನೊಳಗೆ ಸುಮಾರು ಮೂರು ಕಿಲೋಮೀಟರ್ ಹಾದಿ ನಿಧಾನವಾಗಿ ಸವೆಸಿ. ಇದ್ದಕ್ಕಿದ್ದ ಹಾಗೆ ರಸ್ತೆಯ ಬಲಭಾಗದಲ್ಲಿ ದೊಡ್ಡ ಹೆಣ್ಣಾನೆಯೊಂದು ಕಂಡಿತು. ನಿಧಾನವಾಗಿ ವಾಹನವನ್ನು ನಿಲ್ಲಿಸಿ ಆನೆಯನ್ನು ಗಮನಿಸಲು ಪ್ರಾರಂಭಿಸಿದೆ. ಪೊದೆಯೊಳಗೆ ತನ್ನ ದೇಹದ ಅರ್ಧ ಭಾಗ, ಪೊದೆಯಾಚೆ ತಲೆ, ಕಾಲು, ಸೊಂಡಿಲನ್ನು ಹಾಕಿ ತನ್ನ ಪಕ್ಕೆಯನ್ನು ದಾರಿಗೆ ಸಮಾನವಾಗಿ ಹಾಕಿ ನಿಂತಿತ್ತು. ಸಮಾಧಾನದಿಂದಿದ್ದ ಆನೆ ಸೊಂಡಿಲಿನಿಂದ ಉದ್ದದ ಹುಲ್ಲನ್ನು ಕಿತ್ತು, ಎಂಟØತ್ತು ಕೊತ್ತಂಬರಿ ಸೂಡಿನಷ್ಟಿದ್ದ ಹುಲ್ಲಿನ ಕಂತೆಯನ್ನು ಪಾದಕ್ಕೆ ಹೊಡೆದುಕೊಂಡು, ಅಲ್ಲಿದ್ದ ಕಪ್ಪು ಮಣ್ಣನ್ನು ಕೊಡವಿ ಬಾಯಿಗೆ ತುರುಕಿಕೊಳ್ಳುತಿತ್ತು. ಆನೆ ನನಗೆ ಸುಮಾರು ಇಪ್ಪತ್ತು ಮೀಟರ್‌ನಷ್ಟು ದೂರದಲ್ಲಿದ್ದರೂ ಕಾಡಿನ ಶಾಂತತೆಯಿಂದ ಅದು ಹುಲ್ಲು ಕೀಳುವುದು, ಕಾಲಿಗೆ ಹುಲ್ಲನ್ನು ಮೆಲ್ಲಗೆ ಬಡಿಯುವ ಮತ್ತು ಅದು ಹುಲ್ಲನ್ನು ಅಗೆಯುವ ಶಬ್ದ ಸಹ ಕೇಳುತಿತ್ತು. ಆಗಾಗ ದುರ್ಬೀನಿನ ಮೂಲಕ ಆನೆಯ ಮಡಚಿದ ಚರ್ಮ, ಹಲ್ಲುಗಳು, ಸೊಂಡಿಲು, ಬಾಲವನ್ನು ಕೂಲಂಕಷವಾಗಿ ನೋಡುತಿ¨ªೆ. ಆನೆಯ ಮೇಲೆ ಯಾವುದೇ ಗಾಯ, ವಿಶಿಷ್ಟವಾದ ಗುರುತುಗಳು ಕಾಣುತ್ತಿರಲಿಲ್ಲ. ಆಗಿನ್ನೂ ಬೇಸಿಗೆ ಮುಗಿದಿದ್ದ ಪ್ರಯುಕ್ತ ಆನೆಯ ಪಕ್ಕೆಲುಬುಗಳು ಸ್ಪಷ್ಟವಾಗಿ ಕಾಣುತ್ತಿದ್ದವು, ಕಪಾಳಗಳು ಒಳಗೆ ಹೋಗಿದ್ದವು, ಆನೆಯ ಕಿವಿಯ ತುದಿ ಬಿಳಿ ಮಿಶ್ರಿತ ಕಂದು ಬಣ್ಣಕ್ಕೆ ತಿರುಗಿ, ಕಪ್ಪು ಚುಕ್ಕೆ ಚುಕ್ಕೆಯಿಂದ ಕೂಡಿತ್ತು.
