Biden ಹತ್ಯೆಗೆ ಯತ್ನಿಸಿದ ವ್ಯಕ್ತಿ ಭಾರತೀಯ !
Team Udayavani, May 25, 2023, 8:15 AM IST
ವಾಷಿಂಗ್ಟನ್: ಅಮೆರಿಕದ ಶ್ವೇತಭವನದ ಕಟ್ಟಡಕ್ಕೆ ಟ್ರಕ್ ಡಿಕ್ಕಿ ಹೊಡೆಸಿ, ಭವನದ ಮುಂದೆಯೇ ಸ್ವಸ್ತಿಕ್ ಚಿಹ್ನೆ ಇರುವ ನಾಜಿ ಧ್ವಜವನ್ನು ಹಾರಿಸಿದ ವ್ಯಕ್ತಿ ಭಾರತೀಯ ಮೂಲದವನಾಗಿದ್ದು, ಆತ ಅಧ್ಯಕ್ಷ ಜೋ ಬೈಡೆನ್ ಅವರನ್ನು ಹತ್ಯೆಗೈಯ್ಯವ ಉದ್ದೇಶ ಹೊಂದಿದ್ದನೆಂದು ವಾಷಿಂಗ್ಟನ್ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಶ್ವೇತಭವನದತ್ತ ಟ್ರಕ್ ಚಲಾಯಿಸಿ ಇದಕ್ಕಿದ್ದಂತೆ ಭದ್ರತಾ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದಿದ್ದನಲ್ಲದೇ, ಟ್ರಕ್‌ನಿಂದ ಕೆಳಗಿಳಿದು ನಾಜಿ ಧ್ವಜ ಹಾರಿಸಿ ಮುಂದಿನ ಅಧಿಕಾರ ನಾಜಿಯದ್ದೇ ಎಂದು ಕಿರುಚಾಡಿದ್ದ.
ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿದ್ದರು. ಬಳಿಕ ತನಿಖೆ ನಡೆಸಿದಾಗ ಈ ರೀತಿ ವಿಚಿತ್ರವಾಗಿ ವರ್ತಿಸಿದ ವ್ಯಕ್ತಿ ಭಾರತೀಯ ಮೂಲದವನಾದ ಸಾಯಿ ವಸಿಷ್ಠ ಕುಂದುಲಾ ಎಂದು ಗುರುತಿಸಲಾಗಿದೆ. ಅಲ್ಲದೇ, ನಾಜಿಗಳ ಆಡಳಿತದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಆತ ಬೇಕಂತಲೇ ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿದ್ದಾನೆ. ಬೈಡೆನ್ ಅವರನ್ನು ಕೊಲ್ಲುವ ಅಥವಾ ಅವರ ಕುಟುಂಬದ ಸದಸ್ಯರನ್ನು ಯಾರನ್ನಾದರೂ ಅಪಹರಿಸುವ ಉದ್ದೇಶದಿಂದ ಕುಂದುಲಾ ಟ್ರಕ್ ಬಾಡಿಗೆ ಪಡೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲ್ಲದೇ, ಕೃತ್ಯ ಎಸಗಲು ವ್ಯಕ್ತಿ ಬಹಳ ಹಿಂದಿನಿಂದ ಯೋಜಿಸಿ ನಂತರ ಕಾರ್ಯಪ್ರವೃತ್ತನಾಗಿದ್ದಾಗಿಯೂ ಹೇಳಿಕೊಂಡಿದ್ದಾನೆಂದು ತಿಳಿಸಿದ್ದಾರೆ. ಇದರ ಹಿಂದಿನ ಉದ್ದೇಶವೇನು ? ಯಾರ ಕುಮ್ಮಕ್ಕು ಇದೆ ಎಂಬುದರ ಬಗ್ಗೆ ತನಿಖೆ ಮುಂದುವರಿಸಿರುವುದಾಗಿಯೂ ತಿಳಿಸಿದ್ದಾರೆ.