ನನಗೆ ಸಮಯ ಹೋದದ್ದೇ ತಿಳಿಯಲಿಲ್ಲ. ಸುಮಾರು ಅರ್ಧ ತಾಸಾದರೂ ಕಳೆದಿರಬಹುದು. ಆ ಸಮಯದಲ್ಲಿ ಇನ್ಯಾವುದೇ ವಾಹನ ಅತ್ತ ಬರದಿದ್ದ ಕಾರಣ ನನಗೆ ಆನೆಯನ್ನು ವೀಕ್ಷಿಸಲು ಯಾವ ಅಡೆತಡೆಯಾಗಿರಲಿಲ್ಲ. ನಾವು ನಿಶಬ್ದವಾಗಿದ್ದರೆ, ಆನೆಗೆ ಕಿರಿಕಿರಿಯಾಗದ ಯಾವ ಸದ್ದನ್ನೂ ಮಾಡದೆ, ಹೆಚ್ಚು ಅÇÉಾ ಡದೆ ಕುಳಿತರೆ ಇಷ್ಟು ಹತ್ತಿರವಿದ್ದರೂ ಆನೆಗಳಿಗೆ ತೊಂದರೆಯಾಗುವುದಿಲ್ಲ. ನಮ್ಮನ್ನು ಅವು ಸಹಿಸಿಕೊಳ್ಳುತ್ತವೆ.
ಅಲ್ಲಿಯವರೆಗೆ ನನ್ನ ಬಗ್ಗೆ ಬಹು ನಿರ್ಲಿಪ್ತ ಧೋರಣೆ ತೋರಿ ಹುಲ್ಲು ತಿನ್ನುತ್ತ ನಿಂತಿದ್ದ ಆನೆ ಇದ್ದಕಿದ್ದಹಾಗೆ ನನ್ನತ್ತ ನಡೆದು ಬರಲು ಪ್ರಾರಂಭಿಸಿತು. ಆನೆ ನಡೆದು ಬರುತ್ತಿದ್ದ ಹಾದಿಯಲ್ಲಿದ್ದ ನಾನು ಜೀಪಿನ ಇಂಜಿನ್ ಚಾಲೂ ಮಾಡಿ ಮೆಲ್ಲನೆ ಒಂದಿಪ್ಪತ್ತು ಮೀಟರ್‌ನಷ್ಟು ಹಿಂದಕ್ಕೆ ಬಂದೆ. ನೇರವಾಗಿ ರಸ್ತೆಯ ಮಧ್ಯಕ್ಕೆ ಬಂದ ಆನೆ ಎಡಕ್ಕೆ ತಿರುಗಿ ಮತ್ತೆ ನನ್ನ ದಿಕ್ಕಿನಲ್ಲಿ ನಡೆದು ಬರಲು ಪ್ರಾರಂಭಿಸಿತು. ಭಾರವಾದ ಹೆಜ್ಜೆಗಳನ್ನು ಹಾಕುತ್ತ ನಿಧಾನವಾಗಿ ನಡೆಯುತ್ತಿದ್ದ ಆನೆ ಕ್ಷಣ ಕ್ಷಣಕ್ಕೂ ಬೃಹದಾಕಾರವಾಗಿ ಬೆಳೆಯುವಂತೆ ಕಾಣುತಿತ್ತು. ಈ ಕೋನದಿಂದ ಆನೆ ಸ್ವಲ್ಪ ತಮಾಷೆಯಾಗಿ ಕೂಡ ಕಾಣುತಿತ್ತು. ಆನೆಯ ಅಗಲವಾದ ಹಣೆ, ಅದಕ್ಕೆ ಜೋತುಬಿದ್ದಂತಿದ್ದ ಸೊಂಡಿಲು, ಆ ತಲೆಯ ಹಿಂದೆ ಮೈಯ ಎರಡೂ ಕಡೆ ಅಗಲವಾಗಿ ಚಾಚಿದ್ದ ದೊಡ್ಡ ಹೊಟ್ಟೆ ಬಿಟ್ಟರೆ ಆನೆಯ ಇನ್ಯಾವುದೇ ಭಾಗ ನನಗೆ ಕಾಣುತ್ತಿಲ್ಲ. ಇನ್ನೊಂದು ಸ್ವಲ್ಪ ಹಿಂದೆ ಹೋದೆ. ಈಗ ನನಗೆ ಮತ್ತು ಆನೆಗೆ ಸುಮಾರು ಐವತ್ತು ಮೀಟರ್‌ನಷ್ಟು ಅಂತರವಾಯಿತು.
ಅಷ್ಟೊತ್ತು ನನ್ನತ್ತ ಬರುತ್ತಿದ್ದ ಆನೆ, ಈಗ ತನ್ನ ನಡಿಗೆಯನ್ನು ನಿಲ್ಲಿಸಿ ನನ್ನತ್ತ ತನ್ನ ಸೊಂಡಿಲನ್ನು ಚಾಚಿತು. ನಂತರ ತನ್ನ ಬಲಕ್ಕೆ ತಿರುಗಿ ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಕಾಡಿನತ್ತ ಕೂಡ ಒಮ್ಮೆ ಸೊಂಡಿಲು ಚಾಚಿತು. ಬಹುಶಃ ಅಲ್ಲಿ ಇನ್ನೇನು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿರಬೇಕು. ಮತ್ತೆ ನನ್ನತ್ತ ತಿರುಗಿ ನೇರ ದೃಷ್ಟಿಯಿಂದ ಇನ್ನೊಮ್ಮೆ ನೋಡಿ, ಎಡಕ್ಕೆ ತಿರುಗಿ ಅದು ಮುಂಚೆ ಹುಲ್ಲು ತಿನ್ನುತ್ತ ನಿಂತಿದ್ದ ಸ್ಥಳದತ್ತ ಮುಖ ತಿರುಗಿಸಿ ರಸ್ತೆಯ ಮಧ್ಯೆ ನಿಂತಿತು. ನನಗೇನೂ ತಿಳಿಯುತ್ತಿಲ್ಲ. ಸುಮಾರು ಮೂವತ್ತು ಸೆಕೆಂಡು ಗಳಾದೊಡನೆ ಆನೆ ಮುಂಚೆ ನಿಂತಿದ್ದ ಸ್ಥಳದಲ್ಲಿದ್ದ ಪೊದೆಯ ಮಧ್ಯೆ ಯಿಂದ ಸುಮಾರು ಒಂದೂವರೆ ವರ್ಷದ ಮರಿಯಾನೆಯೊಂದು ಆಚೆ ಬಂದಿತು. ನನಗೆ ಪರಮಾಶ್ಚರ್ಯವಾಯಿತು. ಅರ್ಧ ಗಂಟೆಯಿಂದ ಅÇÉೇ ನಿಂತಿದ್ದೇನೆ, ಯಾವ ಶಬ್ದವೂ ಮಾಡುತ್ತಿಲ್ಲ, ಗಮನವಿಟ್ಟು ಕಾಡಿನ ಎಲ್ಲ ನಾದ ನಿನಾದಗಳನ್ನು ಕೇಳುತ್ತಿದ್ದೇನೆ, ಆದರೂ ಮರಿಯಾನೆ ಅÇÉೇ ಇದ್ದದ್ದು ಗೊತ್ತಾಗಲೇ ಇಲ್ಲ!
ಪೊದೆಯಿಂದ ಆಚೆ ಬಂದ ಮರಿಯಾನೆ ನೇರವಾಗಿ ತಾಯಿಯ ಬಳಿ ಹೋಯಿತು. ಅಷ್ಟೊತ್ತಿಗೆ ತಾಯಿ ಮತ್ತೆ ನನ್ನತ್ತ ತಿರುಗಿ ನಿಂತಿತ್ತು. ಮರಿಯಾನೆ ತಾಯಿಯ ಬಳಿ ಬಂದದ್ದೇ ಅದರ ಬಾಲದ ಹಿಂದಿನಿಂದ ರಸ್ತೆ ದಾಟಿತು. ಅದು ಮುಕ್ಕಾಲು ರಸ್ತೆ ದಾಟುತ್ತಿದ್ದ ಹಾಗೆ ತಾಯಿಯೂ ಬಲಕ್ಕೆ ತಿರುಗಿ ರಸ್ತೆಯ ಇನ್ನೊಂದು ಬದಿಯತ್ತ ಮುಖ ಹಾಕಿ ಮರಿಯೊಡನೆ ರಸ್ತೆ ದಾಟಿ ಕಾಡಿನೊಳಗೆ ಮಾಯವಾಯಿತು. ಆದರೆ ರಸ್ತೆ ದಾಟುವಾಗ ತನ್ನ ಪುಟ್ಟ, ಎಡಗಣ್ಣ ಅಂಚಿನಿಂದ ನನ್ನ ದಿಕ್ಕಿನÇÉೇ ನೋಡುತ್ತಿದ್ದದ್ದನ್ನು ನನಗೆ ಇಂದಿಗೂ ಮರೆಯಲಾಗಿಲ್ಲ.
ತಾಯಿ ಆನೆ ಬಹುಶಃ ನಾನು ನಿಂತಿದ್ದ ಸ್ಥಳದÇÉೇ ಮರಿಯಾನೆಯನ್ನು ರಸ್ತೆ ದಾಟಿಸಬೇಕಾಗಿತ್ತು. ನಾನು ಅಷ್ಟು ಹೊತ್ತು ಕದಲದಿ¨ªಾಗ ನನ್ನನ್ನು ಮೆಲ್ಲನೆ ತನ್ನದೇ ಆದ ಭಾಷೆಯಲ್ಲಿ ಹಿಂದಕ್ಕೆ ತಳ್ಳಿ, ಮರಿ ರಸ್ತೆ ದಾಟಲು ಅವಕಾಶ ಮಾಡಿಕೊಟ್ಟಿತ್ತು. ಅದರಲ್ಲೂ ಅದು ನನ್ನನ್ನು ನಂಬುವ ಹಾಗೆ ಕಾಣಲಿಲ್ಲ. ನನ್ನ ಮತ್ತು ಮಾರಿಯಾನೆಯ ಮಧ್ಯದಲ್ಲಿ ನಿಂತು ಮರಿಗೆ ಹೆಚ್ಚುವರಿ ರಕ್ಷಣೆ ಒದಗಿಸಿತ್ತು. ಕೇವಲ ಆನೆಯೊಂದು ರಸ್ತೆ ಬದಿಯಲ್ಲಿ ನಿಂತಿದೆಯೆಂದು ಒಂದೆರೆಡು ಕ್ಷಣ ಅದನ್ನು ನೋಡಿ ಮುಂದೆ ಹೋಗಿದ್ದರೆ, ತಾಯಿ ಆನೆಯ ಕಳವಳ, ಅದರ ತಾಳ್ಮೆ, ಮನುಷ್ಯರಿಗೆ ತನ್ನದೇ ಧಾಟಿಯಲ್ಲಿ ಎಚ್ಚರಿಸುವ ರೀತಿ ಹಾಗೂ ತನ್ನ ಮರಿಯೊಡನೆ ಸಂಪರ್ಕಿಸುವ ವಿಧಾನ ಇದ್ಯಾವುದು ತಿಳಿಯುತ್ತಲೇ ಇರಲಿಲ್ಲ.
ನಮ್ಮ ವನ್ಯಜೀವಿ ಆವಾಸ ಸ್ಥಾನಗಳಲ್ಲಿ ಗೊತ್ತು ಗುರಿಯಿಲ್ಲದೆ ರಸ್ತೆಗಳನ್ನು ಮಾಡುತ್ತೇವೆ, ಇರುವ ಚಿಕ್ಕಪುಟ್ಟ ರಸ್ತೆಗಳನ್ನು ವಿನಾಕಾರಣ ಹೆ¨ªಾರಿಗಳಷ್ಟು ಅಗಲ ಮಾಡುತ್ತೇವೆ. ನಮ್ಮ ಸುಂದರ ಗಾಡಿಗಳಲ್ಲಿ ಅವುಗಳ ವೇಗದ ಎÇÉೆಯನ್ನು ಕಾಡಿನ ನಿಶ್ಶಬ್ದ ರಸ್ತೆಗಳಲ್ಲಿ ಪರೀಕ್ಷಿಸುತ್ತೇವೆ. ತಾಯಿ ಮರಿ ಆನೆಗೆ ಅದರಿಂದ ಆಗುವ ತೊಂದರೆಗಳ ಬಗ್ಗೆ ಯೋಚನೆಯೇ ಮಾಡುವುದಿಲ್ಲ. ದೊಡ್ಡ ಪ್ರಾಣಿಗಳು ಸ್ವಲ್ಪ ಮಟ್ಟದಲ್ಲಿ ಈ ತೊಂದರೆಗಳನ್ನು ತಡೆದುಕೊಂಡರೂ ಸಣ್ಣಪುಟ್ಟ ಪ್ರಾಣಿಗಳ ಗತಿಯೇನು ಎಂದು ಯೋಚಿಸುತ್ತಾ ನನ್ನ ಪಯಣ ಮುಂದುವರಿಸಿದೆ.
ಈ ರಸ್ತೆಯಲ್ಲೀಗ ಪ್ರತಿದಿನ ನೂರಾರು ವಾಹನಗಳು ಹಾದುಹೋಗುತ್ತವೆ. ನಾ ಮುಂದು, ತಾ ಮುಂದೆಂದು ಕರ್ಕಶವಾದ ತುತ್ತೂರಿ ಊದುತ್ತಾ ಈ ಸುಂದರವಾದ ಕಾಡಿನಲ್ಲಿ ವಾಹನದ ಓಟದ ಮಾರ್ಗವನ್ನು ಮಾಡಿಕೊಳ್ಳಲಾಗಿದೆ. ತಾಯಿ ತನ್ನ ಮರಿಯಾನೆಯನ್ನು ಹೇಗೆ ರಸ್ತೆ ದಾಟಿಸುತ್ತದೋ ಕಾಣೆ?
ಚಿತ್ರ : ಸಂಜಯ್ ಗುಬ್ಬಿ
– ಸಂಜಯ್ ಗುಬ್ಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